Advertisement
ಒಂದುವರೆ ದಶಕದ ಹಿಂದೆ ಕೆಂಪೇಗೌಡನದೊಡ್ಡಿ ಬಳಿಯ ಜೀಗೇನಹಳ್ಳಿ ಪ್ರದೇಶದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರವು ಅರ್ಕಾವತಿ ಬಡಾವಣೆ ಹೆಸರಿನಲ್ಲಿ ಲೇಔಟ್ ನಿರ್ಮಿಸಿದ್ದು, ಅದರೀಗ ಅದು ಹಾಳು ಕೊಂಪೆ ಯಾಗಿದ್ದು, ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗುತ್ತಿದೆ. ಆ ಮೂಲಕ ಸ್ವಂತ ಸೂರು ಕಟ್ಟಿಕೊಳ್ಳುವ ಜನರ ಕನಸಿಗೆ ತಣ್ಣೀರು ಎರಚಿದಂತಾಗಿದೆ. ರಾಮನಗರದ ನಿವೇಶನ ರಹಿತರಿಗೆ ಕಡಿಮೆ ಖರ್ಚಿನಲ್ಲಿ ಸ್ವಂತ ಸೂರು ಒದಗಿಸುವ ಸಲುವಾಗಿ ಅಂದಿನ ರಾಮನಗರ-ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ನಗರಕ್ಕೆ ಹೊಂದಿಕೊಂಡಂತೆ ಇರುವ ಜೀಗೇನಹಳ್ಳಿಯಲ್ಲಿ ಅರ್ಕಾವತಿ ಬಡಾವಣೆಯನ್ನು ನಿರ್ಮಾಣ ಮಾಡಿತ್ತು. ಸರ್ಕಾರದ ಅಂಗ ಸಂಸ್ಥೆಯೊಂದು ರಾಮನಗರದಲ್ಲಿ ಭೂ ಮಾಲೀಕರಿಂದ ಶೇ 40, 60% ಲೆಕ್ಕಾಚಾರದಲ್ಲಿ ಎರಡನೇ ಹಂತದಲ್ಲಿ ನಿರ್ಮಿಸಿದ ಬಡಾವಣೆ ಇದಾಗಿತ್ತು.
Related Articles
Advertisement
ಮೂಲಭೂತ ಸೌಲಭ್ಯ ಮರೀಚಿಕೆ: ಬಡಾವಣೆ ಅಭಿವೃದ್ಧಿ ವೇಳೆ ಉದ್ಯಾನಕ್ಕೆಂದು ಮೀಸಲಿಟ್ಟ ಜಾಗ ಇಂದು ಪಾಳು ಬಿದ್ದಿದ್ದು, ಪ್ರಾಧಿಕಾರ ಅದನ್ನು ಅಭಿವೃದ್ಧಿಪಡಿಸುವ ಗೋಜಿಗೆ ಹೋಗಿಲ್ಲ. ಅಷ್ಟೇ ಏಕೆ ಒಳಚರಂಡಿ ಸಂಪರ್ಕವಾಗಲಿ, ಒಳ ರಸ್ತೆಗಳಾಗಲಿ ಯಾವೊಂದು ಸುಸ್ಥಿತಿಯಲ್ಲಿ ಇಲ್ಲ. ರಸ್ತೆಗಳ ಪಕ್ಕ ಹಾಕಿದ ನಾಮಫಲಕಗಳು ತುಕ್ಕು ಹಿಡಿದಿದ್ದು, ಕಳೆದೊಂದು ದಶಕದಿಂದ ಈ ಬಡಾವಣೆ ಎಳ್ಳಷ್ಟೂ ಅಭಿವೃದ್ಧಿ ಕಂಡಿಲ್ಲ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿದ್ದಾರೆ.
