ಬಾದಾಮಿ: ವಿಶ್ವದ ಗಮನ ಸೆಳೆದ ಬಾದಾಮಿಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ, ಜನಪ್ರತಿನಿಧಿಗಳು ಅಥವಾ ರಾಜ್ಯ ಸರ್ಕಾರ ಗಮನ ಸೆಳೆಯುತ್ತಿಲ್ಲ ಎಂಬ ಕೂಗು ಇಲ್ಲಿಗೆ ನಿತ್ಯ ಬರುವ ನೂರಾರು ಪ್ರವಾಸಿಗರಿಂದ ಕೇಳಿ ಬರುತ್ತಿವೆ.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಸುಂದರ ತಾಣಗಳು ಇಲ್ಲಿದ್ದರೂ ಅವುಗಳ ಬಗ್ಗೆ ಸೂಕ್ತ ಪ್ರಚಾರ, ಪ್ರವಾಸಿಗರಿಗೆ ಉತ್ತಮ ದರ್ಜೆಯ ಸೌಲಭ್ಯಗಳಿಲ್ಲ. ಸರ್ಕಾರ ಗಂಭೀರವಾಗಿ ಪ್ರಯತ್ನಿಸುತ್ತಿಲ್ಲ ಎಂಬ ಮಾತಿದೆ. ಜಿಲ್ಲೆಗೆ ಬರುವ ಕೆಲ ಅಧಿಕಾರಿಗಳು, ಪ್ರವಾಸೋದ್ಯಮ ಅಭಿವೃದ್ಧಿಗೆ ವಿಶೇಷ ಆಸಕ್ತಿಯಿಂದ ಕೆಲಸ ಮಾಡಿದರೂ ಅವರೆಲ್ಲ ಅತಿ ಬೇಗ ವರ್ಗವಾಗಿ ಹೋಗುತ್ತಾರೆ.ಇನ್ನು ಜನಪ್ರತಿನಿಧಿಗಳಂತೂ ಇತ್ತ ಕಡೆ ಗಮನ ಹರಿಸುವುದೇ ಇಲ್ಲ. ಬಾದಾಮಿಗೆ ಸಿದ್ದರಾಮಯ್ಯ ಶಾಸಕರಾದ ಬಳಿಕ ಒಂದಷ್ಟು ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ಸಿದ್ಧಗೊಳ್ಳುತ್ತಿವೆಯಾದರೂ ಅವು
ಅನುಷ್ಠಾನಕ್ಕೆ ಬರಲಿ ಎಂಬುದು ಇಲ್ಲಿನ ಜನ ಒತ್ತಾಸೆ. ಕೇಂದ್ರದ ಭಾರತೀಯ ಪುರಾತತ್ವ ಇಲಾಖೆ, ರಾಜ್ಯದ ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಪುರಸಭೆ, ಗ್ರಾಪಂಗಳ ಮಧ್ಯೆ ಸಿಲುಕಿ ಇಲ್ಲಿನ ಪ್ರವಾಸಿ ತಾಣಗಳು ಅಭಿವೃದ್ಧಿ ಕಾಣುತ್ತಿಲ್ಲ. ಐಹೊಳೆ, ಪಟ್ಟದಕಲ್ಲು, ಬಾದಾಮಿಯ ತಟಕೋಟೆ ಬಳಿಯ ಮನೆಗಳ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಮಟ್ಟದಲ್ಲೇ ಓರ್ವ ಉತ್ಸಾಹಿ ಅಧಿಕಾರಿ ನೇಮಕಗೊಳ್ಳಬೇಕಿದೆ. ಆ ಅಧಿಕಾರಿಗೆ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಯ ಹೊಣೆ ಬಿಟ್ಟು ಬೇರೆ ಕೆಲಸ ಕೊಡಬಾರದು. ಆ ಅಧಿಕಾರಿ ಕನಿಷ್ಠ 3 ವರ್ಷ ಇಲ್ಲಿಂದ ವರ್ಗಗೊಳ್ಳಬಾರದು. ಆಗ ಸ್ಥಳಾಂತರ ಸಮಸ್ಯೆಗೆ ಬೇಗ ಮುಕ್ತಿ ಸಿಗಲು ಸಾಧ್ಯ ಎನ್ನುತ್ತಾರೆ ತಜ್ಞರು.
