Advertisement

ಶತಮಾನದ ಸರ್ಕಾರಿ ಶಾಲೆಗಳಲಿಲ್ಲ ಮೂಲ ಸೌಕರ್ಯ!

12:46 PM Jan 31, 2020 | Team Udayavani |

ಚಿಕ್ಕಬಳ್ಳಾಪುರ: ಅವಿಭಜಿತ ಕೋಲಾರ ಜಿಲ್ಲೆಯ ಭಾಗವಾಗಿದ್ದ ಚಿಕ್ಕಬಳ್ಳಾಪುರ ಉಪ ವಿಭಾಗವು ಸ್ವತಂತ್ರ ಜಿಲ್ಲೆಯಾಗಿ ರೂಪುಗೊಂಡು ದಶಮಾನ ಪೂರೈಸಿ 13 ರ ಹೊಸ್ತಿಲಲ್ಲಿದೆ. ಅದಕ್ಕೂ ಮೊದಲು 2001 ರಲ್ಲಿ ಚಿಕ್ಕಬಳ್ಳಾಪುರ ಶೈಕ್ಷಣಿಕ ಜಿಲ್ಲೆಯಾಗಿ 19 ವರ್ಷಗಳು ಉರುಳಿವೆ. ಆದರೂ ಜಿಲ್ಲೆಯಲ್ಲಿ ಶತಮಾನ ಪೂರೈಸಿರುವ ಸರ್ಕಾರಿ ಶಾಲೆಗಳು ಮಾತ್ರ ಇಂದಿಗೂ ಮೂಲ ಸೌಕರ್ಯಗಳ ಕೊರತೆಯಿಂದ ಸೊರಗುತ್ತಿವೆ.

Advertisement

ಹೌದು, ಬರ ಪೀಡಿತ ಜಿಲ್ಲೆಯೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಚಿಕ್ಕಬಳ್ಳಾಪುರ ಜಿಲ್ಲೆ ಶೈಕ್ಷಣಿಕವಾಗಿ ಅನೇಕ ಸಾಧನೆಗಳ ಮೂಲಕ ರಾಜ್ಯದ ಗಮನ ಸೆಳೆದಿದೆ. ಭಾರತ ರತ್ನಗಳಾದ ಜಗತ್‌ ಪ್ರಸಿದ್ಧ ಇಂಜಿನಿ  ಯರ್‌ ಸರ್‌.ಎಂ.ವಿಶ್ವಿ‌àಶ್ವರಯ್ಯ, ಖ್ಯಾತ ವಿಜ್ಞಾನಿ ಸಿ.ಎನ್‌.ರಾವ್‌, ವೈಚಾರಿಕ ಚಿಂತಕ ಡಾ.ಹೆಚ್‌.ನರಸಿಂಹಯ್ಯ ಅವರತಂಹ ಅನೇಕ ದಿಗ್ಗಜರು ಓದಿ ಬೆಳೆದಿದ್ದು, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಎನ್ನುವುದು ಹೆಮ್ಮೆಯ ಸಂಗತಿ. ಆದರೆ ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳು ತೀವ್ರತರದಲ್ಲಿ ಮೂಲ ಸೌಕರ್ಯಗಳ ಕೊರತೆ ಎದುರಿಸುವ ಮೂಲಕ ಶಿಕ್ಷಣದ ಗುಣಮಟ್ಟ ಕಳೆದುಕೊಳ್ಳುತ್ತಿವೆ.

ಒಟ್ಟು 1,588 ಸರ್ಕಾರಿ ಶಾಲೆ: ಜಿಲ್ಲೆಯಲ್ಲಿ 946 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಇದ್ದರೆ 531 ಹಿರಿಯ ಪ್ರಾಥಮಿಕ ಶಾಲೆಗಳಿದ್ದು, 111 ಸರ್ಕಾರಿ ಪ್ರೌಢ ಶಾಲೆಗಳು ಸೇರಿ ಒಟ್ಟು 1,588 ಸರ್ಕಾರಿ ಶಾಲೆಗಳಿದ್ದು, 1 ರಿಂದ 10 ನೇ ತರಗತಿವರೆಗೂ ಅಂದಾಜು 80 ಸಾವಿರಕ್ಕಿಂತ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಖಾಸಗಿ ಶಾಲೆಗಳ ಅಬ್ಬರ ಜೊತೆಗೆ ಮೂಲ ಸೌಕರ್ಯಗಳ ಕೊರತೆಯಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿಯುತ್ತಿರುವುದು ಎದ್ದು ಕಾಣುತ್ತಿದೆ.

