Advertisement

ಸಾರ್ವಜನಿಕ ಕೆಲಸಗಳಿಗೆ ಸಿಬಂದಿ ಕೊರತೆ !

09:58 PM Oct 21, 2019 | mahesh |

ಮಹಾನಗರ: ಮಹಾನಗರ ಪಾಲಿಕೆಯ ಚುನಾವಣೆ ದಿನಾಂಕ ಘೋಷಣೆಯಾಗಿ ನೀತಿಸಂಹಿತೆ ಜಾರಿಯಾದ ಮರು ದಿನವೇ ಪಾಲಿಕೆಯಲ್ಲಿ ಸಾರ್ವಜನಿಕರು ಕೆಲವೊಂದು ಅಗತ್ಯ ಕೆಲಸಗಳನ್ನು ಮಾಡಿಸಿಕೊಳ್ಳಲಾಗದೆ ವಾಪಸಾಗುತ್ತಿದ್ದ ದೃಶ್ಯ ಕಂಡುಬಂತು. ಏಕೆಂದರೆ, ಕೆಲವು ಅಧಿಕಾರಿಗಳು ಹಾಗೂ ಸಿಬಂದಿಯನ್ನು ಈಗಾಗಲೇ ಚುನಾವಣ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

Advertisement

ಈಗಾಗಲೇ ಮಹಾನಗರ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಕೂಡ ಜಾರಿಗೆ ಬಂದಿದೆ. ಹೀಗಿರುವಾಗ, ನಗರದ ಆಡಳಿತ ಯಂತ್ರವನ್ನು ಹೊಂದಿರುವ ಪಾಲಿಕೆ ಕಚೇರಿಯ ಚಿತ್ರಣ ಹೇಗಿದೆ? ಈ ಸ್ಥಳೀಯ ಚುನಾವಣೆಯ ಬಿಸಿ ಜನಸಾಮಾನ್ಯರಿಗೆ ಹೇಗೆ ತಟ್ಟಿದೆ ಎಂಬುದರ ವಾಸ್ತವಾಂಶವನ್ನು ತಿಳಿಯುವ ಪ್ರಯತ್ನವನ್ನು “ಸುದಿನ’ ಮಾಡಿದೆ. ಆ ಪ್ರಕಾರ, ನಮ್ಮ ತಂಡವು ಸೋಮವಾರ ಪಾಲಿಕೆ ಕಚೇರಿಗೆ ತೆರಳಿದಾಗ, ಅಲ್ಲಿ ಎಂದಿನಂತೆ ಸಾರ್ವಜನಿಕರು ತಮ್ಮ ನಿತ್ಯದ ಕೆಲಸಗಳಿಗೆ ಆಗಮಿಸಿರುವುದು ಕಂಡುಬಂತು. ಆದರೆ, ಚುನಾವಣ ನೀತಿ ಸಂಹಿತೆ ಕಾರಣ, ಕೆಲವು ಅಧಿಕಾರಿಗಳು ಈಗಾಗಲೇ ಚುನಾವಣ ಕರ್ತವ್ಯದಲ್ಲಿ ನಿಯೋಜನೆಗೊಂಡಿರುವುದು ಜನರು ತಾವು ಬಂದ ಕೆಲಸ ಮಾಡಿಸಿಕೊಳ್ಳುವುದಕ್ಕೆ ಸಾಧ್ಯವಾಗದೆ ವಾಪಾಸ್‌ ತೆರಳುತ್ತಿದ್ದ ಸನ್ನಿವೇಶ ಕಂಡುಬಂತು.

ಮುಖ್ಯವಾಗಿ ಕಂದಾಯ ವಿಭಾಗಕ್ಕೆ ಖಾತೆ ಬದಲಾವಣೆ ಹಾಗೂ ಇತರ ಕೆಲಸಕ್ಕೆಂದು ಸೋಮವಾರ ಪಾಲಿಕೆಗೆ ಬಂದಿದ್ದ ಅನೇಕ ಮಂದಿ ನಾಗರಿಕರಿಗೆ ಇದು ಕೊಂಚ ಅನಾನುಕೂಲವನ್ನು ಸೃಷ್ಟಿಸಿದೆ. “ನಾವು ಜಾಗದ ಖಾತೆ ಬದಲಾವಣೆಗೆಂದು ಬಂದಿದ್ದೆವು. ನಮ್ಮ ಕೆಲಸ ಆಗಲಿಲ್ಲ. ಚುನಾವಣೆ ಮುಗಿದ ಮೇಲೆ ಬನ್ನಿ ಎಂಬುದಾಗಿ ಇಲ್ಲಿ ಹೇಳುತ್ತಿದ್ದಾರೆ’ ಎಂದು ಬೋಂದೇಲ್‌ನ ಕೃಷ್ಣವೇಣಿ ಹೇಳಿದರು. “ಕೆಲವು ಸಿಬಂದಿ ಅವರೇ ಸ್ವತಃ ಚುನಾವಣೆಗೆ ನಿಂತ ಹಾಗೆ ಮಾಡುತ್ತಿದ್ದಾರೆ. ನಮಗೆ ತುರ್ತಾಗಿ ಸಾಲ ಪಡೆಯಲು ಖಾತೆ ಬದಲಾವಣೆ ಅನಿವಾರ್ಯವಾಗಿತ್ತು’ ಎಂದು ಅವರ ಪತಿ ಸುಧಾಕರ್‌ ಕೂಡ ಅಸಹಾಯಕತೆ ವ್ಯಕ್ತಪಡಿಸಿದರು.

