Advertisement

Lack of facilities: ಸೌಲಭ್ಯಗಳೇ ಇಲ್ಲದ ಜಕ್ಕಳ್ಳಿ ಸ್ಥಿತಿ ಶೋಚನೀಯ

02:52 PM Sep 23, 2023 | Team Udayavani |

ಕೊಳ್ಳೇಗಾಲ: ಸರ್ಕಾರ ಪ್ರತಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿವ ನೀರಿಗೆ ಆದ್ಯತೆ ನೀಡಬೇಕು ಎಂದು ಆದೇಶ ಹೊರಡಿಸಿದ್ದರೂ ತಾಲೂಕಿನ ತಿಮ್ಮರಾಜೀಪುರ ಗ್ರಾಪಂ ವ್ಯಾಪ್ತಿಗೆ ಸೇರಿದ ಜಕ್ಕಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ.

Advertisement

ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಕುಟುಂಬ ವಾಸವಾಗಿದ್ದು, ಕುಡಿಯುವ ನೀರಿಗಾಗಿ ಅಳವಡಿಸಿರುವ ನಲ್ಲಿಯಲ್ಲಿ ನೀರು ಬತ್ತಿ ಹೋಗಿದ್ದು ಕುಡಿಯುವ ನೀರಿಗಾಗಿ ಜನ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಗ್ರಾಪಂ ಅಧಿಕಾರಿಗಳು ಇತ್ತ ಗಮನಹರಿಸಿ ಕುಡಿಯುವ ನೀರು ಪೂರೈಕೆ ಮಾಡಬೇಕೆಂದು ಜನ ಆಗ್ರಹಿಸಿದ್ದಾರೆ.

ಮೂಲಭೂತ ಸೌಕರ್ಯ ಇಲ್ಲ: ಪ್ರತಿ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯೆಯಿಂದಾಗಿ ಕುಡಿಯುವ ನೀರಿನ ಕೊರತೆ ಹೇಳ ತೀರದಂತೆ ಆಗಿದ್ದು, ಗುಡ್ಡಗಾಡು ಪ್ರದೇಶದಲ್ಲಿರುವ ಗ್ರಾಮದಲ್ಲಿ ರಸ್ತೆಗಳೇ ಮರೀಚಿಕೆಯಾಗಿದೆ.

ರಸ್ತೆ ದುರಸ್ತಿ ಇಲ್ಲ: ಗ್ರಾಮದಲ್ಲಿ ಸೂಕ್ತವಾದ ರಸ್ತೆಯಿಲ್ಲ. ಕಲ್ಲು ಮಣ್ಣಿನಿಂದ ಕೂಡಿದ ರಸ್ತೆಯಲ್ಲಿ ಸಂಚರಿಸುವಾಗ ಹಲವಾರು ಬಾರಿ ಗ್ರಾಮಸ್ಥರು ಬಿದ್ದು ಎದ್ದರೆ ಮತ್ತೆ ಕೆಲವರು ಬಿದ್ದು ಕಾಲು ಮುರಿದುಕೊಂಡಿರುವ ಘಟನೆಯೂ ನಡೆದಿದೆ. ಅಲ್ಲದೇ, ಗ್ರಾಮದಲ್ಲಿ ಎರಡು ರಸ್ತೆ ಬಿಟ್ಟರೆ ಉಳಿದ ರಸ್ತೆ ದುರಸ್ತಿ ಇಲ್ಲದೆ ಪರಿತಪಿಸುತ್ತಿದ್ದಾರೆ.

ನೀರಿನ ತೊಂಬೆ ನಿರ್ಲಕ್ಷ್ಯ: ತಾಲೂಕಿನ ಜನ ಬರದ ನೆರಳಿನಲ್ಲಿ ಸಿಲುಕಿ ನಲುಗುವ ವೇಳೆ ಅಧಿಕಾರಿಗಳು ಎಚ್ಚೆತ್ತುಕೊಂಡು ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಕೆಗೆ ಮೊದಲನೇ ಆದ್ಯತೆ ನೀಡಬೇಕು. ಪಂಚಾಯ್ತಿ ಅಧಿಕಾರಿಗಳು ನೀರಿನ ತೊಂಬೆ ಮೂಲಕ ನೀರು ಪೂರೈಸಲು ತೊಂಬೆ ನಿರ್ಮಾಣ ಮಾಡಿದ್ದರೂ ನೀರು ತುಂಬಿಸದೆ ತೊಂಬೆ ನಿಂತಿದೆ. ಅದರ ಮೇಲ್ಭಾಗದ ಮುಸುಕು ಇನ್ನೆಲ್ಲೂ ಬಿದ್ದಿದ್ದು, ಅಧಿಕಾರಿಗಳ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ.

Advertisement

ಭೇಟಿ ಕೊಡಿ: ತಾಲೂಕಿನ ತಿಮ್ಮರಾಜೀಪುರ ಗ್ರಾಪಂ ಅಧ್ಯಕ್ಷೆ ರಶ್ಮಿ ಕೂಡಲೇ ಜಕ್ಕಳ್ಳಿ ಗ್ರಾಮಕ್ಕೆ ಭೇಟಿ ನೀಡಿ 24×7 ಯೋಜನೆ ಮೂಲಕ ಪೈಪ್‌ಲೈನ್‌ ಅಳವಡಿಸಿ ಗ್ರಾಮದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವರೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ದೂರು ಸಲ್ಲಿಸಿದರೂ ಕ್ರಮವಿಲ್ಲ : ಜಕ್ಕಳ್ಳಿ ಗ್ರಾಮ ಒಂದು ಗುಡ್ಡಗಾಡು ಪ್ರದೇಶ. ಪ್ರತಿನಿತ್ಯ ಕಾಡುಪ್ರಾಣಿಗಳ ಭಯದಲ್ಲಿ ವಾಸಿಸುವ ಜನ ಇಲ್ಲಿದ್ದಾರೆ. ಇಲ್ಲಿಯವರು ಹಲವಾರು ಬಾರಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪಂಚಾಯ್ತಿಗೆ ದೂರು ಸಲ್ಲಿಸಿದ್ದರೂ ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಈಗಲಾದರೂ 24×7 ಕುಡಿಯುವ ನೀರಿನ ಯೋಜನೆ ಮೂಲಕ ಪೈಪ್‌ಲೈನ್‌ ಅಳವಡಿಸಿ ಸಮಸ್ಯೆ ನಿವಾರಣೆ ಮಾಡಬೇಕು ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಒತ್ತಾಯಿಸಿದ್ದಾರೆ.

ತಿಮ್ಮರಾಜೀಪುರ ಗ್ರಾಪಂಗೆ ಸೇರಿದ ಎಲ್ಲಾ ಗ್ರಾಮಕ್ಕೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ನೀರಿನ ಸಮಸ್ಯೆಯೇ ಇಲ್ಲ. ● ಶಿವಮೂರ್ತಿ, ತಿಮ್ಮರಾಜೀಪುರ ಗ್ರಾಪಂ ಅಭಿವೃದ್ಧಿ ಅಧಿಕಾರಿ

– ಡಿ.ನಟರಾಜು

 

Advertisement

Udayavani is now on Telegram. Click here to join our channel and stay updated with the latest news.

Next