Advertisement
ಇದು ನಗರದ ಡಿಸಿ ಕಾಂಪೌಂಡ್ ಆವರಣದಲ್ಲಿಯೇ ಇರುವ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಗರ ಕೇಂದ್ರ ಗ್ರಂಥಾಲಯದ ಕಥೆ-ವ್ಯಥೆ. 1991ರಲ್ಲಿ ಸಿಎಂ ಆಗಿದ್ದ ಎಸ್.ಆರ್. ಬಂಗಾರಪ್ಪ ಅವರಿಂದ ಉದ್ಘಾಟನೆಗೊಂಡ ಈ ಗ್ರಂಥಾಲಯ ಲಕ್ಷಾಂತರ ವಿದ್ಯಾರ್ಥಿಗಳ, ಓದುಗರ ಜ್ಞಾನದ ಹಸಿವು ನೀಗಿಸಿದೆ. ಆದರೆ ಈಗ ಮೂಲಸೌಕರ್ಯ ಕೊರತೆಯಿಂದ ಸೊರಗಿದೆ.
Related Articles
Advertisement
ಆದರೆ ವೈಯಕ್ತಿಕ ಪುಸ್ತಕಗಳ ಅಧ್ಯಯನಕ್ಕೆ ಬರುವವರ ಪೈಕಿ ಕೆಲವರಿಂದ ಗ್ರಂಥಾಲಯ ಪುಸಕ್ತಗಳು ಕಳ್ಳತನ ಆಗುತ್ತಿದ್ದರೆ ಕೆಲವರಿಂದ ಪುಸ್ತಕಗಳು ಹಾಳಾಗುತ್ತಿವೆ. ಸಿಬ್ಬಂದಿ ಕೊರತೆಯಿಂದ ಇಂತವರ ಮೇಲೆ ಲಕ್ಷ್ಯ ವಹಿಸಲು ತೊಂದರೆ ಉಂಟಾಗಿದೆ. ಇದಲ್ಲದೇ ಬಿಆರ್‌ಟಿಎಸ್ ಬಸ್ ನಿಲ್ದಾಣಕ್ಕಾಗಿ ಗರಗ ಸಿದ್ಧಲಿಂಗಪ್ಪ ನಗರ ಕೇಂದ್ರ ಗ್ರಂಥಾಲಯದ ಜಾಗ ಹೋದ ಬಳಿಕ ಅವುಗಳ ಸಾಮಗ್ರಿಗಳು ಈ ಗ್ರಂಥಾಲಯಕ್ಕೆ ಬಂದಿದ್ದು, ಅವುಗಳ ಸದ್ಬಳಕೆ ಮಾಡಿಕೊಂಡು ಗ್ರಂಥಾಲಯ ನವೀಕರಣ ಮಾಡಿದರೆ ಸ್ಥಳಾವಕಾಶದ ಕೊರತೆ ನೀಗಲಿದೆ ಎಂಬುದು ಓದುಗರ ಅಭಿಪ್ರಾಯ.
ಮುಖ್ಯ ಗ್ರಂಥಾಲಯಾಧಿಕಾರಿ ಹುದ್ದೆಯೇ ಖಾಲಿ!: ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿ ವ್ಯಾಪ್ತಿಯಲ್ಲಿ 127 ಗ್ರಾಮಗಳಿದ್ದ ಗ್ರಂಥಾಲಯಗಳನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಗ್ರಾಪಂ ವ್ಯಾಪ್ತಿಗೆ ಹಸ್ತಾಂತರಿಸಲಾಗಿದೆ. ಅವುಗಳ ನಿರ್ವಹಣೆ ಜವಾಬ್ದಾರಿ ಜೊತೆಗೆ ಆ ಗ್ರಂಥಾಲಯ ನಿರ್ವಹಣೆ ಮಾಡುವ ಸಿಬ್ಬಂದಿ ವೇತನವನ್ನೂ ಗ್ರಾಪಂ ಗಳೇ ಮಾಡುವಂತೆ ಸೂಚಿಸಲಾಗಿದೆ. ಸೆಪ್ಟೆಂಬರ್ ತಿಂಗಳವರೆಗೆ ವೇತನ ಆಗಿದ್ದು, ಅಕ್ಟೋಬರ್ ತಿಂಗಳಿನಿಂದ ಗ್ರಾಪಂಗಳಿಂದಲೇ ವೇತನ ಆಗಬೇಕಿದೆ. ಇನ್ನೂ ತಾಲೂಕಾಮಟ್ಟದಲ್ಲಿ ಇರುವ ಶಾಖಾ ಗ್ರಂಥಾಲಯಗಳು ನವಲಗುಂದ, ಕುಂದಗೋಳ, ಕಲಘಟಗಿ, ಹುಬ್ಬಳ್ಳಿ ತಾಲೂಕಿನ ಹೆಬಸೂರ, ಅಣ್ಣಿಗೇರಿಯಲ್ಲಿ ಇದ್ದು, ಅಳ್ನಾವರದಲ್ಲಿ ಹೊಸದಾಗಿ ಗ್ರಂಥಾಲಯ ಶಾಖೆ ಆರಂಭಿಸಲು ಅನುಮೋದನೆ ಪಡೆಯಬೇಕಿದೆ. ಈ ಐದು ಶಾಖಾ ಗ್ರಂಥಾಲಯಗಳಿಗೆ ಮಂಜೂರಾತಿ ಇರುವ 17 ಹುದ್ದೆಗಳ ಪೈಕಿ 4 ಅಷ್ಟೇ ಭರ್ತಿ ಇದ್ದು, ಉಳಿದ ಹುದ್ದೆಗಳು ಖಾಲಿ ಇವೆ. ಇದಲ್ಲದೇ ಜಿಲ್ಲಾ ಕೇಂದ್ರ ಗ್ರಂಥಾಲಯ ಕಚೇರಿಯ ಮುಖ್ಯ ಗ್ರಂಥಾಲಯಧಿಕಾರಿ ಹುದ್ದೆ 2015ರಿಂದ ಖಾಲಿ ಇದೆ.
