Advertisement

ತಾಲೂಕಾದ್ರೂ ಚಿನ್ನದ ನಾಡಿಗಿಲ್ಲ ಮೂಲ ಸೌಕರ್ಯ

03:39 PM Sep 25, 2019 | Suhan S |

ಕೋಲಾರ: ಶತಮಾನಗಳ ಇತಿಹಾಸ ಹೊಂದಿರುವ, ವಿಶ್ವ ವಿಖ್ಯಾತ ಚಿನ್ನದ ಗಣಿಗಳ ತವರೂರಾದ ಕೆಜಿಎಫ್ ಸ್ವಾತಂತ್ರ್ಯ ಬಂದ ಏಳು ದಶಕಗಳ ನಂತರವೂ ಪೂರ್ಣ ಪ್ರಮಾಣದ ತಾಲೂಕಾಗಿ ಮಾರ್ಪಟ್ಟಿಲ್ಲ ಎನ್ನುವುದೇ ಆಡಳಿತಾತ್ಮಕ ನಿರ್ಲಕ್ಷ್ಯದ ಹೆಗ್ಗುರುತಾಗಿದೆ.

Advertisement

ಕೇಂದ್ರಾಡಳಿತ ಪ್ರದೇಶ ಅಥವಾ ಮಹಾನಗರಗಳ ಮಾದರಿಯಲ್ಲಿ ಮೆಟ್ರೋಪಾಲಿಟನ್‌ ಸಂಸ್ಕೃತಿಯನ್ನು ಹೊಂದಿರುವ ಮಿನಿ ಇಂಗ್ಲೆಂಡ್‌ ಎಂಬ ಅಡ್ಡ ಹೆಸರನ್ನು ಹೊಂದಿರುವ ಕೆಜಿಎಫ್ ನಗರಕ್ಕೆ ಇಡೀ ರಾಜ್ಯದಲ್ಲಿಯೇ ಮೊದಲಿಗೆ ರೈಲು ಮತ್ತು ವಿದ್ಯುತ್‌ ಸಂಪರ್ಕ ಪಡೆದ ನಗರವೆಂಬ ಹೆಗ್ಗಳಿಕೆಯೂ ಇದೆ. ಚಿನ್ನದ ಗಣಿಯಿಂದ ಅದಿರನ್ನು ಹೊರತೆಗೆಯುತ್ತಿರುವವರೆಗೂ ಕೆಜಿಎಫ್ ತನ್ನೆಲ್ಲಾ ಬೇಡಿಕೆ ಈಡೇರಿಸಿಕೊಳ್ಳುವ ಶಕ್ತಿ ಹೊಂದಿತ್ತು. ಆದರೆ, 20 ವರ್ಷಗಳ ಹಿಂದೆ ನಷ್ಟದ ನೆಪವೊಡ್ಡಿ ಚಿನ್ನದ ಗಣಿಗಳನ್ನು ಮುಚ್ಚಿದ ನಂತರವಷ್ಟೇ ಕೆಜಿಎಫ್ ನಾಗರಿಕರಿಗೆ ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿದ್ದವು.

ತಾಲೂಕು ಕೂಗು: ತಾಲೂಕಿಗೂ ಮೊದಲೇ ಕೆಜಿಎಫ್ ನಗರ ಪ್ರತ್ಯೇಕ ವಿಧಾನಸಭಾ ಕ್ಷೇತ್ರದ ಸ್ಥಾನವನ್ನು ಸಂಪಾದಿಸಿಕೊಂಡಿತ್ತು. ಆದರೆ, ಚಿನ್ನದ ಗಣಿ ಮುಚ್ಚಿದ ಆನಂತರವಷ್ಟೇ ಕೆಜಿಎಫ್ ಪ್ರತ್ಯೇಕ ತಾಲೂಕು ಆಗಬೇಕೆಂಬ ಕೂಗು ಅಲ್ಲಿನ ನಾಗರಿಕರಿಂದ ಕೇಳಿ ಬರುವಂತಾಯಿತು. ಕೆಜಿಎಫ್ ನ್ಯಾಯಾಲಯಕ್ಕೆ ನೂರು ವರ್ಷಗಳ ತುಂಬಿದ ಸಂಭ್ರಮಕ್ಕೆ 2016ರಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾಗ ಸುಪ್ರಿಂ ಕೋರ್ಟ್‌ ಜಸ್ಟೀಸ್‌ ಗೋಪಾಲಗೌಡರು ಕೆಜಿಎಫ್ಇ ನ್ನೂ ತಾಲೂಕು ಆಗದಿರುವ ಕುರಿತು ಆಕ್ಷೇಪ ವೆತ್ತಿದ್ದರು. ಸರ್ಕಾರದ ಲೋಪವನ್ನು ಎತ್ತಿ ತೋರಿಸಿದ್ದರು.

