Advertisement

ನಿರ್ವಹಣೆ ಕೊರತೆ: ಶೌಚಾಲಯ ಬಳಕೆಗೆ ಹಿಂದೇಟು

12:17 PM Dec 31, 2019 | Team Udayavani |

ಮುದಗಲ್ಲ: ಪಟ್ಟಣದ ವಾರ್ಡ್‌ ನಂ. 2, 11, 13 ಹಾಗೂ 14ರಲ್ಲಿ ಸರ್ಕಾರದ ವಿವಿಧ ಅನುದಾನದಲ್ಲಿ ನಿರ್ಮಿಸಿದ ಮಹಿಳೆಯರ ಶೌಚಾಲಯಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಮತ್ತು ನಿರ್ವಹಣೆ ಮಾಡುವಲ್ಲಿ ಪುರಸಭೆ ವಿಫಲವಾಗಿದ್ದರಿಂದ ಮಹಿಳೆಯರು ಬಳಕೆಗೆ ಹಿಂದೇಟು ಹಾಕುವಂತಾಗಿದ್ದು, ಶೌಚಕ್ಕೆ ಬಯಲನ್ನೇ ಆಶ್ರಯಿಸುವಂತಾಗಿದೆ.

Advertisement

ವಾರ್ಡ್‌ ನಂ.11 ಮತ್ತು 13ರಲ್ಲಿ 2004-05ನೇ ಸಾಲಿನಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಅನುದಾನದಲ್ಲಿ ತಲಾ 4 ಲಕ್ಷ ರೂ. ಹಾಗೂ ವಾರ್ಡ್‌ ನಂ. 2 ಮತ್ತು 14ರಲ್ಲಿ ಎಸ್‌ಎಫ್‌ಸಿ ಅನುದಾನದಲ್ಲಿ ತಲಾ 5 ಲಕ್ಷ ರೂ. ವೆಚ್ಚದಲ್ಲಿ ಮಹಿಳೆಯರ ಶೌಚಾಲಯ ನಿರ್ಮಿಸಿ ಪಟ್ಟಣ ಪಂಚಾಯಿತಿಗೆ ಹಸ್ತಾಂತರಿಸಲಾಗಿದೆ.

ಈ ಪೈಕಿ ವಾರ್ಡ್‌ ನಂ.11ರ ವ್ಯಾಪ್ತಿಯ ಪುರಸಭೆ ಬಳಿಯ ಶೌಚಾಲಯಕ್ಕೆ ಮಾತ್ರ ನಿರ್ವಹಣೆಗೆ ಟೆಂಡರ್‌ ಪಡೆದಿದ್ದು, ಇದು ಬಳಕೆಯಲ್ಲಿದೆ.  ಇನ್ನು ಉಳಿದಂತೆ ವಾರ್ಡ್‌ 2, 13, 14ರ ಶೌಚಾಲಯ ನಿರ್ವಹಣೆಗೆ ಟೆಂಡರ್‌ ಕರೆದರೂ ಯಾರೂ ಮುಂದೆ ಬಂದಿರಲಿಲ್ಲ. ಹೀಗಾಗಿ ಇವುಗಳನ್ನು ಆರಂಭಿಸಿದ್ದಿಲ್ಲ. ಈ ವಾರ್ಡ್‌ಗಳ ಮಹಿಳೆಯರ ಒತ್ತಾಯದ ಮೇರೆಗೆ ಪುರಸಭೆ ನೀರಿನ ವ್ಯವಸ್ಥೆ ಕಲ್ಪಿಸಿ ಬಳಕೆಗೆ ಮುಕ್ತಗೊಳಿಸಿತ್ತು. ಆದರೆ ಶೌಚಾಲಯದಲ್ಲಿ ಸ್ವಚ್ಛತೆ ಕಾಪಾಡದ್ದರಿಂದ ಇತರೆ ಸೌಕರ್ಯ ಕಲ್ಪಿಸದ್ದರಿಂದ ಈಗ ಜನ ಬಳಕೆಗೆ ಹಿಂದೇಟು ಹಾಕುವಂತಾಗಿದ್ದು, ಬಯಲನ್ನೇ ಆಶ್ರಯಿಸುವಂತಾಗಿದೆ.

