Advertisement

ಕೆಲ ಗ್ರಾಮಕ್ಕಿಲ್ಲ ಮಲಪ್ರಭೆ ನೀರು

02:58 PM Mar 06, 2020 | Suhan S |

ರೋಣ: ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಮಲಪ್ರಭೆ ನದಿ ನೀರನ್ನು ತಾಲೂಕಿನ ಎಲ್ಲ ಹಳ್ಳಿಗಳಿಗೂ ಪೈಪ್‌ಲೈನ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ ಇದು ಸಾಲದೆಂದು ಗ್ರಾಪಂ ಆಡಳಿತ ಬೋರ್‌ವೆಲ್‌ ಮೊರೆ ಹೋಗಿದೆ.

Advertisement

ಹೌದು, ತಾಲೂಕಿನ ಎಲ್ಲ ಹಳ್ಳಿಗಳಿಗೂ ಮಲಪ್ರಭೆ ನದಿಯಿಂದ ಬರುವ ನೀರಿನ ಪ್ರಮಾಣ ಸಾಲದು ಎಂದು ಗ್ರಾಪಂ ಆಡಳಿತ ಬೋರ್‌ವೆಲ್‌ಗ‌ಳಿಂದ ನೀರು ಪಡೆದು ಹಳ್ಳಿಗಳಿಗೆ ಪೂರೈಸುತ್ತಿದೆ. ಇದರಿಂದ ನದಿ ಹಾಗೂ ಕೊಳೆವೆ ಬಾವಿಯಿಂದ ಮಿಶ್ರಿತವಾದ ಅಶುದ್ಧ ನೀರು ಕುಡಿಯದ ಗ್ರಾಮೀಣ ಜನರು ಮತ್ತೆ ನೀರಿಗಾಗಿ ಶುದ್ಧ ನೀರಿನ ಘಟಕಗಳಿಗೆ ಅಲೆದಾಡುತ್ತಿದ್ದಾರೆ.

ಮಿಶ್ರಿತ ನೀರೇ ಗತಿ: ತಾಲೂಕಿನ ಮಾಡಲಗೇರಿ, ನೈನಾಪುರ, ಹಿರೇಹಾಳ, ಬಳಗೋಡ, ಕುರಹಟ್ಟಿ, ಮುದೇನಗುಡಿ, ಕೋತಬಾಳ, ಮುಗಳಿ, ಮಾರನಬಸರಿ, ನಿಡಗುಂದಿ, ಜಕ್ಕಲಿ, ಹಾಳಕೇರಿ ಸೇರಿದಂತೆ ಅನೇಕ ಗ್ರಾಮಗಳಿಗೆ ನದಿಯಿಂದ ಪೂರೈಸುವ ನೀರು ಸಾಲದಿರು ವುದರಿಂದ ಈ ಗ್ರಾಮಗಳಿಗೆ ಸ್ಥಳೀಯವಾಗಿ ಲಭ್ಯವಿರುವ ಕೊಳವೆಬಾವಿ ನೀರು ಸೇರಿಸಿಕೊಂಡು ಜನರಿಗೆ ಪೂರೈಸುತ್ತಿದ್ದಾರೆ. ಆದರೆ ಈ ಎರಡು ನೀರಿನ ಮಿಶ್ರಣದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ ಈ ಗ್ರಾಮಗಳ ಜನರು ಕುಡಿಯುವ ನೀರಿಗಾಗಿ ಮತ್ತೆ ಶುದ್ಧ ನೀರಿನ ಘಟಕಗಳಿಗೆ ಅಲೆಯುವಂತಾಗಿದೆ. ಇದರ ಮಧ್ಯೆ ಗ್ರಾಮದಲ್ಲಿರುವ ಶುದ್ಧ ನೀರಿನ ಘಟಕಗಳು ಸ್ಥಗಿತವಾದರೆ ಪಕ್ಕದ ಗ್ರಾಮಗಳ ಘಟಕಕ್ಕೆ ಹೋಗಿ ಕುಡಿಯಲು ನೀರು ತರುವ ದಯನೀಯ ಸ್ಥಿತಿ ಇಲ್ಲಿದೆ.

