Advertisement

ಮೂಲ ಸೌಕರ್ಯ ವಂಚಿತ ತುಳುನಾಡ ರಾಜಧಾನಿ

08:47 PM Aug 12, 2021 | Team Udayavani |

ನೂರಾರು ದೇವಸ್ಥಾನ, ಹತ್ತಾರು ಮದುವೆ ಸಭಾಂಗಣ, ಹೊಟೇಲ್‌, ಅಂಗಡಿ ಮುಂಗಟ್ಟುಗಳು ಇರುವ ಬಾರಕೂರು  ತ್ಯಾಜ್ಯ ವಿಲೇವಾರಿ ಘಟಕವನ್ನೇ ಹೊಂದಿಲ್ಲ.

Advertisement

ಬ್ರಹ್ಮಾವರ: ದೇಗುಲಗಳ ನಾಡು, ತುಳುನಾಡ ರಾಜಧಾನಿ ಖ್ಯಾತಿಯ ಬಾರಕೂರು ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ರಾಜರ ಕಾಲದಲ್ಲಿ ವೈಭವದಿಂದ ಮೆರೆದ ಊರು ಅವ್ಯವಸ್ಥೆಗಳ ತಾಣವಾಗಿದೆ.

ಬಸ್‌ನಿಲ್ದಾಣವಿಲ್ಲದೆ ಪರದಾಟ :

ಬಾರಕೂರು ಪೇಟೆಯಲ್ಲಿ ಶೌಚಾಲಯ ನಿರ್ವಹಣೆಯಿಲ್ಲದೆ ದುಸ್ಥಿತಿಯಲ್ಲಿದೆ. ಸುಮಾರು 1,000 ವಿದ್ಯಾರ್ಥಿಗಳು ಸೇರಿದಂತೆ ಸ್ಥಳೀಯರು, ಭಕ್ತರು ಬಂದಿಳಿಯುವ ಬಾರಕೂರಿನಲ್ಲಿ ಸರಿಯಾದ ಬಸ್‌ನಿಲ್ದಾಣವಿಲ್ಲದೆ ಪರದಾಡುತ್ತಿದ್ದಾರೆ. ಪೇಟೆಯ ಎರಡೂ ದಿಕ್ಕಿನಲ್ಲಿ ಅಂಗಡಿಗಳ ಮುಂಭಾಗದಲ್ಲೇ ಬಸ್ಸಿಗಾಗಿ ಕಾಯುವ ದುಸ್ಥಿತಿ ಇದೆ.

ಟ್ರಾಫಿಕ್‌ ಜಾಂ:

Advertisement

ಬಾರಕೂರು ಪೇಟೆಯಲ್ಲಿ ರಸ್ತೆ ವಿಸ್ತರಣೆ ಆಗಬೇಕಾಗಿದೆ. ಕಲ್ಚಪ್ರ, ಮಂದಾರ್ತಿ ಜಂಕ್ಷನ್‌, ರಥಬೀದಿ ಮೊದಲಾದೆಡೆ ಪ್ರತಿನಿತ್ಯ ಟ್ರಾಫಿಕ್‌ ಜಾಂ ಸಮಸ್ಯೆ ಇದೆ.

ಬಾರಕೂರು ಪೇಟೆಯಿಂದ ರೈಲ್ವೇ ನಿಲ್ದಾಣವರೆಗೆ, ಇತ್ತ ಚೌಳಿಕೆರೆ ವರೆಗೆ ಚರಂಡಿಯೇ ಇಲ್ಲದೆ ರಸ್ತೆಯೇ ನೀರು ಹರಿಯುವ ತೋಡಾಗಿದೆ. ಹೊಸಾಳ ಹಾಗೂ ಹನೆಹಳ್ಳಿ ಗ್ರಾಮದಲ್ಲಿರುವ ಶ್ಮಶಾನಗಳು ನಿರ್ವಹಣೆಯಿಲ್ಲದೆ ದುಃಸ್ಥಿತಿಯಲ್ಲಿದೆ.

