Advertisement

“ರಾಷ್ಟ್ರೀಯ ಶಿಕ್ಷಣ ನೀತಿ’ಜಾರಿಗೆ ಬೋಧಕರ ಕೊರತೆ

01:23 AM Jul 02, 2021 | Team Udayavani |

ಮಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಶಿಫಾರಸಿನಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಾಲ್ಕು ವರ್ಷದ ಪದವಿ ಕೋರ್ಸ್‌ ಆರಂಭಿಸಲು ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಅಧೀನ 207 ಕಾಲೇಜುಗಳಲ್ಲಿ ಸಿದ್ಧತೆ ನಡೆದಿದೆ. ಆದರೆ ಬಹುತೇಕ ಕಾಲೇಜುಗಳಲ್ಲಿ ಶೇ. 50ರಷ್ಟು ಬೋಧಕ ಸಿಬಂದಿಯ ಕೊರತೆಯಿದ್ದು ಶಿಕ್ಷಣ ನೀತಿಯ ಜಾರಿ ಬಹುದೊಡ್ಡ ಸವಾಲಾಗಿದೆ.

Advertisement

ವಿ.ವಿ.ಯಲ್ಲಿ ಶೇ. 40ರಷ್ಟು ಮತ್ತು ಹಲವು ಕಾಲೇಜುಗಳಲ್ಲಿ ಶೇ. 50ರಷ್ಟು ಬೋಧಕ ಹುದ್ದೆಗಳು ಖಾಲಿಯಿವೆ. ಕೊರತೆ ಇರುವಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗುತ್ತದೆಯಾದರೂ ಅವರಿಗೆ ಕನಿಷ್ಠ ಗೌರವ ಧನ ಎಂಬ ಬೇಸರವಿದೆ.

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 310 ಪ್ರಾಂಶುಪಾಲರು, 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಇತ್ತೀಚೆಗೆ ಸರಕಾರ ಆದೇಶಿಸಿದೆ. ನೂತನ ಶಿಕ್ಷಣ ನೀತಿ ಜಾರಿಯಾಗುವ ಮೊದಲೇ ಈ ಹುದ್ದೆಗಳು ಭರ್ತಿಯಾದರೆ ಮಾತ್ರ ಪ್ರಯೋಜನವಾದೀತು ಎನ್ನುತ್ತವೆ  ಕಾಲೇಜು ಮೂಲಗಳು.

ನಿವೃತ್ತಿ ಆದ ಹುದ್ದೆ ಖಾಲಿಯೇ! :

ಬಹುತೇಕ ಕಾಲೇಜುಗಳಲ್ಲಿ ಹಿರಿಯ ಉಪನ್ಯಾಸಕರು ನಿವೃತ್ತರಾಗುತ್ತಿದ್ದು, ಹೊಸ ನೇಮಕಾತಿ ನಡೆಯುತ್ತಿಲ್ಲ. ಕೆಲವು ಸರಕಾರಿ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹೊರತು ಪೂರ್ಣಮಟ್ಟದ ಬೋಧಕರೇ ಇಲ್ಲ. ಪ್ರಾಂಶುಪಾಲರೇ ಇಲ್ಲದ ಕಾಲೇಜುಗಳೂ ಇವೆ. ಅಂತಹ ಕಾಲೇಜುಗಳಲ್ಲಿ ನೂತನ ಶಿಕ್ಷಣ ನೀತಿ ಜಾರಿ ಬಹುದೊಡ್ಡ ಸವಾಲು.

Advertisement

ಉಪನ್ಯಾಸಕರು ಎಲ್ಲ ಪಾಠಕ್ಕೂ ಸೈ!:

ಇಲ್ಲಿಯವರೆಗೆ ಉಪನ್ಯಾಸಕರು ನಿರ್ದಿಷ್ಟ ವಿಷಯ ಆಧಾರಿತ ಪಾಠಕ್ಕೆ ಸೀಮಿತವಾಗಿದ್ದರು. ಇನ್ನು ಮುಂದೆ ಉಪನ್ಯಾಸಕ ಎಲ್ಲ ವಿಷಯಗಳನ್ನೂ ಬೋಧಿಸಲು ಶಕ್ತನಾಗಿರಬೇಕು ಎಂಬುದು ಹೊಸ ಶಿಕ್ಷಣ ನೀತಿಯ ಸಾರಾಂಶ.

