Advertisement

ನಿರ್ವಹಣೆಯಿಲ್ಲದೆ ನರಳುತ್ತಿವೆ ಕೆರೆಕಟ್ಟೆ

04:17 PM Mar 04, 2020 | Suhan S |

ಕೊಪ್ಪಳ: ಕಳೆದ 18 ವರ್ಷದಲ್ಲಿ 12 ವರ್ಷ ಬರದ ಭೀಕರ ಕಂಡಿರುವ ತಾಲೂಕಿನ ರೈತರು ಹನಿ ನೀರಿಗೂ ಪರಿತಪಿಸುತ್ತಿದ್ದಾರೆ. ತಾಲೂಕಿನಲ್ಲಿ 25 ಕೆರೆಗಳಿದ್ದರೂ ನೀರಿನ ಬವಣೆ ತಪ್ಪಿಲ್ಲ. ನಿರ್ವಹಣೆ ಇಲ್ಲದೇ ಮರಂ, ಇಟಿಗೆ ಭಟ್ಟಿಗಳ ಅಬ್ಬರಕ್ಕೆ ನಲುಗಿ ಹೋಗುತ್ತಿವೆ. ನಮ್ಮೂರಿನ ಜೀವಜಲ ಕೆರೆಗಳನ್ನು ಉಳಿಸಿಕೊಡಿ ಎನ್ನುವ ಕೂಗು ಸರ್ಕಾರದ ಮಟ್ಟಕ್ಕೆ ಕೇಳಿದ್ದರೂ ಸರ್ಕಾರ ಕಾಳಜಿ ತೋರದಿರುವುದು ಬೇಸರದ ಸಂಗತಿ.

Advertisement

ಜಿಲ್ಲೆಯಲ್ಲಿ ಮೊದಲೇ ಮಳೆಯ ಕೊರತೆ ಇದೆ. ಮಳೆ ಬಂದರೆ ಸಾಕು ಎಂದು ಜನ ಕಾದು ಕುಳಿತಿದ್ದಾರೆ. ಆದರೆ ಕೆರೆಯಲ್ಲಿ ಹನಿ ನೀರು ಇಂಗದಂತಹ ಪರಿಸ್ಥಿತಿ ಬಂದೊದಗುತ್ತಿದೆ. ಇದರಿಂದ ಕೆರೆಯಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಹಾಗಾಗಿ ಕೃಷಿ ಬದುಕಿಗೆ ದೊಡ್ಡ ಪೆಟ್ಟು ಬೀಳಲಾರಂಭಿಸಿದೆ.

