Advertisement
ನದಿ ಪಾತ್ರದ ಗ್ರಾಮಗಳಾದ ಉಳೇನೂರು ಬೆನ್ನೂರು, ಢಣಾಪೂರ, ಬೆನ್ನೂರು, ಕಕ್ಕರಗೋಳ, ಶಾಲಿಗನೂರು, ಜಮಾಪೂರ ಭಾಗದಲ್ಲಿರುವ ರೈತರ ಭೂಮಿ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರಾವರಿ ಆಗುತ್ತಿದ್ದರೂ ಅನಧಿಕೃತ ಅಚ್ಚುಕಟ್ಟು ಪ್ರದೇಶ ಹೆಚ್ಚಾಗಿರುವುದರಿಂದ ಕೊನೆ ಭಾಗಕ್ಕೆ ಕಾಲುವೆ ನೀರು ತಲುಪುತ್ತಿಲ್ಲ. ರೈತರು ನದಿ ಮೂಲಕ ನೀರನ್ನು ಗದ್ದೆಗೆ ಹರಿಸಿ ಭತ್ತ ಬೆಳೆಯಲಾಗುತ್ತಿದ್ದು, ಕಳೆದ ವರ್ಷದಿಂದ ಮಳೆಯ ಕೊರತೆಯಿಂದಾಗಿ ನದಿಯಲ್ಲಿ ನೀರು ಇಲ್ಲದಂತಾಗಿದೆ. ನದಿಯಲ್ಲಿ ನೀರಿನ ಕೊರತೆಯಿಂದ ನೂರಾರು ಮೀನುಗಳು ಸಾವನಪ್ಪಿವೆ. ಸುತ್ತಲಿನ ಗ್ರಾಮಗಳ ಜನರು ಮೀನು ಹಿಡಿದು ಮಾರುತ್ತಿದ್ದಾರೆ. ನದಿ ಪಾತ್ರದ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿವ ನೀರನ್ನು ಪೂರೈಕೆ ಮಾಡಲಾಗುತ್ತಿದ್ದು, ನದಿ ಬತ್ತಿದ್ದರಿಂದ ಕುಡಿಯುವ ನೀರಿಗೂ ತಾತ್ವರವಾಗಿದೆ. ಬೋರ್‌ವೆಲ್ಗಳೂ ಬತ್ತಿರುವುದರಿಂದ ಜನರಿಗೆ ದಿಕ್ಕು ತೋಚದಂತಾಗಿದೆ.
ಜಿಲ್ಲೆಯ ಕೆರೆಗಳಿಗೂ ನೀರು ಹರಿಸಿ: ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆಯಿಂದಾಗಿ ಎಡದಂಡೆ ಮೂಲಕ ರಾಯಚೂರಿಗೆ ನೀರು ಹರಿಸಲಾಗುತ್ತಿದೆ. ಗಂಗಾವತಿ, ಕನಕಗಿರಿ, ಕಾರಟಗಿ ತಾಲೂಕಿನಲ್ಲಿ ಮಳೆ ಕೊರತೆಯಿಂದ ಕುಡಿಯುವ ನೀರಿನ ತೊಂದರೆ ತಲೆದೋರಿದ್ದು, ಇಲ್ಲಿರುವ ಕೆರೆ, ಕೃಷಿ ಹೊಂಡಗಳಿಗೆ ಎಡದಂಡೆ ಉಪಕಾಲುವೆ ಮೂಲಕ ನೀರನ್ನು ಹರಿಸಬೇಕಿದೆ. ಕಲಬುರಗಿ ಪ್ರಾದೇಶಿಕ ಆಯುಕ್ತರು ಈ ಮೊದಲು ಹೊರಡಿಸಿ ಆದೇಶ ಮರುಪರಿಶೀಲಿಸಿ ಕೊಪ್ಪಳ ಜಿಲ್ಲೆಗಳ ತಾಲೂಕುಗಳಿಗೂ ಕುಡಿಯುವ ನೀರನ್ನು ಹರಿಸಲು ಸೂಚನೆ ನೀಡಬೇಕಿದೆ.
ತುಂಗಭದ್ರಾ ನದಿ ಸಂಪೂರ್ಣ ಬತ್ತಿ ಹೋಗಿದ್ದು, ಸಾವಿರಾರು ಮೀನುಗಳು ಸಾವನ್ನಪ್ಪಿವೆ. ನದಿ ನೀರು ಅವಲಂಬಿಸಿ ಕೃಷಿ ಮಾಡುವ ರೈತರ ಸಸಿ(ಭತ್ತದ)ಮಡಿಗಳು ಸಂಪೂರ್ಣ ಒಣಗಿದ್ದು, ಸಾವಿರಾರು ರೂ.ಗಳು ನಷ್ಟವಾಗಿದೆ. ನದಿ ಪಾತ್ರದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಜಲಾಶಯದಿಂದ ಸ್ವಲ್ಪ ಪ್ರಮಾಣದ ನೀರನ್ನು ಕಾಲುವೆ ಮೂಲಕ ನದಿಗೆ ಹರಿಸಬೇಕಿದೆ. ಈಗಾಗಲೇ ಭತ್ತದ ಸಸಿ ಮಡಿಯಿಂದ ನಷ್ಟವಾಗಿರುವ ರೈತರಿಗೆ ಸರಕಾರ ಪರಿಹಾರ ನೀಡಬೇಕು. •ಯಮನೂರಪ್ಪ ಬೆನ್ನೂರು, ರೈತ
ನದಿ ಪಾತ್ರದ ಗ್ರಾಮಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುತ್ತಿತ್ತು. ನದಿ ಸಂಪೂರ್ಣ ಬತ್ತಿರುವುದರಿಂದ ಕುಡಿಯುವ ನೀರಿನ ತೊಂದರೆ ಎದುರಾಗಿದ್ದು, ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗೆ ಪತ್ರ ಬರೆದು ಜಲಾಶಯದಿಂದ ನದಿ ಮತ್ತು ಕೆರೆ, ಕೃಷಿ ಹೊಂಡಗಳಿಗೆ ನೀರು ಹರಿಸುವಂತೆ ಮನವಿ ಮಾಡಲಾಗುತ್ತದೆ. ತುರ್ತಾಗಿ ಅಗತ್ಯವಿದ್ದ ಕಡೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ. •ಕವಿತಾ, ಕಾರಟಗಿ ತಹಶೀಲ್ದಾರ್
•ಕೆ.ನಿಂಗಜ್ಜ