ಬೆಂಗಳೂರು: ಘನ ತ್ಯಾಜ್ಯ ನಿರ್ವಹಣೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಪಂಗೆ ಜಾಗದ ಕೊರತೆ ಎದುರಾಗಿದೆ. ಆ ಹಿನ್ನೆಲೆಯಲ್ಲಿಯೇ ಅವಶ್ಯ ಜಾಗದ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸುವ ಸಂಬಂಧ ಸಮಿತಿ ರಚನೆಗೆ ಮುಂದಾಗಿದೆ. ತ್ಯಾಜ್ಯ ಮುಕ್ತ ಗ್ರಾಮಗಳನ್ನು ನಿರ್ಮಾಣ ಮಾಡುವ ಸಂಬಂಧ ಪಣ ತೊಟ್ಟಿರುವ ನಗರ ಜಿಪಂ, ಸ್ವಚ್ಛ ಭಾರತ್ ಮಿಷನ್ ಗ್ರಾಮ ಯೋಜನೆಯಡಿ ಸುಮಾರು 50 ಗ್ರಾಪಂಗಳಲ್ಲಿ ಘನ ತ್ಯಾಜ್ಯ ಘಟಕಗಳನ್ನು ನಿರ್ಮಾಣ ಮಾಡಲು ಸಿದ್ಧತೆ ನಡೆಸಿದೆ.
ಆದರೆ ಈ ಪೈಕಿ ಕೇವಲ 3 ಘಟಕಗಳಿಗೆ ಮಾತ್ರ ಸರ್ಕಾರದಿಂದ ಭೂಮಿ ಮಂಜೂರಾಗಿದೆ. ಉಳಿದ ಘಟಕಗಳಿಗೆ ಜಾಗದ ಕೊರತೆ ಎದುರಾಗಿದೆ. ಅಷ್ಟೇ ಅಲ್ಲ ಸ್ವಚ್ಛತೆಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ರೂಪಿಸಿರುವ ಹಲವು ಯೋಜನೆಗಳಿಗೆ ಅಗತ್ಯ ಭೂಮಿ ಸಮಸ್ಯೆ ಉಂಟಾಗಿದೆ.
ಈ ಎಲ್ಲಾ ಅಂಶಗಳನ್ನು ಮನಗಂಡಿದ್ದ ನಗರ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ಮನವಿ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಭೂ ಸಮಸ್ಯೆ ಬಗೆಹರಿಸುವ ಸಂಬಂಧ ಸಮಿತಿ ರಚಿಸಿ, ಶೀಘ್ರದಲ್ಲೇ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಸಮಿತಿಯಲ್ಲಿ ಯಾರಿದ್ದಾರೆ?: ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಅಲ್ಲದೆ ಆಯಾ ಭಾಗದ ಉಪತಹಶೀಲ್ದಾರ್, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಕಂದಾಯ ವೃತ್ತ ನಿರೀಕ್ಷಕರು ಹಾಗೂ ಸರ್ವೆಯರ್‌ಗಳು ಈ ಸಮಿತಿಯಲ್ಲಿದ್ದಾರೆ. ಶೀಘ್ರದಲ್ಲೇ ಈ ಸಮಿತಿ ಸಂಬಂಧ ಪಟ್ಟ ಸ್ಥಳಕ್ಕೆ ಭೇಟಿ ನೀಡಿ ವರದಿ ತಯಾರಿಸಲಿದೆ. ಬಳಿಕ ಈ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಿದ್ದು ಆ ನಂತರ ಜಿಲ್ಲಾಧಿಕಾರಿಗಳು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಅನೇಕಲ್ ತಾಲೂಕು ವ್ಯಾಪ್ತಿಗೆ ಅಲ್ಲಿನ ತಾಲೂಕು ಕಾರ್ಯನಿರ್ವಾಹಕ ದೇವರಾಜೇಗೌಡ ಅಧ್ಯಕ್ಷರಾಗಿರುತ್ತಾರೆ. ಬೆಂಗಳೂರು ಉತ್ತರ ತಾಲೂಕಿಗೆ ಕಿಶೋರ್ ಕುಮಾರ್, ಬೆಂಗಳೂರು ದಕ್ಷಿಣಕ್ಕೆ ಉಮೇಶ್ ಹಾಗೂ ಬೆಂಗಳೂರು ಪೂರ್ವ ವ್ಯಾಪ್ತಿಗೆ ಮಂಜುನಾಥ್ ಅಧ್ಯಕ್ಷರಾಗಿರುತ್ತಾರೆ ಎಂದು ನಗರ ಜಿಪಂನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳು ಸ್ಥಳಗಳಿಗೆ ಭೇಟಿ ನೀಡಿ ಜಾಗದ ಬಗ್ಗೆ ಸಮರ್ಪಕ ಮಾಹಿತಿ ಕಲೆ ಹಾಕಲಿದ್ದಾರೆ. ಈ ಸಮಿತಿ ನೀಡಿದ ವರದಿ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಹಿಂದೆ ನಗರ ಜಿಪಂ ಸಾಮಾನ್ಯ ಸಭೆಯಲ್ಲಿ ಕಸ ವಿಲೇವಾರಿ ಸಮಸ್ಯೆ ಮುನ್ನೆಲೆಗೆ ಬಂದಿತ್ತು.
ಆ ವೇಳೆ ಸದಸ್ಯರು ಕೆಲವು ಕಡೆಗಳಲ್ಲಿ ಸರ್ಕಾರಿ ಜಾಗವಿದ್ದು, ಅದನ್ನು ಬಳಸಿಕೊಳ್ಳಲು ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದರು. ಯಾವ ಪ್ರದೇಶಗಳಲ್ಲಿ ಸರ್ಕಾರಿ ಭೂಮಿಯಿದೆ ಎಂಬ ಮಾಹಿತಿ ನೀಡಿದರೆ ತಕ್ಷಣ ಜಾಗ ಗುರುತಿಸಲು ಕ್ರಮಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರು. ಆಗ ನೀಡಿದ್ದ ಭರವಸೆಯಂತೆ ಈಗ ಸ್ಥಳ ಗುರುತಿಸುವಿಕೆ ಸಂಬಂಧ ಸಮಿತಿ ರಚನೆ ಮಾಡಿದ್ದಾರೆ.
ಘನ ತ್ಯಾಜ್ಯ ನಿರ್ವಹಣೆ ಸಂಬಂಧಿಸಿದಂತೆ ಜಾಗದ ಕೊರತೆ ಎದುರಾಗಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳು ಸಮಿತಿಯೊಂದನ್ನು ರಚನೆ ಮಾಡಿದ್ದಾರೆ. ಈ ಸಮಿತಿ ಶೀಘ್ರದಲ್ಲೇ ವರದಿ ನೀಡಲಿದದು,ಆ ನಂತರ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ.
-ಕೆ.ಶಿವರಾಮೇಗೌಡ, ನಗರ ಜಿಪಂ ಸಿಇಒ
* ದೇವೇಶ ಸೂರಗುಪ್ಪ