39 ಶಾಲೆಗಳಿಗೆ ಶತಮಾನ: ಜಿಲ್ಲೆಯಲ್ಲಿ ನೂರು ವರ್ಷ ತುಂಬಿದ ಸರ್ಕಾರಿ ಶಾಲೆಗಳನ್ನು ಪಟ್ಟಿ ಮಾಡುವು ದಾದರೆ ಜಿಲ್ಲೆಯಲ್ಲಿ ಒಟ್ಟು 39 ಸರ್ಕಾರಿ ಶಾಲೆಗಳು ಶತಮಾನ ಪೂರೈಸಿ ಇತಿಹಾಸದ ಪಟ್ಟಿಗೆ ಸೇರಿವೆ. ಆ ಪೈಕಿ ಜಿಲ್ಲೆಯ ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿವೆ. ಗೌರಿ  ಬಿದನೂರು ತಾಲೂಕು ಒಂದರಲ್ಲಿಯೇ ಒಟ್ಟು 13 ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ 100 ವರ್ಷ ತುಂಬಿದರೆ, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಒಟ್ಟು 8 ಶಾಲೆಗಳಿವೆ.

ನಂತರದ ಸ್ಥಾನದಲ್ಲಿ ಚಿಂತಾಮಣಿ ಇದ್ದು, ಒಟ್ಟು 5 ಶಾಲೆಗಳು ಶತಮಾನ ಪೂರೈಸಿವೆ. ಆದರೆ ಈ ಶಾಲೆಗಳಲ್ಲಿ ಆರಂಭದಲ್ಲಿದ್ದ ಮಕ್ಕಳ ಸಂಖ್ಯೆ ಇಂದು ಇಲ್ಲವಾಗಿದೆ. ಶತಮಾನ ಪೂರೈಸಿರುವ ಶಾಲೆಗಳ ಪೈಕಿ ಮಂಡಿಕಲ್ಲು, ಚಿಕ್ಕಬಳ್ಳಾಪುರದ ಬಿಬಿ ರಸ್ತೆಯ ಸರ್ಕಾರಿ ಪ್ರೌಢ ಶಾಲೆ, ಮಾಧ್ಯಮಿಕ ಶಾಲೆ ಹಾಗೂ ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 150, 200, 250 ಮಕ್ಕಳು ಇರುವುದು ಬಿಟ್ಟರೆ ಉಳಿದ ಶಾಲೆಗಳಲ್ಲಿ ಎರಡಂಕಿ ದಾಟದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

Advertisement

ಆಟದ ಮೈದಾನ, ಖಾಯಂ ಶಿಕ್ಷಕರು ಇಲ್ಲ: ಆರಂಭದಲ್ಲಿ ಶಾಲಾ ಆವರಣದ ತುಂಬ ಕಾಣುತ್ತಿದ್ದ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖ ಕಾಣುತ್ತಿರುವುದು ಎಲ್ಲವೂ ಖಾಸಗಿಮಯ ಎನ್ನುವುದನ್ನು ಹೇಳಬೇಕಿಲ್ಲ. ಬಾಗೇಪಲ್ಲಿ ಪಟ್ಟಣದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಂದಿಗೂ 300 ದಾಟಿದೆ. ಆದರೆ ಅಲ್ಲಿ ಮಕ್ಕಳಿಗೆ ಸಿಗಬೇಕಾದ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಗ್ರಂಥಾಲಯ, ಕೊಠಡಿ, ಶೌಚಾಲಯಗಳು ಇಲ್ಲದೇಇರುವುದು ಆಡಳಿತ ವ್ಯವಸ್ಥೆಗೆ ಶಿಕ್ಷಣದ ಮೇಲಿನ ಪ್ರೀತಿಯನ್ನುತೋರಿಸುತ್ತದೆ. ಶತಮಾನ ಕಂಡ ಶಾಲೆಗಳಲ್ಲಿ ಇಂದಿಗೂ ಸಮರ್ಪಕವಾಗಿ ಆಟದ ಮೈದಾನ, ಖಾಯಂ ಶಿಕ್ಷಕರು ಇಲ್ಲದೇ ಇರುವುದು ಇದೆ.

