Advertisement

ಬಾರದ ಮುಂಗಾರು ಮಳೆ, ಬಿತ್ತನೆಗೆ ಹಿನ್ನಡೆ

01:36 PM Jul 23, 2019 | Team Udayavani |

ಮಾಲೂರು: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಸಕಾಲದಲ್ಲಿ ಕೃಷಿ ಚಟುವಟಿಕೆಗಳು ಆರಂಭವಾಗದೇ ತಾಲೂಕಿನ ರೈತರು ಆತಂಕಗೊಂಡಿದ್ದಾರೆ. ನಿಗದಿಯಂತೆ ಮಳೆಯಾಗಿದ್ದರೆ ಈ ವೇಳೆಗಾಗಲೇ ಶೇ.70 ಬಿತ್ತನೆ ಕಾರ್ಯ ಮುಗಿಯಬೇಕಾಗಿತ್ತು. ಆದರೆ, ಮಳೆ ಕೈಕೊಟ್ಟಿರುವ ಕಾರಣ ರೈತರಿಗೆ ಆದಾಯ ತಂದುಕೊಡುವ ಮತ್ತು ವರ್ಷಪೂರ್ತಿ ಜನ ಜಾನುವಾರುಗಳಿಗೆ ಆಹಾರ ಒದಗಿಸಬೇಕಿದ್ದ ದ್ವಿದಳ, ಏಕದಳ ಹಾಗೂ ಮಳೆಯಾಶ್ರಿತ ಬೆಳೆಗಳ ಬಿತ್ತನೆಗೆ ಹಿನ್ನಡೆಯಾಗುತ್ತಿದೆ.

Advertisement

ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾದ ಕಾರಣ ರೈತರು ಜಮೀನನ್ನು ಹದ ಮಾಡಿ, ಬಿತ್ತನೆಗೆ ಸಿದ್ಧಮಾಡಿಕೊಂಡಿದ್ದಾರೆ. ಆದರೆ, ಮಳೆಯ ಅಭಾವದಿಂದ ಬಿತ್ತನೆಗೆ ಹಿನ್ನಡೆಯಾಗಿದೆ. ತಾಲೂಕಿನಲ್ಲಿ ಈ ವೇಳೆಗೆ ನೆಲಗಡಲೆ 400 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ, ಮಳೆ ಅಭಾವದಿಂದ 204 ಹೆಕ್ಟೇರ್‌ನಲ್ಲಿ ಮಾತ್ರ ನಡೆದಿದೆ. ತೊಗರಿ 77 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

ಬಿತ್ತನೆ ಬೀಜ, ಗೊಬ್ಬರ ದಾಸ್ತಾನು: ಜೂನ್‌ ಅಂತ್ಯಕ್ಕೆ 69.9 ಮಿಮೀ ಮಳೆಯಾಗಬೇಕಾಗಿತ್ತು. ಆದರೆ, ಆಗಿಲ್ಲ. ಅದರೂ ಕೆಲವು ರೈತರು ಗಾಳಿ ಮಧ್ಯೆ ಆಗಾಗ ಬೀಳುವ ತುಂತುರು ಮಳೆಯ ಹದದಲ್ಲೇ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಕಸಬಾ, ಟೇಕಲ್, ಮಾಸ್ತಿ, ಲಕ್ಕೂರು ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ 100 ಕ್ವಿಂಟಲ್ ನೆಲಗಡಲೆ, 15 ಕ್ವಿಂಟಲ್ ತೊಗರಿ, 5 ಕ್ವಿಂಟಲ್ ಅಲಸಂದಿ, ರಾಗಿ 202 ಕ್ವಿಂಟಲ್, ಪೋಷಕಾಂಶಗಳಾದ ಬೋರಾನ್‌, ಎರೆಹುಳು, ಜಿಪ್ಸಂ, ಜೀಂಕ್‌ ಗೊಬ್ಬರನ್ನು ದಾಸ್ತಾನು ಮಾಡಲಾಗಿದೆ.

ತುಂತುರು ಮಳೆಯಲ್ಲೇ ಬಿತ್ತನೆ: ತೊಗರಿ ಜುಲೈ ಅಂತ್ಯದವರೆಗೆ, ರಾಗಿಯನ್ನು ಆಗಸ್ಟ್‌ವರೆಗೂ ಬಿತ್ತನೆ ಮಾಡಲು ಕಲಾವಕಾಶವಿದೆ. ಆದರೆ, ಆಷಾಢ ಗಾಳಿ ಜೋರಾಗಿರುವ ಈ ಸಮಯದಲ್ಲಿ ಧಾರಾಕಾರವಾಗಿ ಮಳೆ ಬರುವುದು ಕಷ್ಟ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಆದರೆ, ಕೆಲವು ರೈತರು ಎರಡು ಮೂರು ದಿನಗಳಿಂದ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಬೀಳುತ್ತಿರುವ ತುಂತುರು ಮಳೆಯಲ್ಲೇ ಕಾರಿಅವರೆ, ಅಲಸಂದಿ ಬಿತ್ತನೆ ಮಾಡಿದ್ದು, ಅವರೂ ಮಳೆಯನ್ನೇ ಎದುರು ನೋಡುತ್ತಿದ್ದಾರೆ.