ತರಬೇತಿ ಅತ್ಯಗತ್ಯ:

ನೂತನ ಶಿಕ್ಷಣ ನೀತಿಯಲ್ಲಿ ಪ್ರಸಕ್ತ ವಿದ್ಯಮಾನ ಹಾಗೂ ಉದ್ಯೋಗ ಆಧಾರಿತವಾಗಿ ಪಠ್ಯಕ್ರಮ ಇರಲಿದ್ದು, ವಿದ್ಯಾರ್ಥಿಗಳಿಗೆ ಬೋಧಿಸುವ ಮುನ್ನ ಉಪನ್ಯಾಸಕ ವರ್ಗಕ್ಕೆ ಆಮೂಲಾಗ್ರ ತರಬೇತಿ ಅತ್ಯಾವಶ್ಯಕವಾಗಿದೆ. ಉಳಿದಿರುವ ಅಲ್ಪಾವಧಿಯಲ್ಲಿ ತರಬೇತಿ ನೀಡಿ ನೂತನ ಶಿಕ್ಷಣ ನೀತಿಯ ಜಾರಿ ತತ್‌ಕ್ಷಣಕ್ಕೆ ಕಷ್ಟಸಾಧ್ಯ ಎನ್ನಲಾಗುತ್ತಿದೆ.

ಬಾಕಿ ಉಳಿದ ಪರೀಕ್ಷೆ:

ಜು. 6ಕ್ಕೆ ತೀರ್ಮಾನ : ವಿ.ವಿ. ವ್ಯಾಪ್ತಿಯಲ್ಲಿ ಇದುವರೆಗೆ ಬೆಸ ಸೆಮಿಸ್ಟರ್‌ಗಳ ಪರೀಕ್ಷೆ ಶೇ. 62ರಷ್ಟು ನಡೆದಿದ್ದು ಶೇ. 38ರಷ್ಟು ಬಾಕಿ ಇದೆ. ಅದನ್ನು ಮುಗಿಸಲು ಕನಿಷ್ಠ 15 ದಿನ ಬೇಕು. ಸಾಮಾನ್ಯವಾಗಿ ಮೇಯಲ್ಲಿ ಪರೀಕ್ಷೆ ನಡೆಸಿ ಜುಲೈ ಒಳಗೆ ಫ‌ಲಿತಾಂಶ ಬರುತ್ತಿತ್ತು. ಈ ಬಾರಿ ತಡವಾಗಿರುವುದರಿಂದ ಅಂತಿಮ ಸೆಮಿಸ್ಟರ್‌ ಮುಗಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಈ ನಡುವೆ ಈಬಾರಿ ಪರೀಕ್ಷೆಯೇ ಬೇಕಾ? ಬೇಡವಾ? ಎಂಬ ಬಗ್ಗೆಯೂ ಜು. 6ರಂದು ಮಹತ್ವದ ಸಭೆ ಆಯೋಜನೆಗೊಂಡಿದೆ.

ಮಂಗಳೂರು ವಿ.ವಿ. ಒಳಪಟ್ಟಂತೆ ಎಲ್ಲ ಕಾಲೇಜುಗಳಲ್ಲಿಯೂ ನೂತನ ಶಿಕ್ಷಣ ನೀತಿ ಜಾರಿ ಸಂಬಂಧ ಮೊದಲ ಸುತ್ತಿನ ಮಾತುಕತೆ ನಡೆದಿದೆ. ಬೋಧಕ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಬೇಕಿದ್ದು, ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. – ಪ್ರೊ| ಪಿ.ಎಸ್‌. ಯಡಪಡಿತ್ತಾಯ, ಮಂಗಳೂರು ವಿ.ವಿ. ಕುಲಪತಿ

ಚಿಂತನ ಮಂಥನ ಪ್ರಗತಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸಂಬಂಧ ವಿ.ವಿ.ಯಲ್ಲಿ ತಜ್ಞರ ಪ್ರತ್ಯೇಕ ಸಮಿತಿ ರಚಿಸಿದ್ದು, ವಿವಿಧ ವಿಚಾರಗಳ ಬಗ್ಗೆ ಚಿಂತನ ಮಂಥನ ನಡೆಯುತ್ತಿದೆ. ಒಂದೆರಡು ತಿಂಗಳಲ್ಲಿ ಪೂರ್ಣ ಚಿತ್ರಣ ದೊರೆಯಲಿದೆ. – ಪ್ರೊ| ಕಿಶೋರ್‌ ಕುಮಾರ್‌,ಮಂಗಳೂರು ವಿ.ವಿ. ಆಡಳಿತ ಕುಲಸಚಿವ

 

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next