Advertisement

ನಿರ್ವಹಣೆ ಕೊರತೆ: ನಗರ ಬೆಳಗದ ಬೀದಿ ದೀಪಗಳು

11:40 AM Aug 05, 2019 | Suhan S |

ಮಂಡ್ಯ: ನಿರ್ವಹಣೆ ಕೊರತೆಯಿಂದ ಬೀದಿ ದೀಪಗಳು ನಗರವನ್ನು ಬೆಳಗದ ಸ್ಥಿತಿಯಲ್ಲಿವೆ. ಬೆಂಗಳೂರು-ಮೈಸೂರು ಹೆದ್ದಾರಿಯೂ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಕತ್ತಲಲ್ಲಿ ಮುಳುಗಿವೆ.

Advertisement

ಒಂದು ವರ್ಷದಿಂದ ಬೀದಿ ದೀಪಗಳ ವ್ಯವಸ್ಥೆಯಲ್ಲಿ ಬದಲಾವಣೆಯನ್ನೂ ತರದೆ ಟೆಂಡರ್‌ ಕರೆಯುವುದಕ್ಕೆ ರಾಜ್ಯಸರ್ಕಾರ ತಡೆಯಾಜ್ಞೆ ನೀಡಿರುವುದು ಅವ್ಯವಸ್ಥೆ ಹೆಚ್ಚಲು ಕಾರಣವಾಗಿದೆ.

ನಗರದೊಳಗಿರುವ ಬೀದಿ ದೀಪಗಳ ಸಂಪರ್ಕ ಜಾಲ ದಶಕಗಳಷ್ಟು ಹಳೆಯದಾಗಿದೆ. ಹಿಂದೆ ಅಳವಡಿಸಿರುವ ಬೀದಿ ದೀಪಗಳಿಗೆ ಯಾವ ಮೂಲದಿಂದ ವಿದ್ಯುತ್‌ ಸಂಪರ್ಕ ಪಡೆಯಲಾಗಿದೆ. ಅದು ಎಲ್ಲಿ ಅಂತಿಮಗೊಳ್ಳುತ್ತದೆ ಎಂಬ ಮಾಹಿತಿಯೇ ಟೆಂಡರ್‌ ಪಡೆವ ಗುತ್ತಿಗೆದಾರರಿಗೆ ತಿಳಿಯದಂತಾಗಿದೆ. ಅಡ್ಡಾದಿಡ್ಡಿ ವಿದ್ಯುತ್‌ ಸಂಪರ್ಕ ಕಲ್ಪಿಸುತ್ತಿರುವುದರಿಂದ ಬೀದಿ ದೀಪ ಹೆಚ್ಚುಕಾಲ ಉಳಿಯದೆ ಸುಟ್ಟುಹೋಗುತ್ತಿವೆ.

ಕೆಲವೊಂದು ಬೀದಿ ದೀಪಗಳ ಸಂಪರ್ಕ ಜಾಲ ಸರಿಪಡಿಸಲಾಗದಷ್ಟು ಹದಗೆಟ್ಟಿವೆ. ಸಂಪರ್ಕ ಜಾಲದಲ್ಲಿರುವ ಕೇಬಲ್ಗಳೆಲ್ಲವೂ ಸತ್ವ ಕಳೆದುಕೊಂಡು ದುರ್ಬಲವಾಗಿವೆ. ಈ ಅವ್ಯವಸ್ಥೆ ನಡುವೆ ಟೆಂಡರ್‌ ಪಡೆದ ಗುತ್ತಿಗೆದಾರರು ಬೀದಿ ದೀಪಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಬೀದಿ ದೀಪಗಳು ನಗರವನ್ನು ಅರ್ಧವೂ ಬೆಳಗದ ಸ್ಥಿತಿ ತಲುಪಿವೆ.

ನಗರ ವ್ಯಾಪ್ತಿಯೊಳಗೆ ಎಲ್ಲಾ ಮಾದರಿಯ ಬೀದಿ ದೀಪಗಳೂ ಸೇರಿದಂತೆ 10,268 ಬೀದಿ ದೀಪಗಳಿವೆ. ಇವುಗಳಲ್ಲಿ 4500 ಟ್ಯೂಬ್‌ಲೈಟ್ಗಳಿವೆ. ಮೆಟಲ್ ಲೈಟ್ಗಳು-3600, ಸೋಡಿಯಂ ದೀಪಗಳು-1728, ಇಂಡಕ್ಷನ್‌ ಲೈಟ್ಗಳು-800, ಎಲ್ಇಡಿ ದೀಪ-261 ಇವೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಾರೆ.

