Advertisement

ಹಾಸ್ಟೆಲ್ ಗಳಲ್ಲಿ ಮೂಲಸೌಲಭ್ಯದ ಕೊರತೆ : ಅಸಮಾಧಾನ

01:39 AM Sep 18, 2019 | Team Udayavani |

ಮಡಿಕೇರಿ : ವಿದ್ಯಾರ್ಥಿಗಳು ಆಶ್ರಯ ಪಡೆದಿರುವ ಹಾಸ್ಟೆಲ್ಗಳಲ್ಲಿ ಮೂಲ ಸೌಲಭ್ಯದ ಕೊರತೆ ಕಂಡು ಬಂದಿದ್ದು, ಅಧಿಕಾರಿಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫ‌ಲರಾಗಿದ್ದಾರೆ ಎನ್ನುವ ಆರೋಪ ಮಡಿಕೇರಿ ತಾಲ್ಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಕೇಳಿ ಬಂದಿದೆ.

Advertisement

ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಸದಸ್ಯ ನಾಗೇಶ್‌ ಕುಂದಲ್ಪಾಡಿ ಹಾಸ್ಟೆಲ್ಗಳ ಅವ್ಯವಸ್ಥೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ವಿವಿಧ ಹಾಸ್ಟೆಲ್ಗಳಲ್ಲಿ ಸಿಬಂದಿಯ ಕೊರತೆ ಇದೆ. ಆದರೆ ಹುದ್ದೆ ಭರ್ತಿ ಮಾಡುವ ಸಂದರ್ಭ ಹಣದ ಬೇಡಿಕೆ ಇಡಲಾಗುತ್ತಿದೆ ಎಂದು ಆರೋಪಿಸಿದರು.

ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಹಾಸ್ಟೇಲ್ಗಳಲ್ಲಿ ಹೆಚ್ಚಿನ ಸಮಸ್ಯೆಯಿದ್ದು, ಬಡ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಜನೆ ಮಾಡುವ ಪರಿಸ್ಥಿತಿ ಬಂದೊದಗಿದೆ. ನಿರಂತರವಾಗಿ ವಿದ್ಯುತ್‌ ಕಡಿತವಾಗುತ್ತಿದೆ ಎಂದು ದೂರಿದರು.

ಜನರೇಟರ್‌, ಯುಪಿಎಸ್‌ ಮತ್ತು ಸೋಲಾರ್‌ ವ್ಯವಸ್ಥೆ ಇದೆಯಾದರು ಯಾವುದೂ ಕಾರ್ಯ ನಿರ್ವಹಿಸುತ್ತಿಲ್ಲ. ಸರಕಾರ ಲಕ್ಷಾಂತರ ರೂ.ಗಳನ್ನು ವಿದ್ಯಾರ್ಜನೆ ಮತ್ತು ಹಾಸ್ಟೆಲ್ಗಾಗಿ ಖರ್ಚು ಮಾಡುತ್ತಿದೆ. ಆದರೆ ಮಡಿಕೇರಿ ತಾಲೂಕಿನ ಹಾಸ್ಟೆಲ್ಗಳಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲ. ಅಧಿಕಾರಿಗಳಿಗೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಆಸಕ್ತಿ ಇಲ್ಲ ಎಂದು ನಾಗೇಶ್‌ ಕುಂದಲ್ಪಾಡಿ ಆರೋಪಿಸಿದರು.

Advertisement

ಶಿಕ್ಷಕರ ಕೊರತೆ

ಮತ್ತೋರ್ವ ಸದಸ್ಯ ಶ್ರೀಧರ್‌ ಮಾತನಾಡಿ, ಚೆಟ್ಟಿಮಾನಿ ಶಾಲೆಯಲ್ಲಿ 88 ವಿದ್ಯಾರ್ಥಿಗಳಿದ್ದು, ಕೇವಲ 3 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸುವಂತೆ ಒತ್ತಾಯಿಸಿದರು.

ಕೆಲವು ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆಯಿದ್ದು, ತತ್‌ಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಭಾಗಮಂಡಲದ ಕೋಪಟ್ಟಿ ವ್ಯಾಪ್ತಿಯ ಶಾಲೆಗಳು ಮಹಾಮಳೆಯಿಂದ ಹಾನಿಗೀಡಾಗಿದ್ದು, ಇಲ್ಲಿಯವರೆಗೆ ಶಿಕ್ಷಣ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಆರೋಪಿಸಿದರು.

ಮಳೆಹಾನಿಗೀಡಾದ ಶಾಲೆಗಳ ದುರಸ್ತಿಗೆ ತತ್‌ಕ್ಷಣ ಅನುದಾನ ಬಿಡುಗಡೆ ಮಾಡಬೇಕೆಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಕೊಡಪಾಲು ಗಣಪತಿ ಮಾತನಾಡಿ ಕಾರುಗುಂದ ಶಾಲೆ ಕೂಡ ಶಿಕ್ಷಕರ ಕೊರತೆಯನ್ನು ಎದುರಿಸುತ್ತಿದೆ ಎಂದರು.

ಮಳೆಹಾನಿ ಪ್ರದೇಶದ ಮೇಲ್ವಿಚಾರಣೆಯ ಕರ್ತವ್ಯದಲ್ಲಿದ್ದ ಕಾರಣ ಎಲ್ಲಾ ಶಾಲೆಗಳಿಗೆ ಭೇಟಿ ನೀಡಲು ಸಾಧ್ಯವಾಗಿಲ್ಲ, ಸದ್ಯದಲ್ಲಿಯೇ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕಾರುಗುಂದ ಶಾಲೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಮಾಹಿತಿ ನೀಡಿದರು.

ಪ್ರಾಕೃತಿಕ ವಿಕೋಪದಿಂದ ಹಾನಿಗೊಳ‌ಗಾದ 72 ಶಾಲೆಗಳ ಪಟ್ಟಿ ತಯಾರಿಸಲಾಗಿದೆ, ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ಮಾತನಾಡಿ, ಉಪಾಧ್ಯಕ್ಷ ಸಂತು ಸುಬ್ರಮಣಿ, ಸದಸ್ಯರು ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next