Advertisement

ತಂತ್ರಜ್ಞಾನದಿಂದ ಅವಕಾಶಗಳ ಕೊರತೆ

06:09 AM Feb 04, 2019 | |

ದಾವಣಗೆರೆ: ಪ್ರಸ್ತುತ ಡಿಜಿಟಲ್‌ ತಂತ್ರಜ್ಞಾನದ ವೇಗದ ಬೆಳವಣಿಗೆಯಿಂದಾಗಿ ನಾಮಫಲಕ ಕಲಾವಿದರು ಸಾಕಷ್ಟು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

Advertisement

ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದಿಂದ ಹಮ್ಮಿಕೊಂಡಿದ್ದ ಕಲಾವಿದರ ಸಮ್ಮಿಲನ ಹಾಗೂ ಜಿಲ್ಲಾ ಶಾಖೆ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಕಲೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ ಕಲಾವಿದರು. ಆದರಿಂದಿನ ಡಿಜಿಟಲ್‌ ತಂತ್ರಜ್ಞಾನ ಬಂದ ಮೇಲೆ ಕಲಾವಿದರಿಗೆ ಸಾಕಷ್ಟು ಅವಕಾಶಗಳು ಕಡಿಮೆ ಆಗುತ್ತಿವೆ. ಕೈ ಬರಹದ ಕಲೆಗೆ ನಿಜಕ್ಕೂ ಬೆಲೆಕಟ್ಟಲು ಸಾಧ್ಯವಿಲ್ಲ. ಹಾಗಾಗಿ ಅಗತ್ಯ ಸೌಲಭ್ಯ ನೀಡಿ ಕಲಾವಿದರನ್ನು ಪೋಷಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.

ಸ್ವಾತಂತ್ರ್ಯ ಹೋರಾಟಗಾರರು, ಬಸವಾದಿ ಶರಣರು, ನಾಡಿನ ದಾರ್ಶನಿಕರನ್ನು ಚಿತ್ರಕಲೆ ಮೂಲಕ ಪರಿಚಯಿಸಿದ ಕೀರ್ತಿ ಕಲಾವಿದರಿಗೆ ಸಲ್ಲುತ್ತದೆ. ಯಾವುದೇ ರಸ್ತೆ, ಸಂಚಾರಿ ನಿಯಮ ಫಲಕ, ರೂಟ್ ಮ್ಯಾಪ್‌, ಅಂಗಡಿ, ವ್ಯಕ್ತಿ ಸೇರಿದಂತೆ ಎಲ್ಲಾ ಕ್ಷೇತ್ರದ ಫಲಕಗಳನ್ನು ಬಣ್ಣಗಳಿಂದ ಸುಂದರವಾಗಿ ಕಲಾವಿದರು ಚಿತ್ರಿಸುತ್ತಾರೆ. ಆದರೆ, ಜಗತ್ತನ್ನೇ ಸುಂದರ ಮಾಡಬಲ್ಲ ಶಕ್ತಿ ಹೊಂದಿರುವ ಕಲಾವಿದರ ಬದುಕು ಬಣ್ಣಗಳಿಂದ ಬೆಳಗಾಗಿಲ್ಲ. ಈ ಹಿನ್ನೆಲೆಯಲ್ಲಿ ತಮಗೆ ಅಗತ್ಯವಿರುವ ಸೌಲಭ್ಯ ಪಡೆದುಕೊಳ್ಳಲು ನಾಮಫಲಕ ಕಲಾವಿದರು ಮೊದಲು ಸಂಘಟಿತರಾಗಬೇಕು ಎಂದು ಸಲಹೆ ನೀಡಿದರು.

ಕಲೆಗೆ ಅದ್ಭುತ ಶಕ್ತಿ ಇದೆ. ಯಾರ ಬರವಣಿಗೆಯ ಅಕ್ಷರಗಳು ಸುಂದರಗೊಳ್ಳುತ್ತಿಲ್ಲವೋ ಅಂತಹವರು ಚಿತ್ರಕಲೆ ರೂಢಿಸಿಕೊಳ್ಳಬೇಕು. ಆಗ ಅಕ್ಷರಗಳು ಕೂಡ ಸುಂದರವಾಗುತ್ತವೆ. ಹಾಗಾಗಿ ಪೋಷಕರು ಮಕ್ಕಳಿಗೆ ಬರವಣಿಗೆ, ಓದಿನ ಜೊತೆಗೆ ಚಿತ್ರಕಲೆಗೂ ಪ್ರೋತ್ಸಾಹಿಸಿ ಎಂದರು.

