ಶ್ರೀರಂಗಪಟ್ಟಣ: ಕೊರೊನಾ ವೈರಸ್ ಹರಡುವ ಭೀತಿಯಿಂದ ಒಂದೆಡೆ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಭಣಗುಡುತ್ತಿದ್ದರೆ, ಮತ್ತೂಂದು ಕಡೆ ದೇವಾಲಯಗಳಿಗೆ ಆಗಮಿಸುವ ಭಕ್ತರ ಸಂಖ್ಯೆಯೂ ವಿರಳವಾಗಿದೆ.
ಕೊರೊನಾ ಭಯದ ಜೊತೆಗೆ ಏರುತ್ತಿರುವ ಬಿಸಿಲ ಝಳ ಸಾರ್ವಜನಿಕರನ್ನು ಮನೆ ಬಿಟ್ಟು ಹೊರಬರದಂತೆ ಮಾಡಿದೆ. ಕೊರೊನಾ ವೈರಸ್ ಭೀತಿ ಹೆಚ್ಚಾಗಿರುವ ಹಿನ್ನೆಲೆ ಯಲ್ಲಿ ತಾಲೂಕಿನ ಪ್ರಮುಖ ಪ್ರವಾಸಿತಾಣಗಳಾದ ರಂಗನತಿಟ್ಟು ಪಕ್ಷಿಧಾಮ ಹಾಗೂ ಕೆಆರ್‌ಎಸ್ ಬೃಂದಾವನ ಪ್ರವೇಶ ನಿಷೇಧ ಮಾಡಿದೆ. ಈ ಎರಡು ಪ್ರವಾಸಿತಾಣಗಳನ್ನು ಶನಿವಾರ ದಿಂದಲೇ ಬಂದ್ ಮಾಡಿರುವುದರಿಂದ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ.
ಬಿಸಿಲ ಝಳಕ್ಕೆ ತತ್ತರ: ದಿನೇದಿನೆ ಏರುತ್ತಿರುವ ಬಿಸಿಲ ಬೇಗೆಯ ಕಾರಣದಿಂದಲೂ ಪ್ರವಾಸಿಗರು ಹಾಗೂ ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗುತ್ತಿದೆ. ಜನರಲ್ಲಿ ತಾಪಮಾನದ ಭೀತಿ ಶೇ.40 ರಷ್ಟಿದ್ದರೆ, ಕೊರೊನಾ ವೈರಸ್ ಭೀತಿ ಶೇ.60ರಷ್ಟಿದೆ. ಇದರಿಂದಲೂ ಜನರು ಪ್ರವಾಸಿ ತಾಣಗಳತ್ತ ಯಾರೂ ಸುಳಿಯದಂತಾಗಿದೆ. ಪ್ರವಾಸಿ ತಾಣಗಳಲ್ಲಿರುವ ಸಿಬ್ಬಂದಿ ನೆರಳಲ್ಲಿ ಕುಳಿತು ಕಾಲ ಕಳೆಯುವಂತಾಗಿದೆ.
ಭಯದಿಂದ ಹಿಂದೇಟು: ಟಿಪ್ಪು ಬೇಸಿಗೆ ಅರಮನೆ, ಗುಂಬಸ್, ಗೋಸಾಯ್‌ಘಾಟ್, ಕಾವೇರಿ ಸಂಗಮ, ಬಲಮುರಿ, ಎಡಮುರಿ ಸೇರಿದಂತೆ ಇನ್ನಿತರ ಕಡೆಗೆ ಪ್ರವಾಸಿಗರು ಕೂಡ ಪ್ರವಾಸಿ ತಾಣಗಳಿಗೆ ಹೋಗುವುದಕ್ಕೆ ಕೊರೊನಾ ವೈರಸ್ ಭಯದಿಂದ ಹಿಂದೇಟು ಹಾಕುತ್ತಿದ್ದಾರೆ. ಶ್ರೀರಂಗಪಟ್ಟಣ ಪ್ರವಾಸಿ ತಾಣಗಳ ತವರು. ದೇಶ ವಿದೇಶದಿಂದ ಸಾವಿರಾರು ಮಂದಿ ಪ್ರವಾಸಿಗರು ಪ್ರತಿನಿತ್ಯ ಆಗಮಿಸುತ್ತಿದ್ದರು. ವಿಶ್ವದೆಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್‌ನಿಂದ ಹೆಚ್ಚಾಗಿ ನಮ್ಮ ದೇಶದ ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ವಿದೇಶಿಯರು ಪ್ರವಾಸಕ್ಕೆ ಆಗಮಿಸದಿರುವುದು ಪ್ರವಾಸಿ ತಾಣಗಳು ಖಾಲಿಯಾಗಿ ಉಳಿಯಲು ಕಾರಣವಾಗಿದೆ.
ದೇವಾಲಯಗಳಲ್ಲೂ ವಿರಳ : ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಖಾಲಿ ಖಾಲಿಯಾಗಿ ಬಿಕೋ ಎನ್ನುತ್ತಿದ್ದರೆ, ದೇವಾಲ ಯಗಳಲ್ಲಿ ಕಡಿಮೆ ಸಂಖ್ಯೆಯಲ್ಲಷ್ಟೇ ಭಕ್ತರು ಆಗಮಿಸುತ್ತಿದ್ದಾರೆ. ಶ್ರೀರಂಗನಾಥಸ್ವಾಮಿ, ಶ್ರೀ ನಿಮಿಷಾಂಬ ದೇವಾಲಯಗಳಿಗೆ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ಕಾವೇರಿ ನದಿ ತೀರ ಪ್ರದೇಶವಾದ ಬಲಮುರಿ, ಎಡಮುರಿ, ಸ್ನಾನಘಟ್ಟ, ಸೇರಿದಂತೆ ಇತರ ನದಿ ತೀರದ ಪ್ರದೇಶಗಳಲ್ಲಿ ಕೆಲವೇ ಜನರು ಸ್ನಾನ ಮಾಡಿ ಹೋಗುತ್ತಿರುವುದು ಕಂಡು ಬಂದಿದೆ.
ದೇವಾಲಯಗಳ ಬಳಿ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿ ಕರೊನಾ ವೈರಸ್ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಇತ್ತ ಸಾರ್ವಜನಿಕರು ಮನೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಹೊರಬರಲು ಹಿಂದೇಟು ಹಾಕುತ್ತಿರುವುದರಿಂದ ಕೊರೊನಾ ವೈರಸ್‌ಗೆ ಕಡಿವಾಣ ಹಾಕಿದಂತಾಗಿದೆ.
– ಡಾ.ವೆಂಕಟೇಶ, ವೈದ್ಯಾಧಿಕಾರಿ, ಶ್ರೀರಂಗಪಟ್ಟಣ
–ಗಂಜಾಂ ಮಂಜು