ಗಣಕೀಕರಣ ಕಾರ್ಯ ಸ್ಥಗಿತ : ಓದುಗರಿಗೆ ತಮಗೆ ಬೇಕಾದ ಪುಸ್ತಕ ಸುಲಭವಾಗಿ ಸಿಗುವಂತೆ ಮಾಡಲು ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿತ್ತು. ಗ್ರಂಥಾಲಯದ ಪುಸ್ತಕಗಳ ಗಣಕೀಕರಣ ಕಾರ್ಯ ಆರಂಭವಾಗಿ ಶೇ.70 ಪುಸ್ತಕಗಳ ಗಣಕೀಕರಣ ಆಗಿದೆ. ಇನ್ನೂ ಶೇ.30 ಕಾರ್ಯ ಬಾಕಿ ಇದೆ. ಎರಡು ವರ್ಷಗಳ ಹಿಂದೆ ಸಾಫ್ ವೇರ್‌ನಲ್ಲಿ ಕೆಲ ತಾಂತ್ರಿಕ ದೋಷ ಉಂಟಾಗಿ ಈ ಕಾರ್ಯ ಸ್ಥಗಿತವಾಗಿದೆ. ಅದನ್ನು ಸರಿಪಡಿಸಿ ಪುಸ್ತಕಗಳ ಗಣಕೀಕರಣ ಕಾರ್ಯಕ್ಕೆ ಈವರೆಗೂ ಮರುಚಾಲನೆ ನೀಡುವ ಕಾರ್ಯ ಆಗಿಲ್ಲ. ಇದರೊಂದಿಗೆ ಹೊಸದಾಗಿ ಬಂದಿರುವ ಪುಸ್ತಕಗಳ ನೋಂದಣಿ ಕಾರ್ಯವೂ ತಕ್ಕಮಟ್ಟಿಗೆ ಆಗಿಲ್ಲ. ಸ್ಥಳಾವಕಾಶ ಕೊರತೆಯಿಂದ ಎರಡು ಬದಿಯ ಪುಸ್ತಕಗಳ ಮಧ್ಯೆ ಇದ್ದ ಖಾಲಿ ಜಾಗದಲ್ಲೂ ಪುಸ್ತಕ ಇಡಲಾಗಿದೆ. ಇದರಿಂದ ಪುಸ್ತಕ ಹುಡುಕಲು ಓದುಗರಿಗೆ ಅಷ್ಟೇ ಅಲ್ಲ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಿರುವವರಿಗೂ ಕಷ್ಟವಾಗುತ್ತಲಿದೆ.
