Advertisement

ಬೋನ್ಹಾಳ ಶಾಲೆಯಲ್ಲಿ ಸೌಕರ್ಯ ಮರೀಚಿಕೆ

03:21 PM Sep 02, 2019 | Team Udayavani |

ಸುರಪುರ: ನೆಪಕ್ಕೆ ಮಾತ್ರವಿರುವ ಕಟ್ಟಡಗಳು, ಕಿತ್ತು ಹೋದ ಛಾವಣಿ ಸಿಮೇಂಟ್, ಶಿಕ್ಷಕರ ಕೊರತೆ, ಜೀವ ಭಯದಲ್ಲೇ ಪಾಠ ಪ್ರವಚನ. ಕುಡಿಯಲೂ ಇಲ್ಲ ನೀರು, ಶೌಚಾಲಯಕ್ಕೆ ಬರ ಇದು ತಾಲೂಕಿನ 10 ಕಿ.ಮೀಟರ್‌ ಅನತಿ ದೂರದಲ್ಲಿರುವ ಬೋನ್ಹಾಳ ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಣ.

Advertisement

ಇವೆಲ್ಲ ಅವಾಂತರಗಳನ್ನು ಗಮನಿಸಿದಾಗ ಬೋನ್ಹಾಳ ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಇದೆ ಎಂಬುದನ್ನು ತಾಲೂಕು ಶಿಕ್ಷಣ ಇಲಾಖೆ ಮರೆತು ಬಿಟ್ಟಿದೆ. ಈ ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ 365 ವಿದ್ಯಾರ್ಥಿಗಳು ಇದ್ದು, 206 ಬಾಲಕರು, 159 ಬಾಲಕಿಯರಿದ್ದಾರೆ. 9 ಶಿಕ್ಷಕರ ಮಂಜೂರಾತಿಯಿದೆ. ಆಶ್ಚರ್ಯವೆಂದರೆ ಇಷ್ಟೊಂದು ವಿದ್ಯಾರ್ಥಿಗಳಿಗೆ ಕೇವಲ ಮೂವರು ಶಿಕ್ಷಕರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶಿಥಿಲಾವಸ್ಥೆ ಕೊಠಡಿ: ಶಾಲೆಗೆ 9 ಕೊಠಡಿಗಳಿದ್ದು, ಬಹುತೇಕ ಎಲ್ಲ ಕೊಠಡಿಗಳು ಸಂಪೂರ್ಣ ಶಿಥಿಲಾವಸ್ಥೆ ಹಂತ ತಲುಪಿವೆ. ಅದರಲ್ಲಿ ನಾಲ್ಕು ಕೊಠಡಿಗಳು ಮುಟ್ಟಿದರೆ ಬೀಳುವ ಹಂತದಲ್ಲಿವೆ. ಗೋಡೆಗಳು ಬಿರುಕು ಬಿಟ್ಟಿದ್ದು, ಸಮರ್ಪಕವಾಗಿ ಗಾಳಿಯು ಒಳ ನುಸಳಿದಂತಿದೆ.

ಶೌಚಾಲಯಕ್ಕೆ ಪರದಾಟ: ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯ ಒದಗಿಸಿಕೊಡಲು ಸರ್ಕಾರ ನೀರಿನಂತೆ ಹಣ ಹರಿಸುತ್ತಿದೆ. ಆದರೆ, ಶಾಲೆಯಲ್ಲಿ ಮೂಲ ಸೌಕರ್ಯಗಳಿಲ್ಲ. ವಿದ್ಯಾರ್ಥಿಗಳು, ಶಿಕ್ಷಕರು ಬಯಲು ಶೌಚವನ್ನೇ ಅವಲಂಬಿಸಿದ್ದಾರೆ.

ಕಿತ್ತು ಬೀಳುತ್ತಿರುವ ಛಾವಣಿ ಸಿಮೆಂಟ್: 9 ಕೊಠಡಿಗಳ ಪೈಕಿ 6 ಕೊಠಡಿಗಳ ಚಾವಣಿ ಸಿಮೆಂಟ್ ಕಿತ್ತು ಮೈಮೇಲೆ ಉದುರಿ ಬೀಳುತ್ತಿದೆ. ಸಿಮೇಂಟ್ ಉದುರಿ ಬಿದ್ದು, ರಾಡ್‌ಗಳು ತೇಲಿ ಅಸ್ಥಿ ಪಂಜರದಂತೆ ಗೋಚರಿಸುತ್ತಿವೆ. ಯಾವ ಸಂದರ್ಭದಲ್ಲಿ ಛಾವಣಿ ಮುಗಚಿ ಬಿದ್ದು, ಅದೆಷ್ಟು ಮಕ್ಕಳ ಜೀವ ಬಲಿ ಪಡೆಯುವುದೋ ತಿಳಿಯದಾಗಿದೆ.

