Advertisement

ಏಳಿಂಜೆ ಜಾಗ ಇದ್ದರೂ ಮನೆ ನಿವೇಶನ ಹಂಚಿಕೆಯಾಗಿಲ್ಲ

07:15 PM Sep 20, 2021 | Team Udayavani |

ಏಳಿಂಜೆ ಗ್ರಾಮದಲ್ಲಿ ಮೂಲಸೌಲಭ್ಯಗಳನ್ನು ಒದಗಿಸಬೇಕಿದೆ. ಹಲವು ಕಡೆ ಹೈಮಾಸ್ಟ್‌ ದೀಪಗಳ ಅಳವಡಿಕೆ, ಸಾರ್ವಜನಿಕ ರುದ್ರಭೂಮಿ ನಿರ್ಮಾಣ ಮಾಡುವುದು ಅಗತ್ಯಬೇಡಿಕೆಯಾಗಿವೆ. ಈ ಬಗ್ಗೆ ಸಂಬಂಧಪಟ್ಟವರ ಗಮನ ಸೆಳೆಯಲು ಉದಯವಾಣಿ ಸುದಿನದ “ಒಂದು ಊರು-ಹಲವು ದೂರು’ ಅಭಿಯಾನದ ಮೂಲಕ ಪ್ರಯತ್ನಿಸಲಾಗಿದೆ.

Advertisement

ಕಿನ್ನಿಗೋಳಿ: ಸರಕಾರಿ ಜಾಗ ಇದ್ದರೂ ಫ‌ಲಾನುಭವಿಗಳಿಗೆ ನಿವೇಶನ ಲಭಿಸದಿರುವುದು ಏಳಿಂಜೆ ಗ್ರಾಮದ ಪ್ರಮುಖ ಸಮಸ್ಯೆಯಾಗಿದೆ.

ಮೂಲ್ಕಿ ತಾಲೂಕಿನ ಐಕಳ ಗ್ರಾ.ಪಂ. ವ್ಯಾಪ್ತಿಯ ಏಳಿಂಜೆ ಗ್ರಾಮದ ಹೆಚ್ಚಿನ ಭಾಗವು ಕೃಷಿ ಪ್ರಧಾನ ಪ್ರದೇಶ. ಭತ್ತ, ಅಡಿಕೆ, ತೆಂಗು ಇಲ್ಲಿನ ಪ್ರಧಾನ ಬೆಳೆ. ಗ್ರಾಮವು ಶಾಂಭವಿ ನದಿಯ ತಟದಲ್ಲಿದೆ. ಸುಮಾರು 350 ಮನೆಗಳಿದ್ದು 2,500 ಸಾವಿರದಷ್ಟು ಜನಸಂಖ್ಯೆ ಹೊಂದಿದೆ.

ಏಳಿಂಜೆಯ ಕುಬಲದ ಸುಮಾರು 4 ಎಕರೆ ಸರಕಾರಿ ಜಾಗದಲ್ಲಿ ನಾಲ್ಕು ವರ್ಷಗಳ ಹಿಂದೆ ಮಂಜೂರಾತಿಗಾಗಿ ಪ್ರಯತ್ನ ನಡೆದರೂ ತಾಂತ್ರಿಕ ತೊಂದರೆ ಕಾರಣದಿಂದಾಗಿ ಫ‌ಲಾನುಭವಿಗಳಿಗೆ ಇನ್ನೂ ಮನೆಯ ನಿವೇಶನ ಹಂಚಿಕೆಯಾಗಿಲ್ಲ. ಹಲವು ಬಾರಿ ಗ್ರಾಮಸ್ಥರು ಮನೆ ನಿವೇಶನಕ್ಕೆ ಅರ್ಜಿ ಹಾಕಿದವರು ಇನ್ನು ನಿವೇಶನ ಸಿಕ್ಕಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ತಡೆಗೋಡೆ ನಿರ್ಮಾಣ ಶಾಶ್ವತ ಪರಿಹಾರ  :

Advertisement

ಏಳಿಂಜೆ ಗ್ರಾಮದಲ್ಲಿ ಶಾಂಭವಿ ನದಿಗೆ ಸೇರುವ ಚಿಕ್ಕ ನದಿಗಳ ಬಾಲಕಟ್ಟ ಕಿಂಡಿ ಅಣೆಕಟ್ಟು ನಾದುರಸ್ತಿಯಲ್ಲಿದೆ. ಇದನ್ನು ಸರಿಪಡಿಸಬೇಕಿದೆ. ಕಟ್ಟವನ್ನು ಎತ್ತರಿಸಿ ತಡೆಗೋಡೆ ನಿರ್ಮಾಣ ಮಾಡುವುದು ಅಗತ್ಯವಾಗಿದೆ.

