Advertisement

ಸ್ಮಶಾನಗಳಿಗಿಲ್ಲ ಮೂಲ ಸೌಲಭ್ಯ

04:49 PM Dec 09, 2019 | Team Udayavani |

ಮದ್ದೂರು: ಪಟ್ಟಣದಲ್ಲಿ 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಪುರಸಭೆ ವ್ಯಾಪ್ತಿಯಲ್ಲಿ 6ಕ್ಕೂ ಅಧಿಕ ಸ್ಮಶಾನಗಳು ಮೂಲ ಸೌಲಭ್ಯಗಳಿಲ್ಲದೆ ಬಣಗುಡುತ್ತಿವೆ.

Advertisement

ಪುರಸಭೆ ಸ್ವಾಮ್ಯಕ್ಕೆ ಸೇರಿದ ಒಟ್ಟು 6 ಸ್ಮಶಾನಗಳು ಪಟ್ಟಣ ವ್ಯಾಪ್ತಿಯಲ್ಲಿದ್ದು, ವಿವಿಧ ಪಂಗಡಗಳ ಜನರಿಗಾಗಿ ಪ್ರತ್ಯೇಕವಾಗಿ ಹಿಂದಿನಿಂದಲೂ ಇರುವ ಸ್ಮಶಾನಗಳಲ್ಲಿ ಅಗತ್ಯವಿರುವ ಸೌಲಭ್ಯಗಳು ಲಭ್ಯವಿಲ್ಲ. ಆದರೂ ಸಾರ್ವಜನಿಕರು ಶವ ಸಂಸ್ಕಾರ ನಡೆಸುತ್ತಿದ್ದು, ಈ ಸಂದರ್ಭಗಳಲ್ಲಿ ಪರದಾಡುವಂತಹ ಸ್ಥಿತಿ ಇಂದಿಗೂ ಇದೆ.

ನಿಲ್ಲಲು ಸ್ಥಳವಿಲ್ಲ: ಕುಡಿಯುವ ನೀರು, ಮುಗಿಲೆತ್ತರಕ್ಕೆ ಬೆಳೆದು ನಿಂತಿರುವ ಕಳೆ ಸಸ್ಯಗಳು, ಕಾಂಪೌಂಡ್‌ ಅವ್ಯವಸ್ಥೆ, ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಟ್ಟಿಗೆ ಚಿತಾಗಾರಗಳು, ಮಳೆ, ಬಿಸಿಲಿನ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ನಿಲ್ಲಲು ಸ್ಥಳವಿಲ್ಲದ ಸ್ಥಿತಿ, ಒಳಗೊಂಡಂತೆ ಇನ್ನಿತರೆ ಸಮಸ್ಯೆಗಳು ಮೇಲ್ಕಂಡ ಸ್ಥಳದಲ್ಲಿ ಹಾಸಿಹೊದ್ದಿ ಮಲಗಿವೆ.

ಬಜೆಟ್‌ನಲ್ಲಿ ಹಣ: ಸ್ಥಳೀಯ ಪುರಸಭೆ ಪ್ರತಿವರ್ಷ ತನ್ನ ವ್ಯಾಪ್ತಿಯ ಸ್ಮಶಾನಗಳ ಅಭಿವೃದ್ಧಿ ಹಾಗೂ ಇನ್ನಿತರೆ ಚಟುವಟಿಕೆಗಳಿಗಾಗಿ ಲಕ್ಷಾಂತರ ರೂ. ತಮ್ಮ ಆಯವ್ಯಯ ಮಂಡನೆ ವೇಳೆ ತೆಗೆದಿರಿಸಲಾಗುತ್ತಿದೆ. ಆದರೆ, ಇಂದಿಗೂ ಮೂಲ ಸೌಲಭ್ಯಗಳು ಕಲ್ಪಿಸದೇ ಶವ ಸಂಸ್ಕಾರ ಮಾಡುವವರು ಪರದಾಡುವಂತಾಗಿದೆ.

ದುರ್ಬಳಕೆ: ನಿರ್ಜನ ಪ್ರದೇಶವಾದ ಹಿನ್ನೆಲೆಯಲ್ಲಿ ಕೆಲ ಸ್ಮಶಾನಗಳಲ್ಲಿ ಕಳೆ ಸಸ್ಯಗಳು ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದು, ಕೆಲ ಯುವಕರ ಗುಂಪುಗಳು ಮಧ್ಯಾಹ್ನದ ವೇಳೆ ಜೂಜಾಟ, ಸಂಜೆಯಾಗುತ್ತಿದ್ದಂತೆ ಮದ್ಯಪಾನ ಮತ್ತಿತರ ಕೃತ್ಯಗಳಿಗೆ ಸ್ಮಶಾನಗಳನ್ನು ಆಶ್ರಯಿಸಿಕೊಂಡಿರುವುದು ತಲೆನೋವಾಗಿ ಪರಿಣಮಿಸಿದೆ. ಇದರೊಟ್ಟಿಗೆ ಮದ್ಯಪಾನದ ಬಳಿಕ ಖಾಲಿ ಬಾಟಲ್‌ ಗಳನ್ನು ಪುಡಿ ಮಾಡುವ ದುಷ್ಕಮಿಗಳ ಕೃತ್ಯ ಸ್ಮಶಾನದೆಲ್ಲೆಡೆ ಗಾಜಿನ ಚೂರುಗಳೇ ತುಂಬಿದ್ದು, ಶವಸಂಸ್ಕಾರ ಮತ್ತು ಇತರೆ ಕಾರ್ಯಗಳಿಗೆ ತೆರಳುವ ಸಾರ್ವಜನಿಕರಿಗೆ ತೊಡಕಾಗಿ ಪರಿಣಮಿಸಿದೆ.

