Advertisement

ಅನುದಾನ ಕೊರತೆ : ತ್ಯಾಜ್ಯ ಘಟಕ ಅಪೂರ್ಣ

03:42 PM Aug 03, 2023 | Team Udayavani |

ಮುಳಬಾಗಿಲು: ತಾಲೂಕಿನ ಮುಷ್ಟೂರು ಗ್ರಾ.ಪಂ. ವ್ಯಾಪ್ತಿಯಲ್ಲಿ 9 ಹಳ್ಳಿಗಳಲ್ಲಿ ಸುಮಾರು 7500-8000 ಜನರು ವಾಸವಾಗಿದ್ದಾರೆ. ಪ್ರತಿ ನಿತ್ಯ ಉತ್ಪತ್ತಿಯಾಗುವ ಕಸವನ್ನು ವಿಲೇವಾರಿ ಮಾಡಲು ಕಸ ವಿಲೇವಾರಿ ಮಾಡಲು ಸರ್ಕಾರ ಮೂರು ವರ್ಷಗಳ ಹಿಂದೆ ತ್ಯಾಜ್ಯ ಘಟಕ ನಿರ್ಮಾಣಕ್ಕೆ ಮುಷ್ಟೂರು ಗ್ರಾಮದ ಅಂಚಿನ ಲ್ಲಿರುವ ನಗವಾರದ ಮಾಣಿಕ್ಯನ ಕೆರೆಯಲ್ಲಿ ಸ.ನಂ.416 ರಲ್ಲಿ 1 ಎಕರೆ ಜಮೀನನ್ನು ಮಂಜೂರು ಮಾಡಿದೆ.

Advertisement

ಗುತ್ತಿಗೆದಾರ ಮುನಿಯಪ್ಪ ನರೇಗಾ ಯೋಜನೆಯಡಿ 11.80 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ಘಟಕದ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದರು. ಆದರೆ, ಗುತ್ತಿಗೆದಾರನಿಗೆ ನಿಗದಿತ ಕಾಲಕ್ಕೆ ಹಣ ನೀಡದೇ ಇದ್ದಿದ್ದರಿಂದ 6 ಲಕ್ಷ ಹಣ ಪಡೆದು ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದರಿಂದ ಜನರಿಗೆ ಅನುಕೂಲವಾಗಬೇಕಾದ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ಒಂದುವರೆ ವರ್ಷದಿಂದ ಅಪೂರ್ಣಗೊಂಡಿದೆ. ಗ್ರಾ.ಪಂ.ಗೆ ವರ್ಗಾವಣೆಗೊಂಡ ಪಿಡಿಒ ಮತ್ತೂಬ್ಬ ಗುತ್ತಿಗೆದಾರ ಮುನಿಯಪ್ಪ ನವರ ಮೂಲಕ ಉಳಿಕೆ 5.80 ಲಕ್ಷ ಹಣದಲ್ಲಿ ಕಾಮಗಾರಿ ಪ್ರಾರಂಭಿಸಲು ಅಣಿಯಾಗಿದ್ದಾರೆ. ಅಲ್ಲದೇ ಮುಷ್ಟೂರು ಗ್ರಾಪಂ ವ್ಯಾಪ್ತಿಯ ಕಸ ವಿಲೇವಾರಿ ಘಟಕದ ಕಾಮಗಾರಿ ಪೂರ್ಣಗೊಳ್ಳದೆ ಕಾರಣ ಹಳ್ಳಿಗಳಲ್ಲಿ ಕಸ ವಿಲೇವಾರಿ ಮಾಡದೇ ಎಲ್ಲದರಲ್ಲಿ ಕಸ ಕೊಳೆಯುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.

ಕುಡುಕರ ತಾಣವಾದ ಕಟ್ಟಡ: ಕಸ ವಿಲೇವಾರಿ ಘಟಕದ ಕಟ್ಟಡಕ್ಕೆ ಸುತ್ತಲೂ ಗೋಡೆಗಳನ್ನು ಕಟ್ಟಿರುವುದರಿಂದ ಕುಡುಕರು ಕಟ್ಟಡದ ಒಳಗೆ ನೂರಾರು ಮದ್ಯದ ಮತ್ತು ನೀರಿನ ಖಾಲಿ ಬಾಟಲ್‌ಗ‌ಳು, ಹಾಗೂ ನೀರಿನ ಪ್ಲಾಸ್ಟಿಕ್‌ ಕವರ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಗ್ರಾ.ಪಂ. ಅಧಿಕಾರಿಗಳಿಗೆ ತಿಳಿಸಿದರೆ ಯಾರೊಬ್ಬರೂ ಇತ್ತ ಕಡೆ ಭೇಟಿ ನೀಡಿಲ್ಲವೆಂದು ಗ್ರಾಮಸ್ಥ ರಾಜಪ್ಪ ಆರೋಪಿಸಿದ್ದಾರೆ. ಈಚೆಗೆ ನರೇಗಾದ ವತಿಯಿಂದ ಗ್ರಾಪಂ ನೂತನ ಕಟ್ಟಡವನ್ನು ನಿರ್ಮಾಣ ಮಾಡುವ ಸಮಯದಲ್ಲೇ ತ್ಯಾಜ್ಯ ಘಟಕದ ಕಾಮಗಾರಿ ಕೈ ಗೆತ್ತಿಕೊಳ್ಳಲಾಯಿತು. ಎರಡನ್ನೂ ಒಂದೇ ಬಾರಿ ಉದ್ಘಾಟಿಸಲು ಸೂಚಿಸಲಾಗಿತ್ತು. ಆದರೆ ಪಂಚಾಯತಿ ಕಟ್ಟಡ ಉದ್ಘಾಟನೆ ಆಗಿ ಸುಮಾರು ಒಂದು ವರ್ಷ ಆಗುತ್ತಿದ್ದರೂ, ತ್ಯಾಜ್ಯ ಘಟಕದ ಕಟ್ಟಡ ಇನ್ನೂ ಪೂರ್ಣವಾಗದೆ ಅರ್ಧಕ್ಕೆ ನಿಂತಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.

