ಕುದೂರು: ಹತ್ತು ಹಲವು ವೈಶಿಷ್ಟ್ಯಗಳ ಅಗರ ಹಾಗೂ ಚಾರಣ ಪ್ರೀಯರ ಸ್ವರ್ಗವಾಗಿರುವ ಭೈರವನದುರ್ಗ ಬೆಟ್ಟವನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ಗೊಳಿಸದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಪ್ರವಾಸಿಗರ ಆಕ್ರೋಶಕ್ಕೆ ಗುರಿಯಾಗಿದೆ.
ಪ್ರಕೃತಿ ಸೌಂದರ್ಯ, ಗುಹಾಂತರ ದೇವಾಲಯ ಕೋಟೆ, ಇದರೊಳಗೊಂದು ಪಾತಾಳ ಗಂಗೆ, ರಾಜ ಮಹರಾಜರ ಕಾಲದ ಶಾಸನಗಳು, ಮೂರ್ತಿಗಳು, ಉಬ್ಬು ಶಿಲ್ಪಿಗಳು ಇವೆಲ್ಲವುಗಳ ಜತೆಗೆ ವನ್ಯಜೀವಿಗಳು ಹೀಗೆ ಪ್ರಕೃತಿ ಸೌಂದರ್ಯ ದಿಂದ ಕಂಗೊಳಿಸುತ್ತಿರುವ ಈ ಬೆಟ್ಟ ಅಭಿವೃದ್ಧಿಯಿಂದ ವಂಚಿತವಾಗಿರುವುದು ಚಾರಣ ಪ್ರಿಯರ ಮುನಿಸಿಗೆ ಕಾರಣವಾಗಿದೆ.
ಪ್ರತಿ ಭಾನುವಾರ ಪೂಜೆ: ಬೆಟ್ಟದ ಮಧ್ಯ ಭಾಗದಲ್ಲಿರುವ ಭೈರವೇಶ್ವರ ಸ್ವಾಮಿಗೆ ಪ್ರತಿ ಭಾನುವಾರ ಪೂಜೆ ನೆಡೆಯುತ್ತದೆ. ಬೆಳಗ್ಗೆ 11ರಿಂದ 4 ವರೆಗೆ ಪೂಜೆ ನೆಡೆಯುತ್ತದೆ. ಈ ವೇಳೆ ಭಕ್ತರ ದಂಡೆ ಹರಕೆ ತೀರಿಸಲು ಬೆಟ್ಟಕ್ಕೆ ಬಂದಿರುತ್ತದೆ. ಹಲಸಿನ ರಸಾಯನ ಸ್ವಾಮಿಗೆ ಹೆಚ್ಚು ಪ್ರಿಯ ಎಂದು ನಂಬಲಾಗಿದ್ದು ಹೆಚ್ಚಿನ ಭಕ್ತರು ಇದನ್ನೆ ನೈವೇದ್ಯಕ್ಕೆ ತರುತ್ತಾರೆ ಎಂದು ಹೇಳುತ್ತಾರೆ ಅರ್ಚಕರು.
ಸಿಹಿ ನೀರಿನ ಪಾತಾಳ ಗಂಗೆ: ಬೆಟ್ಟದ ತುದಿಯಲ್ಲಿ ಸಿಹಿ ನೀರಿನ ಕಲ್ಯಾಣಿಯಿದೆ. ಬೆಟ್ಟ ಹತ್ತಿ ಆಯಾಸ ವಾಗಿರುವವರು ಈ ನೀರನ್ನು ಕುಡಿದು ದಣಿವಾರಿಸಿ ಕೊಳ್ಳುತ್ತಾರೆ. ಇವೆಲ್ಲವೂ ರಾಜ ಮಹರಾಜರ ಆಳ್ವಿಕೆಯ ವೈಭವವನ್ನು ನಿರೂಪಿಸುವ ಕುರುಹುಗಳಿವೆ. ಏಳೆಂಟು ದೊಡ್ಡ ಬಂಡೆಗಳು ಆಧಾರವಿಲ್ಲದೆ ನಿಂತಿರುವುದು ಸೋಜಿಗ ಮೂಡಿಸುತ್ತದೆ.
