ಚಿಂಚೋಳಿ: ತೆಲಂಗಾಣ ರಾಜ್ಯದ ಗಡಿಯಲ್ಲಿರುವ ತಾಲೂಕಿನ ಕುಂಚಾವರಂ ವಲಯದಲ್ಲಿ ಇನ್ನು ತೆಲಗು ಭಾಷೆ ಪ್ರಾಬಲ್ಯ ಇರುವುದರಿಂದ ಕನ್ನಡ ಭಾಷೆಯೇ ಇಲ್ಲಿಯ ಜನರಿಗೆ ಮರೀಚಿಕೆಯಾಗಿದೆ.
ಅಲ್ಲದೇ ಇಲ್ಲಿನ ಶಾಲೆಗಳಲ್ಲಿ ಕನ್ನಡ ಭಾಷೆ ಶಿಕ್ಷಕರ ಕೊರತೆಯಿಂದಾಗಿ ಶಾಲೆಗಳಲ್ಲಿ ಮಕ್ಕಳು ತೆಲಗು ಭಾಷೆಯಲ್ಲಿಯೇ ಕಲಿಯಬೇಕಾಗಿದೆ. ಕರ್ನಾಟಕ ಸರಕಾರ ಗಡಿಪ್ರದೇಶದ ಕನ್ನಡ ಶಾಲೆಗಳನ್ನು ನಿರ್ಲಕ್ಷ್ಯ ಮಾಡಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಕುಂಚಾವರಂ ಗಡಿಪ್ರದೇಶದಲ್ಲಿ ಕಳೆದ 50 ವರ್ಷಗಳ ಹಿಂದೆ ತೆಲಗು ಮಾಧ್ಯಮ ಶಾಲೆಗಳು ನಡೆಯುತ್ತಿದ್ದವು. ಆದರೆ, ಕಾಲ ಕ್ರಮೇಣ ಗಡಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಪ್ರಾರಂಭ ಆಗಿದ್ದರು ಸಹ ಇಲ್ಲಿ ಕನ್ನಡ ಶಿಕ್ಷಕರ ಕೊರತೆಯಿಂದ ಕೆಲ ಶಾಲೆಗಳಲ್ಲಿ ತೆಲಗು ಭಾಷೆಯಲ್ಲಿಯೇ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ.
ಶಾಲೆಗಳಲ್ಲಿ ಮಕ್ಕಳಿಗೆ ಪೀಠೊಪಕರಣಗಳು, ವಿಜ್ಞಾನದ ಪ್ರಯೋಗಾಲಯಗಳು ಮತ್ತು ಕಂಪ್ಯೂಟರ್ ಮತ್ತು ಪಾಠೊಪಕರಣಗಳು, ವಿಜ್ಞಾನ ಮತ್ತು ಗಣಿತ, ಇಂಗ್ಲಿಷ್ ಭಾಷೆಗಳ ಶಿಕ್ಷಕರ ಕೊರತೆಯಿಂದಾಗಿ ಮಕ್ಕಳು ಕಲಿಕೆಯಲ್ಲಿಪ್ರಗತಿ ಕಾಣುತ್ತಿಲ್ಲ ಎಂದು ಹೇಳಲಾಗುತ್ತಿದೆ. ತೆಲಂಗಾಣ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿ ತಾಲೂಕಿನ ಕುಂಚಾವರಂ ಗಡಿಭಾಗದ ಶಿವರಾಮಪುರ, ಶಿವರೆಡ್ಡಿಪಳ್ಳಿ, ಮಗದಂಪುರ, ಬೋನಸಪೂರ, ಲಚಮಾಸಾಗರ, ಲಿಂಗಾನಗರ, ವೆಂಕಟಾಪುರ, ಜಿಲವರ್ಷ, ಕುಂಚಾವರಂ, ಕಿಷ್ಟಾಪುರ, ಜಟ್ಟೂರ, ಪೋತಂಗಲ, ಹಲಕೋಡಾ, ಬೈರಂಪಳ್ಳಿ, ಕುಸರಂಪಳ್ಳಿ, ಕರ್ಚಖೇಡ, ಚತ್ರಸಾಲ, ಗಣಾಪುರ, ಭಕ್ತಂಪಳ್ಳಿ, ಕಲ್ಲೂರ, ಸೋಮಲಿಂಗದಳ್ಳಿ, ಶಾದೀಪುರ, ಚಿಕ್ಕನಿಂಗದಳ್ಳಿ ಗ್ರಾಮಗಳಲ್ಲಿ ಇನ್ನು ತೆಲಗು ಭಾಷೆ ಪ್ರಾಬಲ್ಯ ಹೆಚ್ಚಾಗಿದೆ. ಇಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡುವರು ಅತಿ ವಿರಳವಾಗಿದ್ದಾರೆ. ಇನ್ನಾದರೂ ರಾಜ್ಯ ಸರಕಾರ ಗಡಿಪ್ರದೇಶದಲ್ಲಿ ಕನ್ನಡ ಭಾಷೆ ಜಾಗೃತಿ, ಜಾಥಾ, ಬೀದಿ ನಾಟಕ, ನಾಮಫಲಕಗಳನ್ನು ಅಳವಡಿಸುವುದು, ಉಪನ್ಯಾಸ ಏರ್ಪಡಿಸುವ ಮೂಲಕ ಜನರಿಗೆ ಜಾಗೃತಿಗೊಳಿಸಬೇಕಾಗಿದೆ.