ಸಂಚಾರ ನಿಲ್ಲಿಸಿದ ಗ್ರಂಥಾಲಯ: ಅವಳಿನಗರದಲ್ಲಿ ಸಂಚಾರ ನಡೆಸಿ ಜನರಿದ್ದ ಸ್ಥಳದಲ್ಲೇ ಅವರಿಷ್ಟದ ಪುಸ್ತಕಗಳನ್ನು ನೀಡಿ ಅವರಲ್ಲಿ ಓದುವ ಹವ್ಯಾಸ ಬೆಳೆಯಲು ಸಹಕಾರಿಯಾಗಿದ್ದ ಸಂಚಾರಿ ಗ್ರಂಥಾಲಯ ಈಗ ಸಂಚಾರವಿಲ್ಲದೆ 3-4 ವರ್ಷಗಳೇ ಕಳೆದಿದೆ. ವಾಹನದ ಚಾಲಕ ಮೃತಪಟ್ಟ ಬಳಿಕ ಹೊಸ ಚಾಲಕ ನೇಮಕ ಆಗದೆ ಕೆಲ ವರ್ಷಗಳ ಕಾಲ ಕೇಂದ್ರ ಗ್ರಂಥಾಲಯದ ಆವರಣದಲ್ಲೇ ವಾಹನ ಸಂಪೂರ್ಣ ಜಂಗು ತಿಂದ ಸ್ಥಿತಿಯಲ್ಲೇ ನಿಂತಿತ್ತು. ಬಳಿಕ ಆ ವಾಹನ ಗುಜರಿ ಹಾಕಿ ನೂತನ ವಾಹನ ಖರೀದಿ ಮಾಡಲು ಪ್ರಸ್ತಾವನೆ ಸಲ್ಲಿಸಿ ವರ್ಷಗಳೇ ಉರುಳಿದರೂ ಸರ್ಕಾರದಿಂದ ಆನುಮೋದನೆ ಸಿಕ್ಕಿಲ್ಲ. ಅವಳಿನಗರಕ್ಕಾಗಿ ಇದ್ದ ಏಕೈಕ ಸಂಚಾರಿ ಗ್ರಂಥಾಲಯ ಮತ್ತೆ ಸಂಚಾರ ಆರಂಭಿಸುವಂತೆ ಮಾಡುವ ಕಾರ್ಯವಾಗಬೇಕಿದೆ.
ಭರ್ತಿಯಾಗದ ಹುದ್ದೆಗಳು: ನಗರ ಕೇಂದ್ರ ಗ್ರಂಥಾಲಯದ ಅಡಿಯಲ್ಲಿ ಅವಳಿನಗರದಲ್ಲಿ ಒಟ್ಟು 22 ನಗರ ಕೇಂದ್ರ ಗ್ರಂಥಾಲಯದ ಶಾಖೆಗಳಿವೆ. ಈ ಪೈಕಿ ಹುಬ್ಬಳ್ಳಿಯಲ್ಲಿ 12 ಇದ್ದರೆ, ಧಾರವಾಡದಲ್ಲಿ 10 ಇವೆ. ಇದರೊಂದಿಗೆ 12 ಸೇವಾ ಕೇಂದ್ರ ಗ್ರಂಥಾಲಯಗಳಿವೆ. ಈ ಎಲ್ಲ ಗ್ರಂಥಾಲಯಗಳಲ್ಲಿ ಸೇರಿ ಒಟ್ಟು 10 ಲಕ್ಷಕ್ಕೂ ಹೆಚ್ಚು ಪುಸ್ತಕಗಳಿದ್ದರೆ 30 ಸಾವಿರಕ್ಕೂ ಹೆಚ್ಚು ಅಧಿಕೃತವಾಗಿ ಸದಸ್ಯತ್ವ ಪಡೆದ ಓದುಗರಿದ್ದಾರೆ. ಈ ಅವಳಿನಗರದ ಗ್ರಂಥಾಲಯಗಳಿಗಾಗಿ ಮಂಜೂರಾತಿ ಇರುವ 63 ಹುದ್ದೆಗಳ ಪೈಕಿ 34 ಹುದ್ದೆಗಳು ಮಾತ್ರ ಭರ್ತಿ ಇವೆ. 29 ಹುದ್ದೆಗಳು ಖಾಲಿ ಇವೆ. ಈ ಪೈಕಿ ಗ್ರಂಥಪಾಲಕರ, ಗ್ರಂಥಾಲಯ ಸಹಾಯಕರು, ಗ್ರಂಥಾಲಯ ಸಹವರ್ತಿಗಳ ಹುದ್ದೆಗಳಿದ್ದರೆ ಉಪ ನಿರ್ದೇಶಕರ ಹುದ್ದೆಯೂ ಖಾಲಿ ಇರುವುದು ವಿಪರ್ಯಾಸ.
ಸಂಚಾರಿ ಗ್ರಂಥಾಲಯ ಪುನರ್ ಆರಂಭಕ್ಕಾಗಿ ಹೊಸ ವಾಹನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಹೊಸ ವಾಹನ ಬರುವಿಕೆಗೆ ಕಾಯುತ್ತಿದ್ದೇವೆ. ಸದ್ಯ ಮಂಜೂರಾತಿ ಇರುವ ಹುದ್ದೆಗಳಲ್ಲಿ ಶೇ.50 ಹುದ್ದೆಗಳು ಖಾಲಿ ಇದ್ದು, ಇದರಿಂದ ಈಗಿರುವವರ ಮೇಲೆ ಒತ್ತಡ ಇದೆ. –ಎಂ.ಬಿ. ಕರಿಗಾರ, ಪ್ರಭಾರ ಉಪನಿರ್ದೇಶಕ, ನಗರ ಕೇಂದ್ರ ಗ್ರಂಥಾಲಯ, ಹು-ಧಾ
-ಶಶಿಧರ್ ಬುದ್ನಿ