ದಾನಿಗಳಿಂದ ಕೆಲ ಶಾಲೆಗಳಿಗೆ ಮುಕ್ತಿ: ಶತಮಾನ ಪೂರೈಸಿರುವ ಹಲವು ಶಾಲೆಗಳಿಗೆ ದಾನಿಗಳ ಸಹಕಾರ ಹಾಗೂ ಗ್ರಾಮಸ್ಥರ ಸಹಕಾರ ಸಿಕ್ಕಿದ್ದು ಬೆರಣಿಕೆಯಷ್ಟುಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಸಾಧ್ಯವಾಗಿದೆ. ಆದರೆ ಬಹಳಷ್ಟು ಶಾಲೆಗಳು ಮಕ್ಕಳು ಇಲ್ಲದೇ ಬಾಗಿಲು ಮುಚ್ಚುವ ಸ್ಥಿತಿಗೆ ಬಂದಿವೆ. ಚಿಕ್ಕಬಳ್ಳಾಪುರದ ಬಿಬಿ ರಸ್ತೆಯಲ್ಲಿರುವ ಹಿರಿಯ ಪ್ರಾಥಮಿಕ ಶಾಲೆಗೆ ದಾನಿಗಳು ಮುಂದೆ ಬಂದಿದ್ದು, ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ಹೊಸ ಕಟ್ಟಡಗಳ ನಿರ್ಮಾಣಕ್ಕೆ ರೋಟರಿ ಸಂಸ್ಥೆ ಮುಂದೆ ಬಂದಿದೆ. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿರುವ ಶತಮಾನ ಪೂರೈಸಿದ ಶಾಲೆಗಳು ಕಟ್ಟಡ, ಕುಡಿಯುವ ನೀರು, ಆಟದ ಮೈದಾನ, ಕೌಂಪೌಂಡ್‌ ಮತ್ತಿತರ ಮೂಲ ಸೌಕರ್ಯ ಕೊರತೆಯಿಂದ ಬಳಲುತ್ತಿದ್ದು, ಸರ್ಕಾರದ ಕಾಯಕಲ್ಪಕ್ಕೆ ಎದುರು ನೋಡುತ್ತಿವೆ.

ಶೌಚ ಗೃಹ, ಕುಡಿವ ನೀರಿನ ಸಮಸ್ಯೆ :  ಶತಮಾನ ಪೂರೈಸಿರುವ ಶಾಲೆಗಳಲ್ಲಿ ಕಟ್ಟಡ ಗಳ ಸಮಸ್ಯೆ ಅಷ್ಟೊಂದು ಪ್ರಮಾಣದಲ್ಲಿ ಇಲ್ಲ. ಏಕೆಂದರೆ ಹಿಂದೆ ನಿರ್ಮಿಸಿರುವ ಕಟ್ಟಡಗಳು ಸಾಕಷ್ಟು ಗುಣಮಟ್ಟದಿಂದ ನಿರ್ಮಾಣವಾಗಿ ಗಟ್ಟಿಮುಟ್ಟಾಗಿದ್ದು ಇಂದಿಗೂ ಅದರ ಅಸ್ತಿತ್ವ ವನ್ನು ಉಳಿಸಿಕೊಂಡಿವೆ. ಆದರೆ ಈ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನು ಗುಣಮವಾಗಿ ಶೌಚಾಲಯ, ಕುಡಿಯುವ ನೀರು, ಮಕ್ಕಳು ಆಟೋಟಗಳನ್ನು ನಡೆಸಲು ಅನುಕೂಲ ವಾಗುವ ಕ್ರೀಡಾ ಮೈದಾನ ಮತ್ತಿತರ ಮೂಲ ಸೌಲಭ್ಯ ಇಲ್ಲದೆ ಇರುವುದು ಎದ್ದು ಕಾಣುತ್ತಿದೆ. ವಿಶೇಷವಾಗಿ ಪೀಠೊಪಕರಣಗಳ ಕೊರತೆ ಕೂಡ ಇದ್ದು, ಈ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ ಹೆಚ್ಚಾಗಿದೆ. ಇನ್ನೂ ಬಹಷ್ಟು ಶಾಲೆಗಳಲ್ಲಿ ಸಾಮಾನ್ಯವಾದ ಪೀಠೊಕರಣ ಗಳ ಕೊರತೆ ಇವೆ. ಇಂದಿನ ಸ್ಮಾರ್ಟ್‌ಕ್ಲಾಸ್‌ ಯುಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಪ್ಪು ಹಲಗೆಗಳ ಮೇಲೆಯೇ ಪಾಠ, ಪ್ರವಚನಗಳು ಮುಂದುವರಿದಿವೆ.

