Advertisement

ಕನ್ನಡದ ಕೆಲಸಕ್ಕೆ ಅಧಿಕಾರಿಗಳದ್ದೇ ಕೊರತೆ!

11:35 PM Oct 28, 2019 | Team Udayavani |

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿಯಿದ್ದು, ಸಿಬ್ಬಂದಿಗಳಿಲ್ಲದೆ ಕನ್ನಡ ಭವನ ಬಣಗುಡುತ್ತಿದೆ. ಕೆಲವು ಹಿರಿಯ ರಿಜಿಸ್ಟ್ರಾರ್‌ಗಳು ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದು, ಆ ಹಿನ್ನೆಲೆಯಲ್ಲಿಯೇ ಈಗಿರುವ ಬೆರಳೆಣಿಕೆಯಷ್ಟು ರಿಜಿಸ್ಟ್ರಾರ್‌ಗಳಿಗೆ ಎರಡರಿಂದ ಮೂರು ಅಕಾಡೆಮಿ ಇಲ್ಲವೆ ಪ್ರಾಧಿಕಾರದ ಜವಾಬ್ದಾರಿ ವಹಿಸಲಾಗಿದೆ.

Advertisement

ಜತೆಗೆ ರಿಜಿಸ್ಟ್ರಾರ್‌ ಹುದ್ದೆಯಲ್ಲಿದ್ದ ಕೆಲವರು ಬೇರೆ -ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗಿದ್ದು ಆ ಹಿನ್ನೆಲೆಯಲ್ಲಿ ದೂರದ ಊರಿನಿಂದ ಗೋಳು ಹೊತ್ತು ಕನ್ನಡ ಭವನಕ್ಕೆ ಬರುವ ಕಲಾವಿದರು ಮತ್ತು ಜನ ಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಕನ್ನಡ ಕೆಲಸಕ್ಕೆ ಅಧಿಕಾರಿಗಳ ಕೊರತೆ ಎದುರಾಗಿದೆ.

“ಉದಯವಾಣಿ’ಗೆ ದೊರೆತಿರುವ ಮೂಲ ದಾಖಲೆಗಳ ಅಂಕಿ-ಅಂಶಗಳ ಪ್ರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ “ಎ’ ವೃಂದದಿಂದ “ಡಿ’ ವೃಂದದ ವರೆಗೆ ಸುಮಾರು 278 ಹುದ್ದೆಗಳು ಮಂಜೂರಾಗಿದೆ. ಆದರೆ ಇದರಲ್ಲಿ ಕೇವಲ 118 ಹುದ್ದೆಗಳನ್ನು ಮಾತ್ರ ತುಂಬಿಕೊಳ್ಳಲಾಗಿದೆ. ಇನ್ನೂ 160 ವಿವಿಧ ದರ್ಜೆಯ ಹುದ್ದೆಗಳು ಖಾಲಿ ಉಳಿದಿವೆ. ಸಹಾಯಕರ ನಿರ್ದೇಶಕರು/ಅಕಾಡೆಮಿ ರಿಜಿಸ್ಟ್ರಾರ್‌ ಗ್ರೇಡ್‌ -2ನಲ್ಲಿ ಸುಮಾರು 44 ಹುದ್ದೆಗಳು ಈಗಾಗಲೇ ಮಂಜೂರಾಗಿದ್ದು,

ಇದರಲ್ಲಿ ಕೇವಲ 26 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಇನ್ನೂ ಸುಮಾರು 8 ಹುದ್ದೆಗಳು ಖಾಲಿಯಿವೆ. ಜತೆಗೆ ಸುಮಾರು 19 ಅಧೀಕ್ಷಕರ ಹುದ್ದೆಗಳಿದ್ದು ಇದರಲ್ಲಿ 9 ಹುದ್ದೆಗಳನ್ನು ಮಾತ್ರ ತುಂಬಲಾಗಿದೆ. ಉಳಿದ ಹತ್ತು ಹುದ್ದೆಗಳು ಹಾಗೆಯೇ ಖಾಲಿ ಉಳಿದಿವೆ. ಒಟ್ಟು 21 ಪ್ರಥಮ ದರ್ಜೆ/ಉಗ್ರಾಣ ಪಾಲಕ/ಲೆಕ್ಕಿಗ ಹುದ್ದೆಗಳಿವೆ. ಇದರಲ್ಲಿ ಕೇವಲ 6 ಹುದ್ದೆಗಳನ್ನು ತುಂಬಲಾಗಿದ್ದು ಸುಮಾರು 15 ಹುದ್ದೆಗಳು ಬಾಕಿಯಿವೆ.