ಇದರ ಜೊತೆ ಜೊತೆಗೆ ಬಂಗಾರಪೇಟೆ ತಾಲೂಕಿನ ಭಾಗವೇ ಆಗಿದ್ದ ಹಿಂದೆ ಬಂಗಾರಪೇಟೆ ತಾಲೂಕಿನ ವಿಧಾನ ಸಭಾ ಕ್ಷೇತ್ರದ ಕೇಂದ್ರ ಸ್ಥಾನವೂ ಆಗಿದ್ದ ಬೇತಮಂಗಲ ತಾಲೂಕು ಕೇಂದ್ರವಾಗಬೇಕೆಂಬ ಬಗ್ಗೆ ದೊಡ್ಡ ಕೂಗು ಎದ್ದಿತ್ತು. ಇದಕ್ಕಾಗಿ ಹೋರಾಟಗಳು ಆರಂಭವಾಗಿದ್ದವು. ಆದರೆ, ಕೆಜಿಎಫ್ ನಗರದ ಇತಿಹಾಸವನ್ನು ಗಮನಿಸಿದ ರಾಜ್ಯ ಸರ್ಕಾರ 16 ಮಾರ್ಚ್‌ 2017ರಲ್ಲಿ ಪ್ರತ್ಯೇಕ ತಾಲೂಕಾಗಿ ಘೋಷಿಸಿತ್ತು.

ಅನುಷ್ಠಾನವಾಗಿಲ್ಲ?: ರಾಜ್ಯ ಸರ್ಕಾರವು ಒಂದೂ ವರೆ ವರ್ಷಗಳ ಹಿಂದೆ ಕೆಜಿಎಫ್ ಅನ್ನು ಪ್ರತ್ಯೇಕ ತಾಲೂಕಾಗಿ ಮಾರ್ಪಡಿಸಿದರೂ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಆದರೆ, ತಾಲೂಕು ಕೇಂದ್ರವಾಗುವ ಮುನ್ನವೇ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿದ್ದ ಕೆಜಿಎಫ್ ತನ್ನದೇ ಆದ ಸೌಲಭ್ಯಗಳನ್ನು ಹಿಂದೆಯೇ ಪಡೆದುಕೊಂಡಿತ್ತು.

Advertisement

ಕೆಜಿಎಫ್ ಪ್ರತ್ಯೇಕ ಪೊಲೀಸ್‌ ಜಿಲ್ಲೆಯಾಗಿತ್ತು. ನಾಡಕಚೇರಿ, ಖಜಾನೆ, ನ್ಯಾಯಾಲಯ, ಕಾರ್ಮಿಕ ಇಲಾಖೆ, ಸಾರ್ವಜನಿಕ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಎಆರ್‌ಟಿಒ ಕಚೇರಿಯನ್ನು ಹೊಂದಿತ್ತು. ಶಿಕ್ಷಣ ಇಲಾಖೆಯು ಪ್ರತ್ಯೇಕ ಬಿಇಒ ಕಚೇರಿ ಯನ್ನು ಹಿಂದೆಯೇ ಆರಂಭಿಸಿತ್ತು. ಇತ್ತೀಚಿಗೆ ಪಾಸ್‌ಪೋರ್ಟ್‌ ಸೇವಾ ಕೇಂದ್ರವನ್ನು ಪಡೆದುಕೊಂಡಿತ್ತು. ಇದರ ಹೊರತು ಕೆಜಿಎಫ್ ಪ್ರತ್ಯೇಕ ತಾಲೂಕಾದ ನಂತರ ಉಳಿದ್ಯಾವ ಇಲಾಖೆ ಗಳಿಗೂ ಸ್ವಂತ ಕಟ್ಟಡ ಸಿಕ್ಕಿಲ್ಲ. ಅಧಿಕಾರಿ ಸಿಬ್ಬಂದಿ ನೇಮಕವಾಗಿಲ್ಲ.

