Advertisement

ಜಕ್ಕಲಿ ಗ್ರಂಥಾಲಯದಲ್ಲಿ ಇಕ್ಕಟ್ಟು

11:53 AM Nov 02, 2019 | Suhan S |

ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದಲ್ಲಿ 2003ರಲ್ಲಿ ಸ್ಥಳೀಯ ಹಾಲು ಉತ್ಪದಕರ ಸಂಘದ ಕಟ್ಟಡದಲ್ಲಿ ಗ್ರಂಥಾಲಯ ಆರಂಭಿಸಲಾಗಿದೆ. ಓದುಗರ ಸಂಖ್ಯೆ ಅಧಿಕವಾಗಿದ್ದರೂ ಗ್ರಂಥಾಲಯ ಮಾತ್ರ ಉನ್ನತೀಕರಣಗೊಂಡಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗೆ ತಕ್ಕಂತೆ ಪುಸ್ತಕಗಳ ಬೇಡಿಕೆಯೂ ಹೆಚ್ಚಿದೆ.

Advertisement

ಗ್ರಾಮದ ಸಾರ್ವಜನಿಕ ಗ್ರಂಥಾಲಯಕ್ಕೆ ಸ್ವಂತ ಕಟ್ಟಡವಿದ್ದು, 45-60 ಆಸನ ಸಾಮರ್ಥ್ಯ ಹೊಂದಿದೆ. ಪ್ರಸ್ತುತ ಗ್ರಂಥಾಲಯಕ್ಕೆ 500ರಿಂದ 700 ಓದುಗರು ಆಗಮಿಸುತ್ತಿದ್ದು, ಇರುವ ಕಟ್ಟಡ ಯಾವುದಕ್ಕೂ ಸಾಲುತ್ತಿಲ್ಲ. ಕೆಲವರು ಆಸನದಲ್ಲಿ ಕುಳಿತು ಓದುತ್ತಿದ್ದರೆ, ಹಲವರು ನಿಂತುಕೊಂಡೇ ಓದುವ ಸ್ಥಿತಿಯಿದೆ. ಮಹಡಿಯಲ್ಲಿರುವ ಗ್ರಂಥಾಲಯದ ಮೆಟ್ಟಿಲು ಹತ್ತಲು ವೃದ್ಧರು, ಅಂಗವಿಕಲರಿಗೆ ಸಮಸ್ಯೆಯಾಗುತ್ತಿದೆ. ಗ್ರಂಥಾಲಯದಲ್ಲಿ ಮೂಲ ಸೌಲಭ್ಯಗಳ ಕೊರತೆಯಿದೆ.

ಗ್ರಾಮದಲ್ಲಿ ಸುಮಾರು 10 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದೆ. 1 ಪೂರ್ವ ಪ್ರಾಥಮಿಕ ಶಾಲೆ, 5 ಅಂಗನವಾಡಿ ಕೇಂದ್ರಗಳು, ಗ್ರಾ.ಪಂ, ಆಯುರ್ವೇದ ಆಸ್ಪತ್ರೆ, 3 ಪ್ರಾಥಮಿಕ ಶಾಲೆ, 1 ಪ್ರೌಢಶಾಲೆ ಸೇರಿದಂತೆ ವಿವಿಧ ಇಲಾಖೆಗಳು ಕಾರ್ಯನಿರ್ವಹಿಸುತ್ತಲಿವೆ. 2003ರಲ್ಲಿ ಪ್ರಾರಂಭವಾದ ಈ ಗ್ರಂಥಾಲಯದಲ್ಲಿ ಮೊದಲಿಗೆ ಸುಮಾರು 700 ಪುಸ್ತಕಗಳಿದ್ದವು. ನಂತರದಲ್ಲಿ ಇಲಾಖೆಯಿಂದ ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಪುಸ್ತಕಗಳು ಸೇರಿ ಇಂದು ಸುಮಾರು ಮೂರು ಸಾವಿರ ಪುಸ್ತಕಗಳಿವೆ. ಸದ್ಯ 162 ಜನ ಸದಸ್ಯತ್ವ ಪಡೆದುಕೊಂಡಿದ್ದಾರೆ. ಇಲ್ಲಿ ರಾಜ್ಯಮಟ್ಟದ ಎರಡು ದಿನಪತ್ರಿಕೆ, 1 ವಾರ ಪತ್ರಿಕೆ ಮಾತ್ರ ಬರುತ್ತಿದ್ದು, ಇದಕ್ಕೆ ಸರ್ಕಾರದಿಂದ ಕೇವಲ ತಿಂಗಳಿಗೆ 400 ರೂ. ಮಾತ್ರ ಅನುದಾನ ನೀಡುತ್ತಿದ್ದು, ಉಳಿದಂತೆ ಯಾವುದೇ ವಾರಪತ್ರಿಕೆ, ಮಾಸಿಕ ಪತ್ರಿಕೆಗಳು ಲಭ್ಯವಿಲ್ಲ. ಸದ್ಯ ಗ್ರಂಥಾಲಯಕ್ಕೆ ಸಿಬ್ಬಂದಿ ಕೊರತೆ ಕೂಡ ಇದೆ. ಓದುಗರಿಗೆಂದು ನಿಗದಿ ಮಾಡಿರುವ ಸ್ಥಳವು ಇಕ್ಕಟ್ಟಾಗಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ.

ಸರ್ಕಾರ ಗ್ರಾಮೀಣ ಗ್ರಂಥಾಲಯಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ಯುವಕರನ್ನು ಪ್ರೇರೇಪಿಸಬೇಕಾಗಿದೆ. ಇಂದಿನ ಅನೇಕ ಯುವಕರು ಮೊಬೈಲ್‌ ಬಳಕೆಯಿಂದ ಪುಸ್ತಕ ಓದುವ ಹವ್ಯಾಸ ಕಡಿಮೆ ಮಾಡಿದ್ದಾರೆ. ಅದಕ್ಕಾಗಿ ಸರ್ಕಾರಗಳು ಗ್ರಂಥಾಲಯಗಳನ್ನು ಹೈಟೆಕ್‌ ಗ್ರಂಥಾಲಯಗಳನ್ನು ನಿರ್ಮಿಸುವುದು ಅವಶ್ಯಕವಾಗಿದೆ. ಶೌಚಾಲಯ, ಕುಡಿಯುವ ನೀರು ಅವಶ್ಯಕವಾಗಿದೆ. -ಹರ್ಷವರ್ಧನ ದೊಡ್ಡಮೇಟಿ, ಗ್ರಾ.ಪಂ ಸದಸ್ಯ

 ಜಕ್ಕಲಿ ಗ್ರಾಮದಲ್ಲಿ ಗ್ರಂಥಾಲಯಕ್ಕೆ ಉತ್ತಮ ಕಟ್ಟಡವಿದೆ. ಆದರೆ, ಇಲಾಖೆ ವತಿಯಿಂದ ಯುವಕರಿಗೆ ಅನುಕೂಲವಾಗುವ ರೀತಿಯ ಸ್ಪರ್ಧಾತ್ಮಕ ಪುಸ್ತಕಗಳು ಅವಶ್ಯಕವಾಗಿವೆ. ಅಲ್ಲದೇ ವೃದ್ಧರು, ಅಂಗವಿಕಲರಿಗೆ ಮನೆ ಮನೆಗೆ ತೆರಳಿ ಪುಸ್ತಕಗಳು ನೀಡುವ ಯೋಜನೆ ಜಾರಿಯಾಗುವುದು ಅವಶ್ಯಕವಾಗಿದೆ. ಇದರಿಂದ ವೃದ್ಧರು, ಅಂಗವಿಕಲರು ಹೆಚ್ಚಿನ ಜ್ಞಾನ ಸಂಪಾದಿಸಬಹುದು. –ಅಶೋಕ ಮುಕ್ಕಣ್ಣವರ, ಗ್ರಂಥಾಲಯ ಮೇಲ್ವಿಚಾರಕ

Advertisement

 

-ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next