ಅರಸೀಕೆರೆ: ಸರ್ಕಾರದ ಮೀಸಲಾತಿ ಘೋಷಣೆಯಿಂದ ತೀವ್ರ ಕುತೂಹಲ ಕೆರಳಿಸಿದ್ದನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಕೊರಂ ಕೊರತೆ ಇದ್ದ ಕಾರಣ ಪ್ರಕ್ರಿಯೆಯನ್ನು ನ.2ಕ್ಕೆ ಮುಂದೂಡಿ ಚುನಾವಣಾಧಿಕಾರಿಯೂ ಆದ ಹಾಸನ ಉಪವಿಭಾಗಾಧಿಕಾರಿ ಬಿ.ಎ.ಜಗದೀಶ್ ಘೋಷಿಸಿದರು.
ನಗರಸಭೆ ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆದು ಎರಡು ವರ್ಷ ಕಳೆದ್ರೂ ಅಧ್ಯಕ್ಷ ಹಾಗೂಉಪಾಧ್ಯಕ್ಷರ ಮೀಸಲಾತಿ ವಿವಾದ ಕೋರ್ಟ್ ನಲ್ಲಿ ಬಗೆಹರಿಯದೇ ನನೆಗುದಿಗೆ ಬಿದ್ದಿತ್ತು. ನಂತರ ಸಚಿವ ಸಂಪುಟ ಉಪಸಮಿತಿ ಮಾರ್ಗಸೂಚಿಯಂತೆ ಚುನಾ ವಣೆ ನಡೆಸಲು ನ್ಯಾಯಾಲಯ ಆದೇಶ ನೀಡಿತ್ತು. ಅದರಂತೆ ರಾಜ್ಯ ಸರ್ಕಾರ ಮೀಸಲಾತಿ ಘೋಷಣೆ ಮಾಡಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲು ಮುಂದಾಗಿದೆ.
ಕೋರ್ಟ್‌ನಿಂದ ತಡೆಯಾಜ್ಞೆ: ವಿಪಕ್ಷಗಳು ಸಚಿವಸಂಪುಟ ಉಪಸಮಿತಿ ನೀಡಿರುವ ಮಾರ್ಗಸೂಚಿ ಅನುಸರಿಸದೇ ಸರ್ಕಾರ ಮೀಸಲಾತಿ ಘೋಷಣೆ ಮಾಡಿದೆ. ಈ ಮೂಲಕ ವಾಮಮಾರ್ಗದಲ್ಲಿ ಸ್ಥಳೀಯ ಸಂಸ್ಥೆಗಳ ಅಧಿಕಾರ ಹಿಡಿಯುವ ಹುನ್ನಾರ ನಡೆಸಿದೆ ಎಂದು ಆರೋಪಿಸಿ, ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದವು.
ಕೋರಂ ಕೊರತೆ: ಸದ್ಯ ಸುಪ್ರೀಂ ಕೋರ್ಟ್ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆ ನಡೆಸಿ, ಫಲಿತಾಂಶ ಪ್ರಕಟಣೆ ಮಾಡದಂತೆ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆದ ಎಸಿ ಬಿ.ಎ.ಜಗದೀಶ್, ಶುಕ್ರವಾರ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಿದ್ದರು. ಆದರೆ, ಕೋರಂ ಕೊರತೆಯಿಂದ ಚುನಾವಣೆ ಮುಂದೂಡಿದರು.
ನಗರಸಭೆ 31 ಸದಸ್ಯ ಬಲ ಹೊಂದಿದ್ದು, ಈ ಪೈಕಿ ಜೆಡಿಎಸ್ 21, ಬಿಜೆಪಿ 5, ಕಾಂಗ್ರೆಸ್ 1, ಮೂವರು ಪಕ್ಷೇತರ ಸದಸ್ಯರು ಗೆದ್ದಿದ್ದಾರೆ. ಒಬ್ಬ ಜೆಡಿಎಸ್ ಸದಸ್ಯರು ನಿಧನರಾಗಿದ್ದು, ಆ ಸ್ಥಾನಕ್ಕೆ ಚುನಾವಣೆ ನಡೆದಿಲ್ಲ. ನಾಮಪತ್ರ ಸಲ್ಲಿಕೆ: ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಗಿರೀಶ್ ಆಕಾಂಕ್ಷಿಯಾಗಿದ್ದಾರೆ. ಈಗ ಅವರು ನಾಮಪತ್ರ ಸಲ್ಲಿಸಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಗೀತಾ ಹೇಮಂತ್, ಜೆಡಿಎಸ್ ನಿಂದ ಕಾಂತೇಶ್, ದರ್ಶನ್ ಹಾಗೂ ಪುಟ್ಟಸ್ವಾಮಿ ನಾಮಪತ್ರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದರು. ಇನ್ನೇನು ನಗರಸಭೆಗೆ ಆಡಳಿತಕ್ಕೆ ಹಿಡಿದಿದ್ದ ಗ್ರಹಣ ಬಿಟ್ಟಿತು ಎನ್ನುವಷ್ಟರಲ್ಲಿ ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಮತದಾನ ಪ್ರಕ್ರಿಯೆಯಿಂದ ದೂರ ಉಳಿದ ಕಾರಣ, ಕೋರಂ ಕೊರತೆ ಉಂಟಾಗಿ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸಿ ನ.2ರಂದು ಮತ್ತೆ ಚುನಾವಣೆ ನಡೆಸುವುದಾಗಿ ಚುನಾವಣಾಧಿಕಾರಿ ಬಿ.ಎ.ಜಗದೀಶ್ ಘೋಷಿಸಿದರು
ತಹಶೀಲ್ದಾರ್ ಸಂತೋಷ್‌ಕುಮಾರ್, ನಗರಸಭೆ ಪೌರಾಯುಕ್ತರಾದ ಕಾಂತ್‌ರಾಜ್, ವ್ಯವಸ್ಥಾಪಕ ಎಂ.ಜೆ.ಮಹಾತ್ಮ ಉಪಸ್ಥಿತರಿದ್ದರು.