ಬೆರಳಚ್ಚುಗಾರರ ಕೊರತೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆರಳಚ್ಚುಗಾರರ ಸಮಸ್ಯೆ ಎದುರಿಸುತ್ತಿದೆ. ಸುಮಾರು 34 ಬೆರಳಚ್ಚುಗಾರರು ಇಲಾಖೆಗೆ ಅವಶ್ಯಕತೆಯಿದ್ದು ಇದರಲ್ಲಿ ಕೇವಲ 12 ಮಂದಿ ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಉಳಿದ 22 ಬೆರಳಚ್ಚುಗಾರರ ಹುದ್ದೆಗಳನ್ನು ಸರ್ಕಾರ ತುಂಬಬೇಕಾಗಿದೆ. ಜತೆಗೆ ಕನ್ನಡ ಸಂಸ್ಕೃತಿ ಇಲಾಖೆಗೆ ಸುಮಾರು 22 ದ್ವಿತೀಯ ದರ್ಜೆ ಹುದ್ದೆಗಳು ಮಂಜೂರಾಗಿವೆ. ಆದರೆ ಇದರಲ್ಲಿ 14 ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದೆ. ಹಾಗೆಯೇ “ಡಿ’ ವೃಂದಕ್ಕೆ ಸುಮಾರು 86 ಹುದ್ದೆಗಳು ಮಂಜೂರಾಗಿವೆ. ಆದರೆ ಇದರಲ್ಲಿ 24 ಹುದ್ದೆಗಳನ್ನು ಮಾತ್ರ ತುಂಬಿಕೊಳ್ಳಲಾಗಿದ್ದು ಇನ್ನೂ ಸುಮಾರು 62 ಹುದ್ದೆಗಳು ತುಂಬಬೇಕಾಗಿದೆ.

Advertisement

ಕಲಾಗ್ರಾಮದಲ್ಲೂ ಅಧಿಕಾರಿಗಳಿಲ್ಲ: ರಂಗಚಟುವಟಿಕೆಗಾಗಿಯೇ ಸರ್ಕಾರ ಮಲತ್ತಹಳ್ಳಿಯಲ್ಲಿ ಕಲಾಗ್ರಾಮ ನಿರ್ಮಾಣ ಮಾಡಿದೆ. ಇಲ್ಲಿ ರಂಗ ಮಂದಿರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಕಚೇರಿ ಮತ್ತು ಲಲಿತಾ ಕಲಾ ಅಕಾಡೆಮಿಗೆ ಸೇರಿದ ಕಲಾ ಕೇಂದ್ರವಿದೆ. ಆದರೆ ಇಲ್ಲಿ ಕೂಡ ಕಲಾಗ್ರಾಮದ ನಿರ್ವಹಣೆ ನೋಡಿಕೊಳ್ಳಲು ಇಲಾಖೆಯ ಅಧಿಕಾರಿಗಳಿಲ್ಲ. ಈ ಹಿಂದೆ ಕಲಾಗ್ರಾಮದ ರಂಗಮಂದಿರದಲ್ಲಿ ವಿದ್ಯುತ್‌ ಅವಘಡ ಸಂಭವಿಸಿದಾಗ ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು.

ಆ ವೇಳೆ ಧ್ವನಿ -ಬೆಳಕಿನ ವ್ಯವಸ್ಥೆಯ ಕೊಠಡಿ ಹೊತ್ತಿ ಉರಿದಿತ್ತು. ಈ ರಂಗಮಂದಿರ ದುರಸ್ಥಿ ಕಾರ್ಯ ಇಲ್ಲಿವರೆಗೂ ಸಮರ್ಪಕವಾಗಿ ನಡೆದಿಲ್ಲ. ಈ ಸಮಸ್ಯೆಯನ್ನು ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳ ಮುಂದೆ ತಂದಾಗ ಇಲಾಖೆಯಲ್ಲಿ ಜನರೇ ಇಲ್ಲ ಎಂಬ ಉತ್ತರ ನೀಡಿದ್ದರು. ಖಾಲಿಯಿರುವ ಹುದ್ದೆಗಳನ್ನು ತುಂಬಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿ ಸುಮ್ಮನಾಗುತ್ತಿದ್ದರು.

ಸಹಾಯ ಕೇಂದ್ರ ಸ್ಥಗಿತ: ಈ ಹಿಂದೆ ವಿಶುಕುಮಾರ್‌ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿದ್ದ ವೇಳೆ ಕನ್ನಡ ಭವನಕ್ಕೆ ಬರುವ ಕಲಾವಿದರಿಗೆ ಮತ್ತು ಶ್ರೀಸಾಮಾನ್ಯರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ “ಸಹಾಯ ಕೇಂದ್ರ’ವನ್ನು ತೆರೆಯಲಾಗಿತ್ತು. ಈ ಕೇಂದ್ರವನ್ನು ಅಂದಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಜಯಮಾಲಾ ಅವರು ಉದ್ಘಾಟಿಸಿದ್ದರು. ಆದರೆ ಆ ಸಹಾಯಕೇಂದ್ರವನ್ನು ಕೂಡ ಈಗ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 13 ಅಕಾಡೆಮಿ ಮತ್ತು 3 ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದೆ. ಆದರೆ ಕನ್ನಡ ಕೆಲಸ ಮಾಡಲು ಅಧಿಕಾರಿಗಳೇ ಇಲ್ಲದಂತಾಗಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಶೇ.61ರಷ್ಟು ಹುದ್ದೆಗಳು ಖಾಲಿಯಿವೆ. ಇವುಗಳ ಭರ್ತಿ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಹಾಗೂ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತೇನೆ.
-ಸಿ.ಟಿ.ರವಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next