Advertisement

ವಿದ್ಯುತ್‌ ಕಣ್ಣಾ ಮುಚ್ಚಾಲೆ; ರೈತರು ಕಂಗಾಲು

03:33 PM Sep 15, 2020 | Suhan S |

ರಾಯಚೂರು: ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಣ್ಣಾ ಮುಚ್ಚಾಲೆ ಆಟ ಮುಂದುವರಿದಿದ್ದು, ಜಮೀನುಗಳಿಗೆ ನೀರು ಕಟ್ಟಲಾಗದೆ ರೈತರು ಕಂಗಾಲಾಗಿದ್ದಾರೆ. ಹಗಲಲ್ಲಿ 7 ಗಂಟೆ ತ್ರಿಪೇಸ್‌ ವಿದ್ಯುತ್‌ ನೀಡುವುದಾಗಿ ತಿಳಿಸಿದರೂ ಮನಸೋಇಚ್ಛೆ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ.ಇದರಿಂದ ರೈತರಿಗೆ ಹೊತ್ತು ಗೊತ್ತಿಲ್ಲದೇ ಜಮೀನಿಗೆ ಹೋಗಿ ನೀರು ಕಟ್ಟುವ ಪರಿಸ್ಥಿತಿ ಎದುರಾಗಿದೆ.

Advertisement

ಮಳೆ, ಗಾಳಿ ಇಲ್ಲದಿದ್ದರೂ ನಾಲ್ಕೈದು ಗಂಟೆ ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ರಾಯಚೂರು ತಾಲೂಕಿನ ಕಲಮಲ ಹೋಬಳಿಯಲ್ಲಿ ಕಳೆದ ಕೆಲ ದಿನಗಳಿಂದ ಈ ರೀತಿ ವಿದ್ಯುತ್‌ ಸರಬರಾಜಾಗುತ್ತಿದೆ. ಈ ಬಗ್ಗೆ ರೈತರು ಜೆಸ್ಕಾಂ ಅಧಿಕಾರಿಗಳನ್ನು ಕೇಳಿದರೆ ಕೆಲಸ ನಡೆದಿದೆ ಅರ್ಧ ಗಂಟೆಯೊಳಗೆ ಬರುತ್ತದೆ ಎಂದು ಹೇಳುತ್ತಾರೆ. ಮತ್ತೂಮ್ಮೆ ಕರೆಮಾಡಿದರೆ ಸ್ವೀಕರಿಸುವುದಿಲ್ಲ ಎನ್ನುವುದು ರೈತರ ಅಳಲು.

ಈಗ ಭತ್ತ ನಾಟಿ ಮಾಡಿದ್ದು, ಕಾಲಕಾಲಕ್ಕೆ ನೀರು ಕಟ್ಟಬೇಕಿದೆ. ಕಳೆದ ಕೆಲ ದಿನಗಳಿಂದ ಸಕಾಲಕ್ಕೆ ನೀರು ಹರಿಸಲು ಆಗುತ್ತಿಲ್ಲ. ವಿದ್ಯುತ್‌ ಇದ್ದರೂ ತ್ರಿಪೇಸ್‌ ನೀಡುತ್ತಿಲ್ಲ.ಇದರಿಂದ ಬೋರ್‌ನಿಂದ ಹೆಚ್ಚು ನೀರುಹರಿಸಲಾಗುತ್ತಿಲ್ಲ. ಭತ್ತ ಒಣಗುತ್ತಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ತಾಲೂಕಿನ ಜೇಗರಕಲ್‌ ಭಾಗದ ರೈತರು.

ಹಗಲಲ್ಲಿ 4 ಗಂಟೆ ಮಾತ್ರ: ಹಗಲಲ್ಲಿ ನಿರಂತರ 7 ಗಂಟೆಗಳ ಕಾಲ ತ್ರಿಪೇಸ್‌ ವಿದ್ಯುತ್‌ ನೀಡಬೇಕು ಎಂಬ ಆದೇಶವಿದೆ. ಆದರೆ, ರೈತರು ದೂರುವ ಪ್ರಕಾರ ನಾಲ್ಕು ಗಂಟೆ ಕೊಟ್ಟರೆ ಹೆಚ್ಚು ಎನ್ನುತ್ತಾರೆ. ಕೆಲವೊಮ್ಮೆ ಸಂಜೆ ಹೊತ್ತು ಕೊಡುತ್ತಾರೆ. ಬಿಟ್ಟು ಬಿಟ್ಟು ವಿದ್ಯುತ್‌ಸರಬರಾಜು ಮಾಡುವುದರಿಂದ ವಿದ್ಯುತ್‌ ಗಾಗಿ ಕಾದು ಕೂಡುವುದೇ ಕಾಯಕವಾಗಿದೆ ಎಂದು ದೂರುತ್ತಾರೆ.

