ಬಂಟ್ವಾಳ: ಪುರಸಭೆಯ 2017-18ನೇ ಸಾಲಿನ ಬಜೆಟ್ ಲೋಪ ದೋಷಗಳಿಂದ ಕೂಡಿದೆ. ಕೋಟ್ಯಂತರ ರೂಪಾಯಿ ವ್ಯತ್ಯಾಸ ಆಗಿರುವ ಅನುಮಾನ ಉಂಟಾಗಿದೆ. ಇದಕ್ಕೆ ನಗರಾಭಿವೃದ್ಧಿ ಕೋಶದ ಯೋಜನ ನಿರ್ದೇಶಕರು ಸ್ಪಷ್ಟೀಕರಣ ನೀಡ ಬೇಕೆಂದು ಆಗ್ರಹಿಸಿ ಬಿಜೆಪಿ ಸದಸ್ಯರು ಎ. 27
ರಂದು ಜರಗಿದ ಸಾಮಾನ್ಯಸಭೆಯಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.
ಅಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇವದಾಸ ಶೆಟ್ಟಿ ಅವರು ಈ ವಿಷಯ ಪ್ರಸ್ತಾಪಿಸಿದರು.
“ಬಜೆಟ್ ಅಂಕಿಅಂಶಗಳ ವ್ಯತ್ಯಾಸದ ಕುರಿತು ಈಗಾಗಲೇ ನಾನು ದೂರು ನೀಡಿದ್ದೇನೆ. ಪುತ್ತೂರು ಲೆಕ್ಕಾಧಿಕಾರಿಯವರಿಂದ ತನಿಖೆಯೂ ಆಗಿದೆ. ಲೋಪದೋಷಗಳು ಇರುವುದು ದೃಢ ಪಟ್ಟಿದೆ. ಹಾಗಾಗಿ ಯೋಜನ ನಿರ್ದೇಶಕರು ಸಭೆಗೆ ಆಗಮಿಸಿ ಸ್ಪಷ್ಟೀಕರಣ ನೀಡಬೇಕು’ ಎಂದು ಅವರು ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ಅವರು, “ಯೋಜನಾ ನಿರ್ದೇಶಕರು ತತ್‌ಕ್ಷಣ ಬರಲು ಅಸಾಧ್ಯ. ವಿಶೇಷ ಸಭೆ ಕರೆಯೋಣ’ ಎಂದರು. ಆದರೆ ಇದಕ್ಕೆ ಒಪ್ಪದ ಬಿಜೆಪಿ ಸದಸ್ಯರು ಧರಣಿ ಕುಳಿತರು.
ಪಟ್ಟು ಸಡಿಲಿಸದ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮುಖ್ಯಾಧಿಕಾರಿ ಎಂ.ಎಚ್. ಸುಧಾಕರ್ ಸಹಿತ ಹಲವರು ವಿನಂತಿಸಿದರೂ ದೇವದಾಸ ಶೆಟ್ಟಿ ಅವರು ಸ್ಥಳದಿಂದ ಕದಲಲಿಲ್ಲ. ಬಿಜೆಪಿಯ ಇತರ ಸದಸ್ಯರಾದ ಸುಗುಣಾ ಕಿಣಿ, ಗೋವಿಂದ ಪ್ರಭು, ಭಾಸ್ಕರ್, ಸಂಧ್ಯಾ ನಾಯ್ಕ ಅವರು ಕೂಡ ದೇವದಾಸ ಶೆಟ್ಟಿ ಅವರೊಂದಿಗೆ ಧರಣಿ ಕುಳಿತರು. ಸಂಜೆ ವೇಳೆಗೆ ಯೋಜನ ನಿರ್ದೇಶಕರು ಸಭೆಗೆ ಆಗಮಿಸಿದರು. ಚರ್ಚೆ, ವಾಗ್ವಾದ ಮುಂದುವರಿಯಿತು.
ಸರಕಾರಿ ಭೂಮಿ ಅತಿಕ್ರಮಣಗೊಳ್ಳುತ್ತಿರುವ ಬಗ್ಗೆ ವಾಸು ಪೂಜಾರಿ ಅವರು ಸಭೆಯ ಗಮನ ಸೆಳೆದರು. ರೆಕಾರ್ಡ್ ರೂಮ್ ಸರಿಪಡಿಸುವಂತೆ ಒತ್ತಾಯಿಸಿದರು. ಪುರಸಭಾ ಮೀಟಿಂಗ್ ಹಾಲ್‌ಗೆ ಎ.ಸಿ. ಅಳವಡಿಸುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿತು.
ರಂಗಮಂದಿರಕ್ಕೆ ಪ್ರಸ್ತಾವ
ಬಿ.ಸಿ. ರೋಡ್‌ನ ನಾರಾಯಣ ಗುರು ವೃತ್ತದ ಬಳಿ ಇರುವ ಸರಕಾರಿ ಜಾಗದಲ್ಲಿ ಆರ್.ಟಿ.ಒ. ಕಚೇರಿ, ಅರಸು ಭವನ ನಿರ್ಮಿಸಲು ಜಾಗ ಮಂಜೂರುಗೊಳಿಸುವ ಕುರಿತು ತಹಶೀಲ್ದಾರ್ ಬರೆದಿರುವ ಪತ್ರದ ಬಗ್ಗೆ ಚರ್ಚೆ ನಡೆಯಿತು. ಆ ಜಾಗದಲ್ಲಿ ರಂಗಮಂದಿರ ನಿರ್ಮಿಸುವುದೇ ಸೂಕ್ತ ಎಂದು ಸದಾಶಿವ ಬಂಗೇರ ಹೇಳಿದರು.
ಮಫತ್‌ಲಾಲ್ ಲೇ ಔಟ್‌ನಲ್ಲಿ ಅತಿಕ್ರಮಣ ಮಾಡಿದ ಜಾಗವನ್ನು ತೆರವುಗೊಳಿಸಬೇಕು ಎಂದು ಮಹಮ್ಮದ್ ಶರೀಫ್ ಆಗ್ರಹಿಸಿದರು. ಸದಸ್ಯರಾದ ಮೋನಿಶ್ ಅಲಿ, ಇಕ್ಬಾಲ್, ಬಿ.ಮೋಹನ್, ಗಂಗಾಧರ್, ವಸಂತಿ ಚಂದಪ್ಪ, ಚಂಚಲಾಕ್ಷಿ, ಜಗದೀಶ ಕುಂದರ್, ನಾಮನಿರ್ದೇಶಿತ ಸದಸ್ಯ ಲೋಕೇಶ ಸುವರ್ಣ ಮೊದಲಾದವರು ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಮುಖ್ಯಮಂತ್ರಿಗಳ ಗಮನಕ್ಕೆ ತರುವೆ : ದೇವದಾಸ ಶೆಟ್ಟಿ
ಸುದ್ಧಿಗಾರರೊಂದಿಗೆ ಮಾತನಾಡಿದ ದೇವದಾಸ ಶೆಟ್ಟಿ ಅವರು, “ಪುರಸಭೆ ಬಜೆಟ್ ಲೋಪದೋಷಗಳ ಕುರಿತು ಅಧಿಕಾರಿಗಳಿಂದ ಸ್ಪಂದನೆ ಸಿಗುತ್ತಿಲ್ಲ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ’ ಎಂದು ಹೇಳಿದರು.