ತಹಶೀಲ್ದಾರ್ನೇಮಕ: ಕೆಜಿಎಫ್ ಅನ್ನು ಪೂರ್ಣ ಪ್ರಮಾಣದ ತಾಲೂಕಾಗಿ ಮಾರ್ಪಡಿಸುವ ವಿಚಾರದಲ್ಲಿ ತಹಶೀಲ್ದಾರ್‌ ನೇಮಕವಾಯಿತು. ಆದರೆ, ತಹಶೀಲ್ದಾರ್‌ ಕಚೇರಿಗೂ ಸೂಕ್ತ ಸ್ಥಳಾವಕಾಶ ಸಿಕ್ಕಿಲ್ಲ. ನಾಡಕಚೇರಿಯ ಬಳಿಯೇ ನೂತನವಾಗಿ ನಿರ್ಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಟ್ಟಡವನ್ನೇ ತರಾತುರಿಯಲ್ಲಿ ತಹಶೀಲ್ದಾರ್‌ ಕಚೇರಿಯನ್ನಾಗಿ ಮಾರ್ಪಡಿಸಿಕೊಳ್ಳಲಾಗಿದೆ.

ಪ್ರತ್ಯೇಕ ಅನುದಾನ ಬರುತ್ತಿಲ್ಲ: ತಾಪಂ ಇಒ ನೇಮಕವಾಗಿದ್ದರೂ ಜಿಪಂ ಅಡಿಯಲ್ಲಿಯೇ ಇಂದಿಗೂ ಕೆಲಸ ನಿರ್ವಹಿಸುತ್ತಿದ್ದಾರೆ. ಏಕೆಂದರೆ, ಪ್ರತ್ಯೇಕ ಕಚೇರಿ ಇಂದಿಗೂ ಆರಂಭವಾಗಿಲ್ಲ. ಉಳಿದಂತೆ ಎಲ್ಲಾ ಇಲಾಖೆ ಗಳಡಿ ಬಂಗಾರಪೇಟೆ ತಾಲೂಕಿಗೆ ಸಿಗುವ ಅನುದಾನವನ್ನೇ ಜನಸಂಖ್ಯೆ ಆಧಾರದ ಮೇಲೆ ಹಂಚಿಕೊಳ್ಳಬೇಕಾಗಿದೆ. ಕೆಜಿಎಫ್ ತಾಲೂಕಿಗೆ ಲೋಕೋ ಪಯೋಗಿ, ಸಣ್ಣ ನೀರಾವರಿ ಯಂತ ಕೆಲವು ಇಲಾಖೆಗಳನ್ನು ಹೊರತು ಪಡಿಸಿ ಉಳಿದ್ಯಾವ ಇಲಾಖೆಗೂ ಪ್ರತ್ಯೇಕ ಅನುದಾನ ಬರುತ್ತಿಲ್ಲ.

ಸಿಕ್ಕಿದ್ದೇನು?: ತಹಶೀಲ್ದಾರ್‌ ನೇಮಕವಾಗಿ ಕಚೇರಿ ಕೆಜಿಎಫ್ಕೇಂ ದ್ರ ಸ್ಥಾನದಲ್ಲಿ ಆರಂಭವಾಗಿದ್ದರಿಂದ ವಿದ್ಯಾರ್ಥಿ ಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಬಂಗಾರಪೇಟೆಗೆ ಅಲೆಯುವುದು ತಪ್ಪಿದೆ. ತಾಲೂಕು ವ್ಯಾಪ್ತಿಗೆ ಬರುವ ರಾಬರ್ಟ್‌ಸನ್‌ಪೇಟೆ, ಕ್ಯಾಸಂಬಳ್ಳಿ, ಬೇತಮಂಗಲ ಹೋಬಳಿ ಜಮೀನು ಪಹಣಿಯನ್ನು ಆನ್‌ಲೈನ್‌ನಲ್ಲಿ ಕೆಜಿಎಫ್ನಲ್ಲಿಯೇ ಪಡೆದುಕೊಳ್ಳಬಹುದಾಗಿದೆ. ಆದರೆ, ಸ್ವಂತ ಹಾಗೂ ಸುಭದ್ರ ಕಟ್ಟಡ ಇಲ್ಲದೇ ಇರುವುದರಿಂದ ಕಂದಾಯ ಇಲಾಖೆಯ ಹಳೇ ದಾಖಲೆಗಳು ಇಂದಿಗೂ ಬಂಗಾರಪೇಟೆ ದಾಖಲೆಗಳ ಕೋಣೆಯಲ್ಲಿಯೇ ಇವೆ. ಹೊಸ ತಾಲೂಕಿನಲ್ಲಿ ಉಪನೋಂದಣಾಧಿಕಾರಿಗಳ ಕಚೇರಿ ಆರಂಭವಾಗದಿರುವುದರಿಂದ ಜಮೀನು ನೋಂದಣಿಗೆ ಬಂಗಾರಪೇಟೆಗೆ ಹೋಗಬೇಕಿದೆ.

