Advertisement

ನೀರಿನ ಘಟಕಗಳಿಗೆ ನಿರ್ವಹಣೆ ಕೊರತೆ

02:16 PM Mar 15, 2020 | Suhan S |

ಗೋಕಾಕ: ಬೇಸಿಗೆ ಬಂತೆಂದರೆ ಕುಡಿಯುವ ನೀರಿನ ಸಮಸ್ಯೆ ಸಾಮಾನ್ಯವಾಗಿ ಎಲ್ಲೆಡೆ ತಲೆದೋರುತ್ತದೆ. ಈ ನಿಟ್ಟಿನಲ್ಲಿ ತಾಲೂಕಾಡಳಿತ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ನಗರ ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶದ ಜನರು ಪರದಾಡುವ ಪರಿಸ್ಥಿತಿಯೂ ಬರಬಹುದು.

Advertisement

ತಾಲೂಕಿನಲ್ಲಿ ಬಿಸಿಲಿನ ಬೇಗೆ ದಿನದಿಂದ-ದಿನಕ್ಕೆ ಹೆಚ್ಚಾಗುತ್ತಿದ್ದು, ಮಾರ್ಚ್‌ ತಿಂಗಳಲ್ಲಿಯೇ ಬಿಸಿಲಿನ ತಾಪಕ್ಕೆ ಬೇಸತ್ತ ಜನ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಸರ್ಕಾರ ಲಕ್ಷಾಂತರ ಹಣ ಕುಡಿಯುವ ನೀರಿಗಾಗಿ ವ್ಯಯಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದರೂ ಉಪಯೋಗವಿಲ್ಲ ದಂತಾಗಿರುವುದು ದುರ್ದೈವ. ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಕಾಗದಗಳಲ್ಲಿ ನಮೂದಿಸಿದ ಪ್ರಕಾರ ಒಟ್ಟು 126 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ತುಕ್ಕಾನಟ್ಟಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರವಿರುವ ಘಟಕ ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಪ್ರಾರಂಭವಾಗಿಯೇ ಇಲ್ಲ. ತಾಂತ್ರಿಕ ದೋಷದಿಂದ ಮೆಳವಂಕಿ, ಮುನ್ನಾಳ, ಲಗಮೇಶ್ವರ (ಲಕ್ಷ್ಮೇಶ್ವರ), ಸಿದ್ದಾಪುರಹಟ್ಟಿ, ಶಿಲ್ತಿಭಾಂವಿ, ಸುಲಧಾಳ, ಕೈತನಾಳ, ರಾಜನಕಟ್ಟಿ, ಕೌಜಲಗಿ ಸೇರಿದಂತೆ ಇನ್ನೂ ಕೆಲ ಗ್ರಾಮಗಳಲ್ಲಿ ಕೆಟ್ಟು ಹೋಗಿದ್ದು, ಸಂಬಂಧಿ ಸಿದ ಅಧಿ ಕಾರಿಗಳು ಘಟಕಗಳ ದುರಸ್ತಿಯನ್ನೂ ಮಾಡಿಸಿಲ್ಲ. ಸಾರ್ವಜನಿಕರು ಬಳಸದೇ ಇರುವ ಮೂಡಲಗಿ ಗ್ರಾಮೀಣ, ಖನಗಾಂವ, ಹಣಮಾಪುರ (ಮಕ್ಕಳಗೇರಿ), ಮಾಲದಿನ್ನಿ ಗ್ರಾಮದಲ್ಲಿಯ ಘಟಕಗಳನ್ನು ಜನದಟ್ಟಣೆ ಇರುವ ಕಡೆಗೆ ಸ್ಥಳಾಂತರಿಸುವ ಅವಶ್ಯಕತೆ ಇದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಶೇ.20 ಮನೆ ಬಳಕೆಗೆ ಮತ್ತು ಶೇ.10 ಕೈಗಾರಿಕೆಗಳಿಗೆ, ಶೇ.70 ಕೃಷಿಗೆ ನೀರು ಬೇಕಾಗುತ್ತದೆ. ಇದೇ ಸಮಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಅಂತರ್ಜ ಲಮಟ್ಟ ಕುಸಿತವಾಗುತ್ತಿದ್ದು, ಜನ-ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೇ ಹಾಹಾಕಾರ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೂಳೆತ್ತುವ ಕಾರ್ಯ: ಕಳೆದ ಬಾರಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದ ತತ್ತರಿಸಿದ ತಾಲೂಕಿನ ಜನತೆ ಈಗ ಬಿಸಿಲಿನ ತಾಪಕ್ಕೆ ಪರಿತಪಿಸುತ್ತಿದ್ದಾರೆ. ನೀರಿಗಾಗಿ ಅಂತರ್ಜಲ ಮಟ್ಟದ ಹೆಚ್ಚಳಕ್ಕೆ ನದಿ, ಹಳ್ಳಗಳಲ್ಲಿ ಹೂಳೆತ್ತುವ ಕಾರ್ಯ ಮಾಡಬೇಕಾಗಿದೆ. ನೀರಿನ ಬವಣೆಯಿಂದ ಜನರು ತತ್ತರಿಸುವ ಮೊದಲೇ ಪೂರ್ವಭಾವಿಯಾಗಿ ಅ ಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ. ಬೆಳೆಯುತ್ತಿರುವ ಜನಸಂಖ್ಯೆ, ನಗರೀಕರಣ ಮತ್ತು ಕೈಗಾರಿಕೆಗಳಿಂದ ಭೂ ತಾಪಮಾನ ಹೆಚ್ಚಾಗುತ್ತಲೇ ಇದೆ. ಇದರಿಂದ ಬರ-ಪ್ರವಾಹ ವಿಕೋಪಗಳು ತಲೆದೋರುತ್ತಿವೆ. ಪರಿಸರ ಮತ್ತು ನೀರಿನ ಮೂಲಗಳ ಜವಾಬ್ದಾರಿಯುತ ರಕ್ಷಣೆ, ನಿರ್ವಹಣೆ, ಬಳಕೆಗೆ ಸರ್ಕಾರ, ಸಂಘ-ಸಂಸ್ಥೆಗಳು, ಸಾರ್ವಜನಿಕರು ಮುಂದಾಗಬೇಕು. ಅನಗತ್ಯ ನೀರಿನ ಬಳಕೆಗೆ ಕಡಿವಾಣ ಹಾಕಬೇಕು. ಅನಗತ್ಯ ಬೋರ್‌ವೆಲ್‌ ಕೊರೆಸುವುದನ್ನು ನಿಲ್ಲಿಸಿದಾಗ ಮಾತ್ರ ಜೀವರಾಶಿ ಬದುಕಲು ಸಾಧ್ಯ ಎನ್ನುವುದು ಪ್ರಜ್ಞಾವಂತರ ಮಾತು.