ಜತೆಗೆ ಸಮರ್ಪಕ ಬೀದಿ ದೀಪ ವ್ಯವಸ್ಥೆ, ಕಲ್ಚಪ್ರದಲ್ಲಿ ಹೈ ಮಾಸ್ಕ್ ದೀಪದ ಅಗತ್ಯವಿದೆ. ಸೂಚನ ಫಲಕವೂ ಅವಶ್ಯ. ಬೃಹತ್‌ ವಿಸ್ತೀರ್ಣದ ಕೋಟೆ ಕೆರೆ, ಚೌಳಿ ಕೆರೆ, ಮೂಡುಕೆರೆ, ಹೊಸ್ಕೆರೆ, ಅರಸಿನಕೆರೆ, ಮಸಿಕೆರೆ, ಮಸ್ಕಿಬೈಲು ಮದಗ ಮೊದಲಾದವುಗಳ ಪುನಶ್ಚೇತನ ಬೇಡಿಕೆಯಾಗಿದೆ.

ಅಮೂಲ್ಯ ಸಂಪತ್ತು ಉಳಿಸಬೇಕಿದೆ :

ಪ್ರತಿನಿತ್ಯ ಒಂದೊಂದು ಉತ್ಸವ ನಡೆಯುತ್ತಿದ್ದ 365 ದೇವಸ್ಥಾನಗಳನ್ನು ಹೊಂದಿದ ಬಾರಕೂರಿನ ಬಹುತೇಕ ದೇವಸ್ಥಾನಗಳು ಇಂದು ದುಸ್ಥಿತಿಯಲ್ಲಿವೆ. ಅಮೂಲ್ಯ ಶಿಲಾ ಶಾಸನಗಳು ಅನಾಥವಾಗಿವೆ. ನಿರ್ವಹಣೆಯಿಲ್ಲದೆ ಕೋಟೆ ಹಾಳು ಕೊಂಪೆಯಾಗಿದೆ. ಶಾಸನ, ಅಮೂಲ್ಯ ವಸ್ತುಗಳ ಸಂರಕ್ಷಣೆಗೆ ವಸ್ತು ಸಂಗ್ರಹಾಲಯ, ಪ್ರವಾಸಿಗರಿಗೆ ಮಾಹಿತಿ ನೀಡಲು ಗೈಡ್‌, ಅತಿಥಿಗೃಹದ ಅಗತ್ಯವಿದೆ.  ಪಾರಂಪರಿಕ ನಗರಿ ಬಾರಕೂರಿನಲ್ಲಿ ಪ್ರವಾಸೋದ್ಯಕ್ಕೆ ವಿಫುಲ ಅವಕಾಶವಿದೆ. ಇಲಾಖೆ ಉತ್ತೇಜನ ಕ್ರಮ ಕೈಗೊಳ್ಳಬೇಕು

ಜಾಗದ  ಕೊರತೆಯಿಂದ ಹಿನ್ನಡೆ:

ಬಾರಕೂರಿನಲ್ಲಿ ರಸ್ತೆ ವಿಸ್ತರಣೆ, ಚರಂಡಿ ನಿರ್ಮಾಣಕ್ಕೆ ಜಾಗದ ಸಮಸ್ಯೆಯಿದೆ. ಖಾಸಗಿ ಜಾಗವಾದ್ದರಿಂದ ಇಲಾಖೆ ಪರಿಹಾರ ನೀಡಿ ಸ್ವಾಧೀನಪಡಿಸಿಕೊಳ್ಳುವುದು ಅವಶ್ಯಕ. ಒಣ ತ್ಯಾಜ್ಯ ವಿಲೇವಾರಿ ಘಟಕದ ಕಟ್ಟಡ ನಿರ್ಮಾಣ ಅಂತಿಮ ಹಂತದಲ್ಲಿದೆ. ಪ್ರತಿಯೊಬ್ಬರೂ ಚಂದಾದಾರರಾಗಿ ಒಣ, ಹಸಿ ಕಸ ಪ್ರತ್ಯೇಕಿಸಿ ನೀಡಿ ಸಹಕರಿಸಬೇಕಿದೆ. ಲೋಕೋಪಯೋಗಿ ಜಾಗದಲ್ಲಿ ಇಲಾಖೆ ಹಾಗೂ ಪಂಚಾಯತ್‌ ಅನುಮತಿ ಇಲ್ಲದೆ ಶೌಚಾಲಯ ನಿರ್ಮಿಸಿದ್ದರಿಂದ ಇದೀಗ ನಿರ್ವಹಣೆಗೆ ಸಮಸ್ಯೆಯಾಗಿದೆ. ಬಾರಕೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳಬೇಕು. ಬಿ. ಶಾಂತಾರಾಮ ಶೆಟ್ಟಿ, ಬಾರಕೂರು ಗ್ರಾ.ಪಂ. ಅಧ್ಯಕ್ಷ

