ಪುನರೂರು: ರೈತರಿಗೆ ಸರಕಾರ ಹಲವಾರು ಯೋಜನೆಗಳನ್ನು ಮಾಡಿದರೂ ಅದು ರೈತವರ್ಗಕ್ಕೆ ತಲುಪಿಲ್ಲ. ಅನ್ನದಾನ ಸಮಸ್ಯೆಗೆ ಬೆಲೆ ಇಲ್ಲವಾಗಿದೆ ಎಂದು ಕಿನ್ನಿಗೋಳಿ ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಮುಕ್ಕ ಹೇಳಿದರು.
ಅವರು ರವಿವಾರ ಪುನರೂರು ಮೂಡುಮನೆಯಲ್ಲಿ ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನ ವಿಕಾಸ ಸಮಿತಿ ಮೂಲ್ಕಿಯ ಸಹಯೋಗದೊಂದಿಗೆ ವಿಶ್ವ ಆಹಾರ ದಿನಾಚರಣೆಯ ಪ್ರಯುಕ್ತ ಮೂಡುಮನೆಯಲ್ಲಿ ‘ಕೃಷಿ ರತ್ನ- 2017’ ಪ್ರಶಸ್ತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವ ಜನತೆ ಕೃಷಿಯತ್ತ ಮನ ಮಾಡುತ್ತಿಲ್ಲ. ರೈತ ಬೆಳೆದ ವಸ್ತುಗಳಿಗೆ ಯೋಗ್ಯ ಬೆಲೆ ಸಿಗುತ್ತಿಲ್ಲ, ಕಾರ್ಮಿಕರು ಹಾಗೂ ಸರಕಾರದ ಪ್ರೋತ್ಸಾಹದ ಕೊರತೆಯಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ಪುರಸ್ಕೃತ ರಮೇಶ್ ರಾವ್ ಮೂಡುಮನೆ ಪುನರೂರು ಅವರನ್ನು ‘ಕೃಷಿ ರತ್ನ-2017’ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.
ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿಯ ರೈತ ಸಂಘದ ಉಪಾಧ್ಯಕ್ಷ ವಿಲಿಯಂ ಕಾರ್ಡೋಜ , ಪುನರೂರು ವಿಪ್ರ ಸಂಪದ ಅಧ್ಯಕ್ಷ ಜನಕರಾಜ್ ರಾವ್ ಮತ್ತು ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್.ಕೆ. ಉಷಾರಾಣಿ, ಉಪನ್ಯಾಸಕ ಜೀತೆಂದ್ರ ವಿ. ರಾವ್ ಹೆಜಮಾಡಿ, ಜನವಿಕಾಸ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಗ್ಯ ರಾಜೇಶ್, ಕಾರ್ಯದರ್ಶಿ ರಾಘವೇಂದ್ರ ಭಟ್, ಆನಂದ ಮೇಲಾಂಟ ಉಪಸ್ಥಿತರಿದ್ದರು. ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಶಶಿಕರ್ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು. ಪ್ರಾಣೇಶ್ ವಂದಿಸಿದರು.