Advertisement

ಉದ್ಯಾನಕ್ಕೆ ನಿರ್ವಹಣೆ ಕೊರತೆ

04:34 PM Sep 17, 2018 | Team Udayavani |

ಗಜೇಂದ್ರಗಡ: ಪಟ್ಟಣದಲ್ಲಿ ಆಕರ್ಷಣೆಯಾಗಿದ್ದ ಉದ್ಯಾನ ಸೂಕ್ತ ನಿರ್ವಹಣೆ ಕೊರತೆಯಿಂದ ಅಂದಗೆಟ್ಟು ಅವ್ಯವಸ್ಥೆ ಆಗರವಾಗಿದೆ.

Advertisement

ಪುರಸಭೆ ಆಡಳಿತ ಉದ್ಯಾನ ನಿರ್ಮಾಣ ಮಾಡುವ ಮೂಲಕ ಜನರ ಕನಸು ಸಾಕಾರಗೊಳಿಸಿದೆ. ಆದರೆ ಉದ್ಯಾನ ನಿರ್ವಹಣೆಯಲ್ಲಿ ಮಾತ್ರ ಸಂಪೂರ್ಣ ಎಡೆವಿದೆ. ಗಾರ್ಡನ್‌ ನಿರ್ವಹಣೆಗಾಗಿ ಪುರಸಭೆ ವತಿಯಿಂದ ಪ್ರತಿ ತಿಂಗಳು 10 ಸಾವಿರ ರೂ. ಖರ್ಚು ಮಾಡಲಾಗುತ್ತಿದೆ. ಉದ್ಯಾನವನದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಇದರಿಂದ ಉದ್ಯಾನಕ್ಕೆ ಆಗಮಿಸುವ ಸಾರ್ವಜನಿಕರು ಪುರಸಭೆಗೆ ಹಿಡಿಶಾಪ ಹಾಕುವಂತಾಗಿದೆ.

ಗುಡ್ಡದ ತಳಭಾಗದ ಕೆರೆ ಬಳಿ ಮಕ್ಕಳ ಉದ್ಯಾನ ಅನೈರ್ಮಲ್ಯದ ತಾಣವಾಗಿದೆ. ತ್ಯಾಜ್ಯ ಎಲ್ಲೆಂದರಲ್ಲಿ ಸಂಗ್ರಹವಾಗಿದೆ. ಗಿಡಗಳು ಅಡ್ಡಾ ದಿಡ್ಡಿ ಬೆಳೆದು ನಿಂತ ಪರಿಣಾಮ ಸಾರ್ವಜನಿಕರ ಮುಖಕ್ಕೆ ಬಡಿಯುವಂತಾಗಿದೆ. ಇನ್ನೊಂದೆಡೆ ಹುಲ್ಲಿನ ಹಾಸಿಗೆಯಾಗುವ ಬದಲು ಕಾಲು ಮುಚ್ಚುವಷ್ಟು ಕಸ ಬೆಳೆದು ನಿಂತಿದೆ. ಕೆಲ ಭಾಗದಲ್ಲಿ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಇರಿಸಿದ ಕಲ್ಲುಗಳು ಅದೇ ಸ್ಥಳದಲ್ಲಿವೆ. ಮಕ್ಕಳ ಆಟೋಟಕ್ಕೆ ನಿರ್ಮಿಸಿರುವ ಉಪಕರಣಗಳನ್ನು ದೊಡ್ಡವರು ಉಪಯೋಗಿಸುತ್ತಿರುವುದು ಉದ್ಯಾನವನ ನಿರ್ವಹಣೆ ಲೋಪಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮನಸ್ಸಿಗೆ ತಂಪು ನೀಡುವುದರ ಜತೆಗೆ ವಿಶಾಲವಾದ ವಾತಾವರಣ ಕಲ್ಪಿಸುವೆ. ಮಕ್ಕಳ ಆಟೋಟಕ್ಕೂ ನೆರವಾಗುವೆ. ಎಲ್ಲರನ್ನು ಆಕರ್ಷಿಸುವೆ. ಮನಸ್ಸಿಗೆ ಮುದ ತಣಿಸುವಂತೆ ಮಾಡುವೆ. ನೀವು ನನ್ನನ್ನು ಉಳಿಸಿ. ಇದು ಯಾರೋ ಹೇಳುವ ಮಾತಲ್ಲ. ಬದಲಾಗಿ ಉದ್ಯಾನದ ಸ್ಥಿತಿಯ ಆರ್ಥನಾದ. 