ಇಲ್ಲಿಗಿಲ್ಲ ಮಲಪ್ರಭೆ ನೀರು: ತಾಲೂಕಿನ ಬಹುಗ್ರಾಮ ಯೋಜನೆ ಪ್ರಾರಂಭವಾದ ಕೆಲವು ತಿಂಗಳ ಕಾಲ ಬಮ್ಮಸಾಗರ, ಸರ್ಜಾಪುರ, ಶಾಂತಗೇರಿ ಈ ಮೂರು ಗ್ರಾಮಗಳಿಗೆ ನೀರು ಪೂರೈಸಿದರು. ಆದರೆ ಕಳೆದ 8 ತಿಂಗಳಿಂದ ನೀರಿನ ಒತ್ತಡದ ಪ್ರಮಾಣ ಕಡಿಮೆ ಇದೆ ಎಂದು ನೆಪವಿಟ್ಟು ನೀರಿನ ಪೂರೈಕೆ ಸ್ಥಗಿತವಾಗಿದೆ. ಸದ್ಯ ಈ ಗ್ರಾಮಗಳಿಗೆ ಮಲ್ಲಾಪುರ ಗುಡ್ಡದ ಕೆರೆಯಿಂದ ನೀರು ಪೂರೈಸುತ್ತಿರುವುರಿಂದ ನೀರಿನ ಸಮಸ್ಯೆ ಇಲ್ಲ. ಗ್ರಾಮವಾರು ಜನಸಂಖ್ಯೆ ನೋಡಿದರೆ ಶಾಂತಗೇರಿ 5000, ಬಮ್ಮಸಾಗರ 2500, ಸರ್ಜಾಪುರ 2500 ಹೀಗೆ ಮೂರು ಗ್ರಾಮಗಳು ಸೇರಿ 10,000 ಜನಸಂಖ್ಯೆಗೆ ನದಿ ನೀರು ಪೂರೈಕೆಯಾಗುತ್ತಿಲ್ಲ. ಆದರೆ ಕೆರೆಯ ನೀರು ಗಡಸಿನಿಂದ ಕೂಡಿರುತ್ತದೆ. ಆದಷ್ಟು ಬೇಗೆ ಸಂಬಂಧಿ ಸಿದ ಅಧಿಕಾರಿಗಳು ಮೂರು ಗ್ರಾಮಗಳಿಗೂ ಬಹುಗ್ರಾಮ ಕುಡಿಯುವ ನೀರು ಪೂರೈಸಿದರೆ ಉತ್ತಮ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ನವ ಗ್ರಾಮಗಳಿಗಿಲ್ಲ ನೀರು: 2019ರ ಆಗಸ್ಟ್‌ನಲ್ಲಿ ಸುರಿದ ಧಾರಕಾರ ಮಳೆಗೆ ಮಲಪ್ರಭೆ ನೀರು ತಾಲೂಕಿನ 16ಕ್ಕೂ ಹೆಚ್ಚು ಗ್ರಾಮಗಳಿಗೆ ನುಗ್ಗಿತ್ತು. ಇದರಿಂದ ಹಳೆಯ ಊರುಗಳನ್ನು ಬಿಟ್ಟು ಸರ್ಕಾರ ನಿರ್ಮಾಣ ಮಾಡಿರುವ ನವಗ್ರಾಮಗಳಲ್ಲಿ ವಾಸವಿದ್ದಾರೆ. ಅಲ್ಲಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಳವಡಿಸಿಲ್ಲ. ಇದರಿಂದ ಇಲ್ಲಿನ ಜನರಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಜೊತೆಗೆ ಕೊಳೆವೆಬಾವಿ ನೀರಿನ ಸಂಪರ್ಕವೂ ಇಲ್ಲ. ಇದರಿಂದ ಟ್ಯಾಂಕರ್‌ ತರುವುದು ತುಸು ವಿಳಂಬವಾದರೆ ಇಲ್ಲಿನ ಜನರು ಹಳೆ ಗ್ರಾಮಕ್ಕೆ ಹೋಗಿಯೇ ನೀರು ತರಬೇಕು.