ಮರಂ-ಇಟ್ಟಿಗೆ ಭಟ್ಟಿಗಳ ಅಬ್ಬರ: ತಾಲೂಕಿನ ವಿವಿಧ ಭಾಗದಲ್ಲಿ ಇಟ್ಟಿಗೆ ಭಟ್ಟಿಗಳು ತಲೆಯೆತ್ತಿವೆ. ಅದರಲ್ಲೂ ಗಿಣಗೇರಿ, ಹೊಸಳ್ಳಿ, ಬುಡಶೆಟ್ನಾಳ ಸೇರಿದಂತೆ ಇತರೆ ಭಾಗದಲ್ಲಿರುವ ಕೆರೆಯ ಮರಂನ್ನು ಎಗ್ಗಿಲ್ಲದೇ ಸಾಗಾಟ ಮಾಡಲಾಗುತ್ತಿದೆ. ಕೆಲವು ಜನನಾಯಕರ ಹಿಂಬಾಲಕರು ನಿರ್ಭಯವಾಗಿ ಕೆರೆಯಲ್ಲಿನ ಮರಂ ಸಾಗಾಟ ಮಾಡುತ್ತಿದ್ದಾರೆ. ಮರಂ ಸಾಗಾಟ ಮಾಡೋದನ್ನೇ ಉದ್ಯಮವನ್ನಾಗಿ ಮಾಡಿಕೊಂಡಿರುವುದು ದುರ್ದೈವದ ಸಂಗತಿ. ಇನ್ನೂ ಕಳೆದ ಕೆಲ ವರ್ಷಗಳ ಹಿಂದಷ್ಟೇ ಗಿಣಗೇರಿ ಕೆರೆಯಲ್ಲಿನ ಮರಂನ್ನು ಇಟ್ಟಿಗೆ ಭಟ್ಟಿಗಳಿಗೆ ಉಚಿತವಾಗಿ ತೆಗೆದುಕೊಂಡು ಹೋಗಲು ಜಿಲ್ಲಾಡಳಿತವೇ ಸೂಚನೆ ನೀಡಿದ್ದು ವಿಚಿತ್ರದ ಸಂಗತಿ. ರಸ್ತೆ ನಿರ್ಮಾಣಕ್ಕೂ ಕೆರೆ ಮಣ್ಣಿನ ಮೇಲೆಯೇ ಎಲ್ಲರ ಕಣ್ಣು ಬಿದ್ದಿದೆ. ಗುತ್ತಿಗೆದಾರರಂತೂ ಕೆರೆಯ ಮಣ್ಣು ಸಾಗಾಟ ಮಾಡಿ ತಮ್ಮ ಉದ್ಯಮ ಸಲೀಸಾಗಿಸಿಕೊಳ್ಳುತ್ತಿದ್ದಾರೆ.

ಕೊಪ್ಪಳ ತಾಲೂಕಿನ ಕೆರೆಗಳೆಷ್ಟು?: ಸಣ್ಣ ನೀರಾವರಿ ಇಲಾಖೆಯಡಿ ಕೊಪ್ಪಳ ತಾಲೂಕಿನಲ್ಲಿ 25 ಕೆರೆಗಳಿವೆ. ಗಿಣಗೇರಿ ಕೆರೆ, ಕೆರೆಹಳ್ಳಿ, ಕಲ್‌ತಾವರಗೇರಾ ಕೆರೆ, ಹೊಸೂರು, ಹಿರೇಕಾಸನಕಂಡಿ, ಬುಡಶೆಟ್ನಾಳ, ಅಬ್ಬಿಗೇರಿ, ಇಂದರಗಿ, ಕಾಮನೂರು, ಘಟ್ಟಿರಡ್ಡಿಹಾಳ, ಗಬ್ಬೂರು, ವಣಬಳ್ಳಾರಿ, ಕೂಕನಪಳ್ಳಿ, ಚಳ್ಳಾರಿ, ಹಾಲಹೊಸಳ್ಳಿ, ಹಣವಾಳ, ಹಿರೇಬೊಮ್ಮನಾಳ, ಚಿಕ್ಕಬೊಮ್ಮನಾಳ, ಬೂದಗುಂಪಾ, ದನಕನದೊಡ್ಡಿ, ಇಂದಿರಾನಗರ, ಜಬ್ಬಲಗುಡ್ಡ, ಹುಚ್ಚೇಶ್ವರಕ್ಯಾಂಪ್‌, ಇರಕಲ್‌ಗ‌ಡಾ ಕೆರೆ, ಹಂದ್ರಾಳ ಕೆರೆಗಳಿವೆ.