ಉದ್ಯಾನವನದಲ್ಲಿ ಹಲವಾರು ಸಸ್ಯವರ್ಗ ವಿವಿಧ ಅಲಂಕಾರಗಳಿಂದ ನಿರ್ಮಿಸಲಾಗಿದೆ. ವರ್ಷ ಕಳೆದಂತೆ ಅವುಗಳೆಲ್ಲವೂ ಮಾಯವಾಗುವ ಹಂತಕ್ಕೆ ತಲುಪಿವೆ. ಸಮಯಕ್ಕೆ ಸರಿಯಾಗಿ ನೀರು ಹಾಕಿ ಬೆಳೆಸದ ಹಿನ್ನೆಲೆಯಲ್ಲಿ ಸಸ್ಯಗಳು ಒಣಗುವ ಹಂತ ತಲುಪಿವೆ. 

Advertisement

ಪಟ್ಟಣದ ಹೊರ ವಲಯದಲ್ಲಿ 4.40 ಲಕ್ಷ ರೂ. ಅನುದಾನದಲ್ಲಿ 851 ಚದರ ಜಾಗೆಯಲ್ಲಿ ಅಂದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಹಾಲಿ ಶಾಸಕ ಕಳಕಪ್ಪ ಬಂಡಿ ಅವರ ಅಧಿಕಾರವಧಿಯಲ್ಲಿ ಸುಂದರವಾಗಿ ಅವತಾರವೆತ್ತಿದ್ದ ಉದ್ಯಾನ ಈಗ ಹಾಳು ಕೊಂಪೆಯಂತಾಗಿ ನಿಂತಿದೆ. ಆದರೆ ಶಾಸಕರಾಗಿ ಆಯ್ಕೆಯಾಗಿರುವ ಕಳಕಪ್ಪ ಬಂಡಿ ಅವರು ಮತ್ತೆ ಉದ್ಯಾನ ಅಭಿವೃದ್ಧಿಗೆ ಆಸಕ್ತಿ ತೋರುವರೇ ಎಂಬ ಪ್ರಶ್ನೆ ಎದುರಾಗಿದೆ.

ಗಜೇಂದ್ರಗಡವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ ಉದ್ಯಾನ ನಿರ್ವಹಣೆ ಮಾಡುವಲ್ಲಿ ಪುರಸಭೆ ಆಡಳಿತ ಸಂಪೂರ್ಣ ವಿಫಲವಾಗಿದೆ. ಕಾಲಗರ್ಭ ಸೇರುವ ಹಂತ ತಲುಪಿಸುವ ಉದ್ಯಾನ ಉಳಿವಿಗೆ ಜನಪ್ರತಿನಿ ಧಿಗಳು, ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು.
ಭೀಮಣ್ಣ ಇಂಗಳೆ,
ಜಯ ಕರ್ನಾಟಕ ಸಂಘಟನೆ,ತಾಲೂಕು ಅಧ್ಯಕ್ಷ 

ಪುರಸಭೆ ವತಿಯಿಂದ ನಿರ್ಮಾಣಗೊಂಡಿರುವ ಉದ್ಯಾನ ನಿರ್ವಹಣೆಗಾಗಿ ಇಬ್ಬರನ್ನು ನೇಮಕ ಮಾಡಲಾಗಿದೆ. ಆದರೆ ಸ್ವತ್ಛತೆ ಕಾಪಾಡದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಉದ್ಯಾನ ನಿರ್ವಹಣೆಗೆ ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗುವುದು. ಜತೆಗೆ ಪುರಸಭೆ ಅ ಧಿಕಾರಿಗಳೇ ಸ್ವತಃ ಉದ್ಯಾನಕ್ಕೆ ತೆರಳಿ ಸ್ವಚ್ಛತೆ ಕಾರ್ಯ ಮಾಡಲಾಗುವುದು.
ಹನಮಂತಮ್ಮ ನಾಯಕ, ಮುಖ್ಯಾಧಿಕಾರಿ

ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next