Advertisement

ಜಿಲ್ಲಾ ಘಟಕದ ಉದ್ಘಾಟನೆ ನೆರವೇರಿಸಿ ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ರವೀಂದ್ರ ಎಸ್‌. ಕಮ್ಮಾರ್‌ ಮಾತನಾಡಿ, ಸಾಮಾಜಿಕ, ಧಾರ್ಮಿಕ, ರಾಜಕೀಯವಾಗಿ ಎಲ್ಲಾ ವ್ಯಾಪಾರ ಕ್ಷೇತ್ರದಲ್ಲೂ ಕೂಡ ಇಂದು ಜಾಹೀರಾತು ನಾಮಫಲಕಗಳು ಅತ್ಯಗತ್ಯ. ನಾಮಫಲಕಗಳ ಪ್ರಚಾರವಿಲ್ಲದೇ, ಯಾವುದೇ ಕ್ಷೇತ್ರವೂ ಪರಿಚಯವಾಗಲು ಸಾಧ್ಯವಿಲ್ಲ. ಶಾಸನ, ಗೋಡೆ ಬರಹಗಳಿಂದ ಹಿಡಿದು ಇಂದು ಥ್ರೀಡಿ ವರೆಗೆ ಕಲಾ ಪ್ರಕಾರ ಬೆಳೆದು ನಿಂತಿದೆ. ಬದಲಾದ ಕಾಲಘಟ್ಟಕ್ಕೆ ಹೊಂದಿಕೊಳ್ಳುವ ಅಗತ್ಯತೆ ಇದೆ. ಹಾಗಾಗಿ ಕಲಾವಿದರು ಸಂಘಟಿತರಾಗುವ ಮೂಲಕ ಹೊರೆಯಾಗಿರುವ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರಬುದ್ಧರಾಗಿ ಬೆಳೆಯಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷರಾದ ಹರೀಶ್‌, ಎನ್‌. ಧರ್ಮಲಿಂಗಂ, ಹಿರಿಯ ಕಲಾವಿದ ಎಂಎಸ್‌ಬಿ. ರಾಜು, ಬ್ರಷ್‌ಮನ್‌ ನಾಗರಾಜ್‌ ಅವರನ್ನು ಸನ್ಮಾನಿಸಲಾಯಿತು. ಬ್ರಷ್‌ಮನ್‌ ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು. ಹೋಟೆಲ್‌ ಉದ್ಯಮಿ ಅಜಯ್‌ಕುಮಾರ್‌, ಸಂಘದ ರಾಜ್ಯಾಧ್ಯಕ್ಷ ಬಿ.ಕೆ. ಗುರುರಾಜ್‌, ಕಾರ್ಯಾಧ್ಯಕ್ಷ ಎನ್‌. ಕುಮಾರ್‌, ಎನ್‌. ರಂಗನಾಥ್‌ ಬಾಬು, ನೆನಪು ಲೋಕೇಶ್‌, ಜಿಲ್ಲಾಧ್ಯಕ್ಷ ಜಿ. ರಮೇಶ, ಹರೀಶ್‌, ಎನ್‌. ಧರ್ಮಲಿಂಗಂ, ಇಬ್ರಾಹಿಂ ಷರೀಫ್‌ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಪತ್ರಕರ್ತರ ಕೂಟದ ಆವರಣದಿಂದ ಕುವೆಂಪು ಕನ್ನಡ ಭವನದವರೆಗೆ ಮೆರವಣಿಗೆ ನಡೆಯಿತು. ಕಲಾವಿದರಿಗೆ ಸರ್ಕಾರ ಸೌಲಭ್ಯ ಕಲ್ಪಿಸಲಿ

ಇಂದು ಜಗತ್ತಿನ ಮೂಲೆ ಮೂಲೆಗಳನ್ನು ತಲುಪುವ, ಯಾವುದೇ ಸ್ಥಳದ ಬಗ್ಗೆ ಪರಿಚಯ ಮಾಡಿಕೊಳ್ಳುವ ಅವಕಾಶ ಕಲಾವಿದರಿಂದ ದೊರಕಿದೆ. ಕಲಾವಿದರ ಪರಿಶ್ರಮ ನಿಜಕ್ಕೂ ಅಪಾರವಾದುದು. ಅಂತಹ ಕಲಾವಿದರಿಗೆ ಸರ್ಕಾರ, ಇಲಾಖೆಗಳಿಂದ ಹೆಚ್ಚಿನ ಸೌಲಭ್ಯ ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊÛಬೇಕು. ಜೊತೆಗೆ ಸಮಾಜದ ಏಳ್ಗೆಗಾಗಿ ಶ್ರಮಿಸಿರುವ ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ಸರ್ಕಾರ, ಸ್ಥಳೀಯ ಸಂಸ್ಥೆಗಳು ಮಾಡಬೇಕು ಎಂದು ಹೋಟೆಲ್‌ ಉದ್ಯಮಿ ಅಜಯ್‌ಕುಮಾರ್‌ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next