ಬಾವುಟಗುಡ್ಡೆ: ನಗರದಲ್ಲಿ ಹೊಸ ಪಾರ್ಕ್‌ಗಳ ನಿರ್ಮಾಣಕ್ಕೆ ಮುಂದಾ ಗುತ್ತಿರುವ ಸ್ಥಳೀಯಾಡಳಿತ ಈಗಿರುವ ಪಾರ್ಕ್‌ಗಳ ನಿರ್ವಹಣೆಯತ್ತ ಆಸಕ್ತಿ ತೋರುತ್ತಿಲ್ಲ.
ನಗರದ ಪ್ರಮುಖ ಪಾರ್ಕ್ ಎನಿಸಿಕೊಂಡಿರುವ ಬಾವುಟಗುಡ್ಡೆ ಬಳಿ ಇರುವ ಟಾಗೋರ್ ಪಾರ್ಕ್ ಹಲವು ಸಮಯಗಳಿಂದ ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಪಾಲಿಕೆ ಅಧೀನದಲ್ಲಿರುವ ಈ ಪಾರ್ಕ್ ಅಭಿವೃದ್ಧಿಯತ್ತ ಪಾಲಿಕೆ ಮನಸ್ಸು ಮಾಡಬೇಕಿದೆ. ಪಾರ್ಕ್‌ನ ಪ್ರವೇಶಕ್ಕೆ ಸಮರ್ಪಕ ವ್ಯವಸ್ಥೆಯಿಲ್ಲ. ಈಗಿರುವ ಪಾರ್ಕ್‌ನ ಮುಖ್ಯದ್ವಾರದಲ್ಲಿ ಕಸದ ರಾಶಿ ಸ್ವಾಗತಿಸುತ್ತದೆ. ಗೇಟ್‌ಗಳು ಮುರಿದುಕೊಂಡಿದ್ದು, ಹಗ್ಗದಿಂದ ಕಟ್ಟಲಾಗಿದೆ.
ಪಾರ್ಕ್‌ನ ಒಳಗೂ ಗಿಡಗಳು ನಿರ್ವಹಣೆಯಿಲ್ಲದೆ ಸೊರಗಿದೆ. ಕೆಲವೊಂದು ಗಿಡಗಳ ಕಟಾವು ಮಾಡಲು ಕೂಡ ಸಂಬಂಧಪಟ್ಟ ಇಲಾಖೆ ಮುಂದಾಗಿಲ್ಲ. ಪಾರ್ಕ್‌ನೊಳಗೆ ಬೆಳಗ್ಗೆ ಮತ್ತು ಸಂಜೆ ವೇಳೆ ಮಾತ್ರ ಪ್ರವೇಶಕ್ಕೆ ಅನುಮತಿ ಇದ್ದರೂ ಪಾರ್ಕ್ ಆವರಣ ಗೋಡೆ ಹಾರಿ ಕೆಲವರು ಪಾರ್ಕ್ ಪ್ರವೇಶಕ್ಕೆ ಮುಂದಾಗುತ್ತಿದ್ದಾರೆ. ಪಾರ್ಕ್ ಎದುರು ಕಸ ರಾಶಿಹಾಕಲಾಗಿದ್ದು, ತೆರವು ಕಾರ್ಯಕ್ಕೆ ಸಂಬಂಧಪಟ್ಟವರು ಮುಂದಾಗಿಲ್ಲ. ಸಿಟಿಯ ತುಂಬಾ ಹಳೆಯ ಪಾರ್ಕ್ ಎಂದು ಗುರುತಿಸಿಕೊಂಡ ಟಾಗೋರ್ ಪಾರ್ಕ್ ನ ಅವ್ಯವಸ್ಥೆಯ ಪರಿಣಾಮ, ಹಿರಿಯ ನಾಗರಿಕರು ಸಹಿತ ಸಾರ್ವಜನಿಕರು ವಾಯು ವಿಹಾರಕ್ಕೆ ತೊಂದರೆ ಉಂಟಾಗಿದೆ.