ಈಬಾರಿಯೂ ಆತಂಕ: ಕಳೆದ ವರ್ಷ ಪ್ರಸಕ್ತ ಸಾಲಿಗಿಂತಲೂ ಹೆಚ್ಚಿನ ಬಿತ್ತನೆಯಾಗಿತ್ತಾದರೂ ಕಾಳು ಕಟ್ಟುವ ಸಮಯಲ್ಲಿ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳೆ ಒಣಗಿ, ನಿರೀಕ್ಷಿತ ಫ‌ಸಲು ಕೈಸೇರದ ಕಾರಣ ರೈತರು ತೀವ್ರ ನಷ್ಟವನ್ನು ಅನುಭವಿಸಿದ್ದರು. ಹೀಗಾಗಿ ಈ ಬಾರಿಯೂ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂಬ ಭಯ ರೈತರನ್ನು ಕಾಡುತ್ತಿದೆ.

Advertisement

ಬೆಳೆ ವಿಮೆ ಮಾಡಿಸಿ: ಇಂತಹ ಪರಿಸ್ಥಿತಿಯಲ್ಲಿ ರೈತರ ಆತಂಕ ದೂರ ಮಾಡಲು ಕೃಷಿ ಇಲಾಖೆಯಿಂದ ರೈತರಿಗೆ ಅಗತ್ಯ ಮಾಹಿತಿ ನೀಡಿರುವ ಕೃಷಿ ಅಧಿಕಾರಿಗಳು, ರೈತ ಸುರಕ್ಷಾ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಲು ಹೇಳಿದ್ದಾರೆ. ಜು.31ರವರೆಗೆ ಕಾಲಾವಕಾಶವಿದೆ. ತಾಲೂಕಿನ ರೈತರಿಗೆ ರಾಗಿ, ನೆಲಗಡಲೆ, ತೊಗರಿ, ಹುರಳಿ ಬೆಳೆಗಳಿಗೆ ಹೋಬಳಿ ಮಟ್ಟದಲ್ಲಿ ವಿಮೆ ಮಾಡಿಸಲು ಸೂಚಿಸಲಾಗಿದೆ. ಬೆಳೆ ಸಾಲ ಪಡೆದ ರೈತರಿಗೆ ವಿಮೆ ಕಡ್ಡಾಯವಾಗಿದ್ದು, ಪಡೆಯದ ರೈತರಿಗೆ ಬೆಳೆ ವಿಮೆಯು ಐಚ್ಛಿಕವಾಗಿದೆ. ವಿಮಾ ಮೊತ್ತವು ಬೆಳೆ ಸಾಲ ಪಡೆದ ರೈತರಿಗೆ ಹಾಗೂ ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿದ್ದು, ವಿಮೆಯ ಕೊನೆಯ ದಿನಾಂಕಕ್ಕೆ ರೈತರು ವಿಮಾ ಕಂತನ್ನು ಬ್ಯಾಂಕಿಗೆ ಪಾವತಿಸಿ ಸ್ವೀಕೃತಿ ಪಡೆಯಬಹುದಾಗಿದೆ.

ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಿಗೆ ಘೋಷಣೆಯನ್ನು ಸಲ್ಲಿಸುವಾಗಿನ ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ,ಬ್ಯಾಂಕ್ ಪಾಸ್‌ಪುಸ್ತಕ, ಕಂದಾಯ ರಶೀದಿ, ಆಧಾರ್‌ ಸಂಖ್ಯೆ ಸಲ್ಲಿಸಬೇಕು, 2018ರ ಹಂಗಾಮಿನಲ್ಲಿ ಯೋಜನೆಯ ಅನುಷ್ಠಾನಕ್ಕೆ ಯುನೈಟೆಡ್‌ ಇಂಡಿಯಾ ಇನ್ಸೂರೆನ್ಸ್‌ ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಯೋಜನೆವಾರು ಬೆಳೆವಾರು, ರೈತರ ವಿವರಗಳನ್ನು ಆನ್‌ಲೈನ್‌ ಪೋರ್ಟಲ್ ಮೂಲಕ ನೋಂದಾಯಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಮತ್ತು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸಂಪರ್ಕಿಸುವಂತೆ ತಿಳಿಸಿದ್ದಾರೆ.

 

● ಎಂ.ರವಿಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next