ಅನೈತಿಕ ತಾಣವಾಗಿ ಮಾರ್ಪಟ್ಟ ಬಡಾವಣೆ: ನಿರ್ಜನ ಪ್ರದೇಶದಂತೆ ಕಾಣುವ ಬಡಾವಣೆಯಲ್ಲಿ ಹೇಳ್ಳೋರು ಕೇಳ್ಳೋರು ಯಾರು ಇಲ್ಲದಂತಾಗಿ ಇಲ್ಲಿ ಕುಡುಕರ ಹಾವಳಿ ಹೆಚ್ಚಾಗಿದ್ದು, ರಾಶಿಗಟ್ಟಲೆ ಮದ್ಯದ ಬಾಟಲಿ ಕಾಣ ಸಿಗುತ್ತವೆ. ಇಸ್ಪೀಟ್ ಹಾಗೂ ಕುಡುಕರಿಗೆ ಸದ್ಯಕ್ಕೆ ಬಡಾವಣೆ ಆಶ್ರಯ ನೀಡಿದ್ದು, ಹಗಲು ಹೊತ್ತಿನಲ್ಲೇ ಇಲ್ಲಿ ಮದ್ಯ ವ್ಯಸನಿಗಳು ಬರುತ್ತಾರೆ. ಇನ್ನು ರಾತ್ರಿ ಹೊತ್ತಿನಲ್ಲಂತೂ ಹೇಳುವ ಹಾಗಿಲ್ಲ. ಬೈಕ್‌ಗಳಲ್ಲಿ ಇವರ ಓಡಾಟ ಸಾರ್ವಜನಿಕರಿಗೂ ಕಿರಿಕಿರಿ ತಂದೊಡ್ಡಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಪೊಲೀಸ್ ಬೀಟ್ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಸ್ಥಳೀಯರ ಆಗ್ರಹ.
ಹೊಸದಾಗಿ ಅಧಿಕಾರ ವಹಿಸಿಕೊಂಡು ಮೊದಲ ಹೆಜ್ಜೆಯಾಗಿ ಜಿಲ್ಲೆಯಲ್ಲಿ ನಿರ್ಮಿಸಿರುವ ಮೂರು ಲೇಔಟ್‌ಗಳ ಸುಸ್ಥಿತಿಗೆ ಅಗತ್ಯ ಸೌಲಭ್ಯ ಒದಗಿಸಲು ಆದ್ಯತೆ ನೀಡಬೇಕೆಂದು ನಿರ್ಧರಿಸಿದ್ದೇವೆ. ಮೊದಲಿಗೆ ಅಲ್ಲಿ ಕಟ್ಟಲಾಗಿರುವ 20 ಮನೆಗಳಿಗೆ ವಿದ್ಯುತ್ ಸಂಪರ್ಕ ಸಕ್ರಿಯಗೊಳಿಸಿ ಆರ್‌ಆರ್ ನಂ ಕೊಡಿಸಬೇಕು. ಬಳಿಕ ಪೈಪ್ ಲೈನ್, ವಿದ್ಯುತ್ ಲೈನ್‌ಗಳು ಹಾಳಾಗಿವೆ. ಎಲ್ಲಕ್ಕೂ ಟೆಂಡರ್ ಕರೆದು ಸರಿಪಡಿಸಲಾಗುವುದು. 2000 ನಿವೇಶನ ನೋಂದಣಿ ಮಾಡಿಸಿ ಕೊಡಲು ಸಿದ್ಧತೆ ಮಾಡಿಕೊಂಡಿದ್ದೇವೆ. – ಶಿವಮಾದು, ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಬಡಾವಣೆಯಲ್ಲಿ ನಿವೇಶನ ಕೊಂಡು ಮನೆ ಕಟ್ಟುವ ಕನಸು ಕಂಡಿದ್ದೆವು ಆಗಲಿಲ್ಲ. ಹೋಗಲಿ ನಿವೇಶನ ಮಾರಿ ತಮ್ಮ ಹಣ ವಾಪಸ್ ಪಡೆದುಕೊಳ್ಳೋಣ ಎಂದರೂ ಅದಕ್ಕೂ ಅವಕಾಶ ಇಲ್ಲ. ಪ್ರಾಧಿಕಾರದಿಂದ 13 ವರ್ಷ ಕಳೆದರೂ, ಈ ನಿವೇಶನಗಳಿಗೆ ಇನ್ನು ಶಾಶ್ವತ ನೋಂದಣಿ ಪ್ರಮಾಣಪತ್ರ, ಸೇಲ್ ಡೀಡ್ ಯಾವುದೂ ಸಿಕ್ಕಿಲ್ಲ. ಪ್ರಾಧಿಕಾರದ ಮೇಲಿಟ್ಟಿದ್ದ ನಂಬಿಕೆ ಹುಸಿಯಾಗಿದೆ. – ನಿಂಗರಾಜು, ಸ್ಥಳೀಯ ನಿವಾಸಿ
– ಎಂ.ಎಚ್. ಪ್ರಕಾಶ್ ರಾಮನಗರ