ನಿರಂತರ ಜ್ಯೋತಿ ಇಲ್ಲ: ಇನ್ನು ಸರ್ಕಾರ ಬಡವರಿಗಾಗಿ ಹಳ್ಳಿಗಳಲ್ಲಿ ನಿರಂತರ ಜ್ಯೋತಿ ಯೋಜನೆ ಜಾರಿ ಮಾಡಿದೆ. ಆದರೆ, ಅನಿಯಮಿತ ವಿದ್ಯುತ್‌ ಸರಬರಾಜು ಹೆಚ್ಚಾಗುತ್ತಿದೆ. ಮಳೆ ಗಾಳಿ ಇಲ್ಲದಿದ್ದಾಗಲೂ ವಿದ್ಯುತ್‌ ಕಡಿತಗೊಳ್ಳುತ್ತದೆ. ಈಚೆಗೆ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಸುರಿದಪರಿಣಾಮ ಸೊಳ್ಳೆ ಕಾಟ ಹೆಚ್ಚಾಗಿದೆ. ರಾತ್ರಿ ವಿದ್ಯುತ್‌ ಕಡಿತಗೊಳಿಸುವುದರಿಂದ ನಿದ್ರೆ ಮಾಡುವುದು ಕಷ್ಟವಾಗುತ್ತಿದೆ ಎಂದು ದೂರುತ್ತಾರೆ ಹಳ್ಳಿ ಜನ.

Advertisement

ವಿದ್ಯುತ್‌ ವಿಚಾರದಲ್ಲಿ ರೈತರು ಬೇಸತ್ತು ಹೋಗಿದ್ದಾರೆ. ಬೆಳೆಗೆ ನೀರು ಕಟ್ಟುವ ವೇಳೆಯೇ ವಿದ್ಯುತ್‌ ಇರುವುದಿಲ್ಲ. ಯಾವಾಗ ಬರುತ್ತದೋ ಯಾವಾಗ ಹೋಗುತ್ತದೋ ತಿಳಿಯದಾಗಿದೆ. ಕರೆ ಮಾಡಿ ಕೇಳಿದಾಗ ತಕ್ಷಣಕ್ಕೆ ವಿದ್ಯುತ್‌ ಸರಬರಾಜು ಮಾಡುತ್ತಾರೆ. ಮತ್ತೆ ವಿನಾಕಾರಣ ಕಡಿತಗೊಳಿಸುತ್ತಾರೆ. ಭತ್ತಕ್ಕೆ ನೀರು ಕಟ್ಟಲಾಗದೆ ಒಣಗಿ ಹೋಗುತ್ತಿದೆ. ಇನ್ನು  ತರಕಾರಿಗೆ ವಾರಕ್ಕೆ ಮೂರು ಬಾರಿ ನೀರು ಕಟ್ಟಲೇಬೇಕು. ಇಲ್ಲವಾದರೆ ಬೆಳೆ ಹಾಳಾಗುತ್ತದೆ. ಈ ಬಗ್ಗೆ ಮೇಲ ಧಿಕಾರಿಗಳ ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕು. – ಲಕ್ಷ್ಮಣಗೌಡ ಕಡಗಂದೊಡ್ಡಿ, ರೈತ ಮುಖಂಡ

ರಾಯಚೂರು ತಾಲೂಕಿನ ಯಾಪಲದಿನ್ನಿ ಭಾಗದಲ್ಲಿ ತಾಂತ್ರಿಕ ಸಮಸ್ಯೆ ಇತ್ತು. ಹೀಗಾಗಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಈಗ ಸರಿ ಮಾಡಲಾಗಿದೆ. ನಿತ್ಯ 7 ಗಂಟೆ ತ್ರಿ ಪೇಸ್‌ ವಿದ್ಯುತ್‌ ನೀಡುವುದರಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ.ಮಧ್ಯಂತರದಲ್ಲಿ ಎಷ್ಟು ಹೊತ್ತು ಕಡಿತ ಮಾಡಲಾಗುತ್ತದೆಯೋ ಅಷ್ಟು ಹೊತ್ತು ಬಳಿಕ ಸರಬರಾಜು ಮಾಡಲಾಗುತ್ತಿದೆ. ತಾಂತ್ರಿಕ ಸಮಸ್ಯೆ ಇದ್ದಲ್ಲಿ ಮಾತ್ರ ವಿದ್ಯುತ್‌ ವ್ಯತ್ಯಯವಾಗುತ್ತಿದೆ.ಸಮಸ್ಯೆಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಗಮನಕ್ಕೆ ತಂದಲ್ಲಿ ತಕ್ಷಣಕ್ಕೆ ಕ್ರಮ ಕೈಗೊಳ್ಳಲಾಗುವುದು. – ಹನುಮೇಶ, ಜೆಸ್ಕಾಂ ಎಇಇ, ರಾಯಚೂರು ಗ್ರಾಮೀಣ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next