Advertisement

ನಡೆಯದ ಸಮೀಕ್ಷೆ: ನಗರದೊಳಗಿರುವ ಒಟ್ಟು ವಿದ್ಯುತ್‌ ದೀಪಗಳಲ್ಲಿ 71 ಎಲ್ಇಡಿ, 297 ಇಂಡಕ್ಷನ್‌ ವಿದ್ಯುತ್‌ ದೀಪ, 58 ಸೋಡಿಯಂ ವಿದ್ಯುತ್‌ ದೀಪ, ಶೇ.10ರಷ್ಟು ಮೆಟಲ್ ದೀಪಗಳು ಬೆಳಗುತ್ತಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ವಾಸ್ತವದ ಚಿತ್ರಣವೇ ಬೇರೆಯಾಗಿದೆ. ನಗರದಲ್ಲಿರುವ ಒಟ್ಟು ದೀಪಗಳಲ್ಲಿ ಎಷ್ಟು ಬೆಳೆಗುತ್ತಿವೆ, ಎಷ್ಟು ಹಾಳಾಗಿವೆ ಎಂಬುದು ಲೆಕ್ಕಕ್ಕೆ ಸಿಗದಂತಾಗಿದ್ದು, ಈ ಬಗ್ಗೆ ಸಮೀಕ್ಷೆಯೇ ನಡೆಸಿಲ್ಲ ಎಂಬುದು ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಆರೋಪವಾಗಿದೆ.

ಗಾಳಿ, ಮಳೆಯಾದಾಗಲೆಲ್ಲಾ ಟ್ಯೂಬ್‌ಲೈಟ್ಗಳು ಒಡೆದು ಹೋಗುತ್ತಿವೆ, ಹಲವು ದೀಪಗಳು ಸಂಪರ್ಕ ಕಳೆದುಕೊಳ್ಳುತ್ತಿವೆ. ವಿದ್ಯುತ್‌ ಹರಿವಿನಲ್ಲಿ ವ್ಯತ್ಯಾಸಗಳಾದ ಸಂದರ್ಭದಲ್ಲಿ ದೀಪಗಳು ಸುಟ್ಟುಹೋಗುವುದು ಸಾಮಾನ್ಯವಾಗಿದೆ. ಅವುಗಳೆಲ್ಲವೂ ಅಧಿಕಾರಿಗಳ ಲೆಕ್ಕಕ್ಕೆ ಸಿಗದಂತಾಗಿವೆ.

ನಗರದ ಪ್ರತಿಷ್ಠಿತ ಬಡಾವಣೆಗಳಿಗೆ ಇಂಡಕ್ಷನ್‌ ದೀಪಗಳನ್ನು ಅಳವಡಿಸಲಾಗಿದೆ. ಇದಕ್ಕೆ ಭೂಮಿಯೊಳಗೆ ಕೇಬಲ್ಗಳನ್ನು ಎಳೆದು ಸಂಪರ್ಕ ಕಲ್ಪಿಸಲಾಗಿದೆ. ಆ ದೀಪಗಳು ಉತ್ತಮ ಬೆಳಕನ್ನು ನೀಡುತ್ತಿವೆಯಾದರೂ ರಸ್ತೆ ಅಗೆಯುವವರು, ದೂರವಾಣಿ ಕೇಬಲ್ ಅಳವಡಿಸುವವರು, ಒಳಚರಂಡಿ ದುರಸ್ತಿ ನಡೆಸುವವರ ದಾಳಿಗೆ ಸಿಲುಕಿ ಸಂಪರ್ಕ ಕಳೆದುಕೊಳ್ಳುತ್ತಿವೆ. ಇದರಿಂದ ಬಡಾವಣೆಗಳಲ್ಲಿ ಕತ್ತಲು ಅವರಿಸುವುದು ಸಾಮಾನ್ಯವಾಗಿದೆ. ಇದರ ದುರಸ್ತಿ ಕೈಗೊಂಡ ವೇಳೆ ಮೂಲ ಸಂಪರ್ಕ ಕಳೆದುಕೊಂಡ ಜಾಲ ಎಲ್ಲಿದೆ ಎಂಬುದನ್ನು ಗುರುತಿಸುವ ಗೋಜಿಗೆ ಹೋಗದೆ ಮೇಲ್ಭಾಗದಿಂದಲೇ ಗುತ್ತಿಗೆದಾರರು ಸಂಪರ್ಕ ಕಲ್ಪಿಸುತ್ತಿದ್ದಾರೆ. ವೋಲೆrೕಜ್‌ ವ್ಯತ್ಯಾಸವಾದಾಗ ಮತ್ತೆ ಅವು ಕೆಟ್ಟು ನಿಲ್ಲುತ್ತಿವೆ. ಹೀಗೆ ದುರಸ್ತಿಪಡಿಸಲಾಗದ ಸ್ಥಿತಿಯಲ್ಲಿರುವ ಇಂಡಕ್ಷನ್‌ ಲೈಟ್ಗಳು ಬಡಾವಣೆಗಳನ್ನು ಬೆಳಗದೆ ನಾಮಕಾವಸ್ಥೆಯಾಗಿ ಉಳಿದುಕೊಂಡಿವೆ.