ಮನೆಗಳ ಅಕ್ಕಪಕ್ಕದ ಖಾಲಿ ನಿವೇಶನ, ರಸ್ತೆ, ಜಾಲಿಗಡಗಳ ಮರೆಯನ್ನು ಮಹಿಳೆಯರು ಆಶ್ರಯಿಸಬೇಕಾಗಿದೆ. ಲಕ್ಷಾಂತರ ರೂ. ವ್ಯಯಿಸಿ ಶೌಚಾಲಯ ನಿರ್ಮಿಸಿದ್ದರೂ ಪುರಸಭೆ ಅವುಗಳಿಗೆ ಸೌಕರ್ಯ ಕಲ್ಪಿಸುವಲ್ಲಿ, ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ.

ಮಹಿಳೆಯರ ಶೌಚಾಲಯಗಳಿಗೆ ತೆರಳಲು ರಸ್ತೆ, ಶೌಚಾಲಯದಲ್ಲಿ ನೀರಿನ ವ್ಯವಸ್ಥೆ, ವಿದ್ಯುತ್‌ ಸೌಲಭ್ಯ ಮತ್ತು ಶೌಚಾಲಯದಲ್ಲಿ ಸ್ವತ್ಛತೆಗೆ ಆದ್ಯತೆ ನೀಡಿ ಆರಂಭಿಸಬೇಕಾದ ಪುರಸಭೆ ಅದಾವುದನ್ನು ಮಾಡಿಲ್ಲ. ಈ ಬಗ್ಗೆ ವಾರ್ಡಿನ ಮಹಿಳೆಯರು ಹಲವು ಬಾರಿ ಪುರಸಭೆ ಮುಖ್ಯಾಧಿಕಾರಿ, ಹಿಂದಿನ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಲ್ಲದೆ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರಿಗೂ ಮನವಿ ಸಲ್ಲಿಸಲಾಗಿದ್ದು ಇದುವರೆಗೂ ಸೂಕ್ತ ಕ್ರಮ ಜರುಗಿಸಿಲ್ಲ.

Advertisement

ಯಾರು ಬರುತ್ತಿಲ್ಲ: ಪಟ್ಟಣದಲ್ಲಿ ಮೂರು ಹೈಟೆಕ್‌ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಪುರಸಭೆ ಹತ್ತಿರದ ಮೂತ್ರಾಲಯ ಮತ್ತು ಶೌಚಾಲಯವನ್ನು ಇಲಕಲ್ಲ ಮೂಲದವರು ಟೆಂಡರ್‌ ಪಡೆದು ನಿರ್ವಹಣೆ ಮಾಡುತ್ತಿದ್ದಾರೆ. ಉಳಿದ ಸಾಮೂಹಿಕ ಶೌಚಾಲಯಗಳ ನಿರ್ವಹಣೆಗೆ ಈ ಹಿಂದೆಯೇಟೆಂಡರ್‌ ಕರೆಯಲಾಗಿದ್ದು, ಯಾರೊಬ್ಬರು ಮುಂದೆ ಬರುತ್ತಿಲ್ಲ. ಮೇಲಾಗಿ ಶೌಚಾಲಯವನ್ನು ಉಪಯೋಗಿಸುವ ಸಾರ್ವಜನಿಕರು ಪ್ರತಿಯೊಬ್ಬರು 5ರೂ. ಪಾವತಿಸಬೇಕು. ಈ ಹಣ ಶೌಚಾಲಯ ನಿರ್ವಹಣೆ ಮಾಡುವವರೇ ಬಳಸಿಕೊಳ್ಳಬಹುದು. ಆದರೂ ಗುತ್ತಿಗೆ ಪಡೆಯಲು ಯಾರೂ ಬರುತ್ತಿಲ್ಲವೆಂದು ಪುರಸಭೆ ಮೂಲಗಳು ಪತ್ರಿಕೆಗೆ ತಿಳಿಸಿವೆ. ಶೌಚಾಲಯ ನಿರ್ವಹಣೆಗೆ ಖಾಸಗಿ ವ್ಯಕ್ತಿಗಳನ್ನು ನೇಮಿಸಿದ್ದಲ್ಲಿ ಸ್ವಚ್ಛತೆ ಕಾಪಾಡಬಹುದು ಎನ್ನುತ್ತಾರೆ ಪುರಸಭೆ ಮಾಜಿ ಅಧ್ಯಕ್ಷ ರಜ್ಜಬಲಿ ಟಿಂಗ್ರಿ.

Advertisement

Udayavani is now on Telegram. Click here to join our channel and stay updated with the latest news.

Next