Advertisement

ಶಿಕ್ಷಕರ ಕೊರತೆ: 1ರಿಂದ 8ನೇ ತರಗತಿವರೆಗೆ ಬೋಧಿಸಲು 9 ಶಿಕ್ಷಕರ ಮಂಜೂರಾತಿಯಿದೆ. ಆದರೆ ಕೇವಲ ಮೂವರು ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿರುವುದು ಅಚ್ಚರಿ ಸಂಗತಿ. ಇದರಲ್ಲೂ ಇನ್ನೂ ವಿಶೇಷ ಪ್ರಾಥಮಿಕ ಶಾಲೆಗೆ ಶಿಕ್ಷಕರೇ ಇಲ್ಲವಾಗಿರುವುದು ತಾಲೂಕು ಶಿಕ್ಷಣ ಇಲಾಖೆ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಜೀವ ಭಯದಲ್ಲೇ ಬೋಧನೆ: ಎಲ್ಲ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಮಳೆ ಬಂದರೆ ಸೋರುತ್ತಿವೆ. ಮಕ್ಕಳು ನೆನೆಯುತ್ತಲೇ ಪಾಠ ಆಲಿಸಬೇಕಿದೆ. ಶಿಕ್ಷಕರು ಜೀವ ಕೈಯಲ್ಲಿಡಿದು ಬೋಧಿಸುತ್ತಿದ್ದಾರೆ. ಮಕ್ಕಳ ದಾಖಲಾತಿಗಳನ್ನು ರಕ್ಷಿಸಲು ರಿಜಿಸ್ಟ್ರರ್‌ಗಳನ್ನು ಮನೆಗೆ ಕೊಂಡೊಯ್ಯುತ್ತಾರೆ. ದಿನಂಪ್ರತಿ ಕೊಠಡಿ ಪ್ರವೇಶಿಸುವಾಗ ಚಾವಣಿ ಕಡೆ ಒಮ್ಮೆ ಕಣ್ಣು ಹಾಯಿಸುವುದು ಮಾಮುಲಿಯಾಗಿದೆ. ಯಾವುದೇ ಘಳಿಗೆಯಲ್ಲಾದರೂ ಕೊಠಡಿಗಳು ಬೀಳುವ ಹಂತದಲ್ಲಿರುವುದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಜೀವಭಯ ಕಾಡುತ್ತಿದೆ.

ಕುಡಿಯಲು ನೀರಿಲ್ಲ: ಅಪಾರ ಪ್ರಮಾಣದಲ್ಲಿರುವ ವಿದ್ಯಾರ್ಥಿಗಳಿಗೆ ಕುಡಿಯಲು ನೀರೇ ಇಲ್ಲ. ಬಾಯಾರಿಕೆ ಇಂಗಿಸಿಕೊಳ್ಳಲು ಶಾಲೆ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ಹೋಗಿ ದಾಹ ನೀಗಿಸಿಕೊಳ್ಳುವಂತಾಗಿದೆ. ಬಿಸಿಯೂಟ ತಯಾರಿಕೆ ಹಾಗೂ ಪಾತ್ರೆ ಸ್ವಚ್ಛಗೊಳಿಸಲು ಸಿಬ್ಬಂದಿಗಳು ಗ್ರಾಮದ ಕೊಳವೆ ಬಾವಿಗಳಿಂದ ನೀರು ತರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಮೈದಾನದ ಕೊರತೆ: ಶಾಲೆ ಮಕ್ಕಳಿಗೆ ಆಟವಾಡಲು ಮೈದಾನವಿಲ್ಲವಾಗಿದೆ. ಅದಲ್ಲದೆ ದೈಹಿಕ ಶಿಕ್ಷಣ ಕೊಡಲು ದೊಡ್ಡ ತೊಡಕಾಗಿದೆ. ಇರುವ ಅಲ್ಪಸ್ವಲ್ಪ ಜಾಗದಲ್ಲಿ ಕೆಲ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಕೊಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಕ್ರೀಡಾಮನೋಭಾವ ಕುಂಠಿತವಾಗಿದೆ.

 

•ಸಿದ್ದಯ್ಯ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next