Advertisement
ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ಕುರಿತು ಸರ್ಕಾರ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಂತೆ ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಪ್ರಯಾಣಿಕರ ನಡುವೆ ಇರುವ ಚಾಲಕ ಹಾಗೂ ನಿರ್ವಾಹಕರಿಗೆ ಮಾಸ್ಕ್ ನೀಡುವ ನಿರ್ಧಾರ ಕೈಗೊಂಡರು. ಈ ಕುರಿತು ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ನಿರ್ದೇಶನನೀಡಿ ಗುಣಮಟ್ಟದ ಮಾಸ್ಕ್ ಖರೀದಿಸಿ ಚಾಲನಾ ಸಿಬ್ಬಂದಿಗೆ ವಿತರಿಸುವಂತೆ ಸೂಚಿಸಿದ್ದರು. ಆದರೆ ಮಾರುಕಟ್ಟೆಯಲ್ಲಿ ಇವರ ಬೇಡಿಕೆಗೆ ತಕ್ಕಂತೆ ಮಾಸ್ಕ್ ಲಭ್ಯತೆ ಇಲ್ಲದಂತಾಗಿದೆ. ಸಂಸ್ಥೆ ವ್ಯಾಪ್ತಿಯ 9 ವಿಭಾಗಗಳಲ್ಲಿ ಸುಮಾರು 16,000 ಚಾಲನಾ ಸಿಬ್ಬಂದಿ ಇದ್ದಾರೆ. ಇಷ್ಟೊಂದು ಮಾಸ್ಕ್ ಗಳನ್ನು ಕೇಂದ್ರ ಕಚೇರಿಯಿಂದ ಒದಗಿಸುವುದು ಕಷ್ಟ ಎನ್ನುವ ಕಾರಣಕ್ಕೆ ವಿಭಾಗದ ವ್ಯಾಪ್ತಿಯಲ್ಲಿ ಖರೀದಿಸಿ ವಿತರಿಸುವಂತೆ ಸೂಚಿಸಲಾಗಿತ್ತು. ಒಂದು ವಿಭಾಗಕ್ಕೆಸುಮಾರು 2000 ಮಾಸ್ಕ್ಗಳು ಬೇಕಾಗುತ್ತಿವೆ. ಇಷ್ಟೊಂದು ಪ್ರಮಾಣದ ಮಾಸ್ಕ್ಗಳು ದೊರೆಯ ದಂತಾಗಿದ್ದು, ಅಧಿಕಾರಿಗಳು ಔಷಧಿ ಅಂಗಡಿ, ಸಗಟು ವ್ಯಾಪಾರಿಗಳ ಬಳಿ ಅಲೆದಾಡುತ್ತಿದ್ದರೂ ಬೇಡಿಕೆಯಿದ್ದಷ್ಟು ಸಿಗುತ್ತಿಲ್ಲ. ಹೆಚ್ಚಿನ ಹಣ ನೀಡಲು ಸಿದ್ಧವಿದ್ದರೂ 5-10 ಮಾಸ್ಕ್ ಮಾತ್ರ ನೀಡುವುದಾಗಿ ಹೇಳುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ.
Related Articles
Advertisement
ವಿಪತ್ತು ನಿರ್ವಹಣಾ ತಂಡ: ಕೊರೊನಾ ವೈರಸ್ ಕುರಿತು ಚಾಲನಾ ಸಿಬ್ಬಂದಿಗೆ ಡಿಪೋ ಹಂತದಲ್ಲಿ ಜಾಗೃತಿ ಮೂಡಿಸುವುದು, ಘಟಕ ಹಾಗೂ ಬಸ್ ನಿಲ್ದಾಣಗಳಲ್ಲಿ ಸ್ವತ್ಛತೆ, ಪ್ರಯಾಣಿಕರಿಗೆ ಧ್ವನಿ ಸಂದೇಶಗಳ ಮೂಲಕ ಜಾಗೃತಿ ಮೂಡಿಸುವುದು. ಚಾಲನಾ ಸಿಬ್ಬಂದಿಯ ಆರೋಗ್ಯದ ಮೇಲೆ ನಿಗಾ ವಹಿಸುವ ಕಾರ್ಯಕ್ಕಾಗಿ ವಿಪತ್ತು ನಿರ್ವಹಣಾ ತಂಡ ರಚಿಸಲಾಗಿದೆ.
ಮಾಸ್ಕ್ ಬಲು ದುಬಾರಿ : ಒಂದೆಡೆ ಮಾಸ್ಕ್ಗಳು ಬೇಡಿಕೆಗೆ ತಕ್ಕಂತೆ ದೊರೆಯುತ್ತಿಲ್ಲ. ಇನ್ನೊಂದೆಡೆ ಒಂದಿಷ್ಟು ಮಾಸ್ಕ್ ಸಿಕ್ಕರೂ ಒಂದು ದಿನಕ್ಕೆ ಮಾತ್ರ ಬಳಸಬಹುದಾದ ತ್ರೀ ಲೇಯರ್ (ಸರ್ಜಿಕಲ್) ಮಾಸ್ಕ್ 18-25 ರೂ.ಗೆ ದೊರೆಯುತ್ತಿವೆ. ಮುಂದಿನ ಒಂದು ವಾರಗಳ ಕಾಲ ಬೇಕಾಗುವಷ್ಟು ಮಾಸ್ಕ್ ದೊರೆಯುವುದಿಲ್ಲ. ಮರು ಬಳಕೆ ಮಾಡಬಹುದಾದ ಮಾಸ್ಕ್ ಖರೀದಿ ಮಾಡಬೇಕು ಎನ್ನುವುದಾದರೆ ಇದು ಕೂಡ ಬಲು ದುಬಾರಿಯಾಗಿದೆ. 100 ರೂ. ವರೆಗೆ ದೊರೆತರೆ ಇದನ್ನೇ ಖರೀದಿ ಮಾಡಲು ಸಿದ್ಧರಿದ್ದರೂ ಇವು ಕೂಡ ದೊರೆಯುತ್ತಿಲ್ಲ. ಈಗಾಗಲೇ ಸೋಂಕು ಪತ್ತೆಯಾದ ನಗರಗಳಿಗೆ ಹೊರಡುವ ಚಾಲನಾ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಬಳಸುತ್ತಿದ್ದಾರೆ.
ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದ ವ್ಯವಸ್ಥಾಪಕ ನಿರ್ದೇಶಕರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಕುರಿತು ನಿರ್ದೇಶನ ನೀಡಿದ್ದರು. ವಿಭಾಗ ವ್ಯಾಪ್ತಿಯಲ್ಲಿ ಮಾಸ್ಕ್ ಖರೀದಿ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಬೇಡಿಕೆಯಿದ್ದಷ್ಟು ಮಾಸ್ಕ್ಗಳು ದೊರೆಯುತ್ತಿಲ್ಲ. ಕೆಲ ನಗರಗಳನ್ನು ಗುರುತಿಸಿ ಅಲ್ಲಿಗೆ ತೆರಳುವ ಚಾಲಕರ ಹಾಗೂ ನಿರ್ವಾಹಕರಿಗೆ ಮಾಸ್ಕ್ ನೀಡುವ ಕುರಿತು ಹೆಚ್ಚಿನ ಆದ್ಯತೆ ನೀಡಲಾಗಿದೆ. –ಸಂತೋಷಕುಮಾರ, ಮುಖ್ಯ ಸಂಚಾರ ವ್ಯವಸ್ಥಾಪಕ