Advertisement

ಮೊದಲಿನಂತಲ್ಲ ನೀರಿಗಿಲ್ಲ ಸಮಸ್ಯೆ: ರೋಣ- ನರಗುಂದ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಕುಡಿಯುವ ನೀರಿನ ಭವಣೆ ನೀಗಿಸಲು 448 ಕೋಟಿ ವೆಚ್ಚದಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ತಾಲೂಕಿನ ಎಲ್ಲ ಹಳ್ಳಿಗಳಿಗೆ ಪೈಪ್‌ ಲೈನ್‌ ಅಳವಡಿಸಿ ನೀರು ಪೂರೈಸುತ್ತಿರುವುದರಿಂದ 2019ರಿಂದ ಇತ್ತೀಚೆಗೆ ಪಟ್ಟಣ ಪ್ರದೇಶಗಳನ್ನು ಬಿಟ್ಟು ತಾಲೂಕಿನ ಯಾವ ಹಳ್ಳಿಗೂ ನೀರಿನ ಸಮಸ್ಯೆ ಎದುರಾಗಿಲ್ಲ.

ತಾಲೂಕಿನ ಎಲ್ಲ ಗ್ರಾಮಗಳಿಗೆ ಡಿಬಿಒಟಿ ಯೋಜನೆಯಡಿ ನೀರು ಪೂರೈಸಲಾಗುತ್ತಿದೆ. ಆದರೆ ಅತೀ ಎತ್ತರದ ಭಾಗದಲ್ಲಿರುವ ಶಾಂತಗೇರಿ, ಬಮ್ಮಸಾಗರ, ಸರ್ಜಾಪುರಗಳಿಗೆ ಡಿಬಿಒಟಿ ನೀರು ಪೂರೈಸುತ್ತಿಲ್ಲ. ಈ ಗ್ರಾಮಗಳಿಗೆ ಮಲ್ಲಾಪುರ ಗುಡ್ಡದಲ್ಲಿರುವ ಕೆರೆ ನೀರು ಕುಡಿಯಲು ಯೋಗ್ಯವಾಗಿದ್ದು, ಇದನ್ನೇ ಪೂರೈಸಲಾಗುತ್ತಿದೆ. ಜೊತೆಗೆ ಪ್ರತಿ ತಿಂಗಳು ಈ ನೀರಿನ ಪರೀಕ್ಷೆ ನಡೆಸಲಾಗುತ್ತದೆ.-ಮಹಾದೇವಪ್ಪ ಎನ್‌., ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ

ಮಲಪ್ರಭೆಯಿಂದ ಬರುವ ನೀರು ನಮ್ಮೂರಿಗೆ ಬಿಡುತ್ತಾರೆ. ಆದರೆ ಆ ನೀರು ಸಾಲದೆಂದು ಪಂಚಾಯತಿಯವರು ಗ್ರಾಮದೊಳಗಿನ ಬೋರ್‌ವೆಲ್‌ ನೀರನ್ನು ನದಿ ನೀರಿನ ಟ್ಯಾಂಕಿಗೆ ಕೂಡಿಸುತ್ತಾರೆ. ಇದರಿಂದ ಎರಡೂ ನೀರು ಕೂಡಿದ್ದರಿಂದ ಕುಡಿಯಲು ಶುದ್ಧ ನೀರು ಸಿಗದಂತಾಗಿದೆ. ಹೀಗಾಗಿ ಶುದ್ಧ ನೀರಿನ ಘಟಕದಲ್ಲಿ ದೊರೆಯುವ ನೀರು ಕುಡಿಯುತ್ತೇವೆ. -ಗುರುನಾಥ ಹಿರೇಸಕ್ಕರಗೌಡ್ರ, ಮಾಡಲಗೇರಿ ನಿವಾಸಿ

 

-ಯಚ್ಚರಗೌಡ ಗೋವಿಂದಗೌಡ್ರ

Advertisement

Udayavani is now on Telegram. Click here to join our channel and stay updated with the latest news.

Next