Advertisement

ಡಬಲ್‌ ಅಲ್ಲ ಟ್ರಿಪಲ್‌ ಡೆಕರ್‌!

10:44 AM Feb 22, 2020 | Suhan S |

ಬೆಂಗಳೂರು: ಯೋಜನೆ ಇರುವುದು “ಡಬಲ್‌ ಡೆಕರ್‌’. ಆದರೆ, ಆಗುತ್ತಿರುವುದು ಟ್ರಿಪಲ್‌ ಡೆಕರ್‌! ಹೌದು, ಆರ್‌.ವಿ.ರಸ್ತೆ- ಬೊಮ್ಮಸಂದ್ರ ನಡುವೆ ರಸ್ತೆ ಕಂ ರೈಲು ಮಾರ್ಗ ನಿರ್ಮಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಯೋಜಿಸಿದೆ. ಈಗಾಗಲೇ ಈ ನಿಟ್ಟಿನಲ್ಲಿಕಾಮಗಾರಿಯೂ ಪ್ರಗತಿಯಲ್ಲಿದೆ. ಆದರೆ, ಅದು ಸಿದ್ಧಗೊಳ್ಳುವ ಮೊದಲೇ ಡಬಲ್‌ ಡೆಕರ್‌ ಕೆಳಗೆ ಮತ್ತೂಂದು ಅನಧಿಕೃತ ಡೆಕರ್‌ವೊಂದು ತಲೆಯೆತ್ತಿದೆ. ಅದು- “ವಾಹನಗಳ ನಿಲುಗಡೆ’ ರೂಪದಲ್ಲಿ!

Advertisement

ಮೆಟ್ರೋ ಎತ್ತರಿಸಿದ ಮಾರ್ಗ ಹಾಗೂ ಅದರ ಕೆಳಗೆ ನಿರ್ಮಾಣಗೊಳ್ಳುತ್ತಿರುವ ಚತುಷ್ಪಥ ರಸ್ತೆಯ ರೆಕ್ಕೆಗಳ ಜೋಡಣೆ ಕಾರ್ಯ ನಡೆಯುತ್ತಿದೆ. ಅದರ ನೆರಳಲ್ಲಿ ಕಾರು, ಬೈಕ್‌ಗಳು, ಆಂಬ್ಯುಲನ್ಸ್‌, ಟ್ಯಾಕ್ಸಿಗಳು ಆಶ್ರಯ ಪಡೆಯುತ್ತಿವೆ.

ಸುಮಾರು ಒಂದು ಕಿ.ಮೀ.ಗಿಂತ ಹೆಚ್ಚು ದೂರದವರೆಗೆ ಮೆಟ್ರೋ ಕಂಬಗಳ ಉದ್ದಕ್ಕೂ ವಾಹನಗಳ ನಿಲುಗಡೆ ಆಗುತ್ತಿದೆ. ನಗರದ ಅತಿ ಹೆಚ್ಚು ದಟ್ಟಣೆ ಇರುವ ಮಾರ್ಗಗಳಲ್ಲಿ ಒಂದಾದ ಆರ್‌.ವಿ. ರಸ್ತೆ-ಬೊಮ್ಮಸಂದ್ರ ಮಾರ್ಗವು ಕಿಷ್ಕಿಂದೆಯಂತಿದೆ. ಈ ಮಧ್ಯೆ ಇರುವ ರಸ್ತೆಯನ್ನು ನಿಲುಗಡೆಗಾಗಿ ಆಕ್ರಮಿಸಿಕೊಂಡಿರುವುದು “ಪೀಕ್‌ ಅವರ್‌’ನಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಒಂದೆಡೆ ಸೆಂಟ್ರಲ್‌ ಮಾಲ್‌, ಮತ್ತೂಂದೆಡೆ ಬಿಗ್‌ ಬಜಾರ್‌ ಹಾಗೂ ದೊಡ್ಡ ಆಸ್ಪತ್ರೆಗಳು, ವಾಣಿಜ್ಯ ಮಳಿಗೆಗಳು ಈ ಮಾರ್ಗದಲ್ಲಿವೆ. ಅಲ್ಲಿಗೆ ಬರುವ ವಾಹನಗಳೆಲ್ಲವೂ ಮೆಟ್ರೋ ಕಂಬಗಳಿಗೆ ಹೊಂದಿಕೊಂಡು ನಿಲುಗಡೆ ಆಗುತ್ತಿವೆ. ವಾಹನಗಳ ಸುಗಮ ಸಂಚಾರಕ್ಕೆದು ಸಮಸ್ಯೆಯಾಗಿದ್ದು, ಹೆಜ್ಜೆ ಹೆಜ್ಜೆಗೂ ಸವಾರರು ಪರದಾಡುವಂತಾಗಿದೆ.