ಹೆದ್ದಾರಿ ತುಂಬಾ ಕತ್ತಲು: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಳವಡಿಸಿರುವ ವಿದ್ಯುತ್‌ ದೀಪಗಳೂ ಸರಿಯಾಗಿ ಬೆಳಗದೆ ಪೂರ್ತ ಕತ್ತಲು ಆವರಿಸಿದೆ. ನಗರದ ಪ್ರವೇಶದ್ವಾರದಿಂದ ಆರಂಭವಾಗಿ ಕೊನೆಯಾಗುವವರೆಗೂ 300 ಸೋಡಿಯಂ ದೀಪಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಬಹಳಷ್ಟು ವಿದ್ಯುತ್‌ ದೀಪಗಳು ಸಂಪರ್ಕ ಕಳೆದುಕೊಂಡು ಉರಿಯುತ್ತಲೇ ಇಲ್ಲ. ಇದರಿಂದ ಹೆದ್ದಾರಿ ಕಾಲುಭಾಗವೂ ಬೆಳಕನ್ನು ಕಾಣದಂತಾಗಿದೆ.

ಹೆದ್ದಾರಿ ವಿದ್ಯುತ್‌ ದೀಪಗಳು ಸಂಪರ್ಕ ಜಾಲವೂ ತುಂಬಾ ಹಳೆಯದ್ದಾಗಿದೆ. ಯಾವ ಸಂಪರ್ಕ ಜಾಲದಿಂದ ಎಲ್ಲಿಗೆ ಸಂಪರ್ಕ ಕಲ್ಪಿಸಲಾಗಿದೆ ಎಂಬ ಮಾಹಿತಿ ಈಗಿನವರಿಗೆ ಗೊತ್ತಿಲ್ಲ. ಇಲ್ಲಿಯೂ ಸಹ ಟೆಂಡರ್‌ ಪಡೆದ ಗುತ್ತಿಗೆದಾರರು ಹಳೆಯ ಸಂಪರ್ಕ ವ್ಯವಸ್ಥೆಯಿಂದ ಬೇರ್ಪಡಿಸಿ ಮೇಲ್ಭಾಗದಿಂದಲೇ ಕೇಬಲ್ ಎಳೆದು ಅಸಮರ್ಪಕವಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸುತ್ತಿರುವುದರಿಂದ ವೋಲ್ಟೇಜ್ ವ್ಯತ್ಯಾಸದಿಂದ ಕೆಲವೇ ದಿನಗಳಲ್ಲಿ ದೀಪಗಳು ಸುಟ್ಟುಹೋಗುತ್ತಿವೆ. ಪರಿಣಾಮ ಹೆದ್ದಾರಿ ತುಂಬಾ ವಿದ್ಯುತ್‌ ದೀಪ ಗಳಿದ್ದರೂ ಮಧ್ಯದಲ್ಲಿ ಅಲ್ಲೊಂದು ಇಲ್ಲೊಂದು ದೀಪಗಳು ಮಾತ್ರ ಬೆಳಗುತ್ತಿರುತ್ತವೆ. ಉಳಿದಂತೆ ವಿದ್ಯುತ್‌ ದೀಪಗಳು ಇದ್ದೂ ಇಲ್ಲದಂತಾಗಿವೆ.

ಇನ್ನು ನೂರಡಿ ರಸ್ತೆಗಳಲ್ಲಿ 90 ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ. ಅವುಗಳಲ್ಲಿ 50 ದೀಪಗಳು ಉರಿಯುತ್ತಲೇ ಇಲ್ಲ. ಇದರಿಂದ ಪ್ರಮುಖ ಜೋಡಿ ರಸ್ತೆಯಲ್ಲೂ ಕತ್ತಲು ಆವರಿಸಿದೆ. ವಿವೇಕಾನಂದ ರಸ್ತೆಯಲ್ಲಿ ಮೂರ್‍ನಾಲ್ಕು ದೀಪಗಳು ಬೆಳಗುವುದು ಬಿಟ್ಟರೆ ಉಳಿದೆಲ್ಲೆಡೆ ಕತ್ತಲು ಕವಿದಿರುವುದು ಸಾಮಾನ್ಯವಾಗಿದೆ.

