Advertisement

ಹೊಸಪೇಟೆ: ಬಿಸಿಲಿನ ತಾಪದ ಪರಿಣಾಮ ಇಲ್ಲಿನ ತುಂಗಭದ್ರಾ ಜಲಾಶಯದ ನೀರಿನಿಂದ ಹೊರ ಬರುವ ಮೀನುಗಳು ದಂಡೆಗೆ ಅಪ್ಪಳಿಸಿ ಬೀಳುತ್ತಿವೆ. ಜಲಾಶಯದ ನೀರಿನಲ್ಲಿ ಕರಗಿದ ಆಮ್ಲಜನಕ ಪ್ರಮಾಣ ಕೊರತೆಯಿಂದ ಮೀನುಗಳು ಹೊರ ಬಂದು ತೀರದಲ್ಲಿ ಬೀಳಲು ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

Advertisement

ತುಂಗಭದ್ರಾ ಜಲಾಶಯ ಮೀನು ಉತ್ಪಾದನೆಗೆ ಹೆಸರುವಾಸಿಯಾಗಿದೆ. ಜಲಾಶಯದ ಬಾಳೆ, ಗೌರಿ, ರವೌ ಸೇರಿದಂತೆ ವಿವಿಧ ಮೀನುಗಳು ಇಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಬಿಸಿಲಿನ ತಾಪಮಾನ ದಿನೇ ದಿನೆ ಏರಿಕೆಯಾಗುತ್ತಿದ್ದು, ಈ ಮೀನುಗಳು ದಂಡೆಗೆ ಬರಲಾರಂಭಿಸಿವೆ. ತಾಪಮಾನ ಹೊಡೆತಕ್ಕೆ ಅಲ್ಲೇ ಬೀಳುತ್ತಿವೆ. ಹೀಗಾಗಿ ಸ್ಥಳೀಯರು ಮೀನುಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಜಲಾಶಯದ ನೀರಿನಲ್ಲಿ ಕರಗಿದ ಆಮ್ಲಜನಕದ ಕೊರತೆಯಿಂದ ಹೀಗಾಗಿರಬಹುದು ಎಂದು ವನ್ಯಜೀವಿ ಪ್ರೇಮಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತುಂಗಭದ್ರಾ ಮಂಡಳಿ ಅಧ್ಯಯನ ನಡೆಸಬೇಕು. ಇದರಿಂದ ಜಲಾಶಯದ ನೀರಿನ ಗುಣಮಟ್ಟ ತಿಳಿಯಲಿದೆ.

ಮೀನುಗಳು ಹಾಗೂ ಚಲಚರ ಜೀಗಳು, ಜೀವವೈವಿಧ್ಯ ಬೆಳವಣಿಗೆಗೆ ಪೂರಕ ಮಾಹಿತಿ ದೊರೆಯಲಿದೆ ಎಂದು ವನ್ಯಜೀವಿ ಪ್ರೇಮಿಗಳು ಹೇಳುತ್ತಾರೆ. ಸದ್ಯ ಜಲಾಶಯದ ಒಳ ಹರಿವು ಶೂನ್ಯಕ್ಕೆ ತಗ್ಗಿದೆ. ಹೊರ ಹರಿವು ಪ್ರಮಾಣ 8636 ಕ್ಯೂಸೆಕ್‌ ನಷ್ಟಿದೆ. ದಿನೇ ದಿನೆ ಜಲಾಶಯದ ನೀರು ಖಾಲಿಯಾಗುತ್ತಿದೆ. ಸದ್ಯ ಜಲಾಶಯದಲ್ಲಿ 14.828 ಟಿಎಂಸಿ ಅಡಿಯಷ್ಟು ನೀರಿದೆ. ಜಲಾಶಯದಲ್ಲಿ ನೀರು ಖಾಲಿಯಾಗುತ್ತಿದೆ. ಇನ್ನೊಂದೆಡೆ ಮೀನುಗಳು ಬಿಸಿಲು ದಂಡೆಗೆ ಬರುತ್ತಿದ್ದು, ತಾಪಮಾನ ತಡೆದುಕೊಳ್ಳಲು ಆಗದೇ ಹೊರಳಿ ಬೀಳುತ್ತಿವೆ. ಹೀಗಾಗಿ ಜಲಾಶಯದಲ್ಲಿನ ಆಮ್ಲಜನಕ ಕೊರತೆ ಇಲ್ಲವೇ ಬೇರೆ ಏನೋ ಕಾರಣ ಇರಬಹುದು ಎಂಬುದು ವನ್ಯಜೀವಿ ಪ್ರೇಮಿಗಳ ಅಭಿಮತವಾಗಿದೆ.

ತುಂಗಭದ್ರಾ ಜಲಾಶಯದ ಮೀನುಗಳಿಗೆ ಭಾರಿ ಬೇಡಿಕೆ ಇದೆ. ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳಲ್ಲಿ ಭಾರಿ ಬೇಡಿಕೆ ಇದೆ. ಈ ಮೀನಿನ ಪ್ರಭೇದ ಹಾಗೂ ಸಂತತಿ ಉಳಿಸಬೇಕು. ಜತೆಗೆ ಜಲಾಶಯದಲ್ಲಿ ಅಪರೂಪದ ನೀರುನಾಯಿಗಳಿವೆ. ಹೀಗಾಗಿ ಜಲಾಶಯದ ನೀರಿನ ಬಗ್ಗೆ ಅಧ್ಯಯನ ನಡೆಯಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ತುಂಗಭದ್ರಾ ಜಲಾಶಯದ ಮೇಲ್ಭಾಗದಲ್ಲಿ ಕಾರ್ಖಾನೆಗಳ ತ್ಯಾಜ್ಯ ನೀರು ಜಲಾಶಯಕ್ಕೆ ಸೇರುತ್ತಿದೆಯೇ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಈ ಮಧ್ಯೆ ರೈತರು ಹೊಲಗದ್ದೆಗಳಲ್ಲಿ ಹೆಚ್ಚೆಚ್ಚು ರಾಸಾಯನಿಕ, ರಸಗೊಬ್ಬರ ಬಳಸುವುದರಿಂದ ಆ ನೀರು ಹರಿದು ಜಲಾಶಯ ಸೇರುತ್ತಿದೆ. ಹೀಗಾಗಿ ಕೆಲವೊಮ್ಮೆ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿದ ನಿದರ್ಶನ ಕೂಡ ಇದೆ.

ಈಗ ಮೀನುಗಳು ದಂಡೆಗೆ ಬಂದು ಬೀಳುತ್ತಿವೆ. ಹೀಗಾಗಿ ಪೂರಕ ಅಧ್ಯಯನ ಆಗಲಿ ಎಂಬುದು ವನ್ಯಜೀವಿ ಪ್ರೇಮಿಗಳ ಅಂಬೋಣ. ಮೀನು ಹಿಡಿಯಲು ಜಲಾಶಯದ ದಂಡೆಯಲ್ಲಿ ಕೆಲವರು ತಂತ್ರಗಾರಿಕೆಯಿಂದ ಮೀನುಗಳು ದಂಡೆಗೆ ಬರುವಂತೇ ಮಾಡಿರಬಹುದು ಎಂಬ ಅನುಮಾನವೂ ಇದೆ. ಒಟ್ಟಾರೆಯಾಗಿ ತುಂಗಭದ್ರಾ ಮಂಡಳಿ ಈ ಬಗ್ಗೆ ಕ್ರಮವಹಿಸಬೇಕು ಎಂಬುದು ಪರಿಸರ ಪ್ರೇಮಿಗಳ ಆಗ್ರಹವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next