ಮಾಜಿ ಮೇಯರ್‌ಗೂ ಬಿಸಿ
“ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಯೊಂದರ ಕೆಲಸಕ್ಕೆಂದು ಬಂದಿದ್ದೆ. ಕಚೇರಿಯಲ್ಲಿ ಅಧಿಕಾರಿಗಳು ಇದ್ದಾರೆ. ಆದರೆ ಅಲ್ಲಿನ ಸಿಬಂದಿ ಅಧಿಕಾರಿ ಫೀಲ್ಡ್‌ ಗೆ ಹೋಗಿದ್ದಾರೆ ಎಂಬುದಾಗಿ ಹೇಳುತ್ತಾರೆ. ಮೊದಲೇ ಸಿಬಂದಿ ಕೊರತೆಯಿದೆ. ಈಗ ಇನ್ನಷ್ಟು ತೊಂದರೆಯಾಗಿದೆ’ ಎಂದು ಮಾಜಿ ಮೇಯರ್‌ ಓರ್ವರು ಹೇಳಿದರು.

“ನೀರಿನ ಬಿಲ್‌ ಪರಿಷ್ಕರಣೆ ಬಗ್ಗೆ ಮಾಹಿತಿಗಾಗಿ ಬಂದಿದ್ದೆ. ಇಲ್ಲಿ ವಿಚಾರಿಸುವಾಗ ಸಿಬಂದಿ ಹೋಗಿದ್ದಾರೆ; ಬರುವಾಗ 3 ಗಂಟೆಯಾಗುತ್ತದೆ ಎನ್ನುತ್ತಾರೆ. ಚುನಾವಣೆಯೋ ಅಥವಾ ಬೇರೆ ಕೆಲಸವೋ ಗೊತ್ತಿಲ್ಲ. ನನಗೆ ಈಗ ತೊಂದರೆಯಾಗಿದೆ’ ಎಂದು ಮೀನಾಕ್ಷಿ ಹೇಳಿದರು.

Advertisement

ಬಂದರಿನ ರಫೀಕ್‌ ಕೂಡ ಸಿಬಂದಿ ಕೊರತೆಯಿಂದ ದರೆಗೊಳಗಾದರು. “ದಾಖಲೆಯಲ್ಲಿ ಮನೆಯ ಯಜಮಾನನ ಹೆಸರು ಬದಲಾಯಿಸಬೇಕಿತ್ತು. ನಾನು ಅರ್ಜಿ ಕೊಟ್ಟು 6 ತಿಂಗಳುಗಳಾಗಿವೆ. ಇವತ್ತು ಬಂದಾಗ ಚುನಾವಣೆಯಿದೆ ಎಂದು ವಾಪಸ್ಸು ಕಳುಹಿಸುತ್ತಿದ್ದಾರೆ’ ಎಂದು ರಫೀಕ್‌ ದೂರಿದರು.

ಶೇ. 60ರಷ್ಟು ಮಂದಿಗೆ ಚುನಾವಣಾ ಕರ್ತವ್ಯಕ್ಕೆ
ಕಂದಾಯ ವಿಭಾಗದ ಶೇ.50ರಿಂದ 60ರಷ್ಟು ಸಿಬಂದಿ ಚುನಾವಣ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಮುಖವಾಗಿ ಎಲೆಕ್ಟೊರಲ್‌ ವೆರಿಫಿಕೇಷನ್‌ ಪ್ರೋಗ್ರಾಂನಲ್ಲಿ ಪಾಲ್ಗೊಂಡಿದ್ದಾರೆ. ಈ ಕಾರಣದಿಂದ ಸೋಮವಾರ ಬೆಳಗ್ಗೆ ನಾಗರಿಕರ ಸೇವೆ ಒದಗಿಸುವಲ್ಲಿ ಸಿಬಂದಿ ಕೊರತೆಯಾಗಿದ್ದು, ಹೆಚ್ಚು ವ್ಯತ್ಯಯವಾಗಿದೆ. ಇನ್ನು ಚುನಾವಣೆ ಮುಗಿಯುವವರೆಗೆ ಜನರಿಗೆ ಪಾಲಿಕೆ ಕೆಲಸಗಳಿಗೆ ಸ್ವಲ್ಪ ಮಟ್ಟಿನ ತೊಂದರೆಯಾಗಬಹುದು. ಸಾರ್ವಜನಿಕರು ಈ ನಿಟ್ಟಿನಲ್ಲಿ ಸಹಕರಿಸಬೇಕು.
 - ಗಾಯತ್ರಿ,ಉಪ ಆಯುಕ್ತರು, ಕಂದಾಯ ವಿಭಾಗ

ಪರ್ಯಾಯ ವ್ಯವಸ್ಥೆ ಮಾಡಿ
ಹಲವು ಇಲಾಖೆಗಳ ಕೇಸ್‌ ವರ್ಕರ್‌ಗಳು ಕಚೇರಿಯಲ್ಲಿಲ್ಲ. ಕೇಳಿದರೆ ಎಲೆಕ್ಷನ್‌ ಡ್ನೂಟಿ ಎಂಬ ಉತ್ತರ ಬರುತ್ತಿದೆ. ಅಗತ್ಯ ಕೆಲಸಗಳಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಿ. ಬೇರೆ ಇಲಾಖೆ ಸಿಬಂದಿ ನಿಯೋಜಿಸಲಿ. ಯಾವ ಇಲಾಖೆಯ ಯಾವ ಸಿಬಂದಿ ಚುನಾವಣ ಕರ್ತವ್ಯದಲ್ಲಿದ್ದಾರೆ ಎಂಬುದನ್ನು ಮಾಹಿತಿ ಫಲಕದಲ್ಲಿ ಹಾಕಲಿ.
– ಯೋಗೀಶ್‌,ಸ್ಥಳೀಯರು

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next