ರಾಮನಗರ: ಆರ್ಥಿಕ ಸಂಪನ್ಮೂಲದ ಕೊರತೆಯಿಂದ ನಮ್ಮ ಪಕ್ಷದ 25ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತೊಂದರೆಯಾಗಿದ್ದು, ಅವರಿಗೆ ಆರ್ಥಿಕ ಸಹಾಯ ಮಾಡಲು ಆಗಲಿಲ್ಲ ಎಂಬ ನೋವು ನನಗೆ ಕಾಡುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಬಿಡದಿ ಹೋಬಳಿ ಕೇತುಗಾನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ತಮ್ಮ ಕುಟುಂಬದವರೊಂದಿಗೆ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕದ ಹಲವೆಡೆ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಿದ್ದರು. ಆದರೆ ಹಣದ ಕೊರತೆಯಿಂದ ಹಿನ್ನಡೆಯಾಗಿದೆ. 25ಕ್ಕೂ ಹೆಚ್ಚು ಗೆಲ್ಲುವ ಕ್ಷೇತ್ರದಲ್ಲಿ ಹಣದ ಕೊರತೆಯಿಂದ ಪೆಟ್ಟುತಿಂದಿದ್ದೇನೆ ಎಂದು ತಿಳಿಸಿದರು.
ಕಾರ್ಯಕರ್ತರು ತಪ್ಪು ತಿಳಿಯ ಬೇಡಿ: ನನ್ನಿಂದ ಕೆಲವು ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಕೆಲ ಕ್ಷೇತ್ರಗಳಲ್ಲಿ ಬೂತ್‌ಗಳಿಗೆ ಹಣನೀಡಲು ಅಭ್ಯರ್ಥಿಗಳಿಗೆ ಸಾಧ್ಯವಾಗಿಲ್ಲ. ಅಭ್ಯರ್ಥಿಗಳು ಬುಕ್ ಆಗಿಬಿಟ್ಟಿದ್ದಾರೆ ಎಂದು ತಪ್ಪು ತಿಳಿಯಬೇಡಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದ ಅವರು, ಕೊನೆಹಂತದಲ್ಲಿ ಅಭ್ಯರ್ಥಿಗಳ ನಿರೀಕ್ಷೆ ಮುಟ್ಟಲು ಆಗಿಲ್ಲ,ನಮ್ಮ ಅಭ್ಯರ್ಥಿಗಳ ಮೇಲೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಬೇಡಿ ಎಂದು ಮನವಿ ಮಾಡಿದರು.
ನಾವೇ ಮುಂದಿರುತ್ತೇವೆ: ಎಷ್ಟೆಲ್ಲಾ ಸಮಸ್ಯೆಯಾದರೂ ಕಾಂಗ್ರೆಸ್ ಬಿಜೆಪಿಗಿಂತ ನಾವೇ ಮುಂದೆ ಇರುತ್ತೇವೆ. ಜೆಡಿಎಸ್‌ಗೆ ಬಹುಮತ ಬರಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಹಣದಿಂದ ಚುನಾವಣೆ ನಡೆಸಿವೆ. ಅತಂತ್ರ ಸರ್ಕಾರ ರಚನೆ ಬಗ್ಗೆ ಮುಂದೆ ಮಾತಾನಾಡುತ್ತೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.