Advertisement

ಮಾಹಿತಿ ಕೊರತೆ; ಸೌಲಭ್ಯ ವಂಚಿತರಾಗುತ್ತಿರುವ ಅರ್ಹರು

12:07 AM Oct 07, 2019 | Sriram |

ಉಡುಪಿ: ಅಸಂಘಟಿತ ವಲಯದ ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸಿ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಒದಗಿಸಲು ರಾಜ್ಯ ಸರಕಾರ ಜಾರಿಗೆತಂದ “ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ’ ಯೋಜನೆಯ ಮಾಹಿತಿ ಕೊರತೆಯಿಂದ ಅರ್ಹರು ಪ್ರಯೋಜನ ವಂಚಿತರಾಗುತ್ತಿದ್ದಾರೆ.

Advertisement

ಉಡುಪಿ, ದ.ಕ. ಜಿಲ್ಲೆಗಳಲ್ಲಿ 20 ಸಾವಿರಕ್ಕೂ ಅಧಿಕ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಿದ್ದಾರೆ. ಯೋಜನೆಯಡಿಯಲ್ಲಿ ಕಾರ್ಮಿಕ ಇಲಾಖೆ ಮೂಲಕ 2014ರಿಂದ ಇಲ್ಲಿಯವರೆಗೆ ಉಡುಪಿಯ 14 ಮತ್ತು ದ.ಕ. 12 ಕುಟುಂಬಗಳು ಮಾತ್ರ ಮರಣ ಪರಿಹಾರ ವಿಮೆ ಪಡೆದಿವೆ. 14 ವಿದ್ಯಾರ್ಥಿಗಳು ಶೈಕ್ಷಣಿಕ ಸಹಾಯಧನ ಪಡೆದುಕೊಳ್ಳುತ್ತಿದ್ದಾರೆ.

ಯೋಜನೆ ಯಾರಿಗಾಗಿ?
20ರಿಂದ 70 ವರ್ಷ ವಯೋಮಿತಿಯ ರಿಕ್ಷಾ, ಕಾರು, ಲಾರಿ, ಬಸ್‌, ಟೆಂಪೋ ವಾಣಿಜ್ಯವಾಹನಗಳ ಚಾಲಕರು ಮತ್ತು ನಿರ್ವಾಹಕರು (ಖಾಸಗಿ ಬಸ್‌) ಈ ಯೋಜನೆಯ ಫ‌ಲಾನುಭವಿಗಳು. ಅವರು ಅಪಘಾತದಲ್ಲಿ ಮೃತರಾದರೆ ಅಥವಾ ಗಾಯಗೊಂಡರೆ ಸರಕಾರ ವಿಮೆ ರೂಪದಲ್ಲಿ ಪರಿಹಾರ ನೀಡುತ್ತದೆ.

ಯೋಜನೆಯ ಷರತ್ತು?
ರಾಜ್ಯ ಸಾರಿಗೆ ಇಲಾಖೆಯಿಂದ ವಾಣಿಜ್ಯ ವಾಹನ ಚಲಾಯಿಸಲು ಚಾಲನ ಪರವಾನಿಗೆ ಮತ್ತು ಖಾಸಗಿ ಬಸ್‌ ನಿರ್ವಾಹಕರಿಗೆ ಆರ್‌ಟಿಒ ಕಚೇರಿಯಿಂದ ಕೊಡಲ್ಪಡುವ ನಿರ್ವಾಹಕ ಲೈಸನ್ಸ್‌ ಬ್ಯಾಡ್ಜ್ ಹೊಂದಿರುವವರು ಯೋಜನೆಗೆ ಅರ್ಹರಾಗಿದ್ದಾರೆ.

