ವರದಿ: ಹೇಮರಡ್ಡಿ ಸೈದಾಪುರ
ಹುಬ್ಬಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಏಕೈಕ ಹಾಗೂ ಈ ಭಾಗದ ಎಸ್ಸಿ, ಎಸ್ಟಿ ಹಾಗೂ ಇತರೆ ಅಭ್ಯರ್ಥಿಗಳಿಗೆ ಚಾಲನಾ ತರಬೇತಿಗೆ ಸಹಕಾರಿಯಾಗಬೇಕಾಗಿದ್ದ ಅತ್ಯಾಧುನಿಕ ಟ್ರ್ಯಾಕ್‌ಗೆ ಅನುದಾನ ಕೊರತೆ ಎದುರಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ಅನುದಾನ ಕೊರತೆಯಿಂದ ಗುತ್ತಿಗೆದಾರರಿಗೆ ಬಿಲ್ ಬಾಕಿ ಪಾವತಿಯಾಗದ ಹಿನ್ನೆಲೆಯಲ್ಲಿ ಶೇ.15 ಕಾಮಗಾರಿ ಉಳಿದುಕೊಂಡಿದೆ. ವಾಯವ್ಯ ಸಾರಿಗೆ ಸಂಸ್ಥೆ ಪ್ರತ್ಯೇಕವಾಗಿ ಎರಡು ದಶಕ ಪೂರ್ಣಗೊಂಡರೂ ನೇಮಕಾತಿ ಹಾಗೂ ಚಾಲನಾ ತರಬೇತಿಗಾಗಿ ಪ್ರತ್ಯೇಕ ಟ್ರ್ಯಾಕ್ ವ್ಯವಸ್ಥೆಯನ್ನು ಹೊಂದಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಲ್ಲಿನ ಹೆಗ್ಗೇರಿ ರಸ್ತೆಯಲ್ಲಿರುವ ಹಿಂದಿನ ನಗರ ಘಟಕದ ಸಂಸ್ಥೆಯ ಸುಮಾರು 5 ಎಕರೆ ಜಾಗದಲ್ಲಿ ಸುಮಾರು 3 ಕೋಟಿ ರೂ. (2.58 ಕೋಟಿ ರೂ. ಟೆಂಡರ್ ಮೊತ್ತ) ವೆಚ್ಚದಲ್ಲಿ ಅತ್ಯಾಧುನಿಕ ಟ್ರ್ಯಾಕ್ ನಿರ್ಮಿಸಲು ಸಂಸ್ಥೆ ಮುಂದಾಗಿತ್ತು. ಎರಡು ಚಾಲಕ ಹಾಗೂ ಚಾಲಕ/ನಿರ್ವಾಹಕ ನೇಮಕಾತಿ ಪ್ರಕ್ರಿಯೆಯನ್ನು ಇದೇ ಟ್ರ್ಯಾಕ್‌ನಲ್ಲಿ ಮಾಡಬೇಕು ಎನ್ನುವ ಉದ್ದೇಶದಿಂದ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಗುತ್ತಿಗೆದಾರರಿಗೆ ನೀಡಲಾಗಿತ್ತು. ಪರಿಣಾಮ ಈಗಾಗಲೇ ಶೇ.85 ಕಾಮಗಾರಿ ಮುಗಿದಿದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಅನುದಾನ ಕೊರತೆಯಿಂದ ಶೇ.15 ಕಾಮಗಾರಿ ಬಾಕಿ ಉಳಿದುಕೊಂಡಿದೆ.
2019 ಡಿಸೆಂಬರ್‌ನಲ್ಲಿ ಸುಮಾರು 2814 ಚಾಲಕ, ಚಾಲಕ/ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅನುದಾನ ಕೊರತೆಯಿಂದ ಸ್ಥಗಿತಗೊಂಡಿರುವ ಈ ಟ್ರ್ಯಾಕ್‌ನಲ್ಲೇ ನೇಮಕಾತಿ ಪ್ರಕ್ರಿಯೆ ನಡೆಯಬೇಕಾಗಿತ್ತು. ಆದರೆ ಕೋವಿಡ್ ಮಹಾಮಾರಿಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ನೇಮಕಾತಿ ಹಾಗೂ ಕಾಮಗಾರಿ ಸ್ಥಗಿತಗೊಂಡಿದೆ. ಈ ಕಾಮಗಾರಿಗೆ ಮೀಸಲಿದ್ದ ಅನುದಾನವನ್ನು ಅನಿವಾರ್ಯವಾಗಿ ನೌಕರರ ವೇತನಕ್ಕೆ ಬಳಸಿಕೊಂಡ ಪರಿಣಾಮ ಕಾಮಗಾರಿ ಅಷ್ಟಕ್ಕೆ ಸ್ಥಗಿತಗೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರಾದೇಶಿಕ ತರಬೇತಿ ಕೇಂದ್ರದ ಹಿಂಭಾಗದಲ್ಲಿ ತಾತ್ಕಾಲಿಕ ಟ್ರ್ಯಾಕ್‌ನಲ್ಲಿ ಚಾಲನಾ ತರಬೇತಿ ನೀಡಲಾಗುತ್ತಿದೆ.