Advertisement

ಕೇಂದ್ರ ಗ್ರಂಥಾಲಯಕ್ಕೆ ಸೌಲಭ್ಯ ಕೊರತೆ

01:38 PM Oct 26, 2019 | Suhan S |

ಗದಗ: ಐಎಎಸ್‌, ಕೆಎಎಎಸ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು ಗ್ರಂಥಾಲಯಕ್ಕೆ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಹೀಗಾಗಿ ಸಾವಿರಾರು ಗ್ರಂಥಗಳಿಂದ ತುಂಬಿರುವ ನಗರ ಕೇಂದ್ರ ಗ್ರಂಥಾಲಯಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸುತ್ತಾರೆ. ಆದರೆ, ಇಲ್ಲಿ ಕುಡಿಯುವ ನೀರು, ಶೌಚಾಲಯ ಇಲ್ಲದಿರುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.

Advertisement

ನಗರದ ಹೃದಯ ಭಾಗದಲ್ಲಿರುವ ಕೆ.ಎಚ್‌. ಪಾಟೀಲ ಜಿಲ್ಲಾ ಕ್ರೀಡಾಂಗಣಕ್ಕೆ ಹೊಂದಿಕೊಂಡು ನಗರ ಕೇಂದ್ರ ಗ್ರಂಥಾಲಯದ ನೆಲಮಹಡಿಯಲ್ಲಿ ಸುದ್ದಿ ಪತ್ರಿಕೆಗಳು, ಮೊದಲ ಮಹಡಿಯಲ್ಲಿ ಗ್ರಂಥಗಳನ್ನು ಜೋಡಿಸಲಾಗಿದೆ. ಪ್ರತಿ ಮಹಡಿಯಲ್ಲಿ 6 ಕುರ್ಚಿಗಳುಳ್ಳ 15 ಮೇಜು, ಉತ್ತಮವಾದ ಗಾಳಿ-ಬೆಳಕಿನ ವ್ಯವಸ್ಥೆ ಹೊಂದಿದೆ. ಗ್ರಂಥಾಲಯ ಸಮೀಪದಲ್ಲೇ ರೆಡ್ಡಿ ಕಾಲೇಜು, ಪಿಪಿಜಿ ಕಾಲೇಜು, ವಿಡಿಎಸ್‌ಟಿಸಿ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜು, ಜೆಟಿ ಕಾಲೇಜು ಸೇರಿದಂತೆ ಹತ್ತಾರು ಶಿಕ್ಷಣ ಸಂಸ್ಥೆಗಳಿಗೆ ಕಾಲ್ನನಡಿಗೆಯಷ್ಟು ಸನಿಹದಲ್ಲಿದೆ. ಜ್ಞಾನಾರ್ಜನೆಗಾಗಿ ಪ್ರತಿನಿತ್ಯ ಸಾರ್ವಜನಿಕರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರತಿನಿತ್ಯ ಆಗಮಿಸುತ್ತಾರೆ. ಕೆಲವೊಮ್ಮೆ ಅವರಿಗೆ ಮೂಲ ಸೌಲಭ್ಯಗಳ ಕೊರತೆಯೇ ಸಂಕೋಲೆಯಾಗಿ ಕಾಡುತ್ತವೆ.

ಗ್ರಂಥಾಲಯಕ್ಕೆ ಆಗಮಿಸುವವರಲ್ಲಿ ಕೆಲವರು ಐದತ್ತು ನಿಮಿಷಗಳಲ್ಲಿ ಆಸಕ್ತಿದಾಯ ದಿನ ಪತ್ರಿಕೆಗಳನ್ನು ಕಣ್ಣಾಡಿಸಿ ಮರಳಿದರೆ, ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಉನ್ನತ ಶಿಕ್ಷಣ ವಿದ್ಯಾರ್ಥಿಗಳು ಬಹುತೇಕ ಸಮಯವನ್ನು ಗ್ರಂಥಾಲಯದಲ್ಲೇ ಕಳೆಯುತ್ತಾರೆ. ಈ ವೇಳೆ ಅವರಿಗೆ ಶೌಚ, ಜಲಬಾಧೆ ಕಾಡಿದರೆ ಅವರ ಪಾಡು ಹೇಳತೀರದು. ವಾಚನಾಲಯದಲ್ಲಿ ನೀರೇ ಇಲ್ಲ: 2012ರಲ್ಲಿ ರಾಜ್ಯ ಸರಕಾರದಿಂದ ಹೊಸದಾಗಿ ನಗರ ಕೇಂದ್ರ ಗ್ರಂಥಾಲಯ ನಿರ್ಮಿಸಲಾಗಿದೆ.

ಆದರೆ, ಓದುಗರ ಅನುಕೂಲಕ್ಕಾಗಿ ಶೌಚಾಲಯಗಳನ್ನೇ ನಿರ್ಮಿಸಿಲ್ಲ. ಇದೇ ಕಟ್ಟಡದಲ್ಲಿರುವ ಜಿಲ್ಲಾ ಗ್ರಂಥಾಲಯ ಕಚೇರಿಯಲ್ಲಿ ಅಧಿಕಾರಿ, ಸಿಬ್ಬಂದಿಗಾಗಿ ಒಂದು ಶೌಚಾಲಯವಿದ್ದರೂ ಅದಕ್ಕೆ ನೀರಿನ ಸಂಪರ್ಕವಿಲ್ಲದೇ ಬಾಗಿಲು ಮುಚ್ಚಿದೆ. ಹೀಗಾಗಿ ಸಿಬ್ಬಂದಿಗಳೂ ಬಯಲನ್ನೇ ಆಶ್ರಯಿಸುವಂತಾಗಿದೆ.

ಈ ಕಟ್ಟಡಕ್ಕೆ ನೀರಿನ ಸೌಕರ್ಯಕ್ಕಾಗಿ ಬೃಹತ್‌ ಟ್ಯಾಂಕ್‌ ನಿರ್ಮಿಸಿದ್ದರೂ ನಳದ ನೀರಿನ ಸಂಪರ್ಕವಿಲ್ಲದೇ ಸದಾ ಬರಿದಾಗಿರುತ್ತದೆ.  ಈ ಹಿಂದೆ ಕೊಳವೆ ಬಾವಿ ಕೊರೆದಾಗ ನೀರು ಬಂದಿಲ್ಲ. ನಳದ ನೀರಿನ ಸಂಪರ್ಕ ಕಲ್ಪಿಸುವಂತೆ ವರ್ಷಗಳಿಂದ ಮನವಿ ಮಾಡಿದರೂ ನಗರಸಭೆ ಸ್ಪಂದಿಸದಿರುವುದು ಸಮಸ್ಯೆ ಗಂಭೀರವಾಗಿದೆ. ಕುಡಿಯಲು ಶುದ್ಧ ನೀರಿನ ಕ್ಯಾನ್‌ ವ್ಯವಸ್ಥೆ ಮಾಡಿದರೂ ಬಳಕೆಗೆ ನೀರಿನ ಸಂಪರ್ಕದ ಜೊತೆಗೆ ಓದುಗರಿಗಾಗಿ ಒಂದೆರಡು ಶೌಚಾಲಯಗಳನ್ನೂ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿತ್ತಿದ್ದಾರೆ.

Advertisement

 

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next