ಇತರ ಸಮಸ್ಯೆಗಳೇನು? :

  • ಜ ಕುಕ್ಕಟ್ಟೆ ಕಿಟ್ಟಯಂಗಡಿ ಆದಿ ಜಾರಂದಾಯ ದೈವಸ್ಥಾನ ರಸ್ತೆ ದಾರಿ ದೀಪ ಇಲ್ಲವಾಗಿದ್ದು, ವ್ಯವಸ್ಥೆ ಮಾಡಬೇಕಿದೆ.
  • ಏಳಿಂಜೆ ಗ್ರಾಮದಲ್ಲಿ ಸಾರ್ವಜನಿಕ ರುದ್ರಭೂಮಿ ಇಲ್ಲ. ಈ ಹಿಂದೆ ಜಾಗ ಮಂಜೂರು ಆಗಿದ್ದರೂ ಅನುಷ್ಠಾನಗೊಂಡಿಲ್ಲ.
  • ಏಳಿಂಜೆ ಕೊಲ್ಯೂಟ್ಟುವಿನಿಂದ ತಿಟ್ಟಿಂಜೆ ಮೂಲಕವಾಗಿ ಆಗಿಂದಾಕಾಡು ಬಸ್‌ನಿಲ್ದಾಣ ಸಂಪರ್ಕಿಸುವ ರಸ್ತೆ ಅತೀ ಅಗತ್ಯವಾಗಿ ನಿರ್ಮಾಣವಾಗಬೇಕಿದೆ.
  • ಗ್ರಾಮೀಣ ಪ್ರದೇಶವಾಗಿರುವುದರಿಂದ ರಸ್ತೆಗಳಿಗೆ ದಾರಿ ದೀಪದ ಇದ್ದರೂ ಹೈಮಾಸ್ಟ್‌ ದೀಪದ ವ್ಯವಸ್ಥೆ ಆಗಬೇಕಿದೆ.
  • ಐಕಳ ತಾಮಣಿ ಗುತ್ತುವಿನಿಂದ ಏಳಿಂಜೆ ಕಿನ್ನಿ ಮುಂಡಾ ಹಾದುಹೋಗುವ ಶಾಂಭವಿ ಸಂರ್ಪಕಿಸುವ ಸಣ್ಣ ನದಿಯಲ್ಲಿ ಹೂಳು ಎತ್ತದಿರುವುದರಿಂದ ಮರಳು ತುಂಬಿ ನೆರೆ ಹಾವಳಿ ಜಾಸ್ತಿಯಾಗಿದೆ. ನದಿಯಲ್ಲಿ ಹೆಚ್ಚು ಮರಳು ಹೂಳು ಇರುವುದರಿಂದ ಅಣೆಕಟ್ಟಿನಲ್ಲಿ ನೀರು ಶೇಖರಣೆ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ.
  • ಪೆರ್ಗುಂಡಿ ಏತ ನೀರಾವರಿ ನೀರು ಸಂಪರ್ಕಿಸುವ ಕಾಲುವೆ ಹಾಗೂ ಗ್ರಾಮದಲ್ಲಿ ಶಾಂಭವಿ ನದಿಗೆ ಸೇರುವ ಚಿಕ್ಕ ಹಳ್ಳ, ತೋಡುಗಳು ಇದ್ದು ಅದರ ಮೋರಿಗಳು ತಾಜ್ಯ ಹೂಳು ತುಂಬಿ ನೀರು ಸರಾಗವಾಗಿ ಹರಿಯಲು ತೊಡಕು ಉಂಟಾಗಿದೆ. ತುಂಬಿರುವ ಹೂಳು ಎತ್ತುವ ಕೆಲಸ ಆಗಬೇಕಿದೆ.
  • ಪಟ್ಟೆ ಕ್ರಾಸ್‌ ಬಳಿ ಶೌಚಾಲಯ ಅತೀ ಅಗತ್ಯವಾಗಿ ನಿರ್ಮಾಣವಾಗಬೇಕು. ಅಲ್ಲದೆ ಈ ಪ್ರದೇಶದಲ್ಲಿ ಸಿಸಿ ಕೆಮರಾ ಅಳವಡಿಸಬೇಕಾಗಿದೆ.

 

-ರಘುನಾಥ ಕಾಮತ್‌ ಕೆಂಚನಕೆರೆ

Advertisement

Udayavani is now on Telegram. Click here to join our channel and stay updated with the latest news.

Next