ಹುಳಿಯಾರು: ಮಳೆರಾಯನೇ ವಾರದಲ್ಲಿ ಆರು ದಿನವೂ ಬಾರಪ್ಪ, ಆದರೆ ಗುರುವಾರ ಮಾತ್ರ ಬರಬೇಡಪ್ಪ ಎಂದು ಬೇಡುವ ಪರಿಸ್ಥಿತಿ ಹುಳಿಯಾರಿನ ಸಂತೆ ರೈತರಿಗೆ ಬಂದೊದಗಿದೆ. ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗುರುವಾರ ಸಂತೆ ಮಳೆ ಬಂದರೆ ಕೆಸರುಗದ್ದೆಯಲ್ಲಿ ಓಡಾಡಿದ ಅನುಭವ ಗ್ರಾಹಕರದ್ದು.
ಹೌದು… ಹುಳಿಯಾರಿನಲ್ಲಿ ಗುರುವಾರ ಮಳೆ ಬಂದರೆ ಸಂತೆ ವ್ಯಾಪಾರಸ್ಥರು, ಗ್ರಾಹಕರು ತೊಂದರೆಪಡುವುದು ಖಂಡಿತ. ಇಡೀ ಸಂತೆ ಕೆಸರುಗದ್ದೆಯಾಗುತ್ತದೆ. ತರಕಾರಿಗಳು, ದಿನಸಿ ಪದಾರ್ಥಗಳು ನೀರುಪಾಲಾಗುತ್ತವೆ. ರೈತರು ನಷ್ಟ ಅನುಭವಿಸು ವಂತಾಗುತ್ತದೆ. ಇದರಿಂದ ಜೀವನ ನಿರ್ವಹಣೆ ಕಷ್ಟ.
ಮೂಲಸೌಲಭ್ಯವಿಲ್ಲ: ಹುಳಿಯಾರಿನಲ್ಲಿ ಸುಮಾರು ವರ್ಷಗಳಿಂದ ನಡೆಯುವ ಗುರುವಾರದ ಸಂತೆ ತುಂಬಾ ಪ್ರಸಿದ್ಧಿ. ನೂರಾರು ಹಳ್ಳಿಗಳಿಂದ ಸಾವಿರಾರು ಜನರು ಈ ಸಂತೆಗೆ ಬರುತ್ತಾರೆ. ಆದರೆ ಈ ಸಂತೆ ನಡೆ ಯುವ ಸ್ಥಳದಲ್ಲಿ ಕನಿಷ್ಠ ಮೂಲ ಸೌಲಭ್ಯವನ್ನೂ ಸ್ಥಳೀಯಾಡಳಿತ ಕಲ್ಪಿಸಿಲ್ಲ. ಪರಿಣಾಮ ವ್ಯಾಪಾರಿಗಳು ರಸ್ತೆಯಲ್ಲಿ, ಮಣ್ಣಿನಲ್ಲಿಯೇ ಕುಳಿತು ವ್ಯಾಪಾರ ಮಾಡ ಬೇಕು. ಪ್ಲಾಸ್ಟಿಕ್ ಮತ್ತು ಟಾರ್ಪಾಲ್ಗಳ ನೆರಳಿನಲ್ಲಿ ಅಂಗಡಿಗಳನ್ನು ಹಾಕಿಕೊಳ್ಳಬೇಕು. ಮಳೆ ಜೊತೆ ಗಾಳಿ ಬಂದರಂತೂ ಇವರ ಪಾಡು ದೇವರೆ ಗತಿ.
ಬೇಸಿಗಾಲದಲ್ಲಿ ಗ್ರಾಹಕರ ಸಂಖ್ಯೆಯೂ ಕಡಿಮೆ ಇರುತ್ತದೆ. ಮಳೆ ಬಂದರೆ ತಾನು ನೆನೆದು ಸೊಪ್ಪು, ತರ ಕಾರಿ ರಕ್ಷಿಸಬೇಕು. ಕೆಸರಿನ ಮಧ್ಯೆ ಕುಳಿತು ವ್ಯಾಪಾರ ಮಾಡುವ ದುಸ್ಥಿತಿ ವ್ಯಾಪಾರಸ್ಥರದ್ದು. ಕಷ್ಟ ಸಹಿಸಿ ಕೊಂಡು ವ್ಯಾಪಾರಕ್ಕೆ ನಿಂತರೆ ಮಳೆಗೆ ಗ್ರಾಹಕರ ಸಂಖ್ಯೆಯೂ ಕಡಿಮೆ ಇರುತ್ತದೆ. ಇದರಿಂದ ವ್ಯಾಪಾರವೂ ನಷ್ಟವಾಗುತ್ತದೆ.
ಪಪಂ ನಿರ್ಲಕ್ಷ್ಯ: ಸಂತಗೆ ಬರುವ ಎಲ್ಲ ರೈತರಿಂದಲೂ ಸ್ಥಳೀಯ ಪಟ್ಟಣ ಪಂಚಾಯತಿ ಸುಂಕ ವಸೂಲಿ ಮಾಡುತ್ತದೆ. ಇದು ವಾರ್ಷಿಕ ನಾಲ್ಕೈದು ಲಕ್ಷ ರೂ. ದಾಟುತ್ತದೆ. ಆದರೆ ಸುಂಕ ಸಂಗ್ರಹಿಸುವ ಪಪಂ ಇಲ್ಲಿಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸಿಲ್ಲ. ನೆಲ ಹಾಸು ಮಾಡಿಲ್ಲ, ಮೇಲ್ಗಡೆ ಹೊದಿಕೆಯೂ ಇಲ್ಲ. ಸುಮಾರು ವರ್ಷಗಳಿಂದ ಇದೇ ಪರಿಸ್ಥಿತಿ ಇದ್ದರೂ ಚುನಾಯಿತ ಪ್ರತಿನಿಧಿಗಳು ಮತ್ತು ಪಪಂ ಅಧಿಕಾರಿಗಳು ಗಮನ ಹರಿಸದೆ ನಿರ್ಲಕ್ಷಿಸಿದ್ದಾರೆ.
ಹಿಡಿಶಾಪ: ಪ್ರತಿಬಾರಿಯೂ ಸಂತೆ ಸುಂಕ ಸಂಗ್ರಹದ ಹರಾಜು ಆಗುವ ಸಂದರ್ಭ ರೈತರು ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರೂ, ಕೆಲವೇ ದಿನಗಳಲ್ಲಿ ಮೌಲ ಸೌಕರ್ಯ ಕಲ್ಪಿಸುವ ಭರವಸೆ ನೀಡಿ ಹರಾಜು ಮುಗಿಸಿ ದುಡ್ಡು ತೆಗೆದುಕೊಂಡು ಮತ್ತೆ ಈ ಕಡೆ ತಲೆ ಹಾಕುವುದಿಲ್ಲ. ಪರಿಣಾಮ ಸಾಲ ಸೂಲ ಮಾಡಿ ಸಂತೆ ವ್ಯಾಪಾರಕ್ಕೆ ಬರುವವರು ಗುರುವಾರ ಮಾತ್ರ ಮಳೆಗೆ ಬಾರದಿದ್ದರೆ ಸಾಕು ಎಂದು ಪ್ರಾರ್ಥಿಸುವಂತಾಗಿದೆ. ಹಾಗೆಯೇ ಮೂಲ ಸೌಕರ್ಯ ಕಲ್ಪಿಸದ ಜನಪ್ರತಿನಿಧಿ ಗಳು ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುವಂತಾಗಿದೆ.
● ಎಚ್.ಬಿ.ಕಿರಣ್ ಕುಮಾರ್