ಎಲ್ಲೆಂದರಲ್ಲಿ ಕೊಳೆಯುತ್ತಿರುವ ಕಸ: ಇನ್ನು ಎರಡು ಮೂರು ವರ್ಷಗಳಿಂದಲೂ ಘನ ಮತ್ತು ದ್ರವ ತ್ಯಾಜ್ಯ ಘಟಕದ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಎರಡೂ ಗ್ರಾ.ಪಂ.ಗಳ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಕಸ ಎಲ್ಲೆಂದರಲ್ಲಿ ಕೊಳೆಯುತ್ತಿದ್ದರೂ, ಕಟ್ಟಡ ಕಾಮಗಾರಿಗಳ ನಿರ್ಮಾಣಕ್ಕೆ ಹಣ ಬಿಡುಗಡೆಯಾಗದೇ ಇರುವುದರಿಂದ ತ್ಯಾಜ್ಯ ಘಟಕಗಳು ಕೆಲವು ವರ್ಷಗಳಿಂದ ಅಪೂರ್ಣಗೊಂಡು ಕಾಮಗಾರಿ ನನೆಗುದಿಗೆ ಬಿದ್ದಿದೆ ಎನ್ನಲಾಗುತ್ತಿದೆ.

ಅನೈತಿಕ ಚಟುವಟಿಕೆಗಳ ತಾಣ: ಇನ್ನು ಕಾಮಗಾರಿ ಕಟ್ಟಡದ ಗೋಡೆಗಳನ್ನು ಮಾತ್ರ ನಿರ್ಮಿಸಿ ಗೋಡೆಗಳ ಮೇಲೆ ಕಬ್ಬಿಣದ ಸಲಾಕೆಗಳನ್ನು ಮಾತ್ರ ಅಳವಡಿಸಲಾಗಿದೆ.ಇನ್ನು ಗೋಡೆಗಳಿಗೆ ಸ್ವಲ್ಪ ಮಟ್ಟಿಗೆ ಸಿಮೆಂಟ್‌ ಪ್ಲಾಸ್ಟಿಂಗ್‌ ಮಾಡಲಾಗಿದ್ದು ಮಿಕ್ಕ ಎಲ್ಲಾ ಗೋಡೆಗಳು ಪ್ಲಾಸ್ಟಿಂಗ್‌ ಇಲ್ಲದೆ ಇಟ್ಟಿಗೆಯ ಗೋಡೆಗಳು ಮಳೆಗೆ ನೆನೆಯುತ್ತಿದೆ.ಕಟ್ಟಡದ ಒಳಗಡೆ ಒಣ ಮತ್ತು ಹಸಿ ಕಸಕ್ಕೆ ಗೋಡೆಗಳನ್ನು ನಿರ್ಮಿಸಿ ಪ್ರತ್ಯೇಕಿಸುವುದನ್ನು ನಿರ್ಮಿಸಬೇಕಾಗಿದೆ. ಆದರೆ ಕಾಮಗಾರಿ ಪೂರ್ಣವಾಗದ ಕಾರಣ ವಿಲೇವಾರಿ ಘಟಕದ ಕಟ್ಟಡ ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

Advertisement

ಕಾಮಗಾರಿ ಮಾಡುತ್ತಿರುವ ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ್‌ ಅವರಿಗೆ ಇನ್ನು ಬಿಲ್‌ ಆಗಿಲ್ಲ ಎಂದು ತಿಳಿದು ಬಂದಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. -ಗುರುಪಾದಪ್ಪ ಸಂತೋಷ್‌ ಕುಂಬಾರ್‌, ಪಿಡಿಒ ಮುಷ್ಟೂರು

-ಎಂ.ನಾಗರಾಜಯ್ಯ

Advertisement

Udayavani is now on Telegram. Click here to join our channel and stay updated with the latest news.

Next