ಇತಿಹಾಸ ಪ್ರಸಿದ್ಧ ನಗರ:

ಬಾರಕೂರು ಇತಿಹಾಸ ಪ್ರಸಿದ್ಧ, ದೇವಸ್ಥಾನಗಳ ಊರು. ಗತವೈಭವದ ಕುರುಹುಗಳನ್ನು ಉಳಿಸಿಕೊಳ್ಳುವುದು ಮೊದಲ ಆದ್ಯತೆ. ಸ್ವತ್ಛತೆ, ಪಳಿಯುಳಿಕೆಗಳ ಸಂರಕ್ಷಣೆ, ಸೂಚನಾ ಫಲಕಗಳು, ಮೂಲ  ಸೌಕರ್ಯಗಳು ಇತ್ಯಾದಿ ವಿಷಯಗಳ ಕಡೆಗೆ ಗಮನ ಹರಿಸಿದರೆ ಊರಿನ ಜನರಿಗೂ ಹೆಮ್ಮೆ, ಪ್ರವಾಸಿಗರಿಗೂ ತೃಪ್ತಿ. ಡಾ| ನಿರಂಜನ್‌ ರಾವ್‌, ಬಾರಕೂರು

ಇತರ ಸಮಸ್ಯೆಗಳೇನು? :

  • ಬಾರಕೂರು ಪೇಟೆಯಲ್ಲಿ ಸರಿಯಾದ ರಿಕ್ಷಾ ನಿಲ್ದಾಣವಿಲ್ಲದೆ ರಿಕ್ಷಾ ಚಾಲಕರು ಮತ್ತು ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗುತ್ತಿದೆ.
  • ಪ್ರಮುಖ ರಸ್ತೆ, ಜಂಕ್ಷನ್‌ಗಳಲ್ಲಿ ಸಿಸಿ ಕೆಮರಾ ಅಳವಡಿಕೆಯಾಗಬೇಕು.
  • ಸಾರ್ವಜನಿಕ ನೀರಿನ ಪಂಪ್‌ಗೆ ಜನರೇಟರ್‌ ವ್ಯವಸ್ಥೆಯೂ ಬೇಡಿಕೆಯಲ್ಲಿದೆ.
  • ಬಾರಕೂರು ಹೆರಿಗೆ ಆಸ್ಪತ್ರೆಯಲ್ಲಿ ಪೂರಕ ವ್ಯವಸ್ಥೆಗಳಿಲ್ಲ.
  • ವೈದ್ಯರ ವಸತಿಗೃಹ ಶಿಥಿಲಾವಸ್ಥೆಯಲ್ಲಿದೆ.
  • ಬಾರಕೂರು ರೈಲ್ವೇ ಸ್ಟೇಶನ್‌ ರಸ್ತೆ ಸಂಪೂರ್ಣ ಹದಗೆಟ್ಟಿದೆ.
  • ರೈಲ್ವೇ ನಿಲ್ದಾಣ ಅಭಿವೃದ್ಧಿಗೊಳಿಸಬೇಕು.

 

ಪ್ರವೀಣ್‌ ಮುದ್ದೂರು

Advertisement

Udayavani is now on Telegram. Click here to join our channel and stay updated with the latest news.

Next