ಮಿನಿ ವಿಧಾನಸೌಧ: ಕೆಜಿಎಫ್ ನಗರದಲ್ಲಿ ಸುಸಜ್ಜಿತ ಮಿನಿ ವಿಧಾನಸೌಧ ನಿರ್ಮಾಣ ಮಾಡುವ ಪ್ರಯತ್ನ ಶಾಸಕಿ ರೂಪಕಲಾರಿಂದ ನಡೆದಿದೆ. ಈಗಾಗಲೇ ನಾಲ್ಕು ಎಕರೆ ಜಾಗ ಗುರುತಿಸಲಾಗಿದೆ. ಇಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾ ಣಕ್ಕೆ ತಯಾರಿ ನಡೆದಿದೆ. ನೆರೆ ಸಂತ್ರಸ್ತರಿಗೆ ನೀಡುವ ಸಲುವಾಗಿ ಬಿಜೆಪಿ ಸರ್ಕಾರ ವಿವಿಧ ಕಾಮಗಾರಿಗಳ ಅನುದಾನವನ್ನು ಹಿಂಪಡೆದಿದೆ. ಇದರಿಂದ ಟೆಂಡರ್‌ ಪ್ರಕ್ರಿಯೆಗಳು ವಿಳಂಬವಾಗುವಂತಾಗಿದೆ. ಆದರೆ, ಈಗಾಗಲೇ ಟೆಂಡರ್‌ ಪ್ರಕ್ರಿಯೆ ಹಂತ ದಲ್ಲಿದ್ದ ಕೆಜಿಎಫ್ ಸಾರ್ವಜನಿಕ ತಾಲೂಕು ಆಸ್ಪತ್ರೆಯನ್ನು 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿದ್ದು, ಇದು ಟೆಂಡರ್‌ ಹಂತದಲ್ಲಿದೆ. ಶೀಘ್ರ ಕಾಮಗಾರಿ ಆರಂ ಭವಾಗಲಿದೆ. ಜೊತೆಗೆ ಪೌರ ಕಾರ್ಮಿಕ ಕುಟುಂಬಗಳಿಗೆ ಪ್ರತ್ಯೇಕವಾಗಿ ವಸತಿ ಸಮುಚ್ಛಯ ನಿರ್ಮಾಣ ಮಾಡಲು ಶಾಸಕಿ ಪ್ರಯತ್ನಿಸುತ್ತಿದ್ದಾರೆ.

ಉಳಿದಂತೆ ಹೊಸ ತಾಲೂಕು ಘೋಷಣೆಯ ಸಂದರ್ಭದಲ್ಲಿ ವಿವಿಧ ಇಲಾಖೆಗಳ ನಾಮಫ‌ಕಲಗಳನ್ನು ಸಾಂಕೇತಿಕ ವಾಗಿ ಉದ್ಘಾಟಿಸಲಾಯಿತಾದರೂ, ಈ ಎಲ್ಲಾ ನಾಮ ಫ‌ಲಕಗಳನ್ನು ಅಳವಡಿಸಲೂ ಸೂಕ್ತ ಕಟ್ಟಡ, ಅಧಿಕಾರಿ, ಸಿಬ್ಬಂದಿ ಇಲ್ಲದ ಕಾರಣದಿಂದ ಹಾಸ್ಟೆಲ್‌ ವೊಂದರಲ್ಲಿ ದಾಸ್ತಾನು ಮಾಡಲಾಗಿದೆ.

 

  • ಕೆ.ಎಸ್‌.ಗಣೇಶ್‌
Advertisement

Udayavani is now on Telegram. Click here to join our channel and stay updated with the latest news.

Next