ಅಲ್ಲದೆ, ಮೇಲೆ ಮೆಟ್ರೋ ಮತ್ತು ಎತ್ತರಿಸಿದ ರಸ್ತೆಗಾಗಿ ಅತಿ ಭಾರದ ಉಪಕರಣಗಳ ಲಿಫ್ಟಿಂಗ್, ಜೋಡಣೆ ಮತ್ತಿತರ ಕೆಲಸಗಳನ್ನು ನಿರಾತಂಕವಾಗಿ ನಡೆಸಲಿಕ್ಕೂ ಈ ವಾಹನಗಳು ಅಡ್ಡಿಯಾಗುತ್ತಿವೆ. ಒಂದೊಂದು ಸೆಗ್ಮೆಂಟ್ ಗಳು ಹತ್ತಾರು ಟನ್‌ ತೂಗುತ್ತವೆ. ಅವುಗಳನ್ನು ಮೇಲೆತ್ತಲು ಬಳಸುವಯಂತ್ರ, ಅಳವಡಿಕೆಗಾಗಿ ಬಳಸಲಾಗುವ ನಟ್‌ ಬೋಲ್ಟ್‌ಗಳು, ಕೇಬಲ್‌ಗ‌ಳು ಕೂಡ ಹೆಚ್ಚು ಭಾರವಾಗಿರುತ್ತವೆ. ಅದರಲ್ಲಿ ಒಂದು ಜಾರಿಬಿದ್ದರೂ, ದುಬಾರಿ ವಾಹನಗಳು ಜಖಂಗೊಳ್ಳುತ್ತವೆ. ಈ ಬಗ್ಗೆ ವಾಹನ ಮಾಲಿಕರಿಗೆ ತಿಳಿಸಿದರೂ, ಪ್ರಯೋಜನ ಆಗುತ್ತಿಲ್ಲ. ಅತ್ತ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದರೂ ಇತ್ತ ವಾಹನಗಳ ತೆರವಿಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಾರ್ಗದ ಎಂಜಿನಿಯರೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

Advertisement

ದುಡ್ಡು ಕೊಡಲು ಬರ್ತಾರೆ!: ವಿರೋಧದ ನಡುವೆಯೂ ವಾಹನಗಳ ನಿಲುಗಡೆ ಮಾಡುತ್ತಾರೆ. ಗಂಟೆ ಬಿಟ್ಟು ವಾಪಸ್‌ ತೆಗೆದುಕೊಂಡು ಹೋಗುವಾಗ, ಪಾರ್ಕಿಂಗ್‌ ಶುಲ್ಕದ ರೀತಿಯಲ್ಲಿ 5-10 ರೂ. ಕೈಗಿಡಲು ಬರುತ್ತಾರೆ. ನಿರಾಕರಿಸಿ ಮತ್ತೂಮ್ಮೆ ಇಲ್ಲಿ ನಿಲ್ಲಿಸಬೇಡಿ ಎಂದು ಹೇಳಿಕಳಿಸುತ್ತೇವೆ. ಆದರೂ ಕೇಳುವುದಿಲ್ಲ. ಇತ್ತೀಚೆಗೆ ಇಂತಹವರ ಹಾವಳಿ ಹೆಚ್ಚಾಗಿದೆ. ಇಲ್ಲಿ ನಿಲ್ಲುವ ವಾಹನ ಗಳನ್ನು ಕಾಯುವುದೇ ಕೆಲಸ ಆಗುತ್ತಿದೆ ಎಂದು ಭದ್ರತಾ ಸಿಬ್ಬಂದಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಮಾಲ್‌ಗ‌ಳಲ್ಲಿ ಸಾಮಾನ್ಯವಾಗಿ ಗಂಟೆಗೆ 30 ರೂ. ನಿಲುಗಡೆ ಶುಲ್ಕ. ಅಲ್ಲದೆ, ಎರಡು-ಮೂರು ನೆಲಮಹಡಿ ಕೆಳಗೆ ಹೋಗಬೇಕು. ವಾಪಸ್‌ ಹೋಗುವಾಗಲೂ ವಾಹನ ಹುಡುಕಾಡಬೇಕಾಗುತ್ತದೆ. ಈ ತಲೆಬಿಸಿಯಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಸುಲಭ ಮಾರ್ಗ ಹಿಡಿದಿದ್ದಾರೆ. ಇದಲ್ಲದೆ, ಮಲ-ಮೂತ್ರ ವಿಸರ್ಜನೆಯೂ ಇಲ್ಲಿ ಆಗುತ್ತಿದ್ದು, ಸಮಸ್ಯೆಯಾಗಿ ಪರಿಣಮಿಸಿದೆ.

