ಚನ್ನಪಟ್ಟಣ: ಸ್ವಚ್ಛತೆ ಕಾಣದ ನೀರಿನ ಟ್ಯಾಂಕ್, ಹುಳು ಬಿದ್ದ ಕುಡಿಯುವ ನೀರು, ನೀರಿನ ತೊಂಬೆ ಬಳಿ ಹರಿಯದೆ ನಿಂತಿರುವ ಚರಂಡಿ ನೀರು, ಸೊಳ್ಳೆ ಗಳ ವಾಸಸ್ಥಾನವಾದ ಹೂಳು ತುಂಬಿದ ಚರಂಡಿ ಗಳು, ನರಕಕ್ಕೆ ಮೂರೇ ಗೇಣು ಎಂಬ ಭಾವನೆಭಾಸವಾಗುತ್ತಿದೆ ತಾಲೂಕಿನ ಅಕ್ಕೂರು ಗ್ರಾಪಂ ವ್ಯಾಪ್ತಿಯ ಕುಗ್ರಾಮ ಸಾದರಹಳ್ಳಿ.
ಹೌದು…ಈ ಎಲ್ಲ ಕಲುಷಿತ ವಾತಾವರಣವನ್ನು ಒಮ್ಮೆ ಸಾದರಹಳ್ಳಿ ಗ್ರಾಮಕ್ಕೆ ಹೋದರೆ ನೋಡ ಬಹುದಾಗಿದೆ. ಹೇಳುವವರು, ಕೇಳುವವರು ಯಾರು ಇಲ್ಲವಾಗಿದ್ದಾರೆ. ಚುನಾಯಿತ ಪ್ರತಿನಿಧಿಗಳಬೇಜವಾಬ್ದಾರಿ ಕಾರಣದಿಂದ, ಗ್ರಾಮ ಪಂಚಾಯ್ತಿಅಧಿಕಾರಿಗಳ ನಿರ್ಲಕ್ಷ್ಯಕ್ಕೊಳಗಾಗಿರುವ ಗ್ರಾಮದ ಜನರು, ನಮ್ಮ ಸಮಸ್ಯೆ ಆಲಿಸುವವರು ಯಾರು ಇಲ್ಲವೇ ಎಂದು ತಮಗೆ ತಾವೇ ಶಪಿಸಿಕೊಳ್ಳುವಂತಹ ಪರಿಸ್ಥಿತಿ ಎದುರಾಗಿದೆ.
ಗಬ್ಬು ವಾಸನೆ: ಗ್ರಾಮದಲ್ಲಿರುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿ ವರ್ಷಗಳೇ ಕಳೆದಿವೆ. ಒಮ್ಮೆ ಟ್ಯಾಂಕ್ ಪರಿಶೀಲನೆ ಮಾಡಿದರೆ ಹುಳು ಬಿದ್ದ ನೀರಿನ ದರ್ಶನ ವಾಗುತ್ತದೆ. ಅದೇ ನೀರನ್ನು ಗ್ರಾಮದಮಂದಿ ಸೇವನೆ ಮಾಡುತ್ತಿದ್ದಾರೆ. ನೀರಿನ ತೊಂಬೆಬಳಿ ಇರುವ ಚರಂಡಿಗಳ ನೀರು ಮುಂದಕ್ಕೆ ಚಲಿಸದೆ, ಇದ್ದ ಸ್ಥಳದಲ್ಲಿಯೇ ಚರಂಡಿ ನೀರು ಶೇಖರಣೆ ಯಾಗಿ ಹುಳು, ಹುಪ್ಪಟೆಗಳು ಹರಿದಾಡುತ್ತಿವೆ.ಸೊಳ್ಳೆಯ ವಾಸಸ್ಥಾನ ಆಗಿರುವುದರಿಂದ ಹುಳುಬಿದ್ದ ನೀರು ಶೇಖರಣೆ ಮಾಡಲು ಬರುವ ಜನರು,ಗಬ್ಬು ವಾಸನೆಯಲ್ಲೇ ನೀರು ಹಿಡಿದು ಮನಗೆಹೋಗುವುದು ಅನಿವಾರ್ಯವಾಗಿದೆ.