ಗೋಕಾಕ ಹಾಗೂ ಮೂಡಲಗಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 126 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ 13 ಘಟಕಗಳು ದುರಸ್ತಿ ಇರುವುದರಿಂದ ತೊಂದರೆಯಾಗಿದ್ದು, ಅವುಗಳನ್ನು 8 ದಿನಗಳಲ್ಲಿ ದುರಸ್ತಿ ಮಾಡಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು. ಅಲ್ಲದೇ ಹೆಚ್ಚುವರಿಯಾಗಿ 4 ಘಟಕ ನಿರ್ಮಿಸಲು ಮಂಜೂರಾತಿ ದೊರಕಿದೆ. – ಐ.ಎಂ. ದಫೇದಾರ, ಗ್ರಾಮೀಣ ಕುಡಿವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ (ಪ್ರಭಾರಿ).

Advertisement

ಕೌಜಲಗಿ ಪಟ್ಟಣದ ಮಾರ್ಕೆಟ್‌ನಲ್ಲಿ ಕುಡಿಯುವ ನೀರಿನ ಯೋಜನೆಯಡಿ ಬೋರ್‌ವೆಲ್‌ ಕೊರೆದು ಜಲಕುಂಭ ನಿರ್ಮಿಸಲಾಗಿತ್ತು. ಅದರಿಂದಾಗಿ ಅಲ್ಲಿ ಕುಡಿಯುವ ನೀರಿನೊಂದಿಗೆ ಬಳಕೆಗೆ ಹೆಚ್ಚಿನ ನೀರು ಸಿಕ್ಕಿತ್ತು. ಆದರೆ ಕೆಲ ವರ್ಷಗಳ ಹಿಂದೆ ಜಲಕುಂಭ ತೆಗೆದು ಅಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿದ್ದರು. ಆದರೆ ಕಳೆದ 6 ತಿಂಗಳಿಂದ ಘಟಕ ಬಂದ್‌ ಆಗಿದ್ದು ಮತ್ತೆ ನೀರಿನ ಸಮಸ್ಯೆ ತಲೆದೋರಿದೆ.- ಪರಮೇಶ್ವರ ಹೊಸಮನಿ, ಜಿಪಂ ಮಾಜಿ ಸದಸ್ಯ

 

-ಮಲ್ಲಪ್ಪ ದಾಸಪ್ಪಗೋಳ

Advertisement

Udayavani is now on Telegram. Click here to join our channel and stay updated with the latest news.

Next