ಕೆರೆ ನಿರ್ವಹಣೆಗೆ ಪುಡಿಗಾಸು: ರಾಜ ಮಹಾರಾಜರ ಕಾಲದಿಂದಲೂ ಜನಸಾಮಾನ್ಯರಿಗೆ ಕೆರೆಕಟ್ಟೆಗಳೇ ಜಲಮೂಲವಾಗಿವೆ. ಜಲವಿದ್ದ ಕಡೆ ಮನುಷ್ಯನದ ಜೀವನ ರೂಪಗೊಂಡಿದೆ. ಅಂತಹ ಕೆರೆಗಳೇ ಇಂದು ಆಧುನೀಕರಣದ ಭರಾಟೆಗೆ ಜೀವ ಕಳೆದುಕೊಳ್ಳುತ್ತಿವೆ. ಸರ್ಕಾರವಂತೂ ಸಣ್ಣ ಹಾಗೂ ದೊಡ್ಡ ಕೆರೆಗಳನ್ನು ರಕ್ಷಣೆ ಮಾಡುವ ಕಾಯಕವನ್ನೇ ಮರೆತುಬಿಟ್ಟಿದೆ. ವರ್ಷಪೂರ್ತಿ ಅಗತ್ಯವಿರುವ ನೀರು ಹಿಡಿದಿಡುವ ಕೆರೆ ನಿರ್ವಹಣೆಗೆ ಲಕ್ಷ ರೂ. ಕೊಟ್ಟು ಕೈ ತೊಳೆದುಕೊಳ್ಳುತ್ತಿದೆ ಸರ್ಕಾರ. ಕಳೆದ 2015-16ನೇ ಸಾಲಿನಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಯಡಿ ತಾಲೂಕಿಗೊಂದು ಕೆರೆ ಅಭಿವೃದ್ಧಿಗೆ ಕೋಟಿ ರೂ. ಕೊಟ್ಟಿದ್ದು ಬಿಟ್ಟರೆ ಮತ್ತೆ ಅನುದಾನ ಕೊಟ್ಟಿಲ್ಲ.

Advertisement

ವರ್ಷ 14 ಲಕ್ಷ!: ತಾಲೂಕಿನಲ್ಲಿ 25 ಕೆರೆಗಳಿವೆ. ಆದರೆ 11 ಕೆರೆಗಳಿಗೆ ಅದು ಲಕ್ಷ ರೂ. ನಷ್ಟು ಅನುದಾನ ಕೊಟ್ಟಿದೆ. ಗಿಣಗೇರಿ ಕೆರೆಗೆ-1 ಲಕ್ಷ, ಕೆರೆಹಳ್ಳಿ-1 ಲಕ್ಷ, ಕಲ್‌ ತಾವರಗೇರಾ ಕೆರೆ-1 ಲಕ್ಷ, ಹೊಸೂರು ಕೆರೆ-74 ಸಾವಿರ, ಹಿರೇಕಾಸನಕಂಡಿ ಕೆರೆ-75 ಸಾವಿರ, ಬುಡಶೆಟ್ನಾಳ ಕೆರೆ- 4.25 ಲಕ್ಷ, ಅಬ್ಬಿಗೇರಿ ಕೆರೆ-1 ಲಕ್ಷ, ಇಂದರಗಿ ಕೆರೆ-1.72 ಲಕ್ಷ, ಕಾಮನೂರು ಕೆರೆಗೆ- 51 ಸಾವಿರ, ಘಟ್ಟರಡ್ಡಿಹಾಳ ಕೆರೆ-95 ಸಾವಿರ, ಗಬ್ಬೂರು ಕೆರೆ-1 ಲಕ್ಷ ಸೇರಿ ಒಟ್ಟು 14 ಲಕ್ಷ ರೂ. ಹಣ ನಿರ್ವಹಣೆಗೆ ಕೊಟ್ಟಿದ್ದು ಬಿಟ್ಟರೆ ಬೇರೆ ಅನುದಾನವಿಲ್ಲ.