ಕತ್ತಲು ಆವರಿಸಿರುವ ಪ್ರದೇಶಗಳು: ಬೆಂಗಳೂರು -ಮೈಸೂರು ಹೆದ್ದಾರಿ, ವಿವೇಕಾನಂದ ರಸ್ತೆ, ನೂರಡಿ ರಸ್ತೆ, ಬನ್ನೂರು ರಸ್ತೆ, ಗುತ್ತಲು ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲೇ ವಿದ್ಯುತ್‌ ದೀಪಗಳಿಲ್ಲದೆ ಕತ್ತಲು ಆವರಿಸಿಕೊಂಡಿದ್ದರೂ ಗಮನಹರಿಸುವವರಿಲ್ಲ.

30 ಲಕ್ಷ ವಿದ್ಯುತ್‌ ಬಿಲ್:

ನಗರ ವ್ಯಾಪ್ತಿಯೊಳಗೆ ಅಳವಡಿಸಿರುವ ಬೀದಿ ದೀಪಗಳಿಂದ ತಿಂಗಳಿಗೆ 30 ಲಕ್ಷ ವಿದ್ಯುತ್‌ ಬಿಲ್ ಬರುತ್ತಿದೆ ಎನ್ನುವುದು ಅಧಿಕಾರಿಗಳು ಹೇಳುವ ಮಾತು. ವಾರ್ಷಿಕ 3.60 ಕೋಟಿ ರೂ. ಹಣವನ್ನು ಪಾವತಿಸಲಾಗುತ್ತಿದೆ. ಆದರೂ, ಅಸಮರ್ಪಕ ನಿರ್ವಹಣೆಯ ಪರಿಣಾಮ ವಿದ್ಯುತ್‌ ದೀಪಗಳು ಬೆಳಗದೆ ನಗರಕ್ಕೆ ಕತ್ತಲು ಆವರಿಸಿದೆ.
ನಿರ್ವಹಣೆಗೆ 90 ಲಕ್ಷ ರೂ.:

ಬೀದಿ ದೀಪಗಳನ್ನು ನಿರ್ವಹಣೆ ಮಾಡುವ ಟೆಂಡರ್‌ದಾರರಿಗೆ ವಾರ್ಷಿಕ 90 ಲಕ್ಷ ರೂ.ಗೆ ಟೆಂಡರ್‌ ನೀಡಲಾಗಿದೆ. ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರರು ವಿದ್ಯುತ್‌ ದೀಪಗಳು ಕೆಟ್ಟುಹೋದ ಸಮಯದಲ್ಲಿ ಕಳಪೆ ಗುಣಮಟ್ಟದ ಲೈಟ್ಗಳನ್ನು ಖರೀದಿಸಿ ಅಳವಡಿಸುತ್ತಿರುವುದೇ ಅವ್ಯವಸ್ಥೆಗೆ ಮೂಲ ಕಾರಣವಾಗಿದೆ. ಕೋಟ್ಯಂತರ ರೂ. ಹಣವನ್ನು ದುರಸ್ತಿ ನೆಪದಲ್ಲಿ ಲೂಟಿ ಹೊಡೆಯಲಾಗುತ್ತಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಆರೋಪವಾಗಿದೆ.
ಟೆಂಡರ್‌ ಕರೆದಿಲ್ಲ:

ಹಾಲಿ ಇರುವ ನಗರ ವ್ಯಾಪ್ತಿಯೊಳಗಿರುವ ಬೀದಿ ದೀಪಗಳನ್ನೆಲ್ಲಾ ತೆರವುಗೊಳಿಸಿ ಕೇಂದ್ರೀಯ ನಿಯಂತ್ರಣ ನಿರ್ವಹಣಾ ವ್ಯವಸ್ಥೆಯಡಿ ಏಕಪ್ರಕಾರವಾಗಿ ಎಲ್ಲಾ ರಸ್ತೆಗಳಿಗೆ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲು ಸರ್ಕಾರ ನಿರ್ಧರಿಸಿದೆ. ಆ ಹಿನ್ನೆಲೆಯಲ್ಲಿ 14.8.2018ರಂದು ಟೆಂಡರ್‌ ಕರೆಯಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ರದ್ದುಪಡಿಸಿದೆ. ಮುಂದಿನ ಆದೇಶವರೆಗೂ ಟೆಂಡರ್‌ಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಸೂಚಿಸಿದೆ. ಹಾಗಾಗಿ ಒಂದು ವರ್ಷದಿಂದಲೂ ಟೆಂಡರ್‌ ಪ್ರಕ್ರಿಯೆ ನಡೆದಿಲ್ಲ. ಬೀದಿ ದೀಪಗಳ ಅಮೂಲಾಗ್ರ ಬದಲಾವಣೆಯೂ ನಡೆಯದೆ ಅವ್ಯವಸ್ಥಿತವಾಗಿಯೇ ಉಳಿದುಕೊಂಡಿವೆ.

 

● ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next