ಹಂಪನಕಟ್ಟೆ, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಸ್ಟೇಟ್‌ಬ್ಯಾಂಕ್, ಕೆ.ಎಸ್. ರಾವ್ ರಸ್ತೆ, ಬಂಟ್ಸ್‌ಹಾಸ್ಟೆಲ್ ಸಹಿತ ಸುತ್ತಮುತ್ತಲಿನ ಮಂದಿಗೆ ವಾಯು ವಿಹಾರಕ್ಕೆಂದು ಸಮರ್ಪಕ ಪಾರ್ಕ್ ವ್ಯವಸ್ಥೆ ಇಲ್ಲ. ಸ್ಟೇಟ್‌ಬ್ಯಾಂಕ್ ಬಳಿ ಇರುವ ಪುರಭವನ ಎದುರಿನ ಗಾಂಧೀ ಪಾರ್ಕ್ ಸದ್ಯ ಅಸ್ತಿತ್ವ ಕಳೆದುಕೊಂಡಿದೆ. ಪಾರ್ಕ್ ಭಾಗದಲ್ಲಿ ಅಂಡರ್‌ಪಾಸ್ ಕಾಮಗಾರಿ ಆಗುತ್ತಿದ್ದು, ಇನ್ನೇನು ಮತ್ತೆ ಪಾರ್ಕ್ ನಿರ್ಮಾಣ ಆಗಬೇಕಿದೆ. ನಗರದಕ್ಕೆ ಪ್ರಮುಖ ಪಾರ್ಕ್ ಎನಿಸಿಕೊಂಡಿರುವ ಕದ್ರಿ ಪಾರ್ಕ್ ಕೂಡ ಮತ್ತಷ್ಟು ಅಭಿವೃದ್ಧಿಯ ಹಾದಿ ಹಿಡಿಯಬೇಕು. ಮಲ್ಲಿಕಟ್ಟೆ ಪಾರ್ಕ್ ಕಾಮಗಾರಿ ಅರ್ಧದಲ್ಲೇ ನಿಂತಿದೆ. ಹೀಗಿರುವಾಗ ಮೂಲ ಸೌಕರ್ಯ ದಲ್ಲೊಂದಾದ ಪಾರ್ಕ್ ಗಳ ಅಭಿವೃದ್ಧಿಯ ಜತೆ, ಹಸುರೀಕರಣಕ್ಕೆ ಮಹಾನಗರ ಪಾಲಿಕೆ ಮುಂದಾಗಬೇಕು ಎನ್ನುತ್ತಾರೆ ಸ್ಥಳೀಯರು.
ಅಭಿವೃದ್ಧಿಗೆ ಅವಕಾಶವಿದೆ
ಸ್ಥಳೀಯ ಮನಪಾ ಸದಸ್ಯ ವಿನಯರಾಜ್ ಅವರು ‘ಸುದಿನ’ಕ್ಕೆ ಪ್ರತಿಕ್ರಿಯಿಸಿ, ಸ್ಮಾರ್ಟ್‌ಸಿಟಿ, 15ನೇ ಹಣಕಾಸು ಆಯೋಗ ಸಹಿತ ವಿವಿಧ ಮೂಲಗಳಿಂದ ಪಾರ್ಕ್ ಅಭಿವೃದ್ಧಿ ಪಡಿಸಲು ಸಾಧ್ಯವಿದೆ. ಆದರೆ ಮಂಗಳೂರು ಪಾಲಿಕೆ ಸದ್ಯ ಟಾಗೋರ್ ಪಾಕ್‌ರ ಅಭಿವೃದ್ಧಿಗೆ ಈ ಯಾವುದೇ ಮೂಲವನ್ನು ಬಳಸುತ್ತಿಲ್ಲ. ಪರಿಣಾಮ ಸುತ್ತಲಿನ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಈ ಹಿಂದೆ ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ಟಾಗೋರ್ ಪಾರ್ಕ್ ಅಭಿವೃದ್ಧಿಗೊಳಿಸಲಾಗಿತ್ತು. ಬಳಿಕ ಪಾರ್ಕ್ ಗಮನಾರ್ಹ ಅಭಿವೃದ್ಧಿ ಕಂಡಿಲ್ಲ’ ಎನ್ನುತ್ತಾರೆ.