100 ವರ್ಷ ಪೂರೈಸಿದ ಪ್ರೌಢ ಶಾಲೆಗಳಿಗೆ 1 ಲಕ್ಷ ಅನುದಾನ :  ಸದ್ಯ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಗುರುತಿಸಿರುವ ಪ್ರೌಢ ಶಾಲೆಗಳಲ್ಲಿ ಕೇವಲ ಮೂರು ಶಾಲೆಗಳು ಮಾತ್ರ ಶತಮಾನ ಪೂರೈಸಿದ್ದು, ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಹೋಬಳಿಯ ಸರ್ಕಾರಿ ಪ್ರೌಢ ಶಾಲೆ ಹಾಗೂ ಬಾಗೇಪಲ್ಲಿಪಟ್ಟಣದ ಬಾಲಕರ ಸರ್ಕಾರಿ ಪ್ರೌಢ ಶಾಲೆ ಹಾಗೂ ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿರುವ ಸರ್ಕಾರಿ ಪ್ರೌಢ ಶಾಲೆಗೆ 100 ವರ್ಷ ತುಂಬಿದೆ. ಹೀಗಾಗಿ ಸರ್ಕಾರ 2018-19ನೇ ಸಾಲಿನಲ್ಲಿ ಈ ಶಾಲೆಗಳ ಪಾರಂಪರಿಕ ಶಾಲೆಗಳೆಂದು ಗುರುತಿಸಿ ಶಾಲೆಗಳಿಗೆಮೂಲ ಸೌಕರ್ಯ ಒದಗಿಸಲು ತಲಾ 1 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ ಸರ್ಕಾರಿ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳ ಪುನಶ್ಚೇತನಕ್ಕಾಗಿ ನಿರೀಕ್ಷಿಸಿದ ಪ್ರಮಾಣದಲ್ಲಿ ಸರ್ಕಾರ ಅನುದಾನ ಕೊಡದೇ ಇರುವುದು ಸ್ಥಳೀಯವಾಗಿ ಚುನಾಯಿತ ಜನಪ್ರತಿನಿಧಿಗಳು ಕಾಳಜಿ ಕೊರತೆಯಿಂದ ಅನುದಾನ ಬಿಡುಗಡೆಗೊಳ್ಳದೆ ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿವೆ.

ಸರ್‌ಎಂವಿ ಓದಿದ ಶಾಲೆಗೆ ಬೀಗ :  ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಕಂದವಾರದಲ್ಲಿ ಸರ್‌ ಎಂ.ವಿಶ್ವೇಶ್ವರಯ್ಯ ಓದಿರುವ ಶಾಲೆ ಇದೆ. ಆದರೆ ದಶಕಗಳ ಹಿಂದೆ ನೂರಾರು ಮಕ್ಕಳಿದ್ದ ಶಾಲೆಯಲ್ಲೀಗ 1 ರಿಂದ 7ನೇ ತರಗತಿವರೆಗೂ ಬರೀ 70 ಮಕ್ಕಳು ಮಾತ್ರ ಇದ್ದಾರೆ. ಸರ್‌ಎಂವಿ ಓದಿದ್ದಾರೆ ಎನ್ನುವ ಕಾರಣಕ್ಕೆ ಕೆಲ ದಾನಿಗಳು ಶಾಲೆಯನ್ನು ನವೀಕರಣಗೊಳಿಸಿ ಶಾಲೆಗೆ ಅಗತ್ಯವಾದ ಮೂಲ ಸೌಕರ್ಯ ಒದಗಿಸಿದ್ದಾರೆ. ಆದರೆ ಶಾಲೆಗೆ ಮಕ್ಕಳೇ ಬರುತ್ತಿಲ್ಲ. ಹೀಗಾಗಿ ಖಾಲಿ ಇರುವ ಶಾಲೆಗೆ ಬೀಗ ಜಡಿಯಲಾಗಿದೆ. ಶಾಲೆ  ಆವರಣದಲ್ಲಿ ಉದ್ಯಾನವನ ನಿರ್ಮಿಸಿದ್ದು ಶಾಲಾ ಕಟ್ಟಡ ನೋಡಲು ಭವ್ಯವಾಗಿದೆ. ಆದರೆ ಮಕ್ಕಳ ಕೊರತೆ ಕಾರಣಕ್ಕೆ ಬಳಕೆಯಾಗದೇ ಇರುವುದು ಆ ಶಾಲೆಯ ಶಿಕ್ಷಕರಲ್ಲಿ ತೀವ್ರ ಬೇಸರ ಇದೆ. ನಮ್ಮ ಶಾಲೆ ಮುಂದೆ ನಿತ್ಯ ಹತ್ತಾರು ಖಾಸಗಿ ಶಾಲೆಗಳ ಬಸ್‌ ಓಡಾಡುತ್ತವೆ. ನಮ್ಮ ಶಾಲೆಗೆ ಮಕ್ಕಳ ಬರುವ ಸಂಖ್ಯೆ ತೀರಾ ಕಡಿಮೆ ಇದೆ ಎಂದು ಸರ್‌ ಎಂವಿ ಓದಿದ ಶಾಲೆಯ ಈಗಿನ ಶಿಕ್ಷಕರು ಉದಯವಾಣಿಗೆ ತಿಳಿಸಿದರು. ಜೊತೆಗೆ ಹಳೆ ಶಾಲೆಗೆ ಸುತ್ತಲೂ ಕಾಂಪೌಂಡ್‌ ಕೊರತೆ ಇದೆ.

 

-ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next