ಯೋಜನೆ ಆಮೆಗತಿ: ಇನ್ನೂ ಕಳೆದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನ ಒಟ್ಟು 13 ಕೆರೆಗಳಿಗೆ ತುಂಗಭದ್ರಾ ಡ್ಯಾಂನಿಂದ ನೀರು ತುಂಬಿಸಲು 290 ಕೋಟಿ ರೂ. ಘೋಷಣೆಯಾಗಿದೆ. ಟೆಂಡರ್‌ ಪ್ರಗತಿ ಮುಗಿದು ಕಾಮಗಾರಿ ಆರಂಭಿಸಲಾಗಿದೆ. ಆದರೆ ಕಾಮಗಾರಿ ಮಾತ್ರ ಆಮೆಗತಿಗಿಂತಲೂ ನಿಧಾನವಾಗಿ ನಡೆದಿದೆ. ಕೆರೆಗೆ ನೀರು ತುಂಬಿಸುವ ಯೋಜನೆ ಒಳ್ಳೆಯದೇ ಆಗಿದ್ದರೂ, ಅದಕ್ಕೆ ವೇಗ ಸಿಗುತ್ತಿಲ್ಲ. ಬಾಯಾರಿದ ಭೂಮಿಗೆ ನೀರು ಹರಿಸುತ್ತಿಲ್ಲ. ಕೆರೆ ತುಂಬಿಸುವ ಯೋಜನೆ ಇತ್ತೀಚೆಗಂತೂ ರಾಜಕಾರಣಿಗಳಿಗೆ ಪ್ರಚಾರದ ಸರಕಾಗಿದೆ.

ತಾಲೂಕಿನ ಬುಡಶೆಟ್ನಾಳ ಕೆರೆ 300 ಎಕರೆ ಪ್ರದೇಶದಷ್ಟಿದೆ. ಸರ್ಕಾರ ಕೆರೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಅಂತರ್ಜಲ ಹೆಚ್ಚಳಕ್ಕೆ ಒತ್ತು ನೀಡಬೇಕು. 2009ರಲ್ಲಿ ತುಂಬಿದ್ದ ನಮ್ಮ ಕೆರೆ ಇಲ್ಲಿವರೆಗೂ ತುಂಬಿಲ್ಲ. ಹಿರೇಹಳ್ಳದಲ್ಲಿ ಮಳೆ ನೀರು ಹರಿದು ವ್ಯರ್ಥವಾಗುವ ಬದಲು ನಮ್ಮ ಕೆರೆಗೆ ತುಂಬಿಸುವ ಯೋಜನೆ ಮಾಡಲಿ. ಇದರಿಂದ ಅಂತರ್ಜಲ ಹೆಚ್ಚಾಗಿ ಸಾವಿರಾರು ರೈತರು ಬದುಕು ಕಟ್ಟಿಕೊಳ್ಳಲಿದ್ದಾರೆ.  –ಸುರೇಶ ಯಲಬುರ್ಗಿ, ಬುಡಶೆಟ್ನಾಳ ಗ್ರಾಮಸ್ಥ

ಸಣ್ಣ ನೀರಾವರಿ ಇಲಾಖೆಯಡಿ ಬರುವ ಕೆರೆಗಳಿಗೆ ಸರ್ಕಾರ ಪ್ರತಿವರ್ಷ ನಿರ್ವಹಣೆಗೆ ಕೆರೆಗೆ ಅನುಸಾರ ಅನುದಾನ ಕೊಡುತ್ತದೆ. ಅದರಲ್ಲಿ ಜಂಗಲ್‌ ಕಟ್ಟಿಂಗ್‌, ಅಂತಹ ವಿಶೇಷ ಅನುದಾನ ಬಂದಿಲ್ಲ. ಕೆರೆ ಅಭಿವೃದ್ಧಿಗೆ ನಾವು ಕೇಳಿದರೆ ಸರ್ಕಾರ ಹಣ ಕೊಡಲಿದೆ. ಈಗಾಗಲೇ 290 ಕೋಟಿ ರೂ. ಕೆರೆ ತುಂಬಿಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ.  –ವಿನೋದಕುಮಾರ, ಸಣ್ಣ ನೀರಾವರಿ ಇಲಾಖೆ ಅಭಿಯಂತರ, ಕೊಪ್ಪಳ

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next