ಅಫಜಲಪುರ: ತಾಲೂಕಿನಲ್ಲಿ ಸಾಕಷ್ಟು ಶಾಲೆಗಳು ಮೂಲಭೂತ ಸೌಕರ್ಯಗಳಿಲ್ಲದೆ ನರಳುತ್ತಿವೆ. ಹೀಗಾಗಿ ಮೂಲಭೂತ ಸೌಕರ್ಯಗಳಿಲ್ಲದ ಶಾಲೆಗಳು ನಮಗೆಕೆ ಎಂದು ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ತರು ಕೇಳುವಂತಾಗಿದೆ.
ತಾಲೂಕಿನ ಹಳಿಯಾಳ, ಬಂದರವಾಡ, ಗೊಬ್ಬೂರ(ಬಿ), ಅತನುರ, ಅಫಜಲಪುರ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಸೇರಿದಂತೆ ಬಹುತೇಕ ಶಾಲೆಗಳು ಶೀಥಿಲಾವಸ್ಥೆಗೆ ತಲುಪಿವೆ. ಮಳೆಗಾಲದಲ್ಲಿ ಸೋರುತ್ತವೆ. ಕಿಟಕಿ, ಬಾಗಿಲುಗಳು ಮುರಿದಿವೆ.
ತಾಲೂಕಿನ ನಿಲೂರು ಸೇರಿದಂತೆ ತಾಲೂಕಿನ ಸಾಕಷ್ಟು ಶಾಲೆಗಳಲ್ಲಿ ಶೌಚಾಲಯ ಇಲ್ಲದ್ದರಿಂದ ವಿದ್ಯಾರ್ಥಿನಿಯರು, ಶಿಕ್ಷಕಿಯರು ಸಮಸ್ಯೆ ಎದುರಿಸುವಂತಾಗಿದೆ.
ಐವತ್ತು ವರ್ಷ ಮೇಲ್ಪಟ್ಟ ಶಾಲೆಗಳೆಲ್ಲ ಈಗ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸೊರಗಿವೆ. ಹೀಗಾಗಿ ತಾಲೂಕಿನಾದ್ಯಂತ ಇರುವ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಅದರಲ್ಲೂ ಮುಖ್ಯವಾಗಿ ಮಹಿಳಾ ಶೌಚಾಲಯ ನಿರ್ಮಿಸಿ ಸರಿಯಾಗಿ ಬಳಕೆ ಮಾಡಿಸಬೇಕಾಗಿದೆ. ನಂತರ ಸೋರುವ ಮೇಲ್ಛಾವಣಿಗಳನ್ನು ದುರಸ್ತಿಗೊಳಿಸಬೇಕಾಗಿದೆ. ಶಾಲೆ ಅಂಗಳದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಹೀಗೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾದ ಜವಾಬ್ದಾರಿ ಶಿಕ್ಷಣ ಇಲಾಖೆ ಮತ್ತು ತಾಲೂಕಿನ ಶಾಸಕರ ಮೇಲಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಆಗ್ರಹಿಸಿದ್ದಾರೆ.
ತಾಲೂಕಿನಾದ್ಯಂತ 50 ವರ್ಷ ಮೇಲ್ಪಟ್ಟ ಶಾಲೆಗಳನ್ನು ಹೊಸದಾಗಿ ನಿರ್ಮಿಸುವ ಯೋಜನೆ ರೂಪಿಸಲಾಗುತ್ತಿದೆ. ಇನ್ನೂ ಶೌಚಾಲಯ, ಮೂಲಭೂತ ಸೌಕರ್ಯಗಳ ಕೊರತೆ ಕಂಡು ಬಂದರೆ ಕೂಡಲೇ ಅವುಗಳನ್ನು ಪೂರೈಸುವ ಕೆಲಸ ಮಾಡಲಾಗುತ್ತದೆ.
•ಎಂ.ವೈ. ಪಾಟೀಲ ಶಾಸಕರು ಅಫಜಲಪುರ
•ಮಲ್ಲಿಕಾರ್ಜುನ ಹಿರೇಮಠ