ಸಾಗಣೆ-ಅಳವಡಿಕೆ ಸವಾಲು :  ನಮ್ಮ ಮೆಟ್ರೋ ಮೊದಲ “ಡಬಲ್‌ ಡೆಕರ್‌’ಗೆ ದೈತ್ಯ ಕಾಂಕ್ರೀಟ್‌ ಸೆಗ್ಮೆಂಟ್ಗಳು ಹಾಗೂ ಅದಕ್ಕೆ ಪೂರಕವಾದ ಉಪಕರಣಗಳನ್ನು ಸಾಗಿಸುವುದೇ ದೊಡ್ಡ ಸವಾಲಾಗಿದೆ. ಚತುಷ್ಪಥ ರಸ್ತೆಗೆ ಅಳವಡಿಸಲಾಗುವ ರೆಕ್ಕೆಗಳು, ಸೆಗ್ಮೆಂಟ್ಗಳು 15-20 ಟನ್‌ ಇರುತ್ತವೆ. ಹತ್ತು ಚಕ್ರಗಳ ಟ್ರೈಲರ್‌ನಲ್ಲಿ ಅವುಗಳನ್ನು ರಾತ್ರಿ ವೇಳೆಯಲ್ಲೇ ಸಾಗಿಸಿ, ಮೇಲೆತ್ತಬೇಕಾಗುತ್ತದೆ. ಅಳವಡಿಕೆಯಲ್ಲಿ ಸಣ್ಣ ಏರುಪೇರಾದರೂ ನೂರಾರು ಜನ ಬಲಿಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಇದು ಅತ್ಯಂತ “ರಿಸ್ಕ್’ ಎಂದು ಗುತ್ತಿಗೆ ಪಡೆದ ಕಂಪೆನಿಯೊಂದರ ಎಂಜಿನಿಯರ್‌ ಮಾಹಿತಿ ನೀಡಿದರು. ರಾತ್ರಿ 10 ಗಂಟೆ ನಂತರ ಈ ಸೆಗ್ಮೆಂಟ್ ಮತ್ತು ರೆಕ್ಕೆಗಳು ಬನಶಂಕರಿಯಿಂದ ತರಲಾಗುತ್ತದೆ. ಒಂದು ಎತ್ತರಿಸಿದ ರಸ್ತೆ ಸ್ಪ್ಯಾನ್‌ ಅಳವಡಿಕೆ (ಇದರಲ್ಲಿ 8-10 ಸೆಗ್ಮೆಂಟ್ ಗಳಿರುತ್ತವೆ)ಗೆ 22-25 ದಿನಗಳ ಬೇಕಾಗುತ್ತದೆ. ಇದರಲ್ಲಿ ಸೆಗ್ಮೆಂಟ್ , ಲಿಫ್ಟಿಂಗ್  ಅಲೈನ್‌ಮೆಂಟ್‌, ಕಾಂಕ್ರೀಟ್‌, ಕ್ಯುರಿಂಗ್‌ ಸೇರಿದಂತೆ ಹಲವು ಕೆಲಸಗಳು ನಡೆಯುತ್ತವೆ ಎಂದು ವಿವರಿಸಿದರು.

 

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next