Advertisement

ಶಿಥಿಲಾವಸ್ಥೆ ತಲುಪಿದ ಸಮುದಾಯ ಭವನಗಳು

03:43 PM Apr 13, 2022 | Team Udayavani |

ಶೃಂಗೇರಿ: ವರ್ಷಕ್ಕೊಮ್ಮೆ ಬಳಸುವ ರಂಗ ಮಂದಿರದಂತೆ ಸೀಮಿತವಾಗಿ ಬಳಸುವ ಸಮುದಾಯ ಭವನಗಳು ತಾಲೂಕಿನಾದ್ಯಂತ ಇದ್ದು, ಬಹುತೇಕ ಸಮುದಾಯ ಭವನಗಳು ನಿರ್ವಹಣೆ ಇಲ್ಲದೇ ಶಿಥಿಲಾವಸ್ಥೆ ತಲುಪಿವೆ.

Advertisement

ಸರಕಾರದಿಂದ ವಿವಿಧ ಯೋಜನೆಯಡಿ ನಿರ್ಮಿಸಲಾಗಿರುವ ಸಮುದಾಯ ಭವನ ಇದ್ದು ಉಪಯೋಗಕ್ಕೆ ಇಲ್ಲದಂತಾಗಿದೆ. ಹಳ್ಳಿ- ಹಳ್ಳಿಗೆ ಬಸ್‌ ತಂಗುದಾಣದ ಬೇಡಿಕೆಯಂತೆ ಜನಪ್ರತಿನಿಧಿಗಳ ಬಳಿ ಸಂಘ- ಸಂಸ್ಥೆ ಮೂಲಕ ಸಮುದಾಯ ಭವನದ ಬೇಡಿಕೆ ಇಟ್ಟು ಅದನ್ನು ಪಡೆಯಲು ಯಶಸ್ವಿಯಾಗಿದ್ದಾರೆ. ಸ್ವ-ಸಹಾಯ ಸಂಘ, ಸ್ತ್ರೀಶಕ್ತಿ ಸಂಘದ ಸಭೆ ನಡೆಸಲು ಅನುಕೂಲವಾಗವಂತೆ ಸಮುದಾಯ ಭವನ ನಿರ್ಮಿಸಲಾಗಿತ್ತು.

ನಿರ್ವಹಣೆ ಕೊರತೆ

ಸಮುದಾಯ ಭವನಗಳು ನಿರ್ಮಾಣವಾದ ನಂತರ ನಿರ್ವಹಣೆ ಇಲ್ಲದೆ ಸೊರಗುತ್ತಿವೆ. ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಿದ ಭವನ ಉಪಯೋಗಕ್ಕೆ ಇಲ್ಲವಾಗುತ್ತಿದೆ. ಕಿಟಿಕಿ, ಬಾಗಿಲು, ಮೇಲ್ಛಾವಣಿ ಗೆದ್ದಲು ಹಿಡಿದು ಹಾಳಾಗುತ್ತಿದೆ. ಸಂಘದ ಸಭೆಗಾಗಿ ತಿಂಗಳಿಗೊಮ್ಮೆ ತೆಗೆಯುತ್ತಿದ್ದ ಭವನದ ಬಾಗಿಲು ತೆರೆಯುತ್ತಿಲ್ಲ. ಸಂಘದ ಸಭೆಯನ್ನು ಸದಸ್ಯರ ಮನೆಗೆ ಸ್ಥಳಾಂತರಿಸಿಕೊಂಡಿದ್ದಾರೆ.

ಸಮುದಾಯ ಭವನದಲ್ಲಿ ಸಭೆ ನಡೆಸಲು ಗ್ರಾಪಂ ಅನುಮತಿ ಪಡೆಯವುದು, ಶೌಚಾಲಯ ಕೊರತೆ, ಸಮೂಲಭೆ ನಡೆಸಲು ಅಗತ್ಯವಾದ ಪೀಠೊಪಕರಣ ಇಲ್ಲದಿರುವುದು, ವಿದ್ಯುತ್‌ ವ್ಯವಸ್ಥೆ ಇಲ್ಲದಿರುವುದು, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಸೌಲಭ್ಯದ ಕೊರತೆಯಿಂದ ಸಂಘಗಳ ಸಭೆಯು ಭವನದಲ್ಲಿ ನಡೆಯುತ್ತಿಲ್ಲ.

