ಗುಳೇದಗುಡ್ಡ: ಇಲ್ಲಿಯ ತಹಶೀಲ್ದಾರ್ ಕಚೇರಿಯಲ್ಲಿ ಮುದ್ರಣ ಯಂತ್ರ (ಪ್ರಿಂಟರ್)ಕೊರತೆಯಿಂದ ಭೂಮಿಕೇಂದ್ರ, ಜಾತಿ ಆದಾಯ ಪ್ರಮಾಣಪತ್ರ, ಆಧಾರ್ ಕಾಡ್‌ಗಾಗಿ ರೈತರು, ವಿದ್ಯಾರ್ಥಿಗಳು ಅಲೆದಾಡುವಂತಾಗಿದೆ.
ಭೂಮಿ ಕೇಂದ್ರ, ಆಧಾರ್ ಕಾರ್ಡ್‌ಗೆ ಹಾಗೂ ಜಾತಿ ಆದಾಯ ಅರ್ಜಿಗಳ ಸ್ವೀಕೃತಿಗೆ ಒಟ್ಟು ಮೂರು ಪ್ರಿಂಟರ್‌ಗಳು ಬೇಕು. ಆದರೆ ತಹಶೀಲ್ದಾರ್ ಕಚೇರಿಯಲ್ಲಿ ಒಂದೇ ಒಂದು ಪ್ರಿಂಟರ್ ಇದ್ದು, ಇರುವ ಒಂದೇ ಪ್ರಿಂಟರ್‌ನಲ್ಲಿ ಕಚೇರಿ ಸಿಬ್ಬಂದಿ ಮೂರು ಸೇವೆಗಳನ್ನು ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಾಗರಿಕರಿಗೆ ಸಮರ್ಪಕ ಸೇವೆ ಸಿಗುತ್ತಿಲ್ಲ.
ಒಂದೇ ಪ್ರಿಂಟರ್ ಮೂರು ಕೆಲಸ: ತಹಶೀಲ್ದಾರ್ ಕಚೇರಿಯಲ್ಲಿ ಒಂದೇ ಪ್ರಿಂಟರ್ ಇರುವುದರಿಂದ ಅದರ ಮೂಲಕವೇ ಹೊಸ ಆಧಾರ್ ಕಾರ್ಡ್ ಮತ್ತು ತಿದ್ದುಪಡಿ ಮಾಡುವುದು, ಭೂಮಿ ಕೇಂದ್ರದಿಂದ ಉತಾರ ಕೊಡುವುದು, ಜಾತಿ ಆದಾಯ ಅರ್ಜಿಗಳ ಸೇವೆ ಹೀಗೆ ಮೂರು ಕೆಲಸಗಳು ನಡೆಯುತ್ತಿವೆ. ಈ ಹಿಂದೆ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಒಂದೇ ಒಂದು ಕೀ ಬೋರ್ಡ್ ಇತ್ತು. ಪ್ರಿಂಟ್ ಕೊಡಲು ಪೇಪರ್ ಕೂಡಾ ಇರಲಿಲ್ಲ. ಈ ಬಾರಿ ಪ್ರಿಂಟರ್ ಸಮಸ್ಯೆ ಎದುರಾಗಿದೆ.
ಗುಳೇದಗುಡ್ಡ ನೂತನ ತಾಲೂಕು ಕೇಂದ್ರವಾಗಿ ವರ್ಷ ಕಳೆದರೂ ಇದುವರೆಗೂ ಕಚೇರಿಗೆ ಬೇಕಾಗುವ ಅಗತ್ಯ ಸೌಕರ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಹಲವು ಬಾರಿ ಸಂಬಂಧಿಸಿದವರ ಗಮನಕ್ಕೆ ತಂದರೂ ಸಮಸ್ಯೆ ಸರಿಪಡಿಸುತ್ತಿಲ್ಲ.
ವಿದ್ಯಾರ್ಥಿಗಳ ಪರದಾಟ: ಸದ್ಯ ಶಾಲಾ ಕಾಲೇಜುಗಳು ಆರಂಭವಾಗಿರುವುದರಿಂದ ಪ್ರತಿ ವಿದ್ಯಾರ್ಥಿಗಳಿಗೆ ಜಾತಿ ಆದಾಯ ಪ್ರಮಾಣ ಪತ್ರಗಳು ಅವಶ್ಯವಾಗಿ ಬೇಕು. ಆದರೆ, ಪ್ರಿಂಟರ್ ಒಂದೇ ಇರುವುದರಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಜಾತಿ ಆದಾಯ ಪ್ರಮಾಣ ಪತ್ರಕ್ಕಾಗಿ ಅಲೆಯುವಂತಾಗಿದೆ. ಇದರೊಂದಿಗೆ ಪದೇ ಪದೇ ಸರ್ವರ್ ಸಮಸ್ಯೆಯಾಗುತ್ತಿರುವುದರಿಂದ ವಿದ್ಯಾರ್ಥಿಗಳು, ಪೋಷಕರು ದಿನಗಟ್ಟಲೇ ಜಾತಿ ಆದಾಯ ಅರ್ಜಿ ಸಲ್ಲಿಸಲು ಉದ್ಯೋಗ ಬಿಟ್ಟು ತಹಸೀಲ್ದಾರ್ ಕಚೇರಿಗೆ ಅಲೆಯುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
•ಮಲ್ಲಿಕಾರ್ಜುನ ಕಲಕೇರಿ