ಸಾಗರ: ಕ್ಷೇತ್ರ ವ್ಯಾಪ್ತಿಯಲ್ಲಿ ಶಾಲೆ ಆರಂಭಗೊಂಡು ತಿಂಗಳು ಸಮೀಪಿಸುತ್ತಾ ಬಂದಿದ್ದರೂ ಶಿಕ್ಷಕರಿಲ್ಲ. ಶಿಕ್ಷಕರ ಕೊರತೆಯಿಂದ ತಾಲೂಕಿನ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ದೂರಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಶಿಕ್ಷಕರ ಕೊರತೆ ಜೊತೆಗೆ ಶಾಲಾ ಕಟ್ಟಡಗಳು ದುಸ್ಥಿತಿಯಲ್ಲಿದೆ. ಈಚೆಗೆ ಸುರಿದ ಮಳೆಗಾಳಿಯಿಂದ ಶಾಲಾ ಕಟ್ಟಡಗಳ ಮೇಲ್ಚಾವಣಿ ಹಾರಿ ಹೋಗಿದ್ದು, ವಿದ್ಯಾರ್ಥಿಗಳು ಆತಂಕದ ನಡುವೆ ಶಾಲೆಗೆ ಹೋಗುವ ದುಃಸ್ಥಿತಿ ಇದೆ. ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕಾಗಿದ್ದ ಕ್ಷೇತ್ರದ ಶಾಸಕರು ಮೌನವಾಗಿದ್ದಾರೆ ಎಂದು ಹೇಳಿದರು.
ಸರ್ಕಾರಿ ಶಾಲೆಯ ದುಃಸ್ಥಿತಿ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಹೆಚ್ಚಿನ ಡೊನೇಶನ್ ಕಟ್ಟಿ ಕಳಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಿಂದೆ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಗೆ ಸುಣ್ಣಬಣ್ಣ ಹೊಡೆಯುವ ಪರಿಕಲ್ಪನೆ ಜಾರಿಗೆ ತಂದಿದ್ದರು. ಈಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರ ಇದರ ಬಗ್ಗೆ ಆಸಕ್ತಿ ಕೊಡದೆ ಇರುವುದರಿಂದ ಶಾಲೆ ಕೊಂಪೆಯಾಗುತ್ತಿದ್ದು, ಸರ್ಕಾರಿ ಶಾಲೆ ಒಂದೊಂದೇ ಮುಚ್ಚುವ ಹಂತಕ್ಕೆ ತಲುಪಿದೆ. ಸರ್ಕಾರ ತಕ್ಷಣ ಸರ್ಕಾರಿ ಶಾಲೆಗಳ ಪುನರುಜ್ಜೀವನಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ತಾಲೂಕಿನಲ್ಲಿ ಅರಣ್ಯಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಅರಣ್ಯ ಇಲಾಖೆ ನೋಟಿಸ್ ನೀಡುತ್ತಿದೆ. ರೈತರು ನೋಟಿಸ್ ಹಿಡಿದುಕೊಂಡು ಬೆಂಗಳೂರಿನ ಭೂಕಬಳಿಕೆ ನ್ಯಾಯಾಲಯಕ್ಕೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ರೈತರಿಗೆ ಬೆಂಗಳೂರಿನ ಬಗ್ಗೆ ಮಾಹಿತಿ ಇರುವುದಿಲ್ಲ. ಜೊತೆಗೆ ಅಷ್ಟೊಂದು ಹಣ ಖರ್ಚು ಮಾಡುವ ಸ್ಥಿತಿಯಲ್ಲಿ ರೈತರು ಇಲ್ಲ. ಕಂದಾಯ ಸಚಿವರು ೧೯೨ ಎ ರದ್ದು ಪಡಿಸುವ ಜೊತೆಗೆ ಭೂಕಬಳಿಕೆ ನ್ಯಾಯಾಲಯವನ್ನು ರದ್ದು ಮಾಡಿದ್ದಾಗಿ ತಿಳಿಸಿದ್ದರು. ಆದರೆ ಈಗ ಅರಣ್ಯಭೂಮಿ ಸಾಗುವಳಿದಾರರಿಗೆ ನೋಟಿಸ್ ನೀಡಿ, ಅಲೆದಾಡಿಸುತ್ತಿರುವುದನ್ನು ನೋಡಿದರೆ ಕಂದಾಯ ಸಚಿವರು ಸುಳ್ಳು ಹೇಳುತ್ತಿದ್ದಾರೆಂದು ಸ್ಪಷ್ಟವಾಗುತ್ತಿದೆ. ಅರಣ್ಯಭೂಮಿ ಸಾಗುವಳಿದಾರರಿಗೆ ನೋಟಿಸ್ ನೀಡುತ್ತಿರುವ ಮತ್ತು ಭೂಮಿ ಸಮಸ್ಯೆ ಕುರಿತು ಸದ್ಯದಲ್ಲಿಯೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾದಯಾತ್ರೆ ನಡೆಸಲಿದ್ದು, ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.
ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬಡಜನರಿಗೆ ಆಶ್ರಯ ಸೇರಿದಂತೆ ಯಾವುದೇ ನಿವೇಶನ ನೀಡಿಲ್ಲ. ಶಾಸಕರು ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಭ್ರಷ್ಟಾಚಾರಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ಅಧಿಕಾರಿಗಳ ಸಭೆ ಪ್ರವಾಸಿ ಮಂದಿರದಲ್ಲಿ ನಡೆಸುತ್ತಿರುವುದೇ ಡೀಲಿಂಗ್ ಮಾಡಿಕೊಳ್ಳಲು ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದರು.
ಈಚೆಗೆ ಬಿಜೆಪಿ ಯುವಮೋರ್ಚಾ ನಡೆಸಿದ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮತ್ತು ಯುವ ಮೋರ್ಚಾ ಜಿಲ್ಲಾಧ್ಯಕ್ಷರು ನನ್ನನ್ನು ಬಂಧಿಸಿ ಎಂದು ಒತ್ತಾಯಿಸಿದ್ದಾರೆ. ಇವರಿಗೆ ಶಾಸಕ ಹಾಲಪ್ಪ ತಮ್ಮ ಪಕ್ಷದವರೇ ಆದ ಇಬ್ಬರು ಪ್ರಬಲ ಕೋಮಿನ ಮುಖಂಡರ ಮೇಲೆ ಹಲ್ಲೆ ಮಾಡಿಸಿದ್ದು ಮರೆತು ಹೋದಂತೆ ಕಾಣುತ್ತಿದೆ. ಇವರಿಬ್ಬರು ಹಾಲಪ್ಪ ಅವರನ್ನು ಬಂಧಿಸಿ ಎಂಬ ಒತ್ತಾಯ ಮಾಡಿ, ಆ ಹಲ್ಲೆಗೊಳಗಾದ ಪಕ್ಷದ ಮುಖಂಡರ ಬೆಂಬಲಕ್ಕೆ ನಿಲ್ಲಬೇಕಾಗಿತ್ತು ಎಂದು ವ್ಯಂಗ್ಯವಾಡಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಕುಮಾರಿ, ನಗರಸಭೆ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಪ್ರಮುಖರಾದ ಸಂತೋಷ್ ಸದ್ಗುರು, ರವಿಕುಮಾರ್ ವೈ., ಯಶವಂತ ಪಣಿ, ನಾರಾಯಣಪ್ಪ, ಮಹಾಬಲೇಶ್ ಶೆಟ್ಟಿ, ಅನ್ವರ್ ಭಾಷಾ ಹಾಜರಿದ್ದರು.