Advertisement

ಬಸ್‌ ತಂಗುದಾಣ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿರುವಂತೆ ಭವನಗಳು ಹಾಳಾಗುತ್ತಿವೆ. ಅಡ್ಡಗದ್ದೆ ಗ್ರಾಪಂ ಯ ಕೆರೋಡಿಯಲ್ಲಿರುವ ಸಮುದಾಯ ಭವನ ಶಿಥಿಲಾವಸ್ಥೆ ತಲುಪಿದ್ದು, ಕಿಟಕಿ, ಬಾಗಿಲಿಗೆ ಗೆದ್ದಲು ಹಿಡಿದಿದೆ. ಭವನವನ್ನು ಖಾಸಗಿ ವ್ಯಕ್ತಿಗಳು ಸ್ವಂತ ಬಳಕೆಗೆ ಬಳಸುತ್ತಿರುವ ಬಗ್ಗೆ ಗ್ರಾಮಸ್ಥರು ದೂರಿದ್ದಾರೆ. ಕಟ್ಟಡದಲ್ಲಿ ತಮ್ಮ ಮನೆಯ ವಸ್ತುಗಳನ್ನು ದಾಸ್ತಾನು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಾಂಚಿ ನಗರದಲ್ಲಿರುವ ಸಮುದಾಯ ಭವನವು ಶಿಥಿಲವಾಗುತ್ತಿದೆ.

ಸರಕಾರ ಲಕ್ಷಾಂತರ ರೂ. ವ್ಯಯಿಸಿ ನಿರ್ಮಿಸಿದ ಸಮುದಾಯ ಭವನ ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿದೆ. ಯಾವುದೇ ಕಟ್ಟಡವಾದರೂ ಉಪಯೋಗದಲ್ಲಿದ್ದರೆ ಮಾತ್ರ ಸುಸ್ಥಿಯಲ್ಲಿರುತ್ತದೆ. ಸರಕಾರಿ ಆಸ್ತಿಯೂ ನಮ್ಮ ಆಸ್ತಿ ಎಂದು ರಕ್ಷಣೆ ಮಾಡುವ ಕರ್ತವ್ಯ ಸಾರ್ವಜನಿಕರದ್ದಾಗಿದೆ. ಭವನದಲ್ಲಿ ಮೂಲ ಸೌಕರ್ಯ ಕೊರತೆ ಇದ್ದು, ಸಾರ್ವಜನಿಕರು ಬಳಕೆ ಮಾಡುತ್ತಿಲ್ಲ. -ತ್ರಿಮೂರ್ತಿ ಹೊಸ್ತೋಟ, ಗ್ರಾಪಂ ಸದಸ್ಯ, ಮೆಣಸೆ

ಸಮುದಾಯ ಭವನವನ್ನು ವಿವಿಧ ಯೋಜನೆಯಡಿ ನಿರ್ಮಿಸಲಾಗಿದ್ದು, ಗ್ರಾಪಂಗೆ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಸಾರ್ವಜನಿಕ ಆಸ್ತಿಯಾಗಿರುವ ಸಮುದಾಯ ಭವನಗಳನ್ನು ಕಾಪಾಡುವಲ್ಲಿ ಸಾರ್ವಜನಿಕರ ಪಾತ್ರವೂ ಮುಖ್ಯವಾಗಿದೆ. ಸಂಘ-ಸಂಸ್ಥೆಯ ಸಭೆ ನಡೆಸುವುದು, ತಿಂಗಳ ಸಭೆ ನಡೆಸಲು ಬಳಸಬೇಕು. ಭವನದ ಸುತ್ತಮುತ್ತ ಸ್ವಚ್ಛವಾಗಿಡಬೇಕು. ಗ್ರಾಪಂಗೆ ಭವನವನ್ನು ಸುಸ್ಥಿತಿಯಲ್ಲಿಡುವಂತೆ ನಿರ್ದೇಶನ ನೀಡಲಾಗಿದೆ. ಜಯರಾಂ, ತಾಪಂ ಇಒ, ಶೃಂಗೇರಿ

Advertisement

Udayavani is now on Telegram. Click here to join our channel and stay updated with the latest news.

Next