ಕಡಿದಾದ ಬಂಡೆಗಳ ಇಳಿಜಾರು: ಬೆಟ್ಟವು ಕಡಿದಾದ ಬಂಡೆಗಳ ಸಾಲಿನ ಮಧ್ಯೆ ಇದ್ದು, ಸಾಹಸ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ. ಕಡಿದಾದ ಬಂಡೆಗಳ ನಡುವೆ ರೋಫಿಂಗ್, ಕ್ಲೈಂಬಿಂಗ್ ಮಾಡಲು ಸೂಕ್ತವಾಗಿದೆ. ಬೆಟ್ಟದ ತುದಿಯಲ್ಲಿ ಒಂದು ಕಾಲು ದಾರಿಯಿದ್ದು, ಉಳಿದ ಅರ್ಧ ಭಾಗ ಕ್ರಮಿಸಲು ಕಡಿದಾದ ಬಂಡೆಗಳ ಮೂಲಕ ಸಾಗಬೇಕು. ಅದ್ದರಿಂದ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ವಿಶಿಷ್ಟ, ವಿಭಿನ್ನ, ಬೆಟ್ಟಕ್ಕೆ ಮೂಲ ಸೌಲಭ್ಯ ಒದಗಿಸಬೇಕೆಂದು ಪರಿಸರ ಪ್ರಿಯರು ಒತ್ತಾಯಿಸಿದ್ದಾರೆ.
ಬೆಟ್ಟ ತಲುಪುವುದು ಹೇಗೆ?: ಕುದೂರು ನಿಲ್ದಾಣದಿಂದ 1.5 ಕೀ.ಮಿ. ದೊರದಲ್ಲಿರುವ ಈ ಬೆಟ್ಟದ ಬುಡಕ್ಕೆ ಪ್ರವೇಶಿಸುತ್ತಿದ್ದಂತೆ ದೇವಾಲಯ ಆರಂಭದ ಮೆಟ್ಟಿಲುಗಳ ಬಳಿ ಎರಡು ಉಬ್ಬು ಶಿಲ್ಪಿಗಳು ಕಾಣಸಿಗುತ್ತವೆ. 400 ರಿಂದ 500 ಮೆಟ್ಟಿಲುಗಳು ಹತ್ತಿದರೆ ಬೈರವೇಶ್ವರ ಸ್ವಾಮಿ ಲಿಂಗ ರೂಪದಲ್ಲಿ ಪ್ರತಿಷ್ಠಾಪಿತವಾಗಿರುವ ಪುರಾತನ ಗುಹೆ ಗೋಚರಿಸುತ್ತದೆ. ಅದರ ಅಕ್ಕಪಕ್ಕ ಅನೇಕ ಗುಹೆಗಳಿವೆ. ದೇವಾಲಯದ ಬಳಿ ವಿಶಿಷ್ಟ ಸುಗಂಧ ಭರಿತ ಜಲಾರ್, ಶಿವನಿಗೆ ಪ್ರಿಯ ಬಿಲ್ವ ಪತ್ರೆ ಮರಗಳಿವೆ. ಸ್ವಾಮಿ ಪೂಜೆಗೆ ಹೂ ಒದಗಿಸುತ್ತವೆ. ದೇವಾಲಯದ ಪಕ್ಕದಲ್ಲಿ ಇಳಿ ಜಾರಿದ್ದು, ಕಾಲಿಟ್ಟರೆ ಜಾರುವಂತಹ ನುಣುಪನ್ನು ಕಾಣಬಹುದಾಗಿದೆ.
-ಕೆ.ಎಸ್.ಮಂಜುನಾಥ್