Advertisement

ಒತ್ತುವರಿ: ದುರಂತವೆಂಬಂತೆ ಸತ್ತ ವೇಳೆ ಸಂಸ್ಕಾರಕ್ಕೆಂದು ಹಿಂದಿನಿಂದಲೂ ಉಳಿಸಿರುವ ಸ್ಮಶಾನ ಜಾಗವನ್ನು ನೆರೆಹೊರೆಯ ಜಮೀನಿನ ಮಾಲಿಕರು ಒತ್ತುವರಿ ಮಾಡಿಕೊಂಡಿದ್ದು, ಈ ಮಾಲಿಕರ ವಿರುದ್ಧ ಕ್ರಮಕೈಗೊಂಡು ಒತ್ತುವರಿ ತೆರವಿಗೆ ಮುಂದಾಗದ ತಾಲೂಕು ಆಡಳಿತಕ್ಕೆ ಸ್ಥಳೀಯ ಸಾರ್ವಜನಿಕರು ಹಿಡಿಶಾಪ ಹಾಕುವಂತಾಗಿದೆ.

ಕಳ್ಳರ ಪಾಲು: ಪಟ್ಟಣದ ಹೊರವಲಯದ ಶಿಂಷಾ ನದಿ ದಡ, ಕೊಲ್ಲಿ ವೃತ್ತ ಸಮೀಪದ ಹೊಳೆಆಂಜನೇಯ ರಸ್ತೆ ಬಳಿಯ ವೀರಶೈವರ ಸ್ಮಶಾನ ಮತ್ತು ಪಟ್ಟಣದ ಹೊರವಲಯದಲ್ಲಿರುವ ಪರಿಶಿಷ್ಟರ ಸ್ಮಶಾನ ಸೇರಿದಂತೆ ನೂತನವಾಗಿ ಎಚ್‌.ಕೆ.ವಿ ನಗರದ ಸ್ಮಶಾನಗಳಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಕಟ್ಟಿಗೆ ಚಿತಾಗಾರಗಳಿಗೆ ಅಳವಡಿಸಿರುವ ಕಲಾರ್‌ ಶೀಟ್‌ಗಳು, ಕಬ್ಬಿಣದ ಕಂಬಿಗಳು, ಕಳ್ಳಕಾಕರ ಪಾಲಾಗಿದ್ದು ಸೇವೆಯಿಂದ ದೂರವೇ ಉಳಿದಿವೆ.

6 ಸ್ಮಶಾನಗಳಲ್ಲಿಯೂ ಕುಡಿಯುವ ನೀರು, ಸಾರ್ವಜನಿಕರಿಗೆ ಮಳೆ, ಬಿಸಿಲಿನ ಸಂದರ್ಭಗಳಲ್ಲಿ ನೆರಳು ಕಲ್ಪಿಸುವ ಯಾವುದೇ ವ್ಯವಸ್ಥೆ ಏರ್ಪಡಿಸುವಲ್ಲಿ ಹಿಂದಿನಿಂದಲೂ ವೈಫ‌ಲ್ಯ ಮುಂದುವರಿದಿದ್ದು, ಸ್ಮಶಾನಕ್ಕೆ ಸಾಗುವ ರಸ್ತೆಯ ಇಕ್ಕೆಲಗಳು ಒತ್ತುವರಿಯಾಗಿ ಕಿರಿದಾಗಿರುವ ಜೊತೆಗೆ ಮುಳ್ಳು, ಕಳೆ ಸಸ್ಯಗಳಿಂದ ತುಂಬಿರುವುದು ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಒಟ್ಟಾರೆ ಮದ್ದೂರು ಪಟ್ಟಣದ 30 ಸಾವಿರಕ್ಕೂ ಅಧಿಕ ಜನ ಸಂಖ್ಯೆಯುಳ್ಳ ಪ್ರದೇಶದಲ್ಲಿ ಇರುವ ಸ್ಮಶಾನಗಳ ಪುನಶ್ಚೇತನ ಜತೆಗೆ ದುಷ್ಕರ್ಮಿಗಳಿಂದ ಉಂಟಾಗುತ್ತಿರುವ ಅನಾಹುತ ತಪ್ಪಿಸುವಲ್ಲಿ ತಾಲೂಕು ಆಡಳಿತ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಬೇಕೆಂಬುದೇ ಸ್ಥಳೀಯರ ಆಗ್ರಹವಾಗಿದೆ.

 

-ಎಸ್‌.ಪುಟ್ಟಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next