ಅರ್ಜಿ ಸಲ್ಲಿಕೆ ಹೇಗೆ?
ಅಪಘಾತ ಸಂಭವಿಸಿದ 6 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು. ಒಳರೋಗಿಯಾಗಿ ಚಿಕಿತ್ಸೆ ಪಡೆದ ದಾಖಲೆ, ಮೃತಪಟ್ಟಲ್ಲಿ ನಾಮನಿರ್ದೇಶಿತರು ಮರಣ ಪ್ರಮಾಣ ಪತ್ರ, ಮರಣೋತ್ತರ ಪರೀಕ್ಷಾ ವರದಿ ಮತ್ತು ಪ್ರಥಮ ಮಾಹಿತಿ ವರದಿ (ಎಫ್ಐಆರ್‌), ಕಮರ್ಷಿಯಲ್‌ ಡಿಎಲ್‌ ಬ್ಯಾಡ್ಜ್ , ಬ್ಯಾಂಕ್‌ ಖಾತೆ (ನಾಮನಿರ್ದೇಶಿತ ವ್ಯಕ್ತಿಯ) ಮಾಹಿತಿಯನ್ನು ಲಗತ್ತಿಸಿ ಜಿಲ್ಲಾ ಕಾರ್ಮಿಕ ಇಲಾಖೆ ಅಥವಾ ಮಂಡಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು. ಆದರೆ ಅಪಘಾತದ ಸಂದರ್ಭ ಚಾಲಕನ ಮತ್ತು ಬಸ್‌ ನಿರ್ವಾಹಕನ ಪರವಾನಿಗೆ ಊರ್ಜಿತದಲ್ಲಿರಬೇಕು.

Advertisement

ಸೌಲಭ್ಯ
ಚಾಲಕ/ನಿರ್ವಾಹಕರು ಅಪಘಾತದಲ್ಲಿ ಮೃತರಾದರೆ ನಾಮನಿರ್ದೇಶಿತರಿಗೆ 5 ಲ.ರೂ. ಮತ್ತು ಶಾಶ್ವತವಾಗಿ ದುರ್ಬಲಗೊಂಡವರಿಗೆ ಗರಿಷ್ಠ 2 ಲ.ರೂ. ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ 15 ದಿನಗಳ ವರೆಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದವರಿಗೆ 50 ಸಾವಿರ ಮತ್ತು 15 ದಿನಗಳಿಗಿಂತ ಮೇಲ್ಪಟ್ಟು ಚಿಕಿತ್ಸೆ ಪಡೆಯುವವರಿಗೆ 1 ಲ.ರೂ. ವರೆಗಿನ ಬಿಲ್‌ ಮೊತ್ತವನ್ನು ಸರಕಾರ ಭರಿಸಲಿದೆ.

ಮಕ್ಕಳಿಗೆ ಶೈಕ್ಷಣಿಕ ಸಹಾಯ ಶಾಶ್ವತ ವೈಕಲ್ಯ ಮತ್ತು ಮರಣ ಹೊಂದುವ ವ್ಯಕ್ತಿಯ ಇಬ್ಬರು ಮಕ್ಕಳಿಗೆ 1ರಿಂದ 12ನೇ ತರಗತಿ ವರೆಗೆ 10 ಸಾವಿರ ರೂ. ಶೈಕ್ಷಣಿಕ ಸಹಾಯಧನ ಸಿಗಲಿದೆ.

ವಾಣಿಜ್ಯ ಸಾರಿಗೆ ವಾಹನಗಳ ಚಾಲಕ/ ನಿರ್ವಾಹಕರಿಗೆ ಯೋಜನೆಯ ಮಾಹಿತಿ ನೀಡಲಾಗುತ್ತಿದೆ. ಹಿಂದೆ ಈ ಯೋಜನೆಯಡಿ ಸಂತ್ರಸ್ತರ ಕುಟುಂಬಕ್ಕೆ 2 ಲ.ರೂ. ಪರಿಹಾರ ನೀಡಲಾಗುತ್ತಿತ್ತು. ಈಗ 5 ಲ.ರೂ.ಗೇರಿಸಲಾಗಿದೆ.
– ಎಂ. ಬಾಲಕೃಷ್ಣ, ವಿಲ್ಮಾ
ಕಾರ್ಮಿಕ ಅಧಿಕಾರಿಗಳು, ಉಡುಪಿ, ದ.ಕ.

ಪರಿಹಾರ ಮೊತ್ತ ನೇರ ಖಾತೆಗೆ
ದಾಖಲೆ ಪರಿಶೀಲಿಸಿ ಪರಿಹಾರವನ್ನು ಅರ್ಜಿದಾರರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಮಕ್ಕಳ ಶೈಕ್ಷಣಿಕ ಸಹಾಯಧನ ಅರ್ಜಿಯನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮುಖಾಂತರ ಸಲ್ಲಿಸಬಹುದು.

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next