ಮೂಲಸೌಕರ್ಯ ಮರೀಚಿಕೆ: ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಸ್ವಚ್ಛತೆ, ರಸ್ತೆಗಳ ನಿರ್ಮಾಣ, ಬೀದಿ ದೀಪ ಗಳು ಹಾಗೂ ಮೂಲಸೌಕರ್ಯ ಮರೀಚಿಕೆಯಾಗಿದ್ದು, ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಯಾರು ಧ್ವನಿ ಎತ್ತುತ್ತಿಲ್ಲ, ಚುನಾಯಿತ ಪ್ರತಿನಿಧಿಯಾಗಲಿ, ಗ್ರಾಮ ಪಂಚಾಯ್ತಿ ಅಧಿಕಾರಿಗಳಾಗಲಿ ಇತ್ತ ಗಮನ ಹರಿಸ ದಿರುವುದು ಈ ಜನರ ದೌರ್ಭಾಗ್ಯ ವಾಗಿದೆ. ನೂತನವಾಗಿ ಆಯ್ಕೆಯಾಗಿರುವ ಅಕ್ಕೂರುಗ್ರಾಮ ಪಂಚಾಯ್ತಿಯ ಅಧ್ಯಕ್ಷ ಅಶೋಕ್ ಗ್ರಾಮದಲ್ಲಿ ನಿರ್ಮಾಣವಾಗಿರುವ ಈ ಜ್ವಲಂತ ಸಮಸ್ಯೆಯನ್ನು ವೀಕ್ಷಣೆ ಮಾಡಿ, ಗ್ರಾಮದ ಜನರಿಗೆ ಅನು ಕೂಲ ಮಾಡಿಕೊಡುವರೇ ಕಾದು ನೋಡಬೇಕಿದೆ.
ಮನವಿ ಮಾಡಿದರೂ ಪ್ರಯೋಜನವಿಲ್ಲ : ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳಿವೆ. ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಐದು ಟ್ಯಾಂಕ್‌ಗಳಿದ್ದು, ಎಲ್ಲ ಟ್ಯಾಂಕ್‌ಗಳಲ್ಲಿಯೂ ಇದೇ ಪರಿಸ್ಥಿತಿ ಇರುವುದರಿಂದ, ಶುದ್ಧ ಕುಡಿಯುವ ನೀರು ಗ್ರಾಮದ ಜನರಿಗೆ ಇಲ್ಲವಾಗಿದೆ. ಟ್ಯಾಂಕ್‌ಗಳಲ್ಲಿ ದೊರೆಯುವನೀರನ್ನೇ ಕುಡಿಯುವುದು ಈ ಜನರ ಹಣೆಬರಹಎನ್ನುವಂತಾಗಿದೆ. ಟ್ಯಾಂಕ್ ಸ್ವಚ್ಛತೆ, ಹೂಳು ತುಂಬಿದ ಚರಂಡಿಗಳ ಸ್ವಚ್ಛತೆ ವಿಚಾರವಾಗಿ ಅಕ್ಕೂರು ಗ್ರಾಮ ಪಂಚಾಯ್ತಿಗೆ ಹಲವಾರು ಬಾರಿ ಮನವಿ ಮಾಡಿದರೂ, ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಗ್ರಾಮದ ಜಯಲಕ್ಷಮ್ಮ, ಜಯಮ್ಮ, ಲಕ್ಷ್ಮಮ್ಮ, ಸುನಿತಾ, ಶಾರದಾ, ಪದ್ಮಾ, ತುಳಸಮ್ಮ ಹಾಗೂ ಹಲವಾರು ಮಂದಿ ಜನಪ್ರತಿನಿಧಿಗಳ, ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ಕಿಡಿಕಾರಿದ್ದಾರೆ.