ಜಿಪಂಗೆ ಎಸ್.ಎಸ್. ನಕುಲ್ ಸಿಇಒ ಆಗಿದ್ದಾಗ, ವಿಕಾಸ ಕಿಶೋರ ಸುರಳ್ಕರ ಉಪ ವಿಭಾಗಾಧಿಕಾರಿ ಇದ್ದಾಗ ಬಾದಾಮಿಯಲ್ಲಿ ಒಂದಷ್ಟು ಜಟಿಲ, ನನೆಗುದಿಗೆ ಬಿದ್ದ ಕಾರ್ಯಗಳಿಗೆ ಚಾಲನೆ ಸಿಕ್ಕಿದ್ದವು. ಅವರನ್ನು ಬಾದಾಮಿ ಜನ ಇಂದಿಗೂ ಸ್ಮರಿಸುತ್ತಾರೆ. ಆದರೆ, ಕೆಲ ಅಧಿಕಾರಿಗಳು, ಯಾರು ಏನೇ ಹೇಳಿದರೂ ಆಯ್ತು ಮಾಡೋಣ ಎನ್ನುತ್ತಲೇ ಜಿಲ್ಲೆಯಲ್ಲಿ ಹಲವು ವರ್ಷ ಕಾರ್ಯ ನಿರ್ವಹಿಸಿದ್ದಾರೆ ಹೊರತು ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಾಗಿಲ್ಲ ಎಂಬ ಕೊರಗು ಜನರಲ್ಲಿದೆ.
ಸೂಕ್ತ ಮಾಹಿತಿ ಸಿಗಲಿ: ಬಾದಾಮಿ ಸಹಿತ ಈ ಭಾಗದ ಪ್ರಸಿದ್ಧ ಪ್ರವಾಸಿ ತಾಣಗಳ ಕುರಿತು ಹುಬ್ಬಳ್ಳಿ, ಬೆಳಗಾವಿ, ಬೆಂಗಳೂರು ವಿಮಾನ ನಿಲ್ದಾಣಗಳ ಟಿವಿ ಪರದೆ ಮೇಲೆ ವಿಡಿಯೋ ಸಹಿತ ಮೂರು ಭಾಷೆಯಲ್ಲಿ ಸೂಕ್ತ ಮಾಹಿತಿ, ಪ್ರಚಾರ ಕೊಡಬೇಕು. ಇದರಿಂದ ಪ್ರವಾಸಿ ತಾಣಗಳಿಗೆ ಬರಲು ವಿಮಾನ ನಿಲ್ದಾಣದಲ್ಲೇ ಬಂದಿಳಿದ ಜನರಿಗೆ ಆಕರ್ಷಣೆಗೊಳ್ಳುವ ರೀತಿ ಮಾಡಬೇಕು. ಇದು ಪ್ರವಾಸೋದ್ಯಮ ಬೆಳವಣಿಗೆಯ ಒಂದು ಭಾಗವಾಗಬೇಕು.
ಸೌಲಭ್ಯ ಕೊಡಿ: ವಿದೇಶಗಳಲ್ಲಿ ಪ್ರವಾಸಿಗರಿಗಾಗಿ ಇರುವ ಬಸ್‌ಗಳಲ್ಲಿ 2ರಿಂದ 3 ಜನ ಇದ್ದರೂ ಅವರನ್ನು ಪ್ರವಾಸಿ ತಾಣಗಳಿಗೆ ಕರೆದುಕೊಂಡು ಹೋಗುವ ಪದ್ಧತಿ ಇದೆ. ಲಾಭಕ್ಕಾಗಿ ಆ ಬಸ್ ಓಡಿಸುವುದಿಲ್ಲ. ಸಿದ್ದರಾಮಯ್ಯ ಬಾದಾಮಿ ಶಾಸಕರಾದ ಬಳಿಕ, ಕೆಎಚ್‌ಡಿಸಿಯಿಂದ ಒಂದು ಬಸ್ ಅನ್ನು ಬಾದಾಮಿ, ಪಟ್ಟದಕಲ್ಲು, ಐಹೊಳೆಗೆ ಓಡಿಸಲಾಗುತ್ತಿತ್ತು. ಅದು 2 ತಿಂಗಳಬಳಿಕ ಸ್ಥಗಿತಗೊಂಡಿದೆ. ನಷ್ಟದ ಕಾರಣ ಹೇಳಿ ನಿಲ್ಲಿಸಲಾಗಿದೆ. ಈಗ ಖಾಸಗಿ ಟ್ಯಾಕ್ಸಿ ನಂಬಬೇಕು. ಇಲ್ಲದಿದ್ದರೆ ಸುತ್ತಿ-ಬಳಸಿ ತೆರಳುವ ಬಸ್‌ಗಳಲ್ಲೇ ಪ್ರವಾಸಿಗರು ಕಾದು ಹೋಗಬೇಕಾದ ಪರಿಸ್ಥಿತಿ ಇದೆ.
-ಶಶಿಧರ ವಸ್ತ್ರದ