Advertisement

ಹಾರಾಡಿ ಸರಕಾರಿ ಶಾಲೆ: ಸೌಕರ್ಯ ಕೊರತೆಯಲ್ಲೂ ದಾಖಲೆ

07:57 PM Sep 05, 2021 | Team Udayavani |

ಪುತ್ತೂರು: ಈ ಬಾರಿ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ದಾಖಲೆ ಬರೆದಿರುವ ಹಾರಾಡಿ ಸರಕಾರಿ ಮಾದರಿ ಉನ್ನತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂಲ ಸೌಕರ್ಯಗಳ ಬೇಡಿಕೆ ಪಟ್ಟಿಯು ದಾಖಲೆಯ ಪ್ರಮಾಣದಲ್ಲೇ ಇದೆ.

Advertisement

ತರಗತಿ ಕೊಠಡಿ, ಶೌಚಾಲಯ, ಶಿಕ್ಷಕರು, ಕಂಪ್ಯೂಟರ್‌, ಬೆಂಚ್‌, ಡೆಸ್ಕ್ ಇವು ಇಲ್ಲಿನ ತುರ್ತು ಅಗತ್ಯವಾಗಿದ್ದು ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಇದೆ.

ದಾಖಲೆಯ ದಾಖಲಾತಿ :

ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಬೋಧನ ವ್ಯವಸ್ಥೆ ಹೊಂದಿರುವ ಹಾರಾಡಿ ಪ್ರಾಥಮಿಕ ಶಾಲೆ ತಾಲೂಕಿನಲ್ಲಿ ಅತ್ಯಧಿಕ ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ವಿದ್ಯಾಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ಇಲ್ಲಿನ ಶೈಕ್ಷಣಿಕ ಸಾಮರ್ಥ್ಯವನ್ನು ಗಮನಿಸಿ ಪೋಷಕರು ಖಾಸಗಿ ಶಾಲೆಗಳಿಂದ ಇಲ್ಲಿಗೆ ಮಕ್ಕಳನ್ನು ಸೇರಿಸಿದ ಉದಾಹರಣೆಗಳಿವೆ. ಈ ಶೈಕ್ಷಣಿಕ ವರ್ಷದಲ್ಲಿ 122 ಮಂದಿ ವಿದ್ಯಾರ್ಥಿಗಳು ಹೊಸದಾಗಿ ದಾಖಲಾತಿ ಪಡೆದಿದ್ದಾರೆ. 1 ರಿಂದ 8 ನೇ ತರಗತಿ ತನಕ ಒಟ್ಟು 655 ವಿದ್ಯಾರ್ಥಿಗಳಿದ್ದಾರೆ. ಕಳೆದ ವರ್ಷ 533 ವಿದ್ಯಾರ್ಥಿಗಳಿದ್ದರು. ಈ ವರ್ಷದ ದಾಖಲಾತಿ ದಾಖಲೆಯ ಮಟ್ಟದ್ದಾಗಿದೆ.

ಕೊಠಡಿ ಕೊರತೆ :

Advertisement

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾದ ಕಾರಣ ಹಳೆಯ ಶಾಲೆಯ ನಾಲ್ಕು ಕೊಠಡಿಗಳನ್ನು ತರಗತಿ ನಡೆಸಲು ಬಳಸಲಾಗಿತ್ತು. ಪ್ರಸ್ತುತ ಈ ಕೊಠಡಿಗಳು ಸುಸ್ಥಿತಿಯಲ್ಲಿಲ್ಲದ ಕಾರಣ ನೆಲಸಮ ಮಾಡಿ ಹೊಸ ಕಟ್ಟಡ ರಚನೆಯ ಅನಿವಾರ್ಯ ಉಂಟಾಗಿದೆ. ಹಳೆ ಕಟ್ಟಡದಲ್ಲಿ 6, 7 ನೇ ತರಗತಿ, ಕಂಪ್ಯೂಟರ್‌ ತರಗತಿ ಹಾಗೂ ಸ್ಟೇಜ್‌ ಇದೆ. ಉಳಿದ ತರಗತಿಗಳು ಹೊಸ ಕಟ್ಟಡದಲ್ಲಿ ನಡೆಯುತ್ತಿದೆ. ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇನ್ನೂ 10 ಕೊಠಡಿಗಳ ಆವಶ್ಯಕತೆ ಇದೆ ಎನ್ನುತ್ತಿದೆ ಇಲ್ಲಿನ ವಾಸ್ತವ ಸ್ಥಿತಿ.

ಶೌಚಾಲಯ ಇಲ್ಲ  :

ಬಾಲಕರಿಗೆ ಇರುವುದು ಒಂದು ಶೌಚಾಲಯ ಮಾತ್ರ. ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ಐದು ಶೌಚಾಲಯಗಳ ಅಗತ್ಯವಿದೆ. ಬಾಲಕಿಯರ ವಿಭಾಗದಲ್ಲಿ ಪೋಷಕರ ಸಹಕಾರ ಪಡೆದು 6 ಶೌಚಾಲಯ ನಿರ್ಮಿಸಲಾಗಿದ್ದು, ಇನ್ನೂ ಐದು ಶೌಚಾಲಯದ ಆವಶ್ಯಕತೆ ಇದೆ. ಒಟ್ಟು 10 ಶೌಚಾಲಯ ನಿರ್ಮಿಸುವ ಬೇಡಿಕೆ ಇಲ್ಲಿನದ್ದಾಗಿದೆ.

ಡೆಸ್ಕ್, ಬೆಂಚ್‌ ಕೊರತೆ :

ವರ್ಷದಿಂದ ವರ್ಷಕ್ಕೆ ಇಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಅದಕ್ಕೆ ಅಗತ್ಯವಿರುವಷ್ಟು ಬೆಂಚ್‌, ಡೆಸ್ಕ್ ಪೂರೈಕೆ ಆಗಿಲ್ಲ.

ಚಾಲೂ ಆಗದ ಕಂಪ್ಯೂಟರ್‌ :

ಸದ್ಯಕ್ಕೆ ಶಾಲೆಯಲ್ಲಿ 8 ಕಂಪ್ಯೂಟರ್‌ ಇದ್ದರೂ 3 ಮಾತ್ರ ಕಾರ್ಯನಿರತ ಆಗಿದೆ. ಉಳಿದವು ಹಾಳಾಗಿದೆ. 6 ರಿಂದ 8 ನೇ ತರಗತಿ ತನಕದ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ಬಾರಿ, 4 ಮತ್ತು 5 ತರಗತಿಗೆ ವಾರದಲ್ಲಿ 1 ಬಾರಿ ಕಂಪ್ಯೂಟರ್‌ ಶಿಕ್ಷಣ ನೀಡಲಾಗುತ್ತಿದೆ. ಇಲ್ಲಿ 15 ಕಂಪ್ಯೂಟರ್‌ನ ಅಗತ್ಯವಿದೆ.

ಹಾಗಾಗಿ ಆಂಗ್ಲ ಮಾಧ್ಯಮ ವಿಭಾಗದಲ್ಲಿ 1 ರಿಂದ 3 ನೇ ತರಗತಿ ತನಕ ನಿಯಮಾನುಸಾರದಂತೆ ಬೆಂಚ್‌, ಡೆಸ್ಕ್ ಇಲ್ಲಿಲ್ಲ. 2012-13 ರಲ್ಲಿ 17 ಡೆಸ್ಕ್ ನೀಡಲಾಗಿದ್ದು ಅನಂತರ ಪೂರೈಕೆ ಆಗಿಲ್ಲ. ಈಗಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಒಟ್ಟು 50 ಡೆಸ್ಕ್ನ ಅಗತ್ಯವಿದೆ.

ಶಿಕ್ಷಕರ ಕೊರತೆ :

ಶಾಲೆಯಲ್ಲಿ ಒಟ್ಟು 15 ಮಂಜೂರಾತಿ ಹುದ್ದೆಗಳಿವೆ. ಇದರಲ್ಲಿ ಈಗ ಇರುವುದು 10 ಮಂದಿ ಮಾತ್ರ. ಮುಖ್ಯಗುರು ಹುದ್ದೆ ಖಾಲಿ ಇರುವ ಕಾರಣ ಓರ್ವ ಶಿಕ್ಷಕಿಗೆ ಪ್ರಭಾರ ನೀಡಲಾಗಿದೆ. ಓರ್ವ ದೈಹಿಕ ಶಿಕ್ಷಣ ಶಿಕ್ಷಕಿ. ಹಾಗಾಗಿ ಉಳಿದ 9 ಮಂದಿ ಮಾತ್ರ ಪಠ್ಯ ಬೋಧನೆಗೆ ಲಭ್ಯವಾಗುತ್ತಾರೆ. 15 ಹುದ್ದೆಗಳ ಪೈಕಿ 1 ಎಚ್‌ಎಂ, 4 ಸಹಾಯಕ ಶಿಕ್ಷಕಿಯರ ಹುದ್ದೆ ಖಾಲಿ ಇದೆ. ಆರ್‌ಟಿಇ ಪ್ರಕಾರ 30 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರ ಅಗತ್ಯವಿದ್ದು ಅಂದರೆ ಇಲ್ಲಿ 22 ಶಿಕ್ಷಕರ ಅಗತ್ಯತೆ ಇದೆ. ಈ ಬಾರಿ 1 ನೇ ತರಗತಿಗೆ 145 ವಿದ್ಯಾರ್ಥಿ ಸಂಖ್ಯೆ ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 50 ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.

-ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next