Advertisement
ತಾಲ್ಲೂಕಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ಶುಂಠಿ, ಹೊಗೆಸೊಪ್ಪು (ತಂಬಾಕು) ಸೇರಿದಂತೆ ಇನ್ನಿತರ ಬೆಳೆಗಳನ್ನು ತಾಲೂಕಿನಾದ್ಯಂತ ಬೆಳೆಯಾಗುತ್ತಿದ್ದು, ಈ ಬಾರಿ ಮುಂಗಾರು ಮಳೆಯು ಅವಧಿಗೆ ಮುನ್ನವೇ ಪ್ರಾರಂಭವಾಗಿ ರೈತರು ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿತ್ತು. ಆದರೆ ಈ ಮಂದಹಾಸ ರೈತರ ಮುಖದಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ ಕಾರಣ ಕಳೆದ 15 ದಿನಗಳಿಂದ ತಾಲೂಕಿನಾದ್ಯಂತ ಮಳೆ ಬೀಳದೆ ಬಿತ್ತಿದ ಬೆಳೆಗಳು ಸೂರ್ಯನ ಶಾಖಕ್ಕೆ ಒಣಗಿ ಹೋಗುತ್ತಿವೆ. ಮಳೆ ಕೈಕೊಟ್ಟ ಹಿನ್ನೆಲೆ ರೈತರು ನಿರೀಕ್ಷೆಯಂತೆ ಫಸಲು ಕೈಸೇರದ ಪರಿಣಾಮ ಆತಂಕಕ್ಕೆ ಒಳಗಾಗಿದ್ದಾರೆ.
Related Articles
Advertisement
ರೈತರು ತಮ್ಮ ಜಮೀನಿನಲ್ಲಿ ಬೆಳೆದ ತಂಬಾಕನ್ನು ಮಂಡಳಿ ಶಿಫಾರಸ್ಸಿನಂತೆ ಮಾಡಬೇಕು. ಎಲೆಗಳನ್ನು ಬೆಳಗಿನ ವೇಳೆಯಲ್ಲಿಯೇ ಮುರಿದು ಅದೇ ದಿನ ಸಂಜೆಯೊಳಗೆ ಬ್ಯಾರೆನ್ನಲ್ಲಿ ಜೋಡಿಸಿ ಹದ ಮಾಡುವ ಕಾರ್ಯ ಪ್ರಾರಂಭಿಸಬೇಕು. ಪ್ರತಿ ಗಿಡದಲ್ಲಿ ಸರಿಯಾಗಿ ಬಲಿತ ಒಂದೆರಡು ಎಲೆಗಳನ್ನು ಮಾತ್ರ ಮುರಿದು ಹದ ಮಾಡಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಮುರಿದ ಎಲೆಗಳು ಜಾಗರೂಕತೆ ವಹಿಸಿ ಬಿಸಿಲಿನ ಬೇಗೆಗೆ ಒಡ್ಡದಂತೆ ಗೋಣಿ ತಾಟಿನಿಂದ ಮುಚ್ಚಿ ತಕ್ಷಣವೇ ಸಾಗಿಸಿ ನೆರಳಿನಲ್ಲಿ ಜೋಡಿಸಬೇಕು. ಒಂದು ಟಾರ್ಪಲಿನ್ ಮೇಲೆ ಎಲೆಗಳನ್ನು ಜೋಡಿಸಿ ಎಲೆ ತೇವಾಂಶ ಕಳೆದುಕೊಳ್ಳದಂತೆ ಜಾಗ್ರತೆ ವಹಿಸಬೇಕು ಎಂದು ಕಳೆದ ಬಾರಿ ತಂಬಾಕು ಮಂಡಳಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿ ವಾರಕ್ಕೆ ಒಮ್ಮೆ ಸಲಹೆ ಮಾಡತೊಡಗಿದ್ದರು. ಆದರೆ, ಈ ಬಾರಿ ಜೂನ್ ತಿಂಗಳು ಮುಗಿಯುವ ಹಂತಕ್ಕೆ ಬಂದಿದ್ದರೂ ಕೂಡ ಅಧಿಕಾರಿ, ಸಿಬ್ಬಂದಿ ರೈತರು ಕೈಗೊಂಡಿರುವ ತಂಬಾಕು ಬೆಳೆಯತ್ತ ಒಮ್ಮೆಯೂ ತಿರುಗಿ ನೋಡಿಲ್ಲ ಎಂದು ತಾಲೂಕಿನ ರೈತರು ಆರೋಪಿಸಿದ್ದಾರೆ.
ಕಳೆದ ಬಾರಿ ಇದೇ ಅವಧಿಯಲ್ಲಿ ಶೇ.30ರಷ್ಟು ಬೆಳೆ ಕೈಗೆ ಬಂದಿದ್ದ ಹಿನ್ನೆಲೆ ಸೊಪ್ಪು ಮುರಿದು, ಬೇಯಿಸುವ ಕಾಯಕ ಪ್ರಗತಿಯಲ್ಲಿತ್ತು. ಅದೇ ನಿರೀಕ್ಷೆಯಲ್ಲಿ ಈ ಸಾಲಿನಲ್ಲಿಯೂ ಕೂಡ ತಂಬಾಕು ಬಿತ್ತನೆ ಕೈಗೊಳ್ಳಲಾಗಿತ್ತು. ಸಕಾಲದಲ್ಲಿ ಮಳೆಯಾಗದ ಪರಿಣಾಮ ಬೆಳೆಗಾರರ ತಲೆ ಮೇಲೆ ಕೈಹೊತ್ತು, ಪ್ರತಿನಿತ್ಯ ಮೋಡವನ್ನು ನೋಡುವಂತ್ತಾಗಿದೆ. ಈಗಾಗಲೇ ಮಳೆಯಾಶ್ರಿತ ಜಮೀನಿನಲ್ಲಿ ಕೈಗೊಳ್ಳಲಾಗಿರುವ ತಂಬಾಕು ಬೆಳೆ ಮಳೆಯಿಲ್ಲದೆ ಒಣಗತೊಡಗಿದೆ. ಮುಂದಿನ ಒಂದು ವಾರದಲ್ಲಿ ಮಳೆಯಾಗದಿದ್ದರೆ ಇಡೀ ಬೆಳೆ ಬಿಸಿಲಿಗೆ ಆಹುತಿಯಾಗಿ ರೈತರು ಕಂಗಲಾಗುವ ಸಾಧ್ಯತೆ ಇದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
–ಪಿ.ಎನ್.ದೇವೇಗೌಡ, ಪಿರಿಯಾಪಟ್ಟಣ