ಅಮೀನಗಡ: ಭಾರತೀಯ ದೇವಾಲಯಗಳ ತೊಟ್ಟಿಲು ಖ್ಯಾತಿಯ ಐಹೊಳೆ ರಾಷ್ಟ್ರೀಯ ಪ್ರವಾಸಿ ತಾಣ. ಬಾದಾಮಿ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡ ಇಲ್ಲಿನ ಹಲವು ಸ್ಮಾರಕಗಳು ವಿಶ್ವದ ಜನರ ಗಮನ ಸೆಳೆದಿವೆ.
ಆದರಿಲ್ಲಿ ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಿಲ್ಲ. ಪ್ರವಾಸಿಗರು ಬಿಡಿ ಇಲ್ಲಿ ವಾಸಿಸುವ ಜನರಿಗೂ ಬಿದ್ದ ಮನೆ ಕಟ್ಟಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲ. ಐಹೊಳೆಯ ಸೌಂದರ್ಯ ವೀಕ್ಷಿಸಲು ಇಲ್ಲಿಗೆ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ.ಆದರೆ ಕುಡಿಯಲು ಶುದ್ಧ ನೀರಿಲ್ಲ. ಸುಲಭ ಶೌಚಾಲಯಗಳಿಲ್ಲ. ಸ್ವತ್ಛತೆಯಂತೂ ಇಲ್ಲವೇ ಇಲ್ಲ. ಇದರಿಂದ ಇಲ್ಲಿ ಆಗಮಿಸುವ ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನಲಾಗಿದೆ.
ಪ್ರವಾಸಿಗರಿಗೆ ನೀರಿಲ್ಲ: ಐಹೊಳೆ ನೋಡಲು ದೇಶವಿದೇಶಗಳಿಂದ ಬರುವ ಪ್ರವಾಸಿಗರು ಶುದ್ಧ ಕುಡಿಯುವ ನೀರಿಲ್ಲದೇ ಪರದಾಡುವಂತಾಗಿದೆ. ಇಲ್ಲಿಗೆ ಬರುವ ಭಾರತೀಯ ಪ್ರಜೆಗಳಿಗೆ 30ರೂ., ವಿದೇಶ ಪ್ರವಾಸಿಗರಿಗೆ 300ರೂ ಶುಲ್ಕವಿದೆ. ಆದರೆ ಅವರಿಗೆ ಶುದ್ಧ ಕುಡಿಯುವ ನೀರು ಪೂರೈಸಿಲ್ಲ. ನೀರು ಪೂರೈಸುವ ಸಾಮಗ್ರಿಗಳಿದ್ದರೂ ಹಲವಾರು ವರ್ಷಗಳಿಂದ ಅದರಲ್ಲಿ ನೀರು ಮಾತ್ರ ಬಂದಿಲ್ಲ. ಹೀಗಾಗಿ ಅವುಗಳು ತುಕ್ಕು ಹಿಡಿದಿವೆ. ಕೇವಲ ತೋರಿಕೆಗೆ ಮಾತ್ರ ಅದನ್ನು ಇಡಲಾಗಿದೆ. ಇದರಿಂದಪ್ರವಾಸಿಗರು ಹಿಡಿಶಾಪ ಹಾಕುತ್ತಿದ್ದಾರೆ.
ಸುಲಭ ಶೌಚಾಲಯವಿಲ್ಲ: ಇಲ್ಲಿ ಸುಲಭ ಶೌಚಾಲಯವಿಲ್ಲ. ಪ್ರವಾಸಿ ಕೇಂದ್ರಗಳ ಒಳಗಡೆಯಿರುವ ಶೌಚಾಲಯಗಳಿಗೆ ಹೋಗಬೇಕಾದರೆ ಪ್ರವಾಸಿ ಇಲಾಖೆ ಸಿಬ್ಬಂದಿ ಅವಕಾಶ ನೀಡಲ್ಲ. ಮೊದಲು ಟಿಕೆಟ್ ತೆಗೆದುಕೊಂಡು ಹೋಗಬೇಕೆಂಬ ನಿಯಮ ಅಳವಡಿಸಿಕೊಂಡಿದೆ. ಕೆಲ ಸಂದರ್ಭದಲ್ಲಿ ಪ್ರವಾಸಿಗರಿಗೆ ಬೇಗನೆ ಶೌಚಾಲಯಕ್ಕೆ ಹೋಗಲು ಸ್ಥಳಾವಕಾಶವೇ ಇಲ್ಲ.ಇದರಿಂದ ಪ್ರವಾಸಿಗರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಗಬ್ಬೆದ್ದ ಚರಂಡಿ: ದುರ್ಗಾ ದೇವಾಲಯದ ಮುಂಭಾಗದ 200 ಮೀ. ಉದ್ದದ ಚರಂಡಿ ಗಬ್ಬೆದ್ದು ನಾರುತ್ತಿದೆ. ಈ ಚರಂಡಿಯ ಅಸ್ವಚ್ಛತೆ ಯಿಂದ ಪ್ರವಾಸಿಗರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ. ಪ್ರಾಚ್ಯ ಇಲಾಖೆಯವರು ಸ್ವತ್ಛ ಭಾರತ ಎಂದು ತಿಂಗಳಿಗೊಂದು ಕಾರ್ಯಕ್ರಮ ಮಾಡುತ್ತಾರೆ. ಆದರೆ ಆ ಚರಂಡಿ ಮಾತ್ರ ಸ್ವತ್ಛ ಆಗುತ್ತಿಲ್ಲ. ಇತ್ತ ಗ್ರಾಪಂ ಕೂಡಾ ಈ ಬಗ್ಗೆ ವಿಚಾರ ಕೂಡಾ ಮಾಡುತ್ತಿಲ್ಲ. ಈ ಚರಂಡಿ ನಮ್ಮ ವ್ಯಾಪ್ತಿಗೆ ಬರಲ್ಲ ಎನ್ನುತ್ತಾರೆ ಗ್ರಾಪಂ ಸಿಬ್ಬಂದಿ.ಈ ಗೊಂದಲಗಳಿಂದ ಚರಂಡಿ ಮಾತ್ರ ಸ್ವತ್ಛತೆ ಕಾಣುತ್ತಿಲ್ಲ.
ಬೆಳಕು ಬೇಕು: ಐತಿಹಾಸಿಕ ಪ್ರವಾಸಿ ಕೇಂದ್ರಗಳಿಲ್ಲಿ ವಿದ್ಯುತ್ ಸಮಸ್ಯೆ ಇದೆ. ಇಲ್ಲಿರುವ ಪ್ರವಾಸಿ ತಾಣಗಳಿಗೆ ವಿದ್ಯುತ್ ಸೌಕರ್ಯವಿಲ್ಲ. ಹೀಗಾಗಿ ಪ್ರವಾಸಿ ತಾಣಗಳು ಬೆಳಕಿನಿಂದ ವಂಚಿತವಾಗಿವೆ. ಸಂಬಂಧಪಟ್ಟ ಇಲಾಖೆಯವರು ಕೂಡಲೇ ವಿದ್ಯುತ್ ಒದಗಿಸಿ ಸೌಂದರ್ಯಿಕರಣಕ್ಕೆ ಒತ್ತು ನೀಡಬೇಕೆಂಬುದು ಪ್ರವಾಸಿಗರ ಆಗ್ರಹ. ಗೈಡ್‌ಗಳಿಗಿಲ್ಲ ಜೀವನಾಧಾರ: ಲಕ್ಷಾಂತರ ಪ್ರವಾಸಿಗರಿಗೆ ಪ್ರವಾಸಿ ಸ್ಥಳಗಳ ಇತಿಹಾಸ ತಿಳಿಸುವ ಗೈಡ್‌ಗಳಿಗೆ ಸರ್ಕಾರದಿಂದ ಯಾವದೇ ರೀತಿಯ ಆದಾಯವಿಲ್ಲ.ಯಾವುದೇ ಸೌಲಭ್ಯಗಳೂ ಇಲ್ಲ. ತರಬೇತಿ ಕೊಟ್ಟಿರುವುದು ಬಿಟ್ಟರೆ ಬೇರ್ಯಾವ ಅನುಕೂಲ ಕಲ್ಪಿಸಿಲ್ಲ.ಯುನಿಫಾರಮ್ ಕೂಡಾ ವಿತರಿಸಿಲ್ಲ. ಪ್ರವಾಸಿಗರು ಕೊಡುವ ಬಿಡಿಗಾಸು ಹಣವೇ ಅವರಿಗೆ ಜೀವನಾಧಾರ.ಇತ್ತೀಚಿನ ದಿನಗಳಲ್ಲಿ ತರಬೇತಿ ಕೂಡ ಇಲ್ಲಾ. ಇದರಿಂದ ಗೈಡ್‌ಗಳ ಪರಿಸ್ಥಿತಿ ಅತಂತ್ರವಾಗಿದೆ. ಅವರ ಕುಟುಂಬಗಳ ಜೀವನ ನಿರ್ವಹಣೆ ಕಷ್ಟವಾಗಿದೆ.
-